ಬೆಂಗಳೂರು, ಮಾ.೧೦: ಹಿರಿಯ ಸರಕಾರಿ ವಕೀಲರಾದ ಮನೋಹರ್ ಬಿಜೂರ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಅವರು ಶುಕ್ರವಾರ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
೧೯೫೫ ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗೋವಿಂದ ಹಾಗೂ ಗಿರಿಜಾ ಅವರ ಮೂರನೇ ಪುತ್ರರಾಗಿ ಜನಿಸಿದ ಮನೋಹರ್ ಬಿಜೂರು, ಕುಂದಾಪುರದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದರು.
ನಂತರ ಕುಂದಾಪುರದ ಭಂಡಾರ್‌ಕಾರ‍್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ನಂತರ ೧೯೮೩ ರಲ್ಲಿ ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.
ಕಾನೂನು ಪದವಿ ಪಡೆದ ನಂತರ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಬಳಿ ವಕೀಲರಾಗಿ ಸೇವೆ ಆರಂಭಿಸಿದರು. ೧೯೯೨ರಲ್ಲಿ ಸರಕಾರಿ ಪ್ಲೀಡರ್ ಆಗಿ ಆಯ್ಕೆಯಾದರು. ೧೯೯೯ರಲ್ಲಿ ಹೆಚ್ಚುವರಿ ಸರಕಾರಿ ವಕೀಲರಾಗಿ ಆಯ್ಕೆಯಾದರು.
ಅಂದಿನಿಂದ ಸರಕಾರಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಮನೋಹರ್, ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ವ್ಯಾಜ್ಯಗಳು, ಭಾಷಾ ಮಾಧ್ಯಮ, ಡೀಮ್ಡ್ ವಿವಿಗಳ ಪ್ರವೇಶಾತಿ ವಿವಾದ ಸೇರಿದಂತೆ ಇತರ ಬಹು ಪ್ರಮುಖ ವಿಷಯಗಳಲ್ಲಿ ಅತ್ಯಂತ ಸಮರ್ಥವಾಗಿ ವಾದ ಮಂಡಿಸಿದ್ದಾರೆ.