ಮಂಗಳೂರು: ರಾಜ್ಯ ಬಜೆಟ್‌ನಲ್ಲಿ ದಲಿತರ ನಿರ್ಲಕ್ಷ: ದಸಂಸ ಆರೋಪ
ಪ್ರಕಟಿಸಿದ ದಿನಾಂಕ : 2010-03-12
ಮಂಗಳೂರು, ಮಾ.೧೧: ದಲಿತರ ಅಭಿವೃದ್ಧಿಗೆ ಹಲವು ಬೇಡಿಕೆಗಳು ಸರಕಾರದ ಮುಂದಿದ್ದರೂ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ದಲಿತರ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಯಾವುದೇ ವಿಶೇಷ ಯೋಜನೆಗಳನ್ನು ಜಾರಿ ಮಾಡಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಡಾ. ಅಂಬೇಡ್ಕರ್ ವಾದ)ಯ ಜಿಲ್ಲಾ ಸಂಘಟನಾ ಸಂಚಾಲಕ ಮಹಾಲಿಂಗ ಕೆ. ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಎಲ್ಲ ಸೌಲಭ್ಯಗಳನ್ನು ಶಾಸಕರ ವ್ಯಾಪ್ತಿಗೆ ತಂದಿರುವುದು ಸಂವಿಧಾನಬಾಹಿರ ಕ್ರಮವಾಗಿದೆ. ಇದ ರಿಂದ ನಿಗಮದಿಂದ ಸಿಗುವ ಸರಕಾರಿ ಸವಲತ್ತುಗಳು ಅರ್ಹ ಫಲಾನುಭವಿ ಗಳಿಗೆ ಸಿಗದೆ ಶಾಸಕರ ಹಿಂಬಾಲಕರಿಗೆ ಸಿಗುವಂತಾಗಿದೆ ಎಂದವರು ಟೀಕಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಎಲ್ಲಾ ಸೌಲಭ್ಯದ ಫಲಾನುಭವಿಗಳ ಆಯ್ಕೆಯು ಶಾಸಕರ ನೇತೃತ್ವದ ಆಯ್ಕೆ ಸಮಿತಿಯನ್ನು ರದ್ದುಗೊಳಿಸಿ ಆಯ್ಕೆಯ ಹಕ್ಕನ್ನು ಹಿರಿಯ ಸರಕಾರಿ ಅಧಿಕಾರಿಗಳಿಗೆ ನೀಡಬೇಕು. ದಲಿತ ವರ್ಗಗಳ ಸಮಗ್ರ ಅಭಿವೃದ್ಧಿಗೆ ಏಕ ಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಬೇಕು. ಸರಕಾರಿ ಜಮೀನಿನಲ್ಲಿ ವಾಸವಾಗಿರುವ ಬಡ ದಲಿತ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ತಮ್ಮ ಪ್ರಮುಖ ಹಕ್ಕೊತ್ತಾಯಗಳಾಗಿವೆ ಎಂದು ಮಹಾಲಿಂಗ ತಿಳಿಸಿದರು.