ಶಿರ್ವ, ಮಾ.೧೧: ಸುಖಿ ಕುಟುಂಬ ಹಾಗೂ ಸ್ವಾಸ್ಥ ಸಮಾಜದ ನಿರ್ಮಾಣ ದಲ್ಲಿ ಮಹಿಳೆಯರ ಪಾತ್ರ ಮಹತ್ವ ವಾಗಿದ್ದು, ಪ್ರತಿಯೊಬ್ಬ ಮಹಿಳೆಯೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದೆ ಬರಬೇಕಾಗಿದೆ. ಹಕ್ಕುಗಳ ಜೊತೆಗೆ ಕರ್ತವ್ಯವನ್ನು ಪಾಲಿಸಿ ಸ್ವಾವಲಂಬಿ ಜೀವನದ ಗುರಿ ಇಟ್ಟುಕೊಳ್ಳಬೇಕು ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತೆ ಗೀತಾ ವಾಗ್ಲೆ ಹೇಳಿದ್ದಾರೆ.
ಬಂಟಕಲ್ಲು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ, ರೋಟರಿ ಕ್ಲಬ್ ಶಿರ್ವ ಇವರ ಆಶ್ರಯದಲ್ಲಿ ಜರುಗಿದ ವಿಶ್ವಮಹಿಳಾ ದಿನಾಚರಣೆ ಸಮಾರಂಭ ದಲ್ಲಿ ರೋಟರಿ ವತಿಯಿಂದ ಪ್ರಕಟಿತ ಮಾಹಿತಿ ಹಕ್ಕುಗಳು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಮುಖ್ಯಅತಿಥಿ ಬಂಟಕಲ್ಲು ಶಾಲಾ ಮುಖ್ಯೋಪಾಧ್ಯಾಯ ಬಿ.ಅನಂತ ರಾಮ ಭಟ್ ಭಾಗವಹಿಸಿ ಶುಭಾ ಶಂಸನೆಗೈದರು. ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರ ನಾಗಯ್ಯ ಹಿರೇಮಠ್ ಆರೋಗ್ಯ ಮಾಹಿತಿ ನೀಡಿದರು. ಶಿರ್ವ ರೋಟರಿ ವತಿಯಿಂದ ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷ ಕೆ. ರಾಮರಾಯ ಪಾಟ್ಕರ್ ವಹಿಸಿದ್ದರು. ಸ್ತ್ರೀಶಕ್ತಿ ಗುಂಪಿನ ಅಧ್ಯಕ್ಷೆ ಸಂಗೀತಾ ಆರ್.ಪಾಟ್ಕರ್ ಸ್ವಾಗತಿಸಿದರು. ಅಂಗನ ವಾಡಿ ಮೇಲ್ವಿಚಾರಕಿ ಶಾಂತಾ, ಸರಸ್ವತಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ವಿನಯಾ ವಂದಿಸಿದರು.