ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್. |
ಪ್ರಕಟಿಸಿದ ದಿನಾಂಕ : 2010-03-11
ಮಂಗಳೂರಿನಲ್ಲಿ ಬುಧವಾರ ನಡೆದ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಎಸ್ಪಿ ಡಾ| ಸುಬ್ರಹ್ಮಣ್ಯೇಶ್ವರ ರಾವ್ , ಸಾರಿಗೆ ಅಧಿಕಾರಿ ಪುರುಷೋತ್ತಮ ಪಾಲ್ಗೊಂಡಿದ್ದರು.
ಮಂಗಳೂರು,ಮಾ.10: ದಕ್ಷಿಣ ಕನ್ನಡ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ ಯಲ್ಲಿ ಕಳೆದ ಒಂದು ವರ್ಷಗಳಲ್ಲಿ ಬಾಕಿ ಉಳದಿದ್ದ 500 ಹೊಸ ಬಸ್ ರೂಟ್ ಗಳು ಸೇರಿದಂತೆ 141 ಅರ್ಜಿಗಳ ವಿಚಾರಣೆ ನಡೆಯಿತು. ಆದರೆ ಹೈಕೋರ್ಟ್ ತಡೆಯಾಜ್ಞೆ ಕಾರಣ ಸಮಸ್ಯೆ ಪರಿಹಾರಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಹೇಳಿದರು.
ದಿನಪೂರ್ತಿ ಈ ಸಂಬಂಧ ಇಂದು ನಡೆದ ಕಲಾಪದ ಬಳಿಕ ಪತ್ರಿಕಾಗೋಷ್ಥಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸೇರಿದಂತೆ ಖಾಸಗಿ ಬಸ್ ಮಾಲಕರು ಕೋರಿದ್ದ ಹಳೆ ರೂಟ್ ಬದಲಾವಣೆ ಹಾಗೂ ಹೊಸ ರೂಟ್ ಗಳಿಗೆ ಅರ್ಜಿ ಸಲ್ಲಿಸಿದ್ದು ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದರು.
ಪಂಪ್ ವೆಲ್ ಬಳಿ ಆದಷ್ಟು ಶೀಘ್ರವಾಗಿ ನೂತನ ಬಸ್ ನಿಲ್ದಾಣ ನಿರ್ಮಿಸಲು ಈಗಾಗಲೇ ಏಳೂವರೆ ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದ್ದು, ಬಸ್ ನಿಲ್ದಾಣ ಸ್ಥಳಾಂತರದಿಂದ ಈ ಎಲ್ಲ ಸಮಸ್ಯೆಗಳಿಗೊಂದು ಪರಿಹಾರ ಕಾಣಲು ಸಾಧ್ಯ ಎಂದ ಜಿಲ್ಲಾಧಿಕಾರಿಗಳು, ಮುಂದಿನ ಹಂತವಾಗಿ 11 ಎಕರೆಯಷ್ಟು ಜಮೀನು ವಶಪಡಿಸಿಕೊಂಡು ಸಾರಿಗೆ ಸಮುಚ್ಛಯ (transportation hub) ನಿರ್ಮಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು. ಈ ಎಲ್ಲ ಪ್ರಕ್ರಿಯೆಗಳಿಗೆ ಜಿಲ್ಲಾಡಳಿತಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರ ನೆರವಿನ ಅಗತ್ಯವನ್ನು ಪ್ರತಿಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎಸ್ ರಾವ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪುರುಷೋತ್ತ ಮ ಉಪಸ್ಥಿತರಿದ್ದರು.

ಪಂಪ್‌ವೆಲ್‌ನಲ್ಲಿ ಟ್ರಾನ್ಸ್‌ಪೋರ್ಟೇಶನ್ ಹಬ್: ಶೀಘ್ರ ಟೆಂಡರ್
ಮಂಗಳೂರು, ಮಾ. ೧೦: ನಗರದ ಪಂಪ್‌ವೆಲ್ ಬಳಿ ಹೊಸ ಬಸ್ಸು ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ೭.೫ ಎಕರೆ ಜಮೀನು ಸ್ವಾಧೀನಪಡಿಸಿದ್ದು , ಕಾಮಗಾರಿಗೆ ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಬುಧವಾರ ಹೇಳಿದರು.
ಸಾರಿಗೆ ಪ್ರಾಧಿಕಾರ ಸಭೆಯ ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾತ್ಕಾಲಿಕ ವ್ಯವಸ್ಥೆಯನ್ನು ಕಲ್ಪಿಸಲು ಕನಿಷ್ಠ 4 ಕೋ. ರೂ. ಗಳ ಅಗತ್ಯವಿದ್ದು, ರಾಜ್ಯ ಸರಕಾರ ಒದಗಿಸುವ 100 ಕೋ. ರೂ. ಅನುದಾನದಲ್ಲಿ ಈ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಕನಿಷ್ಠ 3 ತಿಂಗಳ ಕಾಲಾವಕಾಶ ಅಗತ್ಯವಿದೆ. ಹೊಸ ಬಸ್ ನಿಲ್ದಾಣ ನಿರ್ಮಾಣಗೊಂಡರೆ ನಗರಕ್ಕೆ ಸಂಬಂಧಿಸಿದ ಬಹುತೇಕ ಸಾರಿಗೆ ಸಮಸ್ಯೆಗಳು ಬಗೆಹರಿಯಲು ಸಾಧ್ಯ ಎಂದು ಹೇಳಿದರು.
ಎರಡನೇ ಹಂತದ ಯೋಜನೆಗೆ ಇನ್ನೂ 11 ಎಕರೆ ಜಮೀನು ಸ್ವಾಧೀನ ಮಾಡಬೇಕಿದ್ದು, ಅದಕ್ಕೆ ಮಹಾನಗರಪಾಲಿಕೆ ಇನ್ನಷ್ಟೇ ಹಣ ಒದಗಿಸಬೇಕಿದೆ. ಪಂಪ್‌ವೆಲ್‌ನಲ್ಲಿ ಬಸ್ ನಿಲ್ದಾಣವಲ್ಲ , ಅದನ್ನು ಟ್ರಾನ್ಸ್‌ಪೋರ್ಟೇಶನ್ ಹಬ್ ವನ್ನಾಗಿ ಪರಿವರ್ತಿಸುವ ಯೋಜನೆ ರೂಪಿಸಲಾಗಿದೆ.
ಕೇವಲ ಖಾಸಗಿ ಬಸ್‌ಗಳು ಮಾತ್ರವಲ್ಲ, ಕೆಎಸ್‌ಆರ್‌ಟಿಸಿ, ಅಂತಾರಾಜ್ಯ ಬಸ್‌ಗಳಿಗೂ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಯಲ್ಲಿ ಎಲ್ಲ ಸವಲತ್ತುಗಳು ಲಭ್ಯವಾಗಲಿದ್ದು ಅಂತಾರಾಷ್ಟ್ರೀಯ ಮಟ್ಟದ ನಿಲ್ದಾಣವಾಗಲಿದೆ. ಇದು ಖಾಸಗಿ- ಸಾರ್ವಜನಿಕ ಪಾಲುದಾರಿಕೆಯಲ್ಲಿ ನಿರ್ಮಾಣವಾಗ ಲಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಕಲಾಪ ಕೋರ್ಟಲ್ಲಿ ಪ್ರಶ್ನೆ
ಬುಧವಾರ ನಡೆದ ಸಾರಿಗೆ ಸಭೆಯಲ್ಲಿ ಯಾವುದೇ ಹೊಸ ಪರವಾನಿಗೆಯನ್ನು ನೀಡಲು ಸಾಧ್ಯ ವಾಗಿಲ್ಲ. ಖಾಸಗಿ ಬಸ್ಸು ಮಾಲಕರು ರಾಜ್ಯ ಹೈಕೋರ್ಟಿನಲ್ಲಿ ಇಂದಿನ ಸಭೆಯ ಕಲಾಪಗಳನ್ನು ಪಶ್ನಿಸಿದ್ದಾರೆ. ಹಾಗಾಗಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ ವಾಗಲಿಲ್ಲ. ಈಗಾಗಲೇ ಖಾಸಗಿ ಬಸ್ಸು ಓಡುತ್ತಿರುವ ೧೬ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪರವಾನಿಗೆಗೆ ಅರ್ಜಿ ಸಲ್ಲಿಸಿದ್ದು, ಅದನ್ನು ಇಂದಿನ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳುವುದು ಕಾನೂನುಬಾಹಿರವೆಂದು ಖಾಸಗಿಯವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ ಎಂದು ಅವರು ವಿವರಿಸಿದರು.
ರೂಟ್ ನಿಗದಿಯಾಗದೆ ಹೊಸ ಬಸ್ಸುಗಳಿಗೆ ಅನುಮತಿ ನೀಡಬಹುದೆಂದು ರಾಜ್ಯ ಹೈಕೋರ್ಟಿನ ಬೆಂಚ್ ೨೦೦೧ರಲ್ಲಿ ತೀರ್ಪು ನೀಡಿದೆ. ಆದರೆ ೨೦೦೯ರಲ್ಲಿ ಸರಕಾರ ರೂಟ್ ನಿಗದಿ ಮಾಡಿರುವು ದನ್ನು ಪ್ರಶ್ನಿಸಿ ಖಾಸಗಿ ಬಸ್ಸು ಮಾಲಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಹೀಗೆ ಹಲವು ರೀತಿಯ ಕಾನೂನು ತೊಡಕು, ಗೊಂದಲಗಳಿವೆ. ನ್ಯಾಯಾಲಯದಲ್ಲಿ ಜನರ ಒತ್ತಾಯ, ಬೇಡಿಕೆಗಳ ಬಗ್ಗೆ ವಿಚಾರ ಮಂಡನೆಯಾಗುತ್ತಿಲ್ಲ. ಇದನ್ನು ಸರಕಾರದ ಗಮನಕ್ಕೆ ತಂದು ಜನ ಪರವಾಗಿ ವಾದ ಮಂಡನೆಗೆ ಮನವಿ ಮಾಡಲಾಗುವುದು. ಜೊತೆಯಲ್ಲಿ ಸಾರ್ವಜನಿಕ ಸಂಘ - ಸಂಸ್ಥೆಗಳು ಕೂಡಾ ಜನರ ಪರವಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದರೆ, ಎಲ್ಲ ಸಮಸ್ಯೆ ಗಳನ್ನು ಬಗೆಹರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಬುಧವಾರದ ಸಭೆಯಲ್ಲಿ ೬೬೪ ಅರ್ಜಿಗಳು ಚರ್ಚೆಗೆ ಬಂದಿದ್ದವು. ಅವುಗಳಲ್ಲಿ ಹೊಸ ಪರವಾನಿಗೆ, ಸಮಯ ಸರಿಪಡಿಸುವಿಕೆ, ಪರವಾನಿಗೆ ನವೀಕರಣ , ನಿಗದಿ ಮಾರ್ಗಗಳಲ್ಲಿ ಬಸ್ ಸಂಚರಿಸದಿರು ವುದು ಹೀಗೆ ಹಲವು ವಿಚಾರಗಳಿದ್ದವು. ಹೊಸ ಪರವಾನಿಗೆಗೆ ಅರ್ಜಿ ಸಲ್ಲಿಸಿದವರಿಗೆ ಈ ಹಿಂದಿನ ನೊಟೀಪಿಕೇಶನ್‌ನಂತೆ ಹೊಸ ಅರ್ಜಿಗಳನ್ನು ಸಲ್ಲಿಸಲು ೧೫ ದಿನಗಳ ಕಾಲಾವಕಾಶ ನೀಡ ಲಾಗಿದೆ. ಬಳಿಕ ೧೫ ದಿನಗಳ ಕಾಲ ಆಕ್ಷೇಪಣೆಗೆ ಅವಕಾಶ ನೀಡಲಾಗುವುದು. ಇದಾದ ಬಳಿಕ ಮುಂದಿನ ಸಭೆಯಲ್ಲಿ ಈ ಅರ್ಜಿಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕೆಎಸ್‌ಆರ್‌ಟಿಸಿ ಸುಮಾರು ೭೦ ಪರವಾನಿಗೆಗಳಿಗೆ ಅರ್ಜಿ ಸಲ್ಲಿಸಿದೆ. ಅವರಿಗೂ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.

ವೋಲ್ವೊ ಬಸ್‌ಗೆ ಸಮಸ್ಯೆ ಇಲ್ಲ
ಕೆಎಸ್‌ಆರ್‌ಟಿಸಿಗೆ ಮಂಗಳೂರು - ಮಣಿಪಾಲಕ್ಕೆ ವೋಲ್ವೊ ಬಸ್ ಓಡಿಸಲು ಈಗಾಗಲೇ ಪರವಾನಿಗೆ ನೀಡಲಾಗಿದೆ. ಈ ಹಿಂದೆ ಮಿನಿ ಬಸ್‌ಗಳಿಗಿದ್ದ ಆರು ಪರವಾನಿಗೆಯನ್ನು ಮತ್ತೆ ನವೀಕರಿಸಲಾಗಿದೆ. ಸದ್ಯದಲ್ಲೇ ಬಸ್ಸು ಸಂಚಾರ ಆರಂಭಗೊಳ್ಳಲಿದೆ. ಸಾರಿಗೆ ಇಲಾಖೆ ಕಡೆಯಿಂದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಅವರು ವಿವರಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|