ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ |
ಪ್ರಕಟಿಸಿದ ದಿನಾಂಕ : 2010-03-11
ಚೆನ್ನೈ, ಗುರುವಾರ, 11 ಮಾರ್ಚ್ 2010(
ತಾನು ಮಾಡಿರುವುದು 'ಸ್ವಾಮಿ ಸೇವೆ', ಇದನ್ನು ಮಾಧ್ಯಮಗಳು ಅತಿರೇಕವಾಗಿ ಬಿಂಬಿಸಿ ಪ್ರಸಾರ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಕಾಮಿಸ್ವಾಮಿ ಹಗರಣ ಖ್ಯಾತಿ ನಟಿ ರಂಜಿತಾ, ಪರಮಹಂಸ ನಿತ್ಯಾನಂದ ಸ್ವಾಮಿಗೆ ಮಸಾಜ್ ಮಾಡುತ್ತಿರುವ ಹೊಸ ಚಿತ್ರಗಳು ಬಹಿರಂಗಗೊಂಡಿದೆ.
ನಿತ್ಯಾನಂದ ಸ್ವಾಮಿಗೆ ಮಸಾಜ್ ಮಾಡುತ್ತಿರುವ ಈ ಹೊಸ ದೃಶ್ಯಗಳನ್ನು ತಮಿಳು ಟೀವಿ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದು, ಹಲವು ಪತ್ರಿಕೆಗಳು ಕೂಡ ಚಿತ್ರಗಳನ್ನು ಪ್ರಕಟಿಸಿವೆ. ನಕ್ಕೀರನ್ ಪಾಕ್ಷಿಕದ ವೆಬ್‌ಸೈಟ್ ಮತ್ತು ಯೂಟ್ಯೂಬ್‌ಗಳಲ್ಲೂ ಹರಿದಾಡುತ್ತಿರುವ ಇದು ತಮಿಳುನಾಡಿನಾದ್ಯಂತ ಮತ್ತಷ್ಟು ಕೋಲಾಹಲ ಸೃಷ್ಟಿಗೆ ಕಾರಣವಾಗುತ್ತಿದೆ.
ಇಲ್ಲಿ ರಂಜಿತಾ ಎಂದು ಹೇಳಲಾಗಿರುವ ಮಹಿಳೆ ಸ್ವಾಮಿಯ ಅಂಗಿಯನ್ನು ಅರ್ಧದಷ್ಟು ಬಿಚ್ಚಿ, ಎಣ್ಣೆ ಹಚ್ಚಿ ಮಸಾಜ್ ಮಾಡುವ ದೃಶ್ಯಗಳಿವೆ. ಆದರೆ ಇಲ್ಲಿ ಯಾವುದೇ ಅಶ್ಲೀಲ ಎಂದು ಹೇಳಬಹುದಾದ ದೃಶ್ಯಗಳಿಲ್ಲ. ಸ್ವಾಮಿಗೆ ಸಂಪೂರ್ಣ ಮಸಾಜ್ ಮಾಡಿದ ನಂತರ ರಂಜಿತಾ ಬ್ಯಾಗ್ ಹೆಗಲಿಗೇರಿಸಿಕೊಂಡು ವಾಪಸ್ ಹೋಗುವ ದೃಶ್ಯ ವೀಡಿಯೋದಲ್ಲಿದೆ.
ಭಾರೀ ಸಾಧಕ ನಿತ್ಯಾನಂದ.... ಹೌದು, ಕಳಂಕಿತ ಸ್ವಾಮಿಯ ತಿರುವಣ್ಣಾಮಲೈ ಎಂಬಲ್ಲಿರುವ ಚಿಕ್ಕಪ್ಪ ಕುಮಾರಸ್ವಾಮಿಯವರ ಪ್ರಕಾರ ನಿತ್ಯಾನಂದ ಭಾರೀ ಸಾಧಕನಂತೆ. 'ಡೆಕ್ಕನ್ ಹೆರಾಲ್ಡ್' ಪತ್ರಿಕೆ ಈ ವಿವರಗಳನ್ನು ಪ್ರಕಟಿಸಿದೆ.
ಪೂರ್ವಾಶ್ರಮದಲ್ಲಿ ರಾಜಶೇಖರನ್ ಆಗಿದ್ದ ನಿತ್ಯಾನಂದ ಸ್ವಾಮಿಗೆ ಬಾಲ್ಯದಲ್ಲಿಯೇ ಆಧ್ಯಾತ್ಮದತ್ತ ವಿಪರೀತ ಒಲವಿತ್ತು. ಕೇವಲ 10 ವರ್ಷದವನಾಗಿದ್ದಾಗಲೇ ಜ್ಯೋತಿಷಿಯೊಬ್ಬರು, ಈತ ಮುಂದೊಂದು ದಿನ ಸನ್ಯಾಸಿಯಾಗುತ್ತಾನೆ ಎಂದು ಭವಿಷ್ಯ ನುಡಿದಾಗಲೂ ಹೆತ್ತವರು ತಲೆಕೆಡಿಸಿಕೊಂಡಿರಲಿಲ್ಲ ಎಂದು ಕುಮಾರಸ್ವಾಮಿ ವಿವರಣೆ ನೀಡುತ್ತಾರೆ.
ಈಗ ಸ್ವಾಮಿಯಾಗಿರುವ ರಾಜಶೇಖರನ್ ತಂದೆ ಅರುಣಾಚಲಂ ತಿರುವಣ್ಣಾಮಲೈಯಲ್ಲೇ ಒಂದು ಸಣ್ಣ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಮಗ ಹತ್ತನೇ ತರಗತಿಯನ್ನು ಮುಗಿಸಿದ ಬಳಿಕ ಡಿಪ್ಲೋಮಾ ಓದಿಸುವ ಬಯಕೆ ಅವರದ್ದಾಗಿತ್ತು. ಆದರೆ ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಂಡಿದ್ದ ಈತ ಯಂತ್ರ-ಮಂತ್ರಗಳ ಮೊರೆ ಹೋಗಿದ್ದ. ಇದು ಅರುಣಾಚಲಂ ಅರಿವಿಗೆ ಬಂದಿರಲಿಲ್ಲ ಎನ್ನುವುದು ಸ್ವಾಮಿ ಚಿಕ್ಕಪ್ಪನ ಅನಿಸಿಕೆ.
ಯೋಗದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ನಿತ್ಯಾನಂದ ದೇವಿ ಭಕ್ತರಾಗಿದ್ದರು. ಕುಪ್ಪುಮ್ಮಾಳ್ ಎಂಬ ಮಹಿಳೆಯಿಂದ ದೇವಿಯ ಉಪಾಸನಾ ದೀಕ್ಷೆಯನ್ನೂ ಪಡೆದಿದ್ದ ನಿತ್ಯಾನಂದ ಯೋಗಗುರು ರಘುಪತಿ ಎಂಬವರಿಂದ ಯೋಗ ಕಲಿತಿದ್ದ.
1995ರಲ್ಲಿ ಚೆನ್ನೈಗೆ ಬಂದ ಬಾಲಕ ರಾಜಶೇಖರನ್ ಆಟೋ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಬಳಿಕ ಸನ್ಯಾಸತ್ವ ತೀವ್ರವಾಗಿ ರಾಮಕೃಷ್ಣಾಶ್ರಮಕ್ಕೆ ಸೆಳೆದಿತ್ತು. ಮನೆಯವರು ತೀವ್ರವಾಗಿ ವಿರೋಧಿಸಿದರೂ ವಿರಕ್ತಿಯ ಹಾದಿಗೆ ಹೋಗಿದ್ದ ರಾಜಶೇಖರನ್, ಹಿಮಾಲಯದಲ್ಲೂ ತಪಸ್ಸು ಮಾಡಿದ್ದ.
ಬಳಿಕ ಬೆಂಗಳೂರಿಗೆ ವಾಪಸಾಗಿ ಆಶ್ರಮ ತೆರೆದು, ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದರು. ಸಾವಿರಾರು-ಲಕ್ಷಾಂತರ ಮಂದಿಗೆ ಸಹಾಯ ಮಾಡಿದ್ದ. ಈ ಹಂತದಲ್ಲಿ ವೈಭೋಗದಲ್ಲಿ ಮೆರೆದಾಡಿದ ಸ್ವಾಮಿಗೆ ಲೌಕಿಕ ಜೀವನದತ್ತ ಮನಸ್ಸು ವಾಲಿರಬಹುದು. ಆದರೂ ನಮಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ನಿತ್ಯಾನಂದನ ಚಿಕ್ಕಪ್ಪ ಕುಮಾರಸ್ವಾಮಿ ವಿವರಣೆ ನೀಡಿದ್ದಾರೆ.
ಕುಂಭಮೇಳಕ್ಕೆ ಪ್ರವೇಶವಿಲ್ಲ... ವಾರಣಾಸಿಯಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪ್ರತಿಷ್ಠಿತ ಧಾರ್ಮಿಕ ಗುರುಗಳಿಗೆಂದು ಮೀಸಲಾಗಿಡುವ ಸ್ಥಳವನ್ನು ಈ ಬಾರಿ ಕಳಂಕಿತ ಸ್ವಾಮಿ ನಿತ್ಯಾನಂದರಿಗೆ ನೀಡದೇ ಇರಲು ಕುಂಭಮೇಳ ಆಡಳಿತ ಮಂಡಳಿ ನಿರ್ಧರಿಸಿದೆ.
ಪರಮಹಂಸ ನಿತ್ಯಾನಂದ ಸ್ವಾಮಿಯವರಿಗೆ ನೀಡಲು ಉದ್ದೇಶಿಸಿದ್ದ ಸ್ಥಳವನ್ನು ನಿರಾಕರಿಸಲು ನಿರ್ಧರಿಸಲಾಗಿದೆ. ಹಾಗಾಗಿ ಅವರು ಇಲ್ಲಿ ಬಂದು ಧಾರ್ಮಿಕ ಕಾರ್ಯಗಳನ್ನು ನಡೆಸುವಂತಿಲ್ಲ ಎಂದು ಕುಂಭ ಮೇಳ ಆಡಳಿತ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕುಂಭಮೇಳದಲ್ಲಿದ್ದಾರೆ: ಸ್ವಾಮಿ ವಕೀಲ ನಿತ್ಯಾನಂದ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ಆಪಾದನೆಗಳನ್ನು ತಳ್ಳಿ ಹಾಕಿರುವ ಅವರ ವಕೀಲ ಎಂ. ಶ್ರೀಧರ್, 'ನನ್ನ ಕಕ್ಷಿದಾರ ಪ್ರಸಕ್ತ ವಾರಣಾಸಿಯ ಕುಂಭಮೇಳದಲ್ಲಿದ್ದಾರೆ. ಮಾಧ್ಯಮಗಳು ಸ್ವಾಮಿ ವಿರುದ್ಧ ಮಾಡಿರುವ ಆರೋಪಗಳು ಕಪೋಲಕಲ್ಪಿತ ಮಾತ್ರ, ಈ ಕುರಿತು ಯಾವುದೇ ದಾಖಲೆಗಳಿಲ್ಲ. ಅವರ ವಿರುದ್ಧ ಕಾನೂನಿನ ಪ್ರಕಾರ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಯಾರು ಏನು ಬೇಕಾದರೂ ಹೇಳಬಹುದಾಗಿದೆ' ಎಂದಿದ್ದಾರೆ.
ಚೆನ್ನೈಯಲ್ಲೇ ಇದ್ದಾರೆ.... ಕೆಲವು ಮೂಲಗಳ ಪ್ರಕಾರ ನಿತ್ಯಾನಂದ ಕುಂಭಮೇಳಕ್ಕೆ ಹೋಗಿಯೇ ಇಲ್ಲ. ದಾರಿ ತಪ್ಪಿಸುವ ಉದ್ದೇಶದಿಂದ ಈ ಹೇಳಿಕೆಯನ್ನು ನೀಡಲಾಗುತ್ತಿದೆ. ಅವರು ಚೆನ್ನೈಯಲ್ಲೇ ಅವರ ಆಪ್ತರ ಮನೆಯಲ್ಲಿ ಅಜ್ಞಾತವಾಗಿ ಉಳಿದುಕೊಂಡಿದ್ದಾರೆ.
ತಮಿಳು ವಾರ್ತಾ ವಾಹಿನಿಯೊಂದು ನಟಿ ರಂಜಿತಾ ಜತೆ ಸ್ವಾಮಿ ಕಾಮಕೇಳಿಯಲ್ಲಿ ಪಾಲ್ಗೊಂಡ ವೀಡಿಯೋ ತುಣುಕನ್ನು ಪ್ರಸಾರ ಮಾಡಿದ ನಂತರ ತಮಿಳುನಾಡು ಮತ್ತು ಕರ್ನಾಟಕ ಸರಕಾರಗಳು ಅವರ ಹುಡುಕಾಟದಲ್ಲಿವೆ. ಅವರು ಅಡಗಿಕೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಮೈಸೂರು, ತಿರುವನಮಲೈ ಮುಂತಾದೆಡೆ ಸತತ ದಾಳಿಗಳನ್ನು ನಡೆಸಲಾಗುತ್ತಿದೆ. ಆದರೆ ಇನ್ನೂ ಪತ್ತೆಯಾಗಿಲ್ಲ.

ಪದೇ ಪದೇ ಪ್ರಸಾರ ಮಾಡೋದು ಕೀಳಭಿರುಚಿಯಂತೆ! ಹೀಗೆಂದು ಹೇಳಿರುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಗೃಹ ಸಚಿವ ವಿ.ಎಸ್. ಆಚಾರ್ಯ. ವಿದ್ಯುನ್ಮಾನ ಮಾಧ್ಯಮಗಳು ಕಳಂಕಿತ ಸ್ವಾಮೀಜಿಯ ಮಂಚಾವತಾರವನ್ನು ಪದೇ ಪದೇ ಪ್ರಸಾರ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಇವರು, ಇದು ಒಳ್ಳೆಯ ಅಭಿರುಚಿಯಲ್ಲ ಎಂದು ಸಲಹೆ ನೀಡಿದ್ದಾರೆ.
ಸ್ವಾಮಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿರುವ ವೀಡಿಯೋ ತುಣುಕನ್ನು ಪದೇ ಪದೇ ಪ್ರಸಾರ ಮಾಡುವುದು ನಮ್ಮ ಸಂಸ್ಕೃತಿಗೆ ಹೊಂದಿಕೊಳ್ಳುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆಂದು 'ಟೈಮ್ಸ್ ಆಫ್ ಇಂಡಿಯಾ' ತನ್ನ ವರದಿಯಲ್ಲಿ ಹೇಳಿದೆ.
ಈ ಪ್ರಕರಣ ನಡೆದಿರುವುದು ಕರ್ನಾಟಕದಲ್ಲಿ ಎಂದು ತಮಿಳುನಾಡಿನ ಅಧಿಕಾರಿಗಳು ಹೇಳಿರುವುದನ್ನು ಕೇಳಿದ್ದೇನೆ. ಸ್ವಾಮಿ ಭೂಗತರಾಗಿದ್ದಾರೆ. ಈಗ ಹೇಳುತ್ತಿರುವ ಭೂಮಿ ಸರಕಾರಕ್ಕೆ ಸೇರಿಲ್ಲವಾಗಿರುವುದರಿಂದ ನಾವು ಅದನ್ನು ವಶಪಡಿಸಿಕೊಳ್ಳು ವಂತಿಲ್ಲ. ಈ ಸಂಬಂಧ ಯಾರಾದರೂ ದೂರು ನೀಡಿದಲ್ಲಿ, ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ
ನಿತ್ಯಾನಂದನ ಮತ್ತೊಂದು ವೀಡಿಯೋ ಸಂದರ್ಶನ ಚೆನ್ನೈ, ಗುರುವಾರ, 11 ಮಾರ್ಚ್ 2010
ಸ್ವಾಮಿ ನಿತ್ಯಾನಂದರ ಕಾಮಲೀಲೆಗಳು ಚಿತ್ರ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಾ, ನಿತ್ಯಾನಂದ ಸ್ವಾಮಿ ಎಲ್ಲಿದ್ದಾರೆಂಬ ಕುರಿತು ಗೊಂದಲಗಳು ಮುಂದುವರಿದಿರುವಂತೆಯೇ, ಸಂದರ್ಶನವೊಂದರಲ್ಲಿ ನಿತ್ಯಾನಂದ ಸ್ವಾಮಿ ಅವರು, ತಮ್ಮ ಮೇಲಿನ ಆರೋಪಗಳೆಲ್ಲಾ 'ಕುತಂತ್ರ, ಸುಳ್ಳು ಸುದ್ದಿ, ಗಾಳಿ ಸುದ್ದಿ' ಎಂದು ತಳ್ಳಿ ಹಾಕಿದ್ದಾರೆ.
ಸಂಶೋಧಕರೆಂದು ಹೇಳಿಕೊಂಡ ಅಮೆರಿಕ ನಿವಾಸಿ, ರಾಜೀವ್ ಮಲ್ಹೋತ್ರಾ ಎಂಬವರು ಕುಂಭಮೇಳಕ್ಕೆ ಹೋಗಿದ್ದಾರೆ ಎನ್ನಲಾಗತ್ತಿರುವ ನಿತ್ಯಾನಂದ ಸ್ವಾಮಿಯನ್ನು ಅಲ್ಲೇ ಸಂದರ್ಶಿಸಿರುವ ಕುರಿತಾದ ವೀಡಿಯೋ, ನಿತ್ಯಾನಂದ ಧ್ಯಾನಪೀಠದ ವೆಬ್ ಸೈಟಿನಲ್ಲಿ ಲಭ್ಯವಿದೆ.
ಸಂದರ್ಶನದಲ್ಲಿ ಜಮೀನು ಅಕ್ರಮ, ಶ್ರೀಗಂಧ ಪತ್ತೆ, ಅತ್ಯಾಚಾರ ಆರೋಪ, ನಿಗೂಢ ಸಾವಿನ ಆರೋಪ ಮುಂತಾದ ಪ್ರಶ್ನೆಗಳನ್ನು ಕೇಳಲಾಗಿದ್ದರೂ, ಜನರಲ್ಲಿ ಕುತೂಹಲಕ್ಕೆ ಕಾರಣವಾಗಿರುವ ರಂಜಿತಾ ಜತೆಗಿನ ಕಾಮದಾಟದ ಬಗ್ಗೆ ಪ್ರಸ್ತಾಪವೇ ಇರಲಿಲ್ಲ ಎಂಬುದು ಗಮನಾರ್ಹ. ಮಾತ್ರವಲ್ಲದೆ, ಹೊರಗಿನವರ ಸಂದರ್ಶನಕ್ಕೂ ದೊರೆಯುವ ಈ ಸ್ವಾಮೀಜಿ, ಭಾರತೀಯ ಮಾಧ್ಯಮಗಳ ಕೈಗೆ ಅಥವಾ ಪೊಲೀಸರ ಕೈಗೆ ಸಿಗುತ್ತಿಲ್ಲವೇಕೆ ಎಂಬುದೂ ಕುತೂಹಲಕರವಾಗಿದೆ.
ಜಮೀನು ಕಾನೂನುಬದ್ಧ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ನಿತ್ಯಾನಂದ, ಬಿಡದಿ ಆಶ್ರಮದ ಜಮೀನನ್ನು ಸಜ್ಜನ್ ರಾವ್ ಎಂಬ ಕೊಡುಗೈ ದಾನಿಯೊಬ್ಬರ ಕುಟುಂಬಿಕರು ನೀಡಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳೂ ಲಭ್ಯವಿದೆ. ಇದನ್ನು ವೆಬ್ ಸೈಟಿನಲ್ಲಿಯೂ ಪ್ರಕಟಿಸಲಾಗುತ್ತದೆ. ವಿನಾಯಕ ರಾವ್, ಪ್ರತಾಪ ರಾವ್, ಜೀವನರಾವ್ ಸಹೋದರರು ಆಧ್ಯಾತ್ಮಿಕತೆಯ ಮೇಲಿನ ಪ್ರೀತಿಯಿಂದ, ಭಕ್ತಿಯಿಂದ 2003ರಲ್ಲಿ ಜಮೀನು ನೀಡಿದ್ದಾರೆ. ಇಲ್ಲೇ ಒಂದು ಅಶ್ವತ್ಥ ವೃಕ್ಷ ಮತ್ತು ಶಿವ ದೇವಾಲಯವಿದ್ದು, ದೀರ್ಘಕಾಲದಿಂದ ಅದಕ್ಕೆ ಪೂಜೆ ನಡೆಯುತ್ತಿತ್ತು. ಈ ಜಮೀನನ್ನು ಕಾನೂನುಬದ್ಧವಾಗಿಯೇ ಪಡೆದುಕೊಂಡಿರುವುದಾಗಿ ಹೇಳಿದರು.
ಸಾವು ಸಹಜ, ಕೊಲೆಯಲ್ಲ ಕೆನಡಾದ ಭಕ್ತನೊಬ್ಬನ ನಿಗೂಢ ಸಾವಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ನಿತ್ಯಾನಂದ, ಆತ ಮೇಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟಿದ್ದ, ಈ ಬಗ್ಗೆ ಪೋಸ್ಟ್ ಮಾರ್ಟಂ ವರದಿ, ಪೊಲೀಸ್ ವರದಿಗಳು ಎಲ್ಲವೂ ಇದೆ. ಯಾವುದನ್ನೂ ಮುಚ್ಚಿ ಹಾಕಿಲ್ಲ, ಅಪರಾಧವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಲವಂತವಿಲ್ಲ ಯುವ ಜನರನ್ನು ಬಲವಂತವಾಗಿ ಆಶ್ರಮದಲ್ಲಿ ಕೂಡಿ ಹಾಕಲಾಗುತ್ತಿದ್ದು, ಈ ಬಗ್ಗೆ ಹೆತ್ತವರೆಲ್ಲ ದೂರು ನೀಡುತ್ತಿದ್ದಾರೆ ಆರೋಪಗಳಿಗೆ ಪ್ರತಿಕ್ರಿಯಿಸುತ್ತಾ,
ಎಲ್ಲರೂ ಸ್ವಇಚ್ಛೆಯಿಂದ ಆಶ್ರಮದಲ್ಲಿದ್ದಾರೆ. ಹೋಗಲು ಬಯಸಿದರೆ ಯಾರು ಬೇಕಾದರೂ ಹೋಗಬಹುದು. ಆಶ್ರಮಕ್ಕೆ ಪೂರ್ಣ ಪ್ರಮಾಣದ ಗೇಟ್ ಕೂಡ ಇಲ್ಲ, ಯಾರು ಬೇಕಾದರೂ ಬಂದು-ಹೋಗಬಹುದು ಎಂದು ಹೇಳಿದರು.
ಅತ್ಯಾಚಾರ ಆರೋಪ ಸುಳ್ಳು ಅತ್ಯಾಚಾರ ಕುರಿತ ಆರೋಪಗಳಿಗೆ ಪ್ರತಿಕ್ರಿಯಿಸುತ್ತಾ, ಯಾರು ಕೂಡ ಇದುವರೆಗೆ ದೂರು ನೀಡಿಲ್ಲ ಎಂದರಲ್ಲದೆ, ಜನರ ದಾರಿ ತಪ್ಪಿಸಲು, ಭಯ ಹುಟ್ಟಿಸಲು ಈ ರೀತಿಯ ಸುಳ್ಳು ಗಾಳಿ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿದರು.
ಅಕ್ರಮ ಶ್ರೀಗಂಧ ಅಲ್ಲ ಮಠದಲ್ಲಿ ಅಕ್ರಮ ಶ್ರೀಗಂಧದ ತುಂಡುಗಳು ಲಭಿಸಿರುವ ಆರೋಪಗಳಿಗೆ ಉತ್ತರಿಸಿದ ಅವರು, ಮಠದ ವ್ಯಾಪ್ತಿಯಲ್ಲಿ ಸಾಕಷ್ಟು ಗಂಧದ ಮರಗಳಿವೆ. ಅವುಗಳನ್ನು ಯಾರೋ ಕಳ್ಳರು ತುಂಡು ಮಾಡಿ ಒಯ್ದಿದ್ದಾರೆ. ಹೋಗುವಾಗ ಕೆಲವೊಂದು ಸಣ್ಣಪುಟ್ಟ ತುಂಡುಗಳನ್ನು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ನಾವು ಅರಣ್ಯ ಇಲಾಖೆಗೆ ತಿಳಿಸಿದಾಗ, ಅವರು ಇದೆಲ್ಲಾ ಸಾಮಾನ್ಯ ಎಂಬಂತೆ ನಿರ್ಲಕ್ಷಿಸಿದರು. ನೀವೇ ಬಳಸಿ ಎಂದೂ ಹೇಳಿದರು. ಈಗ ಅಕ್ರಮವಾಗಿ ಶ್ರೀಗಂಧ ಸಂಗ್ರಹಿಸಿಟ್ಟಿದ್ದಾರೆ ಎಂದು ದೂರು ನೀಡುತ್ತಿದ್ದಾರೆ. ಇದೆಲ್ಲಾ ಯಾಕೆಂಬುದೇ ಅರ್ಥವಾಗುತ್ತಿಲ್ಲ ಎಂದರು.
ಆರ್ಥಿಕ ಅವ್ಯವಹಾರವಾಗಿಲ್ಲ ಮಠದಲ್ಲಿ ಯಾವುದೇ ಹಣಕಾಸು ಅವ್ಯವಹಾರ ನಡೆಯುತ್ತಿಲ್ಲ. ನೋಂದಾವಣೆಗೊಂಡಿರುವ ಟ್ರಸ್ಟ್ ಇದೆ. ಮನೋಹರ ಚೌಧುರಿ ಎಂಬ ಖ್ಯಾತ ಆಡಿಟರ್ ಮೂಲಕ ಲೆಕ್ಕ ಪತ್ರ ಇರಿಸಲಾಗುತ್ತಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ಪಕ್ಕಾ ಇವೆ. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ ಎಂದರು.
ಪರಮಹಂಸ ನಿತ್ಯಾನಂದರನ್ನು ಸಂದರ್ಶಿಸಿದ್ದು ತಾವೊಬ್ಬ ಸಂಶೋಧಕ ಎಂದು ತಮ್ಮನ್ನು ಪರಿಚಯಿಸಿಕೊಂಡ ಅಮೆರಿಕದ ಪ್ರಿನ್ಸ್‌ಟನ್ ನಿವಾಸಿ ರಾಜೀವ್ ಮಲ್ಹೋತ್ರಾ. ತಾನು ಕೂಡ ಸ್ವಾಮೀಜಿಯಿಂದಜ ಪ್ರೇರಣೆ, ಬೋಧನೆ ಪಡೆದಿದ್ದು, ಸ್ವಾಮೀಜಿ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸತ್ಯಾಂಶ ಅರಿಯಲು ಭಾರತಕ್ಕೆ ಬಂದು, ಕುಂಭ ಮೇಳ ತಾಣದಲ್ಲಿ ಸಂದರ್ಶಿಸುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.
ವರದಿಯ ವಿವರಗಳು |
 |
ಕೃಪೆ : Web Duniya ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|