ಉಡುಪಿಯಲ್ಲಿ ಮತ್ತೆ ಮಿನುಗಲಿದೆ ಸಿಗ್ನಲ್ ಲೈಟ್? ಪೊಲೀಸರ ಅವಸರಕ್ಕೆ ನಗರಸಭೆ ರೆಡ್‌ಸಿಗ್ನಲ್ ! |
ಪ್ರಕಟಿಸಿದ ದಿನಾಂಕ : 2010-03-11
ಉಡುಪಿ: ಎಂಟು ವರ್ಷಗಳ ಹಿಂದೊಮ್ಮೆ ಉಡುಪಿಯಲ್ಲಿ ಮಿನುಗಿ ಮರೆಯಾದ ಟ್ರಾಫಿಕ್ ಸಿಗ್ನಲ್ ಲೈಟ್‌ಗಳು ಮತ್ತೆ ಬೆಳಗಲಿವೆ. `ವಾಹನ ದಟ್ಟಣೆ ನಿಯಂತ್ರಿಸಲು ಸಿಗ್ನಲ್ ಲೈಟ್ ಬೇಕೇ ಬೇಕು' ಎನ್ನುತ್ತಾ ಜಿಲ್ಲಾ ಪೊಲೀಸ್ ನಗರದ ವಿವಿಧೆಡೆ ಟ್ರಾಫಿಕ್ ಸಿಗ್ನಲ್‌ಗಳನ್ನು ಹಾಕಲು ಮುಂದಾಗಿದೆ. ಆದರೆ ಪೊಲೀಸರ ಈ `ಅವಸರ'ದ ನಿರ್ಧಾರಕ್ಕೆ ನಗರಸಭೆ ಇನ್ನೂ ಗ್ರೀನ್‌ಸಿಗ್ನಲ್ ನೀಡಿಲ್ಲ.
ಉಡುಪಿ, ಮಣಿಪಾಲ ಸೇರಿದಂತೆ ನಗರಸಭಾ ವ್ಯಾಪ್ತಿಯ ಒಟ್ಟು ೭ ಸ್ಥಳಗಳಲ್ಲಿ ಟ್ರಾಫಿಕ್ ಸಿಗ್ನಲ್ ಹಾಗೂ ೧೪ ಕಡೆ ಟ್ರಾಫಿಕ್ ಇಂಡಿಕೇಷನ್ ಸಿಗ್ನಲ್‌ಗಳನ್ನು ಅಳವಡಿಸಲು ನಿರ್ಧರಿಸಿರುವ ಪೊಲೀ ಸ್ ಅಧೀಕ್ಷಕರ ಕಚೇರಿ ಈ ಬಗ್ಗೆ ಅನುಮತಿ ಕೋರಿ ನಗರಸಭೆಗೆ ಪತ್ರ ಬರೆದಿದೆ. ಇದರೊಂದಿಗೆ ಅಳವಡಿಸುವ ಜಾಹೀರಾತು ಫಲಕಗಳಿಗೆ ಜಾಹೀರಾತು ತೆರಿಗೆ ಹಾಕಬಾರದು ಎಂಬ ಒಕ್ಕಣೆ ಅನುಮತಿ ಕೋರಿಕೆ ಪತ್ರದಲ್ಲಿದೆ ! ತಮಿಳುನಾಡಿನ `ಯಾಮಿನಿ ಸಿಗ್ನಲ್ಸ್ 'ನವರು ಈ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಅಳವಡಿಸಿ ನಿರ್ವಹಿಸಲಿದ್ದಾರೆ.
ರೆಡ್ ಸಿಗ್ನಲ್ !
ಟ್ರಾಫಿಕ್ ಸಿಗ್ನಲ್ ಅಳವಡಿಸುವಲ್ಲಿ ನಗರಸಭೆಗಿಂತ ಪೊಲೀಸ್ ಇಲಾಖೆಯೇ ಅತೀ ಹೆಚ್ಚು ಉತ್ಸಾ ಹಿತವಾಗಿದೆ. ನಗರಸಭೆಯ ಹಲವಾರು ಅಧಿವೇಶನಗಳಲ್ಲಿ ಇದು ಚರ್ಚಿತ ವಿಚಾರ. `ಪೊಲೀಸ್ ಇಲಾಖೆ ಸಿಗ್ನಲ್ ಲೈಟ್ ಹಾಕಲು ಕಾರ್ಯ ಯೋಜನೆ ಹಮ್ಮಿಕೊಂಡಿದೆ, ಅನುಮತಿ ಕೇಳುತ್ತಿದೆ' ಎಂಬ ಮಾತುಗಳು ಪ್ರಸ್ತಾವಗೊಂಡು ಅದಕ್ಕೆ ವಿರೋಧವೇ ವ್ಯಕ್ತವಾಗುತ್ತಿತ್ತು.
ಈ ಹಿಂದೊಮ್ಮೆ ಅಳವಡಿಸಲಾಗಿದ್ದ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಸರಿಯಾದ ನಿರ್ವಹಣೆ ಇಲ್ಲದೆ ಮತ್ತಷ್ಟು ಸಂಚಾರ ಸಮಸ್ಯೆ ಸೃಷ್ಟಿಸಿತ್ತು. ಹಾಗಾಗಿ ಸರಿಯಾಗಿ ಚರ್ಚೆ ಮಾಡದೆ ನಿರ್ಧಾರ ಬೇಡ ಎಂದು ಬಹುತೇಕ ಮಂದಿ ಸದಸ್ಯರು ಆಕ್ಷೇಪಿಸಿ `ರೆಡ್ ಸಿಗ್ನಲ್' ತೋರಿಸಿದ್ದರು. ಈಗ ಮತ್ತೆ ಪೊಲೀಸ್ ಅಧೀಕ್ಷಕರ ಕಚೇರಿ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿ ಅದನ್ನು ತನ್ನ ಪತ್ರದಲ್ಲಿ ಉಲ್ಲೇ ಖಿಸಿ ಶೀಘ್ರ ಅನುಮೋದನೆ ಕೊಡುವಂತೆ ಕೋರಿದೆ. ಆದರೆ ನಗರಸಭೆ ಗಡಿಬಿಡಿ ಬೇಡ ಎನ್ನುತ್ತಿದೆ.
ಗ್ರೀನ್‌ನಿಂದ ರೆಡ್‌ಗೆ...!
`ಈ ಹಿಂದಿನ ಸಿಗ್ನಲ್‌ಗಳಿಂದ ಪಾಠವಾಗಿದೆ. ಹಾಗಾಗಿ ಅವಸರದ ತೀರ್ಮಾನ ಬೇಡ. ಆಗ ಗ್ರೀನ್ ಅನಂತರ ಯೆಲ್ಲೊ ಇಲ್ಲದೆ ನೇರವಾಗಿ ರೆಡ್ ಬಣ್ಣದ ಲೈಟ್ ಆಗುತ್ತಿತ್ತು. ಆಗ ಮುಂದಿನ ವಾಹನ ಧುತ್ತನೆ ಬ್ರೇಕ್ ಹಾಕುವುದು, ಹಿಂದಿನ ವಾಹನ ಢಿಕ್ಕಿ ಹೊಡೆಯುವುದು... ಅನಂತರ ವಾಹನ ಚಾಲಕರ ನಡುವೆ ಜಗಳವಾಗುವುದು. ಹೀಗೆ ನಡೆಯುತ್ತಿತ್ತು' ಎಂದು ಕೆಲವು ಸದಸ್ಯರು ಹೇಳಿದರೆ, `ಇದು ಜಾಹೀರಾತಿನವರ ಲಾಬಿ. ಯಾವುದೇ ರೀತಿಯ ತೆರಿಗೆ ರಿಯಾಯಿತಿ ನೀಡುವುದು ಬೇಡ. ಹಾಗೆ ಮಾಡುವುದಿದ್ದರೆ ಮಾಡಲಿ. ನಮಗೇನೂ ಸಿಗ್ನಲ್ ಬೇಕೆಂದು ಕಾಣುತ್ತಿಲ್ಲ. ಇಂಡಿಕೇಶನ್ ಸಿಗ್ನಲ್ ಆದರೂ ಓ.ಕೆ.' ಎನ್ನುತ್ತಾ ಇನ್ನು ಕೆಲವರು ನಗರಸಭೆಗೆ ತಮ್ಮ ಅಸಮಾಧಾನವನ್ನು ತಿಳಿಸಿದ್ದಾರೆ.
ಹಿಂದೊಮ್ಮೆ ಅಳವಡಿಸಲಾಗಿದ್ದ ಸಿಗ್ನಲ್ ಲೈಟ್ ಕೆಟ್ಟು ಹೋಗಿ ನಿರ್ವಹಣೆ ಮಾಡಬೇಕಾಗಿದ್ದ ಕಂಪೆನಿ ಕೈ ಕೊಟ್ಟಿತು. ಇದರಿಂದ ದಿನಕ್ಕೆ ೧೦-೧೫ ಸಣ್ಣಪುಟ್ಟ ಅಪಘಾತಗಳು ಸಿಗ್ನಲ್‌ನಲ್ಲೆ ನಡೆಯುತ್ತಿದ್ದವು. ಇಷ್ಟಕ್ಕೂ ಉಡುಪಿಯಲ್ಲಿ ಅಷ್ಟೊಂದು ವಾಹನದಟ್ಟಣೆ ಇದೆ ಎಂದು ನಾ ಹೇಳ ಲಾರೆ. ಪಾದಚಾರಿಗಳಿಗೆ ರಸ್ತೆ ದಾಟಲು ಮಾತ್ರ ಇದರಿಂದ ಅನುಕೂಲವಾದೀತು. ಮಾಡಿದರೆ ಮಾಡಲಿ ಅದರ ನಿರ್ವಹಣೆ ಸರಿಯಾಗಿರಲಿ ಎನ್ನುತ್ತಾರೆ ಹಿರಿಯ ಸದಸ್ಯ ಡಾ|ಎಂ.ಆರ್.ಪೈ.
ನಗರಸಭೆ ಸದ್ಯ ಈ ಕುರಿತಾಗಿ `ನಿಧಾನದ ನಿರ್ಧಾರ'ಕ್ಕೆ ಬಂದಿದೆ. ಇಲಾಖೆಯ `ಅವಸರ'ಕ್ಕೆ ಬ್ರೇಕ್ ಹಾಕುವಂತೆ ಕಾಣುತ್ತಿದೆ. ಅದರಲ್ಲೂ ಸಿಗ್ನಲ್ಸ್‌ಗಳಿಗೆ ಗುರುತಿಸಲಾಗಿರುವ ಎಲ್ಲಾ ಸ್ಥಳಗಳ ನ್ನು ಒಪ್ಪುವ ಸಾಧ್ಯತೆ ತೀರಾ ಕಡಿಮೆ.
ಎಲ್ಲೆಲ್ಲಿ ಸಿಗ್ನಲ್?
ಕರಾವಳಿ ಹೊಟೇಲ್ ಜಂಕ್ಷನ್, ಅಂಬಲಪಾಡಿ ಜಂಕ್ಷನ್, ಡಯಾನ ಸರ್ಕಲ್, ತಾಲೂಕು ಆಫೀಸ್ ಸರ್ಕಲ್, ಹನುಮಾನ್ ಸರ್ಕಲ್, ಕಲ್ಸಂಕ ಜಂಕ್ಷನ್, ಕಿನ್ನಿಮೂಲ್ಕಿ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲು ಇಲಾಖೆ ನಿರ್ಧರಿಸಿದೆ.
ಎಲ್ಲೆಲ್ಲಿ ಇಂಡಿಕೇಶನ್ ಸಿಗ್ನಲ್ ?
ಜೋಡುಕಟ್ಟೆ ಜಂಕ್ಷನ್, ಕಿನ್ನಿಮೂಲ್ಕಿ ಜಂಕ್ಷನ್, ಕಿನ್ನಿ ಮೂಲ್ಕಿ ಜಂಕ್ಷನ್ ಟರ್ನ್, ಶ್ರೀ ನಾರಾಯಣ ಗುರು ಸರ್ಕಲ್, ಶಿರಿಬೀಡು ಜಂಕ್ಷನ್, ಸಿಟಿ ಬಸ್ ನಿಲ್ದಾಣ, ಮುನ್ಸಿಪಲ್ ಆಫೀಸ್, ಸಿಂಡಿಕೇಟ್ ಬ್ಯಾಂಕ್, ಮಣಿಪಾಲ ಟೈಗರ್ ಸರ್ಕಲ್, ಸಿಂಡಿಕೇಟ್ ಬ್ಯಾಂಕ್ ಸರ್ಕಲ್, ಎಂಐಟಿ ಜಂಕ್ಷನ್, ಮಣಿಪಾಲ ಪೊಲೀಸ್ ಸ್ಟೇಷನ್, ಪರ್ಕಳ ಜಂಕ್ಷನ್‌ಗಳಲ್ಲಿ ಇಂಡಿಕೇಶನ್ ಸಿಗ್ನಲ್(ಬ್ಲಿಂಕರ್ - ಸಣ್ಣ ಜಂಕ್ಷನ್‌ಗಳಲ್ಲಿ - ನಿಧಾನ, ಎಚ್ಚರದಿಂದ ಚಲಿಸಲು ಸೂಚನೆ) ಹಾಕುವ ಯೋಜನೆ ಇಲಾಖೆಯದ್ದು.
ಪಾದಚಾರಿಗಳ ಗೋಳು
ನಗರ, ನಗರಸಭಾ ವ್ಯಾಪ್ತಿಯೊಳಗೆ ಹತ್ತಾರು ವಿದ್ಯಾ ಸಂಸ್ಥೆಗಳಿವೆ. ಸಾರ್ವಜನಿಕರ ಓಡಾಟ ಹೆಚ್ಚಾಗಿದೆ. ರಸ್ತೆ ಕಾಂಕ್ರೀಟೀಕರಣ, ಅಗಲೀಕರಣವೂ ನಡೆಯುತ್ತಿದೆ. ಆದರೆ ರಸ್ತೆ ದಾಟುವ ಪಾದಚಾರಿಗಳ ಸಂಚಾರ ಸಂಚಕಾರಕ್ಕೆ ಪರಿಹಾರ ದೊರಕಿಲ್ಲ. ನಗರದ ಯಾವ ಮೂಲೆ ಯಲ್ಲೂ ರಸ್ತೆ ದಾಟು (ಝೀಬ್ರಾ ಕ್ರಾಸ್) ಕಾಣುತ್ತಿಲ್ಲ. ತುರ್ತಾಗಿ ಆಗಬೇಕಾಗಿರುವುದು ಯಾವುದು?!
ವರದಿಯ ವಿವರಗಳು |
 |
ಕೃಪೆ : ಸಂತೋಷ್ ಬೊಳ್ಳೆಟ್ಟು ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|