ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ : ಯಾವ ಪುರುಷಾರ್ಥಕ್ಕೆ ಈ ಸರ್ಕಾರ |
ಪ್ರಕಟಿಸಿದ ದಿನಾಂಕ : 2010-03-11
ಬೆಂಗಳೂರು: ಅಭಿವೃದ್ಧಿ ಕುಂಠಿತವಾಗಿದೆ. ಬೊಕ್ಕಸ ಬರಿದಾಗಿದೆ. ರೋಸಿಹೋಗಿ ಜನರು ಬೀದಿಗೆ ಇಳಿದಿದ್ದಾರೆ. ಸರ್ಕಾರದ ವತಿಯಿಂದ ನೆರೆ ಸಂತ್ರಸ್ತರಿಗೆ ಇದುವರೆಗೆ ಒಂದೇ ಒಂದು ಮನೆ ಕಟ್ಟಿಕೊಡಲು ಆಗಿಲ್ಲ. ಇನ್ನು ಯಾವ ಪುರುಷಾರ್ಥಕ್ಕೆ ಈ ಸರ್ಕಾರ ಅಧಿಕಾರದಲ್ಲಿ ಇರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಗುರುವಾರ ಪ್ರಶ್ನಿಸಿದರು.
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯುತ್‌ಗಾಗಿ ರೈತರು, ಬಿಪಿಎಲ್ ಕಾರ್ಡ್‌ಗೆ ಒತ್ತಾಯಿಸಿ ಬಡಜನರು, ಪರಿಹಾರಕ್ಕೆ ಆಗ್ರಹಿಸಿ ಸಂತ್ರಸ್ತರು, ಜಮೀನು ಕಸಿದುಕೊಳ್ಳಬೇಡಿ ಎಂದು ಕೃಷಿಕರು ಚಳವಳಿಯ ಹಾದಿ ಹಿಡಿದಿದ್ದಾರೆ. ಇದು ಸರ್ಕಾರದ ಆಡಳಿತ ವೈಖರಿಗೆ ಕನ್ನಡಿ ಹಿಡಿಯುತ್ತದೆ ಎಂದರು.
ಪ್ರವಾಹದಿಂದ 1.8 ಕೋಟಿ ಜನರು ಕಷ್ಟದಲ್ಲಿದ್ದಾಗ ಆಡಳಿತ ಪಕ್ಷ ರಾಜಕೀಯ ದೊಂಬರಾಟ ನಡೆಸಿತು. ಅಭಿವೃದ್ಧಿಯೇ ಮಂತ್ರ ಎನ್ನುತ್ತಿದ್ದವರಿಗೆ ಆಗ ಮಂತ್ರ ಮರೆತುಹೋಗಿತ್ತೆ. ರಾಷ್ಟ್ರೀಯ ದುರಂತ ಎಂದು ಬಣ್ಣಿಸಿದ ಮೇಲೆ ಅದಕ್ಕೆ ತಕ್ಕಂತೆ ಕಳಕಳಿ ಪ್ರದರ್ಶಿಸಬೇಕಲ್ಲವೆ ಎಂದು ಅವರು ಕೇಳಿದರು.
ನೆರೆ ಸಂತ್ರಸ್ತರಿಗೆ ಮಾತಾ ಅಮೃತಾನಂದಮಯಿ ಮಠದಿಂದ 100 ಮನೆಗಳನ್ನು ಕಟ್ಟಿಸಿಕೊಟ್ಟಿ ರುವುದು ಬಿಟ್ಟರೆ ಈ ಸರ್ಕಾರ ಇದುವರೆಗೆ ಒಂದೇ ಮನೆ ಕಟ್ಟಿಸಿಕೊಟ್ಟಿಲ್ಲ. ಸದನದಲ್ಲಿ ಪ್ರವಾಹ ಕುರಿತು ನಡೆದ ಚರ್ಚೆಗೆ ಉತ್ತರ ಕೊಡಲು ಆಸಕ್ತಿ ತೋರಿಸಲಿಲ್ಲ. ಏಕೆಂದರೆ ನೆರೆ ಸಮಸ್ಯೆ ಸರಿಯಾಗಿ ನಿಭಾಯಿಸಿಲ್ಲ ಎಂದು ಅವರು ದೂರಿದರು.
ಕಳೆದ ಒಂದು ವರ್ಷದಲ್ಲಿ ಯಾವುದೇ ಗೋಲಿಬಾರ್ ನಡೆದಿಲ್ಲ ಎಂದು ರಾಜ್ಯಪಾಲರ ಬಾಯಲ್ಲಿ ಹೇಳಿಸಿದ್ದೇ ತಡ ಇಬ್ಬರು ಸತ್ತುಹೋದರು. ರಸ್ತೆ ಗುಂಡಿಗಳಿಗೆ ಮಣ್ಣು ಹಾಕಲಿಕ್ಕೆ ಹಣ ಇಲ್ಲ. ಸಾಲದ ಹೊರೆ ಹೆಚ್ಚಿದೆ. ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಸಾಮಾಜಿಕ ನ್ಯಾಯ ಮರೆತಿದೆ.
ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಹೀಗಾಗಿ ಅಧಿಕಾರದಲ್ಲಿ ಉಳಿಯುವ ನೈತಿಕ ಹಕ್ಕನ್ನು ಸರ್ಕಾ ರ ಕಳೆದುಕೊಂಡಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಆರೋಗ್ಯ ಕವಚ ಯೋಜನೆ ಚೆನ್ನಾಗಿದೆ. ಆದರೆ ಕಾರ್ಯನಿರ್ವಹಣೆ ಹಳಿತಪ್ಪಿದೆ ಎಂದು ಜೆಡಿಎಸ್ ನ ಕೆ.ಎಂ. ಶಿವಲಿಂಗೇಗೌಡ ದೂರಿದರು.
ಗಂಗಾ ಕಲ್ಯಾಣ ಯೋಜನೆಗೆ ಹೆಚ್ಚಿನ ಹಣ ಒದಗಿಸಬೇಕು. ಲಂಬಾಣಿ ತಾಂಡಾಗಳನ್ನು ಕಂದಾ ಯ ಗ್ರಾಮಗಳಾಗಿ ಪರಿ ವರ್ತಿಸಲು ಹೆಚ್ಚಿನ ಆಸ್ಥೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11
|
|
|