ಕಾರ್ಕಳ: ಘನತ್ಯಾಜ್ಯ ನಿರ್ವಹಣೆ ಜಾಗೃತಿಗಾಗಿ ನಾಳೆ ವಿದ್ಯಾರ್ಥಿ ರ‍್ಯಾಲಿ
ಪ್ರಕಟಿಸಿದ ದಿನಾಂಕ : 2010-03-12
ಕಾರ್ಕಳ, ಮಾ.೧೧: ಘನತ್ಯಾಜ್ಯ ನಿರ್ವಹಣೆಯ ವಿದ್ಯಾರ್ಥಿ ಜಾಗೃತಿ ಕಾರ್ಯ ಕ್ರಮಗಳ ಅಂಗವಾಗಿ ಮಾ.೧೩ರಂದು ಕಾರ್ಕಳ ಪುರಸಭೆಯ ವತಿಯಿಂದ ವಿದ್ಯಾರ್ಥಿ ರ‍್ಯಾಲಿ ನಡೆಯಲಿದೆ.
ಅನಂತಶಯನ ವೃತ್ತದಲ್ಲಿ ಪುರಸಭಾ ಅಧ್ಯಕ್ಷ ಸುಬಿತ್‌ಕುಮಾರ್ ಎನ್. ಬೆಳಗ್ಗೆ ೧೦ ಗಂಟೆಗೆ ರ‍್ಯಾಲಿಗೆ ಚಾಲನೆ ನೀಡುವರು. ಈ ರ‍್ಯಾಲಿಯಲ್ಲಿ ವಿವಿಧ ಶಾಲಾ ಕಾಲೇಜುಗಳ ಸುಮಾರು ೫೦೦೦ದಷ್ಟು ವಿದ್ಯಾರ್ಥಿಗಳು ಭಾಗವಹಿ ಸಲಿದ್ದಾರೆ ಎಂದು ಪುರಸಭಾಧ್ಯಕ್ಷ ಸುಬಿತ್‌ಕುಮಾರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಜುನಾಥ ಪೈ ಸಾಂಸ್ಕೃತಿಕ ಸಭಾ ಭವನದಲ್ಲಿ ಶಾಸಕ ಗೋಪಾಲ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನು ರಾಜ್ಯ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಸಂಸದ ಡಿ.ವಿ.ಸದಾನಂದ ಗೌಡ, ಉಡುಪಿ ಜಿಲ್ಲಾಧಿಕಾರಿ ಹೇಮಲತಾ ಭಾಗವಹಿಸಲಿದ್ದಾರೆ. ಪ್ರಧಾನ ಭಾಷಣಗಾರರಾಗಿ ಬೆಂಗಳೂರು ಇಸ್ರೋದ ಪರಿಸರ ವಿಜ್ಞಾನಿ ಪ್ರೊ.ವಿ.ಜಗನ್ನಾಥ್ ಭಾಗವಹಿ ಸಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಡುಪಿ ಜಿಲ್ಲಾ ಉಪನಿರ್ದೇಶಕ ಡಾ.ಬಿ.ವಿ.ಮಹಿದಾಸ್ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಕಾರ್ಕಳ ಪುರಸಭಾ ವ್ಯಾಪ್ತಿಯ ಎಲ್ಲ ಶಾಲಾ- ಕಾಲೇಜುಗಳಿಗೆ ಕಸದ ತೊಟ್ಟಿಗಳನ್ನು ವಿತರಿಸಲಾಗುವುದು. ಘನತ್ಯಾಜ್ಯ ವಿಲೇವಾರಿ ಬಗ್ಗೆ ನಮ್ಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ಇವರಿಂದ ಕಿರು ನಾಟಕ ಪ್ರದರ್ಶನ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖ್ಯಾಧಿಕಾರಿ ಗೋಪಾಲ್‌ಕೃಷ್ಣ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಶುಭದ ರಾವ್, ಉಪಾಧ್ಯಕ್ಷೆ ನಳಿನಿ ವಿ. ಆಚಾರ್ಯ, ಸದಸ್ಯರಾದ ಮುಹಮ್ಮದ್ ಶರೀಫ್, ಹರೀಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.