ಕುಖ್ಯಾತ ರೌಡಿ ಇಮ್ರಾನ್ ಪಾಷಾ ಬಂಧನ |
ಪ್ರಕಟಿಸಿದ ದಿನಾಂಕ : 2010-03-11
ಕುಖ್ಯಾತ ರೌಡಿ ಶೂಟರ್ ಇಮ್ರಾನ್ ಪಾಷಾ ಉರುಫ್ ಸರ್ಕಾರ್ (32) ಮತ್ತು ಆತನ ಇಬ್ಬರು ಸಹಚರರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಕುಖ್ಯಾತ ರೌಡಿ ಶೂಟರ್ ಇಮ್ರಾನ್ ಪಾಷಾ ಉರುಫ್ ಸರ್ಕಾರ್ (32) ಮತ್ತು ಆತನ ಇಬ್ಬರು ಸಹಚರರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರೌಡಿ ತನ್ವೀರ್‌ನ ಬಲಗೈ ಬಂಟನಾಗಿದ್ದ ಇಮ್ರಾನ್ ಕೊಲೆ, ಕೊಲೆ ಯತ್ನ ಪ್ರಕರಣಗಳಲ್ಲಿ ಬೇಕಾಗಿದ್ದ. ನಾಲ್ಕು ವರ್ಷಗಳಿಂದ ಆತ ತಲೆಮರೆಸಿಕೊಂಡಿದ್ದ.
2003ರಲ್ಲಿ ನಾಗಾ ಚಿತ್ರಮಂದಿರದ ಬಳಿ ರೌಡಿ ಇಷ್ತಿಯಾಕ್ ಅಹಮ್ಮದ್‌ನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ. ನಾಲ್ಕು ವರ್ಷಗಳ ಹಿಂದೆ ಶಿವಾಜಿನಗರದಲ್ಲಿ ನಡೆದ ಜಬ್ಬಾರ್ ಎಂಬಾತನ ಕೊಲೆ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡಿದ್ದ ಇಮ್ರಾನ್ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಅಪರಾಧ ಕೃತ್ಯಗಳನ್ನು ಮಾಡುತ್ತಿದ್ದ. ಖಚಿತ ಮಾಹಿತಿಯ ಮೇರೆಗೆ ಆತನನ್ನು ಬಂಧಿಸಿ ರಿವಾಲ್ವರ್ ಮತ್ತು ಆರು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಮ್ರಾನ್‌ನಿಂದ ವಶಪಡಿಸಿಕೊಂಡಿರುವ ರಿವಾಲ್ವರ್ ಬ್ರಿಗೇಡ್ ರಸ್ತೆಯಲ್ಲಿರುವ ಪಬ್‌ವೊಂದರ ಮಾಲೀಕರಿಗೆ ಸೇರಿದ್ದು. ಅದನ್ನು ಸಿರಾಜ್ ಮತ್ತು ಜಮೀಲ್ ಎಂಬುವರು ಕಳವು ಮಾಡಿದ್ದರು. ಅನಂತರ ಅದನ್ನು ಆತನಿಗೆ ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರ್.ಟಿ.ನಗರದ ರಹಮತ್ನಗರದ ಸೈಯದ್ ಸಿರಾಜ್ (29) ಮತ್ತು ದೇವರಜೀವನಹಳ್ಳಿಯ ಶಾಬಾದ್‌ನಗರದ ಜಮೀಲ್ ಅಹಮ್ಮದ್ (32) ಬಂಧಿತ ಇತರೆ ಆರೋಪಿಗಳು.
ಕೆ.ಆರ್.ಪುರ ಉಪವಿಭಾಗದ ಎಸಿಪಿ ಎನ್.ನರಸಿಂಹಯ್ಯ ಮತ್ತು ಕಾಡುಗೊಂಡನಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಟಿ.ರಂಗಪ್ಪ ಅವರ ತಂಡ ಆರೋಪಿಯನ್ನು ಬಂಧಿಸಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|