ಬೆಂಗಳೂರು, ಮಾ.೧೦: ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಶಾಸಕರ ನೇತೃತ್ವದಲ್ಲಿ ರಚಿಸಿರುವ ಟಾಸ್ಕ್ ಫೋರ್ಸ್‌ಗಳಿಗೆ ತಕ್ಷಣವೇ ಹಣ ಬಿಡುಗಡೆ ಮಾಡಲಾಗುವುದೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ನೀರಿನ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಿ ಹೊಸದಾಗಿ ಕೊಳವೆಬಾವಿ ಕೊರೆಸುವುದು ಮತ್ತು ಕೊಳವೆಬಾವಿಗಳಿಗೆ ಯಂತ್ರಗಳನ್ನು ಅಳವ ಡಿಸಲು ತಕ್ಷಣವೇ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಹೇಮಾವತಿಯಿಂದ ತುಮಕೂರು ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಅಭಿವೃದ್ಧಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳುವು ದಾಗಿ ಅವರು ಹೇಳಿದರು. ಪ್ರಾಯೋಗಿಕವಾಗಿ ಕುಣಿಗಲ್ ತಾಲೂಕಿನ ಮಾಡ್ಲೂರು ಮತ್ತು ೧೧ ಗ್ರಾಮಗಳ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ಯಶಸ್ವಿಯಾದರೆ ಜಿಲ್ಲೆಯ ವಿವಿಧ ಭಾಗಗಳಿಗೂ ಯೋಜನೆಯನ್ನು ವಿಸ್ತರಿಸುವುದಾಗಿ ಹೇಳಿದರು.
ನೈರ್ಮಲ್ಯಕ್ಕೆ ಆದ್ಯತೆ: ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಸುಮಾರು ೮.೪೪ ಲಕ್ಷ ಶೌಚಾಲಯಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ಶೆಟ್ಟರ್ ಹೇಳಿದರು.
ಈಗಾಗಲೇ ೨.೩ ಲಕ್ಷ ಶೌಚಾಲಯ ನಿರ್ಮಿಸ ಲಾಗಿದೆ ಎಂದ ಅವರು, ಶೌಚಾಲಯಕ್ಕೆ ನೀಡಿದ ಅನುದಾನ ದುರುಪಯೋಗವಾಗಿದ್ದರೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.