ಭಾಗೀರಥಿಯ ಸಂಶಯಾಸ್ಪದ ಸಾವು ಪ್ರಕರಣ: ಕೊಲೆಯೆಂದು ಸಾಬೀತು: ಪತಿ ವೈದ್ಯನ ಬಂಧನ
ಪ್ರಕಟಿಸಿದ ದಿನಾಂಕ : 2010-03-12
ಹೆಬ್ರಿ, ಮಾ.೧೧: ಎರಡು ತಿಂಗಳ ಹಿಂದೆ ಹೆಬ್ರಿ ಸಮೀಪದ ಬೇಳಿಂಜೆ ಎಂಬಲ್ಲಿ ನಡೆದ ವೈದ್ಯರೋರ್ವರ ಪತ್ನಿ ಭಾಗಿರಥಿ (೩೨) ಎಂಬವರ ಸಂಶಯಾಸ್ಪದ ಸಾವು ಪ್ರಕರಣ ಇದೀಗ ಕೊಲೆ ಎಂಬುದಾಗಿ ದೃಢಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ ಹಾಸನ ಸರಕಾರಿ ವೈದ್ಯ ಕೀಯ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಸುರೇಶ್ ಪ್ರಭು(೩೫) ಎಂಬವರನ್ನು ಬಂಧಿಸಲಾಗಿದೆ.
ಆರೋಪಿ ಡಾ.ಸುರೇಶ್ ಪ್ರಭುರನ್ನು ಉಡುಪಿ ಡಿಸಿಐಬಿ ಪೊಲೀಸರು ಹಾಸನ ದಲ್ಲಿ ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಡಾ.ಸುರೇಶ್ ಪ್ರಭು ತನ್ನ ಪತ್ನಿ ಭಾಗಿರಥಿಯನ್ನು ಜ.೬ರಂದು ಹಾಸನ ದಿಂದ ಉಡುಪಿಗೆ ಕಾರಿನಲ್ಲಿ ಕರೆದು ಕೊಂಡು ಬಂದಿದ್ದರು.
ದಾರಿಯ ಮಧ್ಯೆ ಕಾರ್ಕಳದ ಬೇಳಿಂಜೆ ಗ್ರಾಮದ ತೆಂಕುಲ ಎಂಬಲ್ಲಿ ಆಕೆಗೆ ವಿಷದ ಇಂಜೆಕ್ಷನ್ ಚುಚ್ಚಿ ವ್ಯವಸ್ಥಿತವಾಗಿ ಕೊಲೆ ಮಾಡಿದ್ದರು ಎನ್ನಲಾಗಿದೆ. ಕೊಲೆಯನ್ನು ಮುಚ್ಚಿ ಹಾಕುವ ಉದ್ದೇಶದಿಂದ ಭಾಗಿರಥಿಯ ಕಾಲಿಗೆ ವಿಷದ ಹಾವು ಕಚ್ಚಿದ ಪರಿಣಾಮ ಮೃತಪಟ್ಟಿದ್ದಾಳೆಂದು ಹೆಬ್ರಿ ಪೊಲೀಸ್ ಠಾಣೆಗೆ ಸುರೇಶ್ ದೂರು ನೀಡಿದ್ದರು.
ಈ ಬಗ್ಗೆ ಮೃತಳ ಮನೆಯವರು ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಉಡುಪಿ ಡಿಸಿಐಬಿ ಪೊಲೀಸರು ಇದೊಂದು ಕೊಲೆ ಎಂಬುದಾಗಿ ದೃಢಪಡಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.