| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಹಿಳಾ ಮೀಸಲಾತಿ ಮಸೂದೆ: ಲೋಕಸಭೆಯಲ್ಲಿ ಬಿಕ್ಕಟ್ಟು ಅಂತ್ಯದ ಸೂಚನೆ |
ಪ್ರಕಟಿಸಿದ ದಿನಾಂಕ : 2010-03-12
ಹೊಸದಿಲ್ಲಿ, ಮಾ.೧೧: ಎಲ್ಲ ಪಕ್ಷಗಳೊಂದಿಗೆ ಚರ್ಚಿಸಿದ ಬಳಿಕವೇ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದೆಂದು ಸರಕಾರವು ಗುರುವಾರ ಘೋಷಿಸುವುದರೊಂದಿಗೆ ಲೋಕಸಭೆಯಲ್ಲಿ ಇದರ ಕುರಿತಾದ ಬಿಕ್ಕಟ್ಟು ಅಂತ್ಯಗೊಂಡ ಲಕ್ಷಣ ಗುರುವಾರ ಕಾಣಿಸಿಕೊಂಡಿದೆ.
ಮಸೂದೆಯ ಪ್ರಬಲ ವಿರೋಧಿಗಳಾದ ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್, ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಹಾಗೂ ಜೆಡಿಯು ಅಧ್ಯಕ್ಷ ಶರದ್ ಯಾದವ್, ವಿತ್ತ ಸಚಿವ ಪ್ರಣವ್ ಮುಖರ್ಜಿಯವರನ್ನು ಭೇಟಿಯಾದ ಬಳಿಕ ಈ ಮುನ್ನಡೆ ಲಭಿಸಿದೆ.
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಎನ್‌ಸಿಪಿ ವರಿಷ್ಠ ಶರದ್ ಪವಾರ್ ಹಾಗೂ ಡಿಎಂಕೆ ನಾಯಕ ಟಿ.ಆರ್. ಬಾಲು ಸಹ ಸಭೆಯಲ್ಲಿ ಹಾಜರಿದ್ದರು.
ಲೋಕಸಭೆಯಲ್ಲಿ ಮಸೂದೆ ಮಂಡನೆಗೆ ಮೊದಲು ಮಹಿಳಾ ಮೀಸಲಾತಿ ಮಸೂದೆಯ ಪ್ರಗತಿಯ ಬಗ್ಗೆ ಒಂದು ರೀತಿಯ ಭರವಸೆಯನ್ನು ಬಯಸಲಾಗಿತ್ತು. ಸರಕಾರವು ಸಂಬಂಧಿಸಿದ ಎಲ್ಲರೊಡನೆಯೂ ಚರ್ಚೆ ನಡೆಸಲಿದೆ ಎಂದು ಸಭೆಯ ಬಳಿಕ ಪ್ರಣವ್ ಮುಖರ್ಜಿ ಲೋಕಸಭೆಯಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದರು.
ಈ ಭರವಸೆ ಎಲ್ಲರನ್ನೂ ಸಮಾಧಾನಗೊಳಿಸುವುದು ಹಾಗೂ ಸದನದ ಸುಗಮ ಕಲಾಪಕ್ಕೆ ಅವಕಾಶ ದೊರೆಯುವುದೆಂಬುದು ತನ್ನ ಭಾವನೆಯಾಗಿದೆಯೆಂದು ಅವರು ಹೇಳಿದರು.
ಈ ಮೊದಲು, ಮಸೂದೆಯ ಕುರಿತಾಗಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕೋಲಾಹಲವು ನಾಲ್ಕನೆ ದಿನವಾದ ಇಂದೂ ಲೋಕಸಭೆಯಲ್ಲಿ ಮುಂದುವರಿಯಿತು.
ಎಸ್ಪಿ, ಆರ್‌ಜೆಡಿ ಹಾಗೂ ಜೆಡಿಯು ಸದಸ್ಯರು ಸದನದ ಅಂಗಳಕ್ಕಿಳಿದು ಗದ್ದಲ ನಡೆಸಿದ ಕಾರಣ ಸದನವನ್ನು ಎರಡು ಬಾರಿ ಮುಂದೂಡಬೇಕಾಗಿ ಬಂದಿತು.
ಮಹಿಳಾ ಮೀಸಲಾತಿಯೊಳಗೆ ಇತರ ಹಿಂದುಳಿದ ಜಾತಿ, ದಲಿತರು ಹಾಗೂ ಮುಸ್ಲಿಮರಿಗೆ ಒಳಮೀಸಲಾತಿ ನೀಡಬೇಕೆಂಬುದು ಇವರ ಬೇಡಿಕೆಯಾಗಿತ್ತು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-12 00:00:00
|
|
|
|
|