|
ಪ್ರಕಟಿಸಿದ ದಿನಾಂಕ : 2010-03-09
ಹೊಸ ಖದರ್‌ನೊಂದಿಗೆ ಮಾರ್ಚ್ 12ರಂದು ಆರಂಭವಾಗುತ್ತಿರುವ ಐಪಿಎಲ್‌ನ ಮೂರನೇ ಆವೃತ್ತಿ ಕ್ರಿಕೆಟ್ ಅಭಿಮಾನಿಗಳಲ್ಲಿ ಮಿಂಚಿನ ಸಂಚಲನ ಉಂಟು ಮಾಡುತ್ತಿದೆ. ಹಿಂದಿನ ಎರಡು ಟೂರ್ನಿಗಳಲ್ಲಿ ಹೊಸ ತಂಡಗಳೇ ಪ್ರಶಸ್ತಿ ಗೆದ್ದಿವೆ. ಈ ಬಾರಿ ವಿಜೃಂಭಿಸುವ ತಂಡ ಯಾವುದು? ಒಂದು ವರ್ಷದ ನಂತರ ಪುನಃ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೀವರ್ ಭಾರತದ ಕ್ರಿಕೆಟ್ ಪ್ರೇಮಿಗಳನ್ನು ಆವರಿಸತೊಡಗಿದೆ.
ಮಾರ್ಚ್ 12ರಿಂದ 43 ದಿನಗಳ ಕಾಲ ನಡೆಯುವ ಈ ಕ್ರಿಕೆಟ್ ಉತ್ಸವ ನೋಡಿ ಆನಂದಿಸುವುದೇ ಒಂದು ವಿಶಿಷ್ಟ ಅನುಭವ.
ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್), ಅಮೆರಿಕನ್ ಫುಟ್‌ಬಾಲ್ (ಎನ್‌ಎಫ್‌ಎಲ್), ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ (ಎನ್‌ಬಿಎ) ಮಾದರಿಯಲ್ಲಿ ನಡೆಯುವ ಐಪಿಎಲ್ ಈಗ ಭಾರತ ಅಷ್ಟೇ ಅಲ್ಲ ಜಗತ್ತಿನಾದ್ಯಂತ ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದರೆ ಅಚ್ಚರಿಯೇನಿಲ್ಲ. ಟ್ವೆಂಟಿ-20 ಅಥವಾ ಚುಟುಕು ಕ್ರಿಕೆಟ್‌ನ ಮತ್ತೊಂದು ವಿಶೇಷತೆ ಏನೆಂದರೆ ಪ್ರತಿಯೊಂದು ಆವೃತ್ತಿಯಲ್ಲಿ ಒಂದೊಂದು ತಂಡ ಚಾಂಪಿಯನ್ ಆಗಿದ್ದು. ಮೊದಲ ವರ್ಷ ರಾಜಸ್ತಾನ್ ರಾಯಲ್ಸ್ ಪ್ರಶಸ್ತಿ ಗೆದ್ದರೆ, ಎರಡನೇ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಹೈದರಾಬಾದ್‌ನ ಡೆಕ್ಕನ್ ಚಾರ್ಜರ್ಸ್ ಪ್ರಶಸ್ತಿಯೊಂದಿಗೆ ತವರಿಗೆ ಮರಳಿತು.
ಕ್ರಿಕೆಟ್ ಹಾಗೂ ಬಾಲಿವುಡ್‌ನ ಸಮ್ಮಿಲನವಾಗಿರುವ ಐಪಿಎಲ್ ಸಾಕಷ್ಟು ಗ್ಲಾಮರ್ ಪಡೆದಿದೆ. ವಾಣಿಜ್ಯನಗರಿ ಮುಂಬೈನಲ್ಲಿ ಮಾರ್ಚ್ 12ರಂದು ಆರಂಭವಾಗುವ ಈ ಚಾಂಪಿಯನ್‌ಷಿಪ್ ಉದ್ಯಾನನಗರಕ್ಕೆ ಬರುವುದು ಮಾತ್ರ ಮಾರ್ಚ್ 16 ಯುಗಾದಿ ಹಬ್ಬದ ದಿನ.
ಒಂದೆಡೆ ಹಬ್ಬದ ಸಡಗರವಾದರೆ, ಮತ್ತೊಂದೆಡೆ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಹಬ್ಬ. ವಿಜಯ್ ಮಲ್ಯ ಒಡೆತನದ ರಾಯಲ್ ಚಾಲೆಂಜರ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.
ಕಳೆದ ವರ್ಷ ಕೇವಲ ಟಿವಿ ಪರದೆಯ ಮುಂದೆ ಕುಳಿತು ಆಟದ ಮಜಾ ಅನುಭವಿಸಿದ ಭಾರತದ ಕ್ರಿಕೆಟ್ ಪ್ರಿಯರಿಗೆ ಈ ಬಾರಿ ಕ್ರೀಡಾಂಗಣಗಳಲ್ಲಿ ಕುಳಿತು ಪಂದ್ಯಗಳನ್ನು ನೋಡುವ ಅವಕಾಶ ಲಭಿಸಿದೆ.
ದಕ್ಷಿಣ ಆಫ್ರಿಕಾದ ಚಾಂಪಿಯನ್‌ಷಿಪ್ ಕರ್ನಾಟಕದವರ ಪಾಲಿಗೆ ಅವಿಸ್ಮರಣೀಯ, ಕಾರಣ ಆರಂಭದಲ್ಲಿ ನಿಧಾನಗತಿಯಲ್ಲಿ ಮುನ್ನುಗ್ಗಿದ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಕೊನೆಗೆ ಪ್ರಶಸ್ತಿಯ ಸಮೀಪ ಬಂದು ನಿಂತಿತ್ತು.
ಆದರೆ ಫೈನಲ್‌ನಲ್ಲಿ ಕೆಲ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರಿಂದ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಕಳೆದ ಬಾರಿಯ ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡಂತೆ ಕಾಣಿಸಿರುವ ರಾಯಲ್ ಚಾಲೆಂಜರ್ಸ್ ತಂಡ ಈಗಾಗಲೇ ಐಪಿಎಲ್ ಮಹಾ ಸಮರಕ್ಕೆ ಸಜ್ಜಾಗುತ್ತಿದೆ.
ಅನಿಲ್ ಕುಂಬ್ಳೆ ಬಳಗ ಈಗಾಗಲೇ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫಿಟ್ನೆಸ್ ಅಭ್ಯಾಸ ಮಾಡುವುದರ ಜೊತೆಯಲ್ಲಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಂಡದೊಂದಿಗೆ ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ.
ಕುಂಬ್ಳೆ ಜೊತೆಯಲ್ಲಿ ಪ್ರವೀಣ್ ಕುಮಾರ್, ರಾಹುಲ್ ದ್ರಾವಿಡ್, ಬಿ. ಅಖಿಲ್, ಉದಿತ್ ಪಟೇಲ್ ಅವರು ಬೆವರು ಹರಿಸುತ್ತಿರುವು ದನ್ನು ಗಮನಿಸಿದರೆ ಬೆಂಗಳೂರು ಫ್ರಾಂಚೈಸ್ ಪಂದ್ಯವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎನ್ನುವುದು ತಿಳಿಯುತ್ತದೆ.
ಇದರ ಜೊತೆಯಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಈಗಷ್ಟೇ ಪದಾರ್ಪಣೆ ಮಾಡಿರುವ ಅಭಿಮನ್ಯು ಮಿಥುನ್, ಆರ್. ವಿನಯ್ ಕುಮಾರ್, ಮನೀಶ್ ಪಾಂಡೆ ಈಗ ದಕ್ಷಿಣ ವಲಯದ ಜೊತೆಯಲ್ಲಿ ದೇವಧರ್ ಟ್ರೋಫಿಯಲ್ಲಿ ಪಾಲ್ಗೊಂಡಿದ್ದು, ಅವರೂ ಈಗಾಗಲೇ ಉತ್ತಮ ಫಾರ್ಮ್ನಲ್ಲಿರುವುದು ಬೆಂಗಳೂರು ತಂಡಕ್ಕೆ ಪ್ಲಸ್ ಪಾಯಿಂಟ್.
ಬೆಂಗಳೂರು ತಂಡದಲ್ಲಿರುವ ವಿದೇಶಿ ಆಟಗಾರರಾದ ಮಾರ್ಕ್ ಬೌಷರ್, ಜಾಕ್ ಕಾಲಿಸ್, ಕೆವಿನ್ ಪೀಟರ್ಸನ್, ರಾಸ್ ಟೇಲರ್ ಸಿಡಿಲಿನ ಬ್ಯಾಟಿಂಗ್ ಮಾಡುವ ಶಕ್ತಿ ಹೊಂದಿದ್ದು, ಎದುರಾಳಿ ತಂಡಗಳ ಪಾಲಿಗೆ ಸಿಂಹಸ್ವಪ್ನರಾಗುವ ಲಕ್ಷಣಗಳನ್ನು ತೋರಿದ್ದಾರೆ.
ಇನ್ನುಳಿದಂತೆ ಮುಂಬೈ ಇಂಡಿಯನ್ಸ್‌ನಲ್ಲಿ ಸಚಿನ್ ತೆಂಡೂಲ್ಕರ್, ಡುಮಿನಿ, ದೆಹಲಿ ಡೇರ್‌ಡೆವಿಲ್ಸ್‌ನಲ್ಲಿ ಗಂಭೀರ್, ಸೆಹ್ವಾಗ್, ದಿಲ್ಶಾನ್, ಡೆಕ್ಕನ್ ಚಾರ್ಜರ್ಸ್‌ನಲ್ಲಿ ಗಿಲ್‌ಕ್ರಿಸ್ಟ್, ಗಿಬ್ಸ್, ಡ್ವೇನ್ ಸ್ಮಿತ್, ಕಿಂಗ್ಸ್ ಇಲೆವೆನ್ ಪಂಜಾಬ್‌ನಲ್ಲಿ ಸಂಗಕ್ಕಾರ, ಮಾಹೆಲಾ ಜಯವರ್ಧನೆ, ಶಾನ್ ಮಾರ್ಷ್ ಪಂದ್ಯದ ಫಲಿತಾಂಶವನ್ನು ತಿರುವು ಮುರುವು ಮಾಡುವ ಶಕ್ತಿಹೊಂದಿದ್ದಾರೆ.
ಇದೆಲ್ಲದರ ನಡುವೆ ಕನ್ನಡಿಗರಾದ ನಮಗೆ ನಮ್ಮ ತಂಡ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲಲಿ ಎನ್ನುವ ಆಸೆಯ ಮೊಳಕೆ ಚಿಗುರೊಡೆದಿದೆ. ಕುಂಬ್ಳೆ ಪಡೆಗೆ ಬೆಸ್ಟ್ ಆಫ್ ಲಕ್ ಎನ್ನೋಣ...
ವರದಿಯ ವಿವರಗಳು |
 |
ಕೃಪೆ : ಜಿ. ಸುಭಾಷ್ ಚಂದ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-09 00:00:00
|
|
|