ಮಂಗಳೂರು: ಬ್ರಾಹ್ಮಣೀಕರಣದ ಭ್ರಮೆಯಿಂದ ಹೊರಬರಲು ಕೊರಗರಿಗೆ ಕರೆ: ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ದಲ್ಲಿ ಜ್ಯೋತಿ ಚೇಳ್ಯಾರು |
ಪ್ರಕಟಿಸಿದ ದಿನಾಂಕ : 2010-03-09
ಮಂಗಳೂರು, ಮಾ.೮: ದ.ಕ. ಜಿಲ್ಲೆಯನ್ನು ಬುದ್ಧಿವಂತರ ಜಿಲ್ಲೆಯೆಂದು ಹೇಳಿಕೊಳ್ಳಲಾಗುತ್ತಿದೆ ಯಾದರೂ ರಾಜ್ಯಕ್ಕೆ ಹೋಲಿಸಿದರೆ ದ.ಕ. ಜಿಲ್ಲೆಯಲ್ಲಿ ಕೊರಗರು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದ್ದಾರೆ ಎಂದು ಅಂಕಣಗಾರ್ತಿ ಹಾಗೂ ಹಳೆಯಂಗಡಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಜ್ಯೋತಿ ಚೇಳ್ಯಾರು ಅಭಿಪ್ರಾಯಿಸಿದ್ದಾರೆ.
ಅವರು ನಂತೂರಿನ ಸಿಒಡಿಪಿ ಕಚೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಇಂದಿನಿಂದ ಎಪ್ರಿಲ್ ೭ರವರೆಗಿನ ನಡೆಯಲಿರುವ ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ ಕಾರ್ಯಕ್ರಮದಲ್ಲಿ ಇಂದು ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.
ಮಂಗಳೂರಿನ ಶಿಕ್ಷಣ ಸಂಸ್ಥೆಗಳು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ್ದರೂ ನಮ್ಮ ನೆಲದ ಮಕ್ಕಳಿಗೆ ಸಮರ್ಪಕ ವಾಗಿ ಶಿಕ್ಷಣ ನೀಡಲಾಗಿಲ್ಲ. ಆದ್ದರಿಂದ ಯಾವುದೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೂ ಜಿಲ್ಲೆಯನ್ನು ಉದ್ಧಾರ ಮಾಡಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ಹಾಗಿಲ್ಲ ಎಂದವರು ಹೇಳಿದರು.

ಕೊರಗರು ಯಾವುದೇ ಒಂದು ಧರ್ಮದ ಚೌಕಟ್ಟಿನಲ್ಲಿ ಬೆಳೆಯದೆ, ಸಾಂಘಿಕ ಶಕ್ತಿಯಿಂದ ಹಕ್ಕುಗಳಿಗಾಗಿ ಸಂಘರ್ಷದೊಂದಿಗೆ ಬೆಳೆದಾಗ ಮಾತ್ರವೇ ಅಭಿವೃದ್ಧಿ ಸಾಧ್ಯ ಎಂದು ನುಡಿದ ಜ್ಯೋತಿ ಚೇಳ್ಯಾರು, ಬ್ರಾಹ್ಮಣೀಕರಣಗೊಂಡಲ್ಲಿ ತಮ್ಮ ಅಭಿವೃದ್ಧಿಯಾಗುತ್ತದೆ ಎಂಬ ಭ್ರಮೆಯಿಂದ ಕೊರಗರು ಹೊರಬರಬೇಕಾಗಿದೆ ಎಂದರು.
ಸ್ವಾತಂತ್ರ ಬಂದ ಬಳಿಕ ಕನಿಷ್ಠ ಸಾಮಾಜಿಕ ನ್ಯಾಯವನ್ನೂ ಕೂಡಾ ದಕ್ಕಿಸಿಕೊಳ್ಳಲು ಕೊರಗರಿಗೆ ಸಾಧ್ಯವಾಗಿಲ್ಲ. ಅನ್ನ, ಆಶ್ರಯದಂತಹ ಮೂಲಭೂತ ಹಕ್ಕುಗಳು ಕೂಡಾ ಸಿಕ್ಕಿಲ್ಲ ಎಂಬುದು ವಿಷಾದನೀಯವಾದರೂ ವಾಸ್ತವ ಎಂದು ಜ್ಯೋತಿ ಹೇಳಿದರು.
‘ಕೊರಗರು ಪ್ರಕೃತಿ ಪೂಜಕರು’

ಕೊರಗರು ಪ್ರಕೃತಿಯನ್ನು ಪೂಜಿಸುವವರು. ಅವರಿಗೆ ಧರ್ಮ, ದೇವರು ಎಂಬುದಿಲ್ಲ. ಆದರೆ, ವಿಪರ್ಯಾಸವೆಂದರೆ ಕೊರಗರ ಸಂಸ್ಕೃತಿಯನ್ನು ಮುಂದಿಟ್ಟು ಸಿನೆಮಾ ರಚಿಸಿದರೆ ಅದು ರಾಷ್ಟ್ರ ಪ್ರಶಸ್ತಿ ಪಡೆಯುತ್ತದೆ. ನಿರ್ದೇಶಕ ಅಂತಾರಾಷ್ಟ್ರೀಯ ಮನ್ನಣೆ ಗಳಿಸುತ್ತಾರೆ. ಆದರೆ ಕೊರಗರು ಮಾತ್ರ ಕೇರಿಗಳಲ್ಲೇ ಬಾಕಿಯಾಗುವುದು ವಿಪರ್ಯಾಸ ಎಂದು ಅಭಿಯಾನವನ್ನು ಉದ್ಘಾಟಿಸಿದ ತುಳು ಸಾಹಿತ್ಯ ಅಕಾಡಮಿ ಸದಸ್ಯೆ, ಲೇಖಕಿ ಜಾನಕಿ ಬ್ರಹ್ಮಾವರ ವಿಷಾದಿಸಿದರು.
ಕೊರಗರ ಸಂಸ್ಕೃತಿಯನ್ನು ಅರಿಯಬೇಕಾದರೆ ನಾಗರಿಕತೆಯ ಆರಂಭದ ದಿನಗಳತ್ತ ನಾವು ಸರಿಯಬೇಕು. ಆಗ, ಇಲ್ಲಿನ ಮೂಲ ನಿವಾಸಿಗಳು ಕೊರಗರು, ಆಡಳಿತ ನಡೆಸುತ್ತಿದ್ದವರು ಕೂಡಾ ಕೊರಗರು ಎಂಬುದು ತಿಳಿದು ಬರುತ್ತದೆ ಎಂದು ಜಾನಕಿ ಬ್ರಹ್ಮಾವರ ಹೇಳಿದರು.
ಪ್ರಗತಿಗಾಗಿ ಯಾರನ್ನೂ ಕಾಯಬೇಡಿ ಎಂದು ಕೊರಗರಿಗೆ ಕಿವಿಮಾತು ಹೇಳಿದ ಜಾನಕಿ ಬ್ರಹ್ಮಾವರ, ಪ್ರಗತಿಯ ಬಗ್ಗೆ ಕೊರಗರೇ ಸ್ವತಹ ಚಿಂತನೆಯನ್ನು ನಡೆಸಬೇಕಾಗಿದೆ. ಸ್ವಾತಂತ್ರ ಬಂದ ಬಳಿಕದ ಯಾವುದೇ ಸರಕಾರಗಳು ಕೊರಗರ ಅಭಿವೃದ್ಧಿಗೆ ಯಾವುದೇ ರೀತಿಯ ಪ್ರಯತ್ನ ನಡೆಸಿಲ್ಲ ಎಂಬುದು ಕಟುಸತ್ಯ ಎಂದವರು ಅಭಿಪ್ರಾಯಿಸಿದರು.
ಪೆರ್ನಾಲಿನ ಸಮಗ್ರ ಗ್ರಾಮೀಣ ಆಶ್ರಮ, ದ.ಕ. ಜಿಲ್ಲಾ ಕೊರಗ ಮಹಿಳಾ ಸಂಘಟನೆ ಮತ್ತು ಕೊರಗರ ಜಿಲ್ಲಾ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊರಗ ಸಂಘಗಳ ಒಕ್ಕೂಟದ ಉಪಾಧ್ಯಕ್ಷೆ ಬಾಗಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಪ್ರಭಾರ ಯೋಜನಾ ಸಮನ್ವಯಾಧಿಕಾರಿ ದಯಾವತಿ, ಸರ್ವ ಶಿಕ್ಷಣ ಅಭಿಯಾನದ ಸಹಾಯಕ ಯೋಜನಾಧಿಕಾರಿ ಗೀತಾ, ಕೊರಗ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲರಾಜ್ ಮೊದಲಾದವರು ಉಪಸ್ಥಿತರಿದ್ದರು.
ತರಿಕಿಟ ತಂಡದ ಪುಷ್ಪ ಕವನ ವಾಚಿಸಿದರು. ಸಮಗ್ರ ಗ್ರಾಮೀಣ ಆಶ್ರಮದ ಪದ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಯಾನದ ಅಂಗವಾಗಿ ಬೆಳಗ್ಗೆ ಬಾವುಟಗುಡ್ಡೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ಹಾಗೂ ರ‍್ಯಾಲಿ ನಡೆಯಿತು.
ರ‍್ಯಾಲಿಯ ಬಳಿಕ, ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ ವಿಭಾಗಕ್ಕೆ ಪ್ರತ್ಯೇಕ ಮಹಿಳಾ ರಕ್ಷಣಾ ಅಧಿಕಾರಿಗಳನ್ನು ನೇಮಕ ಮಾಡಬೇಕು ಸೇರಿದಂತೆ ಒಟ್ಟು ೧೧ ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.
| |
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-09 00:00:00
|
|
|