ಮಂಗಳೂರು: ನಕಲಿ ಉದ್ಯೋಗ ನೇಮಕಾತಿ ಪತ್ರ ನೀಡಿ ವಂಚನೆ: ಆರೋಪಿಯ ಸೆರೆ
ಪ್ರಕಟಿಸಿದ ದಿನಾಂಕ : 2010-03-11
ಮಂಗಳೂರು, ಮಾ.೧೦: ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಉದ್ಯೋಗ ಕಲ್ಪಿಸಿಕೊ ಡುವುದಾಗಿ ಭರವಸೆ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿ ಯೊಬ್ಬನನ್ನು ಎಸ್‌ಪಿ ವಿಶೇಷ ದಳದ ಮುಖ್ಯಸ್ಥ ಮತ್ತು ಕಂಕನಾಡಿ ಎಸ್‌ಐ ಪ್ರಕಾಶ್ ಕೆ ನೇತೃತ್ವದ ಪೊಲೀಸ್ ತಂಡ ಮಂಗಳವಾರ ಕದ್ರಿ ಮಲ್ಲಿಕಟ್ಟೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಬಳಿ ಬಂಧಿಸಿದೆ.
ಬೆಂಗಳೂರು ಮೂಲದ ಗುರುಪ್ರಸಾದ್ (೨೬) ಎಂಬಾತನೇ ಬಂಧಿತ ಆರೋಪಿ. ಈತನಿಂದ ನಕಲಿ ಉದ್ಯೋಗ ನೇಮಕಾತಿ ಪತ್ರ, ನಕಲಿ ಸೀಲು ಸಹಿತ ಅನೇಕ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಟ್ಯಾಲೆಂಟ್ ಕಲೆಕ್ಷನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಈತ ತದನಂತರ ಆ ಉದ್ಯೊಗ ತೊರೆದು ನಕಲಿ ಉದ್ಯೋಗದ ನೇಮಕಾತಿ ಪತ್ರ ನೀಡುವ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.
ರಾಜ್ಯಾದ್ಯಂತ ಹಲವಾರು ಮಂದಿಗೆ ಉದ್ಯೋಗ ನೇಮಕಾತಿ ಪತ್ರ ನೀಡಿ ಸುಮಾರು ೧೦ ಲಕ್ಷ ರೂ. ನಷ್ಟು ಹಣ ಪಡೆದು ವಂಚಿಸಿರುವ ಈತ, ಮಂಗಳೂರಿನ ಸುಮಾರು ೧೦ಕ್ಕೂ ಅಧಿಕ ಮಂದಿಗೆ ೩ ಲಕ್ಷ ರೂ. ವಂಚಿಸಿ ದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಮುಂದಿನ ವಿಚಾರಣೆಗಾಗಿ ಕದ್ರಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.