ಅಸಭ್ಯ ವರ್ತನೆ- ಏಳು ಸಂಸದರ ಅಮಾನತು; ಕೊನೆಗೂ ರಾಜ್ಯಸಭೆಯಲ್ಲಿ ಮಹಿಳೆಗೆ ಜಯ |
ಪ್ರಕಟಿಸಿದ ದಿನಾಂಕ : 2010-03-09
ನವದೆಹಲಿ, ಮಾ. 9 : ಕೊನೆಗೂ ರಾಜ್ಯಸಭೆ ಐತಿಹಾಸಿಕ ತೀರ್ಮಾನವೊಂದಕ್ಕೆ ಸಾಕ್ಷಿ ಯಾಯಿತು. ತೀವ್ರ ಗದ್ದಲ, ಕೋಲಾಹಲ, ವಿರೋಧದ ನಡುವೆಯೂ ರಾಜ್ಯಸಭೆಯ ಸಭಾಪತಿ ಆಗಿರುವ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮಹಿಳಾ ಮೀಸಲಾತಿ ವಿಧೇಯಕವನ್ನು ಅಂಗೀಕರಿಸಿದ್ದಾರೆ. ಯಾವುದೇ ಚರ್ಚೆ ಇಲ್ಲದೇ ವಿಧೇಯಕವನ್ನು ಮತದಾನದ ಮೂಲಕ ಅಂಗೀಕರಿಸಲು ಮುಂದಾಗಿದ್ದು, ಮಸೂದೆ ವಿರೋಧಿಸುವ ಪಕ್ಷಗಳಿಗೆ ಉರಿಯುವ ಕೆಂಡಕ್ಕೆ ತುಪ್ಪ ಸುರಿವಿದ ಹಾಗಾಯಿತು. ಮಸೂದೆಗೆ ಲೋಕಸಭೆಯಲ್ಲಿ ಮಾತ್ರ ಅಂಗೀಕಾರಕ್ಕೆ ಬಾಕಿ ಉಳಿದಿದೆ.
ಆಡಳಿತರೂಢ ಯುಪಿಎ, ಬಿಜೆಪಿ ಮತ್ತು ಎಡಪಕ್ಷಗಳು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರೆ, ಈ ಮಧ್ಯೆ, ಆರ್ ಜೆಡಿ, ಸಮಾಜವಾದಿ ಮತ್ತು ಎಲ್ ಜೆಪಿ ಪಕ್ಷಗಳು ಮಹಿಳಾ ಮೀಸಲಾತಿ ವಿಧೇ ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದವು. ಮಸೂದೆಯನ್ನು ವಾಪಸ್ ತಗೆದುಕೊಳ್ಳಿ, ಮಸೂದೆ ಯನ್ನು ವಾಪಸ್ ತೆಗೆದುಕೊಳ್ಳಿ ಎಂದು ಬೊಬ್ಬೆ ಹಾಕುತ್ತಿದ್ದು, ಯಾವುದನ್ನು ಲೆಕ್ಕಿಸದ ಯುಪಿಎ ಸರಕಾರ ಮಸೂದೆ ಅಂಗೀಕಾರಕ್ಕೆ ಮುಂದಾಯಿತು. ಆದರೆ, ಎಸ್ ಪಿ, ಆರ್ ಜೆಡಿ ಸಂಸದರ ಗದ್ದಲ, ಕೂಗಾಟ, ಚೀರಾಟ ಮುಗಿಲು ಮುಟ್ಟಿತ್ತು. ಇದು ಅನ್ಯಾಯ, ಇದು ಅನ್ಯಾಯ ಎಂಬ ಕೂಗುಗಳು ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು. ಯಾವುದೇ ಚರ್ಚೆ ಇಲ್ಲದೆ ಮಸೂದೆಯನ್ನು ಮತದಾನಕ್ಕೆ ಮೂಲಕ ಅಂಗೀಕರಿಸಲು ಮುಂದಾಗಿದ್ದು, ಮಸೂದೆ ವಿರೋಧಿಸುವ ಪಕ್ಷಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿತು. ಇದಕ್ಕೂ ಮುಂಚೆ ರಾಜ್ಯಸಭೆಯಲ್ಲಿ ಗದ್ದಲವೆಬ್ಬಿಸಿದ್ದ ಎಸ್ ಪಿ, ಆರ್ ಜೆಡಿ ಸಂಸದರಾದ, ಸುಭಾಶ್ ಯಾದವ್, ಸಭೀರ್ ಅಲಿ, ವೀರ್ ಪಾಲ್ ಸಿಂಗ್ ಯಾದವ್, ನಂದ ಕಿಶೋರ್ ಯಾದವ್, ಅಮೀರ್ ಕಲಂ ಖಾನ್, ಅಮಲ್ ಅಖ್ತರ್, ಇಜಾಜ್ ಅಲಿ ಅವರನ್ನು ಮಾರ್ಷಲ್ ಮೂಲಕ ಹೊರಹಾಕಲಾಯಿತು. ಸಂಸತ್ತಿನಲ್ಲಿ ಗದ್ದಲವೆಬ್ಬಿಸಿದ ಕಾರಣ ಸಂವಿಧಾನದ 256 ಕಲಂ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಹಿಳಾ ಮಸೂದೆಗೆ ಸಂಬಂಧಿಸಿದಂತೆ ಎರಡು ಬಾರಿ ರಾಜ್ಯಸಭೆಯನ್ನು ಮುಂದೂಡಲಾಗಿತ್ತು.
ರಾಜ್ಯಸಭೆಯಲ್ಲಿ ಅಸಭ್ಯ ವರ್ತನೆ; ಏಳು ಸಂಸದರ ಅಮಾನತು ನವದೆಹಲಿ, ಮಂಗಳವಾರ, 9 ಮಾರ್ಚ್ 2010 ಸ್ಪೀಕರ್ ಹಮೀದ್ ಅನ್ಸಾರಿಯವರು ಮಹಿಳಾ ಮಸೂದೆಯನ್ನು ಓದುತ್ತಿದ್ದ ಸಂದರ್ಭದಲ್ಲಿ ಸದನದ ಬಾವಿಗಿಳಿದು ಮಸೂದೆಯ ಪ್ರತಿಗಳನ್ನು ಸ್ಪೀಕರ್ ಅವರ ಕೈಯಿಂದ ಕಿತ್ತುಕೊಂಡು ಹರಿದು ಹಾಕಿ ಸದನಕ್ಕೆ ಅಗೌರವ ತೋರಿಸಿದ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಗೆ ಸೇರಿದ ಏಳು ರಾಜ್ಯಸಭಾ ಸದಸ್ಯರನ್ನು ಬಜೆಟ್ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.
ಯುಪಿಎ ಸರಕಾರ ನಿನ್ನೆ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ ನಂತರ ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ ಮತ್ತು ಸಂಯುಕ್ತ ಜನತಾದಳಗಳ ಸದಸ್ಯರು ಭಾರೀ ಕೋಲಾಹಲ ಎಬ್ಬಿಸಿದ್ದರು. ಅಲ್ಲದೆ ಸದನದ ಬಾವಿಗಿಳಿದು ಸ್ಪೀಕರ್ ಅವರು ಓದುತ್ತಿದ್ದ ಮಸೂದೆಯ ಪ್ರತಿಯನ್ನು ಕಿತ್ತುಕೊಂಡು ಹರಿದು ಹಾಕಿದ್ದರು.
ಈ ಸಂಬಂಧ ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹಲವರು ಸ್ಪೀಕರ್ ಅವರ ಕ್ಷಮೆ ಕೋರಿದ್ದ ಹೊರತಾಗಿಯೂ ಕ್ರಮಕ್ಕೆ ಮುಂದಾಗಿರುವ ಸಭಾಧ್ಯಕ್ಷರು, ಏಳು ಮಂದಿ ಸದಸ್ಯರನ್ನು ಅಧಿವೇಶನದಿಂದ ಅಮಾನತುಗೊಳಿಸಿದ್ದಾರೆ. ಇವರು ಬಜೆಟ್ ಅಧಿವೇಶನ ಮುಗಿಯುವವರೆಗೆ ಕಲಾಪದಲ್ಲಿ ಭಾಗವಹಿಸುವಂತಿಲ್ಲ.
ಸಮಾಜವಾದಿ ಪಕ್ಷದ ವೀರಪಾಲ್ ಸಿಂಗ್ ಯಾದವ್, ನಂದ ಕಿಶೋರ್ ಯಾದವ್, ಅಮೀರ್ ಅಲಂ ಖಾನ್ ಮತ್ತು ಕಮಲಾ ಅಖ್ತರ್, ರಾಷ್ಟ್ರೀಯ ಜನತಾದಳದ ಸುಭಾಷ್ ಯಾದವ್, ಲೋಕ ಜನಶಕ್ತಿ ಪಕ್ಷದ ಶಬೀರ್ ಆಲಿ ಹಾಗೂ ಪಕ್ಷೇತರ ಸದಸ್ಯ ಇಜಾಜ್ ಆಲಿಯವರೇ ಅಮಾನತುಗೊಂಡ ರಾಜ್ಯಸಭಾ ಸದಸ್ಯರು.
ನಿಲುವಿನಿಂದ ಹಿಂದಕ್ಕೆ ಸರಿಯಲ್ಲ... ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮತ್ತು ಶರದ್ ಯಾದವ್ ಇಂದು ಬೆಳಿಗ್ಗೆ ಭೇಟಿ ಮಾಡಿದ್ದು, ಮಹಿಳಾ ಮೀಸಲಾತಿ ಮಸೂದೆ ಸಂಬಂಧ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ, ರಾಷ್ಟ್ರೀಯ ಜನತಾದಳದ ಮುಖಂಡ ಲಾಲೂ ಮತ್ತು ಸಂಯುಕ್ತ ಜನತಾದಳದ ಮುಖಂಡ ಶರದ್ ಯಾದವ್ ಅವರು ಇಂದು ಪ್ರಧಾನಿಯವರನ್ನು ಭೇಟಿ ಮಾಡಿದರು.
ನಂತರ ಪ್ರತಿಕ್ರಿಯಿಸಿರುವ ಅವರು, ಯಾವುದೇ ಕಾರಣಕ್ಕೂ ಈಗ ಇರುವ ರೂಪದಲ್ಲಿ ಮಹಿಳಾ ಮಸೂದೆಯನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಒಂದು ವೇಳೆ ಸರಕಾರವು ಇಂದೇ ಮಸೂದೆಯನ್ನು ಮತಕ್ಕೆ ಹಾಕಲು ನಿರ್ಧರಿಸಿದರೆ ತಾವು ತೀವ್ರ ಗದ್ದಲ ಮಾಡುತ್ತೇವೆ ಎಂಬುದನ್ನೂ ಪ್ರಧಾನಿಯವರಿಗೆ ತಿಳಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ನಾವೇನೂ ಮಹಿಳಾ ಮೀಸಲಾತಿ ವಿರೋಧಿಗಳಲ್ಲ. ಆದರೆ ಈ ಮಸೂದೆಯಲ್ಲಿ ದಲಿತರು ಮತ್ತು ಮುಸ್ಲಿಮರ ಹಿತವನ್ನು ರಕ್ಷಿಸಲಾಗಿಲ್ಲ. ಹಾಗಾಗಿ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕನಿಷ್ಠ ಈ ಸಂಬಂಧ ನಡೆಯಲಿರುವ ಸರ್ವಪಕ್ಷಗಳ ಸಭೆಯವರೆಗೆ ಮಸೂದೆಯ ಮೇಲಿನ ಮತದಾನವನ್ನು ಮುಂದೂಡಬೇಕೆಂದು ನಾವು ಬಯಸುತ್ತಿದ್ದೇವೆ ಎಂದು ತಿಳಿಸಿದ್ದೇವೆ ಎಂದು ಲಾಲೂ ಪ್ರಸಾದ್ ವಿವರಣೆ ನೀಡಿದ್ದಾರೆ
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-09 00:00:00
|
|
|