ಮು೦ಬೈ: ಪೊಲೀಸ್ ನೇಮಕಾತಿ ಅಭಿಯಾನ ವೇಳೆ ಕಾಲ್ತುಳಿತಕ್ಕೆ ಓರ್ವ ಬಲಿ |
ಪ್ರಕಟಿಸಿದ ದಿನಾಂಕ : 2010-03-09
ಮುಂಬಯಿ, ಮಾ. ೮: ಇಲ್ಲಿನ ಕಲೀನಾ ಪೊಲೀಸ್ ಹಾಸ್ಟೆಲ್ ಮೈದಾನದಲ್ಲಿ ಪೊಲೀಸ್ ಇಲಾಖೆಗೆ ನೇಮಕಾತಿ ಅಭಿಯಾನ ನಡೆಯುತ್ತಿದ್ದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಓರ್ವ ಸಾವನ್ನಪ್ಪಿದ್ದು, ಇತರ ೧೧ ಮಂದಿ ಗಾಯಗೊಂಡಿದ್ದಾರೆ.
ಈ ಘಟನೆಯೊಂದಿಗೆ ಪೊಲೀಸ್ ಕೆಲಸ ಪಡೆಯಲು ಮಹಾರಾಷ್ಟ್ರದ ವಿವಿಧೆಡೆಗಳಿಂದ ಆಗಮಿಸಿದ್ದ ಹೆಚ್ಚಿನ ಯುವಕರ ಮಹತ್ವಾಕಾಂಕ್ಷೆ ಮಣ್ಣು ಪಾಲಾಗಿದೆ. ಖಾಲಿ ಬಿದ್ದಿರುವ ೩,೬೦೦ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಯ ನೇಮಕಾತಿ ಅಭಿಯಾನದಲ್ಲಿ ಭಾಗವಹಿಸಲು ಮಹಾ ರಾಷ್ಟ್ರಾದ್ಯಂತ ದಿಂದ ೩೬ ಸಾವಿರ ಯುವಕರು ಆಗಮಿಸಿದ್ದರು.

ಮೈದಾನದ ಗೇಟ್ ಬಾಗಿಲು ತೆರೆಯುತ್ತಿದ್ದಂತೆಯೇ ಯುವಕರು ತಡೆಬೇಲಿ ಮೇಲಿನಿಂದ ಹಾರಿ ಏಕಾಏಕಿ ಒಳ ನುಗ್ಗಿದಾಗ ಕಾಲ್ತುಳಿತ ಉಂಟಾಯಿತು. ಅಹ್ಮದ್‌ನಗರದ ರಮೇಶ್ ಗೋಪಿನಾಥ (೨೨ವ.)ಮೃತಪಟ್ಟಿರುವ ಅಭ್ಯರ್ಥಿ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ವಿ.ಎನ್. ದೇಸಾಯಿ ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನೆಯ ತನಿಖೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಮಿತಾಭ್ ಗುಪ್ತಾ ಆದೇಶ ಹೊರಡಿಸಿದ್ದಾರೆ.

ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ವಿ.ಎನ್.ದೇಸಾಯಿ ಆಸ್ಪತ್ರೆಯಲ್ಲಿ ದುಃಖದ ವಾತಾವ ರಣ ನಿರ್ಮಾಣವಾಗಿದೆ. ಕೆಲವು ಯುವಕರಿಗೆ ಸಣ್ಣಪುಟ್ಟ ಜಜ್ಜಿದ ಗಾಯವಾಗಿದೆ. ಇನ್ನು ಕೆಲವರಿಗೆ ಮೂಳೆ ಮುರಿತ ಮತ್ತು ಆಂತರಿಕ ಗಾಯವಾಗಿದೆ.
ಗಾಯಾಳುಗಳ ವಿವರ: ಅಮೋಲ್ ಜಾಧವ್ (೨೫ ವ.), ದಿಲೀಪ್ ರಾಥೋಡ್ (೨೨ ವ.), ವಿಕ್ಕಿ ಜಾಧವ್ (೧೯ ವ.), ವಿನಾಯಕ್ ಚವಾಣ್ (೨೨ ವ.), ಕಿರಣ್ ಚೌಧರಿ (೨೪ ವ.), ದಿಲೀಪ್ ಕರಾಟ್ (೨೦ ವ.), ರೂಪೇಶ್ ಚೌಧರಿ(೨೪ ವ.), ಪ್ರಸಾದ್ ಸೂರ್ಯವಂಶಿ (೨೩ ವ.), ನಿಖಿಲ್ ಚೌಧರಿ (೨೧ ವ.)ಮತ್ತು ಗಣೇಶ್ ವಾಘ್ (೧೯ ವ.).
ಆಸ್ಪತ್ರೆಯಲ್ಲಿ ಮೃತ ರಮೇಶ್ ಗೋಪಿನಾಥನ ವಿಕಲಾಂಗ ತಂದೆ ನಾನೇನು ಮಾಡಲಿ, ನಮ್ಮ ಸಂಪೂರ್ಣ ಕುಟುಂಬ ಅವನನ್ನು ಆವಲಂಬಿಸಿಕೊಂಡಿತ್ತು ಎಂದು ಗೋಳಾಡಿದರು. ಆಸ್ಪತ್ರೆ ವಾರ್ಡ್‌ಬಾಯ್‌ಗಳು ಅವರನ್ನು ಸಂತೈಸಿದರು.

ಶಾಹಪುರ ಮತ್ತು ಅಹ್ಮದ್‌ನಗರದಂತಹ ದೂರದ ಪ್ರದೇಶಗಳಿಂದ ರವಿವಾರ ರಾತ್ರಿ ಬಂದಿದ್ದ ಸುಮಾರು ೩೦ಸಾವಿರ ಅರ್ಜಿದಾರರು ಸಂದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದರು.
ರವಿವಾರ ರಾತ್ರಿಯಿಂದ ಅರ್ಜಿದಾರರ ಗುಂಪೊಂದು ಸರತಿನಲ್ಲಿ ಕಾಯುತ್ತಿತ್ತು. ನಾವು ಸಾಲಿನ ಮುಂದಿನಲ್ಲಿದ್ದೆವು. ಸೋಮವಾರ ಅರ್ಜಿ ಪಡೆಯುವ ಗವಾಕ್ಷಿಯ ಬಾಗಿಲು ತೆರೆದಾಗ ಹಿಂದಿನಲ್ಲಿ ನಿಂತಿದ್ದವರು ಕೆಲವರನ್ನು ತಳ್ಳಿ ಅರ್ಜಿ ಸಲ್ಲಿಸಲು ಮುನ್ನುಗ್ಗಿದರು. ಆಗ ನೂಕುನುಗ್ಗಲು ಉಂಟಾಗಿ ಒಬ್ಬರ ಮೇಲೆ ಇನ್ನೊಬ್ಬರು ಬಿದ್ದರು. ಸಾಲಿನ ಮುಂದಿನಲ್ಲಿದ್ದವರು ಜಖಂಗೊಂಡರು ಎಂದು ಕಿರಣ್ ಚೌಧರಿ ಹೇಳಿದ್ದಾರೆ.
ತನ್ನ ವಿದ್ಯಾರ್ಹತೆಯ ಮೂಲ ಶೈಕ್ಷಣಿಕ ಪ್ರಮಾಣಪತ್ರಗಳು ಕಾಲ್ತುಳಿತದಿಂದಾಗಿ ಕಳೆದು ಹೋ ಗಿವೆ. ಅವುಗಳನ್ನು ಪತ್ತೆ ಹಚ್ಚಲು ಪೊಲೀಸರು ನೆರವಾಗಬಹುದು ಎಂದು ಕಿರಣ್ ಆಶಯ ವ್ಯಕ್ತ ಪಡಿಸಿದ್ದಾರೆ. ನನಗೆ ನಾಲ್ವರು ಸಹೋದರಿಯರಿದ್ದು, ಅವರ ವಿವಾಹ ನೆರವೇರಿಸಬೇಕಾಗಿದೆ. ಈ ಹುದ್ದೆ ಸಿಗುವುದೆಂದು ನಂಬಿದ್ದೆ. ಈಗ ನನ್ನ ಆಶಯ ಮಣ್ಣುಪಾಲಾಯಿತು ಎಂದು ಕಿರಣ್ ನೊಂದು ನುಡಿದರು.

ಕಲೀನಾ ಪೊಲೀಸ್ ಹಾಸ್ಟೇಲ್‌ನಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಪೊಲೀಸರು ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ಗವಾಕ್ಷಿ ಕುರಿತಾಗಿ ನಮ್ಮಲ್ಲಿ ಗೊಂದಲ ಉಂಟಾಗಿತ್ತು. ನಮಗೆ ಯಾರೂ ಮಾರ್ಗದರ್ಶನ ನೀಡ ಲಿಲ್ಲ. ಸರತಿ ಸಾಲನ್ನು ಪೊಲೀಸರು ನಿಯಂತ್ರಿಸುತ್ತಿರಲಿಲ್ಲ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ವ ವಿನಾಯಕ್ ಚವಾಣ್ ಹೇಳಿದರು.
ವಿನಾಯಕ್‌ಗೆ ಕೆಲಸ ಸಿಗುವ ಆಶಯ ನಮ್ಮ ಮನೆಯವರಿಗಿತ್ತು. ಇನ್ನು ಅವನ ಭವಿಷ್ಯ ಏನೆಂದು ತಿಳಿಯದಾಗಿದೆ ಎಂದು ಅವನ ವಿಕಲಾಂಗ ಸಹೋದರ ತಿಳಿಸಿದರು.
ಇದೇ ವೇಳೆ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಗೃಹಸಚಿವ ಆರ್.ಆರ್.ಪಾಟೀಲ್ ಭೇಟಿಯಾಗಿ, ಸರಕಾರದಿಂದ ಪರಿಹಾರ ಕೊಡಿಸುವುದಾಗಿ ಆಶ್ವಾಸನೆ ನೀಡಿದರು. ಗಾಯಾಳುಗಳ ಅರ್ಜಿ ನಮೂನೆ ಭರ್ತಿ ಮಾಡಿ ಸಂಬಂಧಿತ ಇಲಾಖೆಗೆ ಸಲ್ಲಿಸಲು ಪೊಲೀಸರಿಗೆ ಆದೇಶಿಸಿದ್ದೇನೆ ಎಂದು ಸುದ್ದಿಗಾರರಲ್ಲಿ ಹೇಳಿದರು.

ಅರ್ಜಿ ನಮೂನೆಗಳನ್ನು ಸಲ್ಲಿಸಲು ಅಭ್ಯರ್ಥಿಗಳಲ್ಲಿ ನೂಕುನುಗ್ಗಲು ಉಂಟಾಗಿದ್ದರಿಂದ ಕಾಲ್ತುಳಿತ ಸಂಭವಿಸಿತು ೩೦ ಸಾವಿರಕ್ಕೂ ಅಧಿಕ ಅರ್ಜಿದಾರರು ಆಗಮಿಸಿದ್ದರಿಂದ ಸರತಿ ಸಾಲನ್ನು ನಿಯಂ ತ್ರಿಸಲು ಕಷ್ಟವಾಯಿತು ಎಂದು ವಕೋಲಾ ಪೊಲೀಸ್ ಠಾಣೆಯ ಕಾನ್ಸ್‌ಟೆಬಲ್ ಎನ್.ಬಿ. ಮೋಹಿ ತೆ ಅಂದಿದ್ದಾರೆ.
ಮುಂಬಯಿಯಲ್ಲಿ ಪೊಲೀಸ್ ಹುದ್ದೆಗೆ ಅರ್ಜಿ ಪಡೆಯುವ ಕೇಂದ್ರಗಳಲ್ಲಿ ಕಲೀನಾ ಕೂಡಾ ಒಂದಾ ಗಿದ್ದು, ವರ್ಲಿ, ಎಲ್ಫಿನ್‌ಸ್ಟೊನ್, ಮರೀನ್‌ಲೈನ್, ಮರೋಲ್, ಸೊಮೈಯಾ ಕಾಲೇಜ್ ಮತ್ತು ನಾಯ್‌ಗಾಂವ್‌ನಲ್ಲಿ ಅರ್ಜಿ ಪಡೆಯುವ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ತಲಾ ೧೦ ಸಾವಿರ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಸಲ್ಲಿಸಲು ಸರತಿ ಸಾಲಿನಲ್ಲಿ ನಿಂತಿದ್ದರು ಎಂದರು.

ನೆರೆಯ ನವಿಮುಂಬಯಿ ಮತ್ತು ಥಾಣೆಯ ಕೇಂದ್ರಗಳಲ್ಲಿ ಕೂಡಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಯೋಜನೆ ಹಾಕಿದ್ದರು. ಇದರ ತಾರಾತುರಿಯಲ್ಲಿ ಕಾಲ್ತುಳಿತ ಉಂಟಾಯಿತು.
ಇದೇ ವೇಳೆ ಕಾಲ್ತುಳಿತ ಗೇಟ್ ಹೊರಗೆ ಉಂಟಾಗಿದ್ದು, ಪೊಲೀಸ್ ಹಾಸ್ಟೆಲ್‌ನೊಳಗೆ ನಡೆದಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.
ವರದಿಯ ವಿವರಗಳು |
 |
ಕೃಪೆ : ರೋನ್ಸ್ ಬ೦ಟ್ವಾಳ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-09 00:00:00
|
|
|