ಬೆಂಗಳೂರು, ಮಾ.೧೧: ಪ್ರಸ್ತುತ ಸಾಲಿನ ೫,೧೩೦ ಕೋಟಿ ರೂ. ಪೂರಕ ಅಂದಾಜು ಪಟ್ಟಿಗೆ ವಿಧಾನಸಭೆ ಗುರುವಾರ ಅನುಮೋದನೆ ನೀಡಿತು.
ಆಯ-ವ್ಯಯ ಮಂಡನೆಯ ನಂತರ ಹೆಚ್ಚುವರಿ ಖರ್ಚು ವೆಚ್ಚಗಳ ಕುರಿತು ಇತ್ತೀಚೆಗೆ ಯಡಿಯೂರಪ್ಪ ಪೂರಕ ಅಂದಾಜು ಪಟ್ಟಿಯನ್ನು ಮಂಡಿಸಿದ್ದರು. ಈ ವಿಷಯದ ಮೇಲೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗಿದೆ. ಆದರೆ, ಸರಕಾರ ಈ ಬಗ್ಗೆ ಯಾವುದೇ ರೀತಿಯ ಯೋಜನೆ ರೂಪಿಸದೆ. ಮನಸೋ ಇಚ್ಛೆ ಹಣವನ್ನು ವ್ಯಯ ಮಾಡುತ್ತಿದೆ ಎಂದು ಆರೋಪಿಸಿದರು.
ಅನುದಾನಿತ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜು ಸಿಬ್ಬಂದಿಗೆ ವೇತನ ಬಾಕಿ ಬಿಡುಗಡೆ ಮಾಡಿಲ್ಲ. ಪಾಲಿಟೆಕ್ನಿಕ್ ಕಾಲೇಜು ಸಿಬ್ಬಂದಿಗಳಿಗೆ ಬಾಕಿ ವೇತನ ಬಿಡುಗಡೆಯಾಗಿಲ್ಲ. ವಿಧವೆ, ವೃದ್ಧರು ಮತ್ತು ವಿಕಲಚೇತನರಿಗೆ ವೇತನ ನೀಡಿಲ್ಲ. ಅಲ್ಲದೆ, ಪರಿಶಿಷ್ಟ ಜಾತಿ-ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ನಂಜುಂಡಪ್ಪ ವರದಿ ಜಾರಿಗೆ ಸರಿಯಾಗಿ ಹಣ ನಿಗದಿ ಮಾಡಿಲ್ಲ ಎಂದು ಸಿದ್ಧರಾಮಯ್ಯ ಸದನದ ಗಮನ ಸೆಳೆದರು.
ಮಠಗಳಿಗೆ ನೀಡಿದ ಹಣಕ್ಕೆ ಲೆಕ್ಕ ನೀಡುವವರ‍್ಯಾರು?: ಮನಸೋ ಇಚ್ಛೆ ಮಠ-ಮಂದಿರ ಗಳಿಗೆ ಕೋಟ್ಯಂತರ ರೂಪಾಯಿ ಹಣವನ್ನು ಪ್ರತಿವರ್ಷ ಬಿಡುಗಡೆ ಮಾಡಲಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಮಠಗಳಿಗೆ ನೀಡಿದರೆ ಅದಕ್ಕೆ ಲೆಕ್ಕ ಕೊಡುವವರು ಯಾರು? ಈ ಹಣ ಲೆಕ್ಕ ಪರಿಶೋಧನೆ ಮಾಡುವುದು ಬೇಡವೇ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಸಿದ್ದರಾಮಯ್ಯ, ಮಠಗಳಿಗೆ ಹಣ ನೀಡುವುದರಿಂದ ಬಲಾಢ್ಯರಿಗೆ ಮಾತ್ರ ದೊರೆಯುತ್ತದೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ಯತೆ ವಿಷಯಗಳಿಗೆ ಪೂರಕ ಅಂದಾಜು ಪಟ್ಟಿಯಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಆದರೆ, ಅಧಿಕಾರಿಗಳಿಗೆ ವೇತನ ನೀಡಿಲ್ಲ. ಕೆಲ ಜಿಲ್ಲೆಗಳಿಗೆ ಅನುದಾನ ಕಡಿಮೆಯಾಗಿದೆ. ಅಲ್ಲಿ ದೇವಸ್ಥಾನ ನಿರ್ಮಾಣ ಎಂದು ಪೂರಕ ಅಂದಾಜು ಪಟ್ಟಿ ಮಂಡಿಸಲಾಗಿದೆ.
ಅವೈಜ್ಞಾನಿಕವಾಗಿ ಆಯ-ವ್ಯಯ ಮಂಡನೆ ಮಾಡಲಾಗಿದೆ. ಯಡಿಯೂರಪ್ಪನವರಿಂದ ವಿತ್ತಿಯ ಪಾವಿತ್ರತೆ ಸಂಪೂರ್ಣ ಹಾಳಾಗಿದೆ. ಬಜೆಟ್‌ನ ಮೂಲಭೂತ ತತ್ವಗಳ ಉಲ್ಲಂಘನೆಯಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಜೆಡಿಎಸ್‌ನ ಶಿವಲಿಂಗೇಗೌಡ ಕೂಡ ಸಿದ್ದರಾಮಯ್ಯನವರನ್ನು ಬೆಂಬಲಿಸಿದರು. ಪೂರಕ ಅಂದಾಜು ಪಟ್ಟಿಯನ್ನು ಯಡಿಯೂರಪ್ಪ ಸದನದಲ್ಲಿ ಮಂಡಿಸಿದರು. ಸದನದಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆ ಪೂರಕ ಅಂದಾಜು ಪಟ್ಟಿಯನ್ನು ಅಂಗೀಕರಿಸಲಾಯಿತು.