ಹಸ್ತಾಂತರ ಒಪ್ಪಂದಕ್ಕೆ ಭಾರತ-ಸೌದಿ ಸಹಿ: ಪ್ರಧಾನಿ ಸೌದಿ ಅರೇಬಿಯಾ ಪ್ರವಾಸಕ್ಕೆ ತೆರೆ ರಿಯಾಧ್ ಜಂಟಿ ಘೋಷಣೆಗೆ ಸಹಿ |
ಪ್ರಕಟಿಸಿದ ದಿನಾಂಕ : 2010-03-02
ರಿಯಾಧ್: ಭಾರತ ಮತ್ತು ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕಿವೆ. ಭಾನುವಾರ ಪ್ರಧಾನಿ ಮನಮೋಹನ್‌ಸಿಂಗ್ ಅವರ ಸೌದಿ ಅರೇಬಿಯಾ ಪ್ರವಾಸದ ಕೊನೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರ ಜೊತೆಗೆ ರಿಯಾಧ್ ಘೋಷಣೆಗೆ ಪ್ರಧಾನಿ ಸಿಂಗ್ ಮತ್ತು ಸೌದಿಯ ದೊರೆ ಅಬ್ದುಲ್ಲಾ ಸಹಿ ಹಾಕಿದರು. ೨೮ ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ, ಒಪ್ಪಂದಕ್ಕೆ ಸಹಿ ಹಾಕಿದ್ದು ಇದೇ ಪ್ರಥಮ.
ಅಪರಾಧಿಗಳಿಗೆ ಸಿಂಹಸ್ವಪ್ನ: ಇದರಿಂದಾಗಿ ಭಾರತ ಬಿಟ್ಟು ಸೌದಿಗೆ ಪಲಾಯನ ಮಾಡುವ ಅಪರಾಧಿಗಳನ್ನು ಗಡೀಪಾರು ಮಾಡಲು ಅನುಕೂಲವಾಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಮ್‌ನಬಿ ಆಝಾದ್ ಮತ್ತು ಸೌದಿ ಅರೇಬಿಯಾದ ೨ನೇ ಉಪಪ್ರಧಾನಿ ನೈಫ್ ಬಿಬ್ ಅಬ್ದುಲ್ಲಜೀಜ್ ಸಹಿ ಹಾಕಿದರು. ರಿಯಾಧ್ ಘೋಷಣೆಯಲ್ಲಿ ಭಯೋತ್ಪಾದನೆ ಮತ್ತು ಅಪರಾಧ ಕೃತ್ಯಗಳಿಗೆ ಹಣಕಾಸು ನೆರವು ನೀಡುವುದನ್ನು ತಡೆಯುವುದಕ್ಕೆ ಪರಸ್ಪರ ಸಹಕರಿಸಲು ಒಪ್ಪಿಕೊಳ್ಳಲಾಗಿದೆ.
ಆಹ್ವಾನ: ಮಾದಕ ವಸ್ತುಗಳ ಕಳ್ಳ ಸಾಗಣೆ, ಮಾನವ ಸಾಗಾಟ ತಡೆ ನಿಟ್ಟಿನಲ್ಲಿ ೨ ರಾಷ್ಟ್ರಗಳು ಪರಸ್ಪರ ಸಹಕರಿಸಲು ಒಪ್ಪಿಕೊಂಡಿವೆ. ವಿಶೇಷವಾಗಿ ಕಚ್ಚಾ ತೈಲ ಕ್ಷೇತ್ರದಲ್ಲಿ ಸಹಕರಿಸಲು ಭಾರತ ಮತ್ತು ಸೌದಿ ಅರೇಬಿಯಾ ಒಪ್ಪಿಕೊಂಡಿವೆ. ಭಾರತದಲ್ಲಿ ತೈಲ ಸಂಗ್ರಹಣಾಗಾರಗಳನ್ನು ಸ್ಥಾಪಿಸಲು ಅಲ್ಲಿನ ತೈಲೋದ್ಯಮಿಗಳಿಗೆ ಪ್ರಧಾನಿ ಆಹ್ವಾನ ನೀಡಿದರು.
ಪಾಕ್ ಕ್ರಮಕ್ಕೆ ಮುಂದಾಗಲಿ: ಪಾಕಿಸ್ತಾನದೊಂದಿಗೆ ಯಾವತ್ತಿಗೂ ಶಾಂತಿಯುತ ಸಂಬಂಧ ಹೊಂದಲು ಭಾರತ ಬದ್ಧವಾಗಿದೆ ಎಂದ ಪ್ರಧಾನಿ, ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಆ ದೇಶದೊಂದಿಗೆ ವಿಶೇಷ ಬಾಂಧವ್ಯ ಹೊಂದಲು ಸಾಧ್ಯ ಎಂದರು. ಭಯೋತ್ಪಾದನೆಯ ದಾರಿ ಕೈಬಿಡುವಂತೆ ಸೌದಿ ಅರೇಬಿಯಾ ಪಾಕ್ ಮೇಲೆ ಒತ್ತಡ ಹೇರಬೇಕೆಂದು ಪ್ರಧಾನಿ ಆಗ್ರಹಿಸಿದರು.
ಘನತೆಗೆ ತಕ್ಕುದಲ್ಲ: ಬಜೆಟ್ ಭಾಷಣ ವೇಳೆ ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿದ್ದು ಸಂಸದೀಯ ಘನತೆಗೆ ತಕ್ಕುದಲ್ಲ ಎಂದು ಪ್ರಧಾನಿ ವಿಷಾದಿಸಿದ್ದಾರೆ. ಈ ಘಟನೆ ಸಾರ್ವಜನಿಕರ ಮನಸ್ಸಿನಲ್ಲಿ ಸಂಸತ್ತಿನ ಬಗೆಗಿನ ಗೌರವ ತಗ್ಗುವಂತೆ ಮಾಡುತ್ತದೆ ಎಂದು ಅವರು ಹೇಳಿದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-02 00:00:00
|
|
|