ಅಂಗಡಿ ಕೋಣೆ ಹರಾಜಿನಲ್ಲಿ ಅವ್ಯವಹಾರದ ಆರೋಪ: ಉಡುಪಿ ನಗರಸಭೆ ಅಧ್ಯಕ್ಷರೊಂದಿಗೆ ಬಿಡ್‌ದಾರರ ವಾಗ್ವಾದ
ಪ್ರಕಟಿಸಿದ ದಿನಾಂಕ : 2010-03-12
ಉಡುಪಿ, ಮಾ.೧೧: ನಗರದ ಸಿಟಿಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣದ ಅಂಗಡಿ ಕೋಣೆಗಳ ಹರಾಜಿ ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕೆಲವು ಬಿಡ್‌ದಾರರು ನಗರ ಸಭಾ ಅಧ್ಯಕ್ಷರೊಂದಿಗೆ ವಾಗ್ವಾದಕ್ಕಿಳಿದ ಘಟನೆ ಗುರುವಾರ ನಡೆಯಿತು.
ವಾಣಿಜ್ಯ ಸಂಕೀರ್ಣದಲ್ಲಿ ಒಟ್ಟು ೧೦ ಅಂಗಡಿ ಕೋಣೆಗಳಿದ್ದು, ಅದರಲ್ಲಿ ೬ ಕೋಣೆ ಗಳನ್ನು ಈ ಹಿಂದೆ ಇದ್ದ ಅಂಗಡಿಯವರಿಗೆ ಮೀಸಲಿರಿಸಲಾಗಿತ್ತು. ಉಳಿದ ೪ ಅಂಗಡಿಗಳ ಹರಾಜಿಗೆ ಸಾರ್ವ ಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಅದರಂತೆ ಇಂದು ನಗರಸಭೆಯ ಸಭಾಂಗಣ ದಲ್ಲಿ ಬಹಿರಂಗ ಹರಾಜು ನಡೆಯಿತು. ಇದರಲ್ಲಿ ನಗರಸಭಾ ಅಧ್ಯಕ್ಷ ದಿನಕರ ಶೆಟ್ಟಿ, ಉಪಾಧ್ಯಕ್ಷೆ ಇಂದಿರಾ ಶೇಖರ್ ಹಾಗೂ ಇತರ ಸದಸ್ಯರು ಪಾಲ್ಗೊಂಡಿದ್ದರು. ಇದರಲ್ಲಿ ೪ ಅಂಗಡಿ ಕೋಣೆಗಳ ಬದಲು ೩ನ್ನು ಮಾತ್ರ ಹರಾಜು ಪ್ರಕ್ರಿಯೆಗೆ ಇಡಲಾಗಿತ್ತು.
೩ ಕೋಣೆಗಳು ಕ್ರಮವಾಗಿ ೧೦ ಸಾವಿರ ರೂ., ೧೨,೩೦೦ ರೂ., ೧೧,೨೦೦ರೂ. ಮಾಸಿಕ ಬಾಡಿಗೆಗೆ ಹರಾಜಾಯಿತು. ಆದರೆ ೧ ಕೋಣೆ ಕೈ ಬಿಟ್ಟಿರುವುದನ್ನು ಕೆಲ ಬಿಡ್‌ದಾರರು ಆಕ್ಷೇಪಿಸಿದರು. ಇದರಿಂದ ಸಾರ್ವಜನಿಕರು ಅಧ್ಯಕ್ಷರೊಂದಿಗೆ ವಾಗ್ವಾದ ನಡೆಸಿದರು. ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಅವರು ಆರೋ ಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ನಾವು ನಗರಸಭಾ ನಿಯಮ ಪ್ರಕಾರವೇ ಅಂಗಡಿ ಗಳನ್ನು ಹರಾಜು ಮಾಡಿದ್ದೇವೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದರು. ಇದರಿಂದ ಕೆಲಕಾಲ ಗೊಂದಲ ಉಂಟಾಯಿತು. ಅಧ್ಯಕ್ಷರು ಸಭೆಯಿಂದ ಎದ್ದು ಹೊರ ನಡೆದರು.
ಒಂದು ಕೋಣೆಯನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸುವ ಮೊದಲೇ ೬ ಸಾವಿರ ರೂ. ಮಾಸಿಕ ಬಾಡಿಗೆ ನಿಗದಿ ಪಡಿಸಿ ಬೇರೆಯವರಿಗೆ ನೀಡಲಾಗಿತ್ತೆಂದು ಸಾರ್ವಜನಿಕರು ಆರೋಪಿಸಿದರು. ಅಲ್ಲದೆ ೩ ಅಂಗಡಿಗಳ ಹರಾಜನ್ನು ಗೌಪ್ಯವಾಗಿ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.