| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎಎಸ್‌ಐ ಉತ್ತರ |
ಪ್ರಕಟಿಸಿದ ದಿನಾಂಕ : 2010-03-12
ಮಂಗಳೂರು, ಮಾ.೧೧: ೨೦೦೮ರ ಸೆಪ್ಟಂಬರ್ ೧೪ರಂದು ಮಿಲಾಗ್ರಿಸ್ ಚರ್ಚ್‌ನ ಅಡೊರೆಶನ್ ಮೊನೆಸ್ಟರಿ ಮೇಲೆ ನಡೆದ ದಾಳಿಯ ನಂತರ ಮಿಲಾಗ್ರಿಸ್-ಫಳ್ನೀರ್ ರಸ್ತೆಯಲ್ಲಿ ನಡೆದ ಅಹಿತಕರ ಘಟನೆಯ ಸಂದರ್ಭ ಪೊಲೀಸರು ಗಾಯಗೊಂಡಿರುವ ವಿಚಾರ ಮಾತ್ರ ತಮಗೆ ತಿಳಿದಿದ್ದು, ಪೊಲೀಸರ ಲಾಠಿ ಚಾರ್ಜ್‌ನಿಂದ ಅಲ್ಲಿದ್ದ ಜನರಿಗೆ ಗಾಯವಾಗಿದೆಯೇ ಇಲ್ಲವೇ ಎಂದು ತನಗೆ ತಿಳಿದಿಲ್ಲ ಎಂದು ಬಂದರು ಪೊಲೀಸ್ ಠಾಣೆ ಯ ಆಗಿನ ಎಎಸ್‌ಐ ಅನಂತ್ ಮುರುಡೇಶ್ವರ ನ್ಯಾ.ಸೋಮಶೇಖರ ಆಯೋಗದೆದುರು ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಇಂದು ನ್ಯಾ.ಸೋಮಶೇಖರ ಆಯೋಗದ ವಿಚಾ ರಣೆಯ ಸಂದರ್ಭ ಕ್ರೈಸ್ತ ಸಾಕ್ಷಿಗಳ ಪರ ವಕೀಲ ಇಬ್ರಾಹೀಂರ ಪಾಟೀ ಸವಾಲಿಗೆ ಎಎಸ್‌ಐ ಅನಂತ್ ಉತ್ತರಿಸುತ್ತಿದ್ದರು. ಅಲ್ಲಿ ಹೆನ್ರಿ ಮೊಂತೆರೋ ಎಂಬವರಿಗೆ ಗಾಯವಾಗಿದ್ದು, ಅವರನ್ನು ಠಾಣೆಗೆ ಕರೆದು ಕೊಂಡು ಹೋಗಿ ಠಾಣಾಧಿಕಾರಿಯ ಸೂಚನೆಯ ಮೇರೆಗೆ ವೆನ್‌ಲಾಕ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸಿದ್ದಾಗಿ ತಿಳಿಸಿದರು.
ಆ ದಿನ ಲಾಠಿ ಪ್ರಹಾರಕ್ಕೆ ಮೊದಲು ಅಶ್ರುವಾಯುಗಳನ್ನು ಸಿಡಿಸಲಾಗಿದ್ದು, ಲಘು ಲಾಠಿ ಪ್ರಹಾರವನ್ನಷ್ಟೆ ಮಾಡಲಾಗಿತ್ತು ಎಂದು ಹೇಳಿದ ಅನಂತ್ ಮುರ್ಡೇಶ್ವರ, ಘಟನೆಯ ಸಂದರ್ಭ ಕ್ರೈಸ್ತರು ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರು ಎಂಬ ಕ್ರೈಸ್ತ ಸಾಕ್ಷಿ ಪರ ವಕೀಲ ಇಬ್ರಾಹೀಂg ವಾದವನ್ನು ನಿರಾಕರಿಸಿದರು. ಕ್ರೈಸ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿ ಗಾಯ ಗೊಳಿಸಿದ್ದಾರೆನ್ನುವುದು ಸುಳ್ಳು ಎಂದ ಎಎಸ್‌ಐ, ಅಂದು ಶಾಂತ ರೀತಿಯಲ್ಲಿ ಪ್ರತಿಭಟಿಸುತ್ತಿದ್ದ ೨೦-೩೦ ಮಂದಿ ಜನರನ್ನು ಬಂಧಿಸಿ ಅವರ ಮೇಲೆ ಕೇಸು ದಾಖಲಿಸಿ ರುವುದು ನಿರಾಕರಿಸಿದ ಅವರು, ಆದರೆ ಆ ದಿನದ ಘಟನೆಯ ಬಗ್ಗೆ ಪೊಲೀಸ್ ಠಾಣೆ ಯಲ್ಲಿ ಕೆಲವು ಜನರ ಮೇಲೆ ಪ್ರಕರಣಗಳನ್ನು ದಾಖಲಿಸಿರುವುದನ್ನು ಒಪ್ಪಿಕೊಂಡರು.
ವಿಳಂಬವಾಗಿದ್ದೇಕೆಂದು ಗೊತ್ತಿಲ್ಲ!
ನ್ಯಾ. ಸೋಮಶೇಖರ ಆಯೋಗವು ೨೦೦೮ರ ಸೆಪ್ಟಂಬರ್‌ನಲ್ಲಿಯೇ ರಚನೆಯಾಗಿ ದ್ದರೂ ೨೦೦೯ರ ಜನವರಿ ೩೧ರಂದು ಆಯೋಗಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದೀರಿ ಇದು ಉದ್ದೇಶ ಪೂರ್ವಕವಾಗಿಯೆ ಮಾಡಿದ್ದು ಎಂದು ವಕೀಲ ಇಬ್ರಾಹೀಂರ ಪಾಟೀ ಸವಾಲಿಗೆ ಪ್ರತಿಕ್ರಿಯಿ ಸಿದ ಎಸ್‌ಐ ಅನಂತ್, ವಿಳಂಬವಾಗಿ ಪ್ರಮಾಣ ಪತ್ರ ಸಲ್ಲಿಸಿದ್ದೇಕೆಂದು ಗೊತ್ತಿಲ್ಲ ಎಂದರು. ಬಜರಂಗದಳ ಪರ ವಕೀಲ ಜಗದೀಶ ಶೇಣವರ ಸವಾಲೊಂದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಐ, ಮಿಲಾಗ್ರಿಸ್ ಚರ್ಚ್‌ನಲ್ಲಿ ನಡೆದ ಘಟನೆಯ ಸಂದರ್ಭ ಅಲ್ಲಿಗೆ ಕಾಂಗ್ರೆಸ್ ನಾಯಕರಾದ ಐವನ್ ಡಿಸೋಜಾ, ಆಸ್ಕರ್ ಫೆರ್ನಾಂಡಿಸ್, ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಶಾಸಕರಾದ ರಮಾನಾಥ ರೈ ಹಾಗೂ ಯು.ಟಿ.ಖಾದರ್ ಬಂದಿದ್ದರೆಂದರು. ಅಲ್ಲಿ ಸೇರಿದ್ದ ಜನರು ಬಜರಂಗದಳಕ್ಕೆ ಧಿಕ್ಕಾರ ಕೂಗುತ್ತಿದ್ದರು ಎಂದು ಹೇಳಿದರು.
ಆಯೋಗದ ಅವಧಿ ವಿಸ್ತರಣೆ ಕೋರಿ ಸರಕಾರಕ್ಕೆ ಪತ್ರ: ನ್ಯಾ. ಸೋಮಶೇಖರ
೨೦೦೮ರ ಸೆಪ್ಟಂಬರ್ ೧೪ ಮತ್ತು ಅನಂತರ ನಡೆದ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಗೆ ಸಂಬಂಧಿಸಿ ವಿಚಾರಣೆ ನಡೆಸುತ್ತಿರುವ ನ್ಯಾ.ಸೋಮಶೇಖರ ಆಯೋಗದ ಅವಧಿಯು ಮಾರ್ಚ್ ೩೧ಕ್ಕೆ ಅಂತ್ಯ ಗೊಳ್ಳಲಿದ್ದು, ಅವಧಿಯನ್ನು ವಿಸ್ತರಿಸುವಂತೆ ಕೋರಿ ಈಗಾಗಲೆ ಸರಕಾರಕ್ಕೆ ಪತ್ರ ಬರೆದಿರುವುದಾಗಿ ನ್ಯಾ. ಸೋಮಶೇಖರ ಇಂದು ಕಲಾಪದ ಸಂದರ್ಭ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಮ್ಮ ಅವಧಿ ವಿಸ್ತರಣೆಯ ಕಾಲಾವಕಾಶವನ್ನು ತಾವು ಪತ್ರದಲ್ಲಿ ನಮೂದಿಸಿಲ್ಲ. ಘಟನೆಗೆ ಸಂಬಂಧಿಸಿ ರಾಜ್ಯಾದ್ಯಂತ ಒಟ್ಟು ಆಯೋಗಕ್ಕೆ ಸಲ್ಲಿಕೆಯಾಗಿರುವ ೧೦೧೯ ದೂರುಗಳಲ್ಲಿ (ಅಫಿದಾವಿತ್) ಸುಮಾರು ೧೦೦ ಅರ್ಜಿಗಳು ವಿಚಾರಣೆಗೆ ಬಾಕಿ ಉಳಿದಿದೆ ಎಂದು ನ್ಯಾ. ಸೋಮಶೇಖರ ಈ ಸಂದರ್ಭ ತಿಳಿಸಿದರು.
ಆಯೋಗ ಎಂದರೆ ಮಾನವ ಹಕ್ಕು ಆಯೋಗ...!
ಮಿಲಾಗ್ರಿಸ್ ಚರ್ಚ್‌ನಲ್ಲಿ ನಡೆದ ಘಟನೆ (೧೪-೯-೨೦೦೮)ಯ ಸಂದರ್ಭ ಕರ್ತವ್ಯದಲ್ಲಿದ್ದ ತಾನು ಗಾಯಗೊಂಡಿದ್ದು, ನ್ಯಾ.ಸೋಮಶೇಖರ ಆಯೋಗ ಯಾವಾಗ ತಮ್ಮ ಕಲಾಪಗಳನ್ನು ಆರಂಭಿಸಿತ್ತು ಎಂಬುದು ತನಗೆ ಗೊತ್ತಿಲ್ಲ. ಆದರೆ ಘಟನೆಯ ದಿನ ದಂದೇ ತಾನು ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಕೊಣಾಜೆ ಪೊಲೀಸ್ ಠಾಣೆಯ (ಕೆಎಸ್ ಆರ್‌ಪಿ ಬೆಟಾರ್ನಿ) ಸಿಬ್ಬಂದಿ ಎಚ್.ಲಕ್ಷ್ಮಯ್ಯ ಇಬ್ರಾಹೀಂರ ಪಾಟೀ ಸವಾಲಿಗೆ ಗೊಂದಲಮಯ ಉತ್ತರ ನೀಡಿದರು.
ಈ ಸಂದರ್ಭ ನ್ಯಾ. ಸೋಮಶೇಖರ ಆಯೋಗ ಅಂದರೆ ಏನು ಎಂಬುದು ತಮಗೆ ಗೊತ್ತಿದೆಯೇ ಎಂದು ಸಾಕ್ಷಿ ಬಳಿ ನ್ಯಾಯಮೂರ್ತಿ ಪ್ರಶ್ನಿಸಿದಾಗ, ಅವರು ಮಾನವ ಹಕ್ಕು ಆಯೋಗ ಎಂಬುದಾಗಿ ಉತ್ತರಿಸಿದರು.
ಬಂದರು ಪೊಲೀಸ್ ಠಾಣಾಧಿಕಾರಿಯ ಮೂಲಕ ತಾವು ಆಯೋಗಕ್ಕೆ ಪ್ರಮಾಣ ಪತ್ರ ಬರೆಸಿದ್ದಾಗಿ ಹೇಳಿದ ಎಚ್. ಲಕ್ಷ್ಮಯ್ಯ, ಘಟನೆಯ ದಿನದಂದು ಅಲ್ಲಿ ಸುಮಾರು ೨೫ ಪೊಲೀಸರಿದ್ದುದಾಗಿ ಪ್ರತಿಕ್ರಿಯಿಸಿ ದರು. ಆ ದಿನ ನಡೆದ ಲಾಠಿ ಚಾರ್ಜ್‌ನಿಂದ ಹಲವ ರಿಗೆ ಗಾಯವಾಗಿವೆ. ಆ ದಿನ ಬಹಳಷ್ಟು ಅಶ್ರುವಾಯು ಸಿಡಿಸಲಾಗಿತ್ತು ಎಂದು ಲಕ್ಷ್ಮಯ್ಯ ಉತ್ತರಿಸಿದರು.
ಬಜರಂಗದಳ ಪರ ವಕೀಲ ಜಗದೀಶ ಶೇಣವ ರ ಪಾಟೀ ಸವಾಲಿಗೆ ಪ್ರತ್ಯುತ್ತರಿಸಿದ ಲಕ್ಷ್ಮಯ್ಯ, ಘಟನೆಯ ದಿನದಂದು ಮಿಲಾಗ್ರಿಸ್ ಫಳ್ನೀರ್ ರಸ್ತೆಯಲ್ಲಿ ಎರಡರಿಂದ ಮೂರು ಸಾವಿರದಷ್ಟು ಜನ ಸೇರಿದ್ದು, ಅವರಲ್ಲಿ ಬಜರಂಗದಳದವರು ಯಾರೆಂದು ಹೇಳಲು ಸಾಧ್ಯವಿಲ್ಲ ಎಂದರು.
ತಮ್ಮ ಸಾಕ್ಷಿ ಗೊಂದಲಮಯ ಉತ್ತರ ನೀಡುತ್ತಿದ್ದ ಬಗ್ಗೆ ಸಹನೆ ಕಳೆದುಕೊಂಡ ಪೊಲೀಸ್ ಪರ ವಕೀಲ ನಾರಾಯಣ ರೆಡ್ಡಿ ಸಾಕ್ಷಿಯನ್ನು ಏಕವಚನದಲ್ಲಿ ಸಂಬೋಧಿಸಿದಾಗ, ನ್ಯಾ.ಸೋಮಶೇಖರ ವಕೀಲರನ್ನು ತಡೆದು ಕಲಾಪದ ಸಂದರ್ಭ ಸಾಕ್ಷಿಯೊಂದಿಗೆ ಆ ರೀತಿ ವ್ಯವಹರಿಸುವುದು ಸರಿಯಲ್ಲ ಎಂದು ಸಮಾಧಾನ ಪಡಿಸಿದರು.
ಅಹಿತಕರ ಘಟನೆಯ ಹಿನೆಲೆಯಲ್ಲಿ ಅಂದು ಮಧ್ಯಾಹ್ನ ೧ ಗಂಟೆಯ ಸುಮಾರಿಗೆ ಜಿಲ್ಲಾಡಳಿತ ನಿಷೇಧಾಜ್ಞೆ ಘೋಷಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಲಘು ಲಾಠಿ ಪ್ರಹಾರ ಮಾಡಲಾಯಿತು. ಆ ದಿನ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಯನ್ನು ಹೊರತುಪಡಿಸಿದ ಉಳಿದ ಜಿಲ್ಲಾ ಅಧಿಕಾರಿಗಳ ಪರಿಚಯ ತಮಗಿರಲಿಲ್ಲ ಎಂದು ಸರಕಾರ ಪರ ವಕೀಲ ಟಿ.ಪಿ. ಶ್ರೀನಿವಾಸ್‌ರ ಪಾಟೀ ಸವಾಲಿಗೆ ಬಂದರು ಠಾಣೆಯ ಪಿಸಿ ಜಯಂತ್ ಉತ್ತರಿಸಿದರು.
ಸಾಕ್ಷಿ ಉತ್ತರ ನೀಡುತ್ತಿದ್ದ ಸಂದರ್ಭ ಪೊಲೀಸ್ ಪರ ವಕೀಲ ಆಗಾಗ್ಗೆ ಮಧ್ಯೆ ಪ್ರವೇಶಿಸಿ ಸಾಕ್ಷಿಯ ಹೇಳಿಕೆಗಳನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತಿದ್ದಾಗ ಆಕ್ಷೇಪ ವ್ಯಕ್ತಪಡಿಸಿದ ನ್ಯಾ.ಸೋಮಶೇಖರ್, ಸಾಕ್ಷಿಯಿಂದ ಮಾಹಿತಿ ಸಂಗ್ರಹಿಸು ವಾಗ ಅಡ್ಡಿಪಡಿಸಬೇಡಿ, ನಂತರ ಅಗತ್ಯವಿದ್ದಲ್ಲಿ ಮರು ವಿಚಾರಣೆ ನಡೆಸಿ ಎಂದು ಸಲಹೆ ನೀಡಿದರು.
ಇಂದು ನಡೆದ ಕಲಾಪದಲ್ಲಿ ಸರಕಾರಿ ಪರ ವಕೀಲ ಪ್ರಸನ್ನ ದೇಶಪಾಂಡೆ, ಕ್ರೈಸ್ತ ಸಾಕ್ಷಿ ಪರ ವಕೀಲ ಫ್ರಾನ್ಸಿಸ್, ಪೊಲೀಸ್ ಪರ ಸಿದ್ಧಗಂಗಯ್ಯ, ಆಯೋಗದ ತಿಮ್ಮಾವಗೋಳ್ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-12 00:00:00
|
|
|
|
|