ಅಮೆರಿಕದಲ್ಲೂ ಹೆಚ್ಚುತ್ತಿದೆ... ಭಾರತೀಯ ಮಹಿಳೆಯರ ವಿಚ್ಛೇದನ ಪ್ರಕರಣಗಳು’ |
ಪ್ರಕಟಿಸಿದ ದಿನಾಂಕ : 2010-02-13
ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಹಿತ ಕಾಯುವ ಕಾಯಕದಲ್ಲಿ ಕನ್ನಡತಿಯೊಬ್ಬರು ನಿರತರಾಗಿರುವುದು ಪ್ರಾಯಶಃ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ತಮ್ಮ ವಿದೇಶಿ ಗಂಡಂದಿರಿಂದ ದಿಢೀರ್ ಸಂಬಂಧ ಕಡಿದು ಹೋಗಿರುವ ನೂರಾರು ಮಹಿಳೆಯರು ಸಹಾಯ ಹಸ್ತಕ್ಕಾಗಿ ವಾಷಿಂ ಗ್ಟನ್ ಡಿಸಿಯಲ್ಲಿರುವ ಭಾರತದ ರಾಯಭಾರ ಕಚೇರಿಗೆ ಎಡತಾಕುತ್ತಿದ್ದಾರೆ. ಅವರ ಜೀವನಕ್ಕೆ ನೆರವಾಗುವ ಹಲವು ಯೋಜನೆಗಳ ಜಾರಿಗೆ ರಾಯಭಾರ ಕಚೇರಿಯಲ್ಲಿರುವ ಕನ್ನಡತಿ ಆರತಿ ಕೃಷ್ಣ ಶ್ರಮಿಸುತ್ತಿದ್ದಾರೆ.
ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು ತಮ್ಮ ಪತಿ ಉದ್ಯಮಿ ಕೃಷ್ಣ ಅವರೊಂದಿಗೆ ಕಳೆದ 12 ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದಾರೆ. ಭಾವಗೀತೆ ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಅವರು ಕನ್ನಡದ ಸಾಂಸ್ಕೃತಿಕ ರಾಯಭಾರಿ ಯಾಗಿಯೂ ಅಲ್ಲಿ ಜನಪ್ರಿಯರಾಗಿದ್ದಾರೆ.
ನವದೆಹಲಿಯಲ್ಲಿ ನಡೆದ ‘ಪ್ರವಾಸಿ ದಿವಸ್’ ಕಾರ್ಯಕ್ರಮಕ್ಕೆಂದು ಇತ್ತೀಚೆಗೆ ಭಾರತಕ್ಕೆ ಆಗಮಿ ಸಿದ್ದ ಅವರು ಬೆಂಗಳೂರಿನಲ್ಲಿ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು:
* ನಿಮಗೆ ಅಮೆರಿಕಕ್ಕೆ ಹೋಗುವ ಅವಕಾಶ ಹೇಗೆ ಬಂತು?
ನನ್ನ ಪತಿ ಜಿ.ಎಂ. ಕೃಷ್ಣ ಅವರು ಮದುವೆಗೆ ಮೊದಲು ಅಮೆರಿಕದಲ್ಲಿದ್ದರು. ಬ್ಯುಸಿನೆಸ್ ಸಲುವಾಗಿ ಭಾರತಕ್ಕೆ ಬಂದ ಅವರು ಇಲ್ಲಿಯೇ ರಫ್ತು ಆಧಾರಿತ ಉದ್ಯಮ ಆರಂಭಿಸಿದರು. ಕೆಲ ವರ್ಷಗಳ ನಂತರ ಅದು ಸರಿ ಹೋಗಲಿಲ್ಲ. ಉದ್ದಿಮೆ ಬಂದ್ ಮಾಡಿ ಮದುವೆ ಮಾಡಿಕೊಂಡು ಇಬ್ಬರೂ ಅಮೆರಿಕಕ್ಕೆ ಹೋದೆವು. ನಾನು ಇಲ್ಲಿರುವಾಗಲೇ ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರ ಎಂ.ಎ. ಮಾಡಿದೆ. ಅಮೆರಿಕೆಗೆ ಹೋದ ನಂತರ ಅಲ್ಲಿ ಸಾರ್ವಜನಿಕ ನೀತಿ ಕುರಿತು ಸ್ನಾತಕೋತ್ತರ ಪದವಿ ಮಾಡಿದೆ.
* ಅಲ್ಲಿ ರಾಯಭಾರ ಕಚೇರಿಗೆ ಹೇಗೆ ಸೇರಿದಿರಿ?
ಅಲ್ಲಿ ನನ್ನ ಕಾಲೇಜು ಶಿಕ್ಷಣದ ದಿನಗಳಲ್ಲೇ ಎಂಬೆಸಿ ಕಚೇರಿಗೆ ಹೋಗುವುದು ಬರುವುದು ಮಾಡ್ತಿದ್ದೆ. ಆ ಸಂದರ್ಭದಲ್ಲೇ ಅನಿವಾಸಿ ಭಾರತೀಯರ ಬಗ್ಗೆ ತಿಳಿದುಕೊಂಡಿದ್ದೆ. ನನ್ನ ಆಸಕ್ತಿ ನೋಡಿ ಅಲ್ಲಿ ಸ್ಥಳೀಯವಾಗಿ ನನಗೆ ಕೆಲಸ ನೀಡಿದರು. ಕ್ರಮೇಣ ನನ್ನ ಹುದ್ದೆ ಕಾಯಂ ಆಯಿತು. ಈಗ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
* ಅಲ್ಲಿನ ಪ್ರಮುಖರ ಸಂಪರ್ಕವನ್ನು ಹೇಗೆ ಸಾಧಿಸಿದಿರಿ?
ನನಗೆ ನನ್ನ ತಂದೆಯ (ಮಾಜಿ ಸಚಿವ ಬೇಗಾನೆ ರಾಮಯ್ಯ) ರಾಜಕೀಯ ಹಿನ್ನೆಲೆ ಇದೆ. ಅವರು ಶಾಸಕರಾಗಿದ್ದಾಗ, ಸಚಿವರಾಗಿದ್ದಾಗ ಇಲ್ಲಿನ ಹಲವು ಗಣ್ಯರ ಪರಿಚಯವಾಗಿತ್ತು. ಅಲ್ಲಿ ಉದ್ಯೋಗ ದೊರೆತ ನಂತರ ರಾಯಭಾರಿಗಳ ಜತೆಯಲ್ಲೇ ಹೆಚ್ಚಿನ ಒಡನಾಟ ಇರುತ್ತದೆ. ಜತೆಗೆ ಸೆನೆಟರ್ ಗಳು ಮತ್ತು ಪ್ರಮುಖರ ವೈಯಕ್ತಿಕ ಪರಿಚಯ ಬೆಳೆಸಿಕೊಂಡೆ. ಅವರ ಪರಿಚಯ ನನಗೆ ಕೆಲಸ ದಲ್ಲಿ ತುಂಬಾ ಸಹಕಾರಿಯಾಗಿದೆ. ಇದುವರೆಗೆ ನಾಲ್ವರು ರಾಯಭಾರಿಗಳ ಜತೆ ಕಾರ್ಯ ನಿರ್ವಹಿಸಿದ ಅನುಭವ ಇದೆ. ಈಗ ಮೀರಾ ಶಂಕರ್ ರಾಯಭಾರಿಯಾಗಿದ್ದಾರೆ. ವಿಜಯಲಕ್ಷ್ಮಿ ಪಂಡಿತ್ ನಂತರ ಇವರು ಎರಡನೇ ಮಹಿಳಾ ರಾಯಭಾರಿಯಾಗಿದ್ದಾರೆ.
* ನಿಮ್ಮ ಪ್ರಮುಖ ಕೆಲಸ ಏನು?
ಈಗ ನನ್ನ ಹುದ್ದೆ ಕೇಂದ್ರ ಸರ್ಕಾರ ಹೊಸದಾಗಿ ಸ್ಥಾಪಿಸಿರುವ ಸಾಗರೋತ್ತರ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಜತೆಗೆ ನಾನು ಸಮದಾಯದ ಅಭಿವೃದ್ಧಿ ಅಧಿಕಾರಿಯಾಗಿ ರುವುದರಿಂದ ಅನಿವಾಸಿ ಭಾರತೀಯರ ಯೋಗಕ್ಷೇಮ ನೋಡಿಕೊಳ್ಳುವುದೇ ಮುಖ್ಯ ಕರ್ತವ್ಯ ವಾಗಿದೆ.
ಇತ್ತೀಚಿನ ದಿನಗಳಲ್ಲಿ ವಿಚ್ಛೇದನಕ್ಕೊಳಗಾದ ಭಾರತೀಯ ಮಹಿಳೆಯರ ಸಂಖ್ಯೆ ಜಾಸ್ತಿಯಾಗಿದೆ. ಹೆಚ್ಚಿನವರಿಗೆ ಉದ್ಯೋಗ ಇಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ. ಅವರಿಗೆ ಕೆಲವು ಎನ್. ಜಿ.ಓ.ಗಳ ಮೂಲಕ ಕಾನೂನು ನೆರವು ಕೊಡಿಸಲಾಗುತ್ತಿದೆ. ಅವರ ಕೇಸ್ ಗೆಲ್ಲಲು ಹಾಗೂ ಪರಿಹಾರ ದೊರೆಯುವಂತೆ ಮಾಡಲು ಸಹಾಯ ಮಾಡಲಾಗುತ್ತದೆ. ನಮ್ಮ ಇಲಾಖೆ ನೀಡುವ ಹಣವನ್ನು ಎನ್.ಜಿ.ಓ. ಗಳಿಗೆ ಕೊಡಲಾಗುತ್ತದೆ.
ಭಾರತೀಯ ಮೂಲದವರಿಗೆ ಕಾಯಂ ವೀಸಾ ಪಡೆಯಲು ಓ ಸಿ ಐ (ಓವರ್‌ಸೀಸ್ ಸಿಟಿಜನ್ ಷಿಪ್ ಆಫ್ ಇಂಡಿಯಾ) ಕಾರ್ಡ್ ಕೊಡಿಸಲಾಗುತ್ತದೆ. ಸಂಕಷ್ಟದಲ್ಲಿರುವ ಮಹಿಳೆಯರು ಹೆಚ್ಚಿನ ವರು ಆಂಧ್ರಪ್ರದೇಶ, ಹರಿಯಾಣ, ಪಂಜಾಬ್ ಹಾಗೂ ಕರ್ನಾಟಕದವರಾಗಿದ್ದಾರೆ. ಜಮೈಕಾ; ಆಂಟಿಗುವಾ ಮತ್ತು ಕೆರಿಬಿಯನ್ ದ್ವೀಪಗಳಲ್ಲಿರುವ ಭಾರತೀಯ ಮೂಲದವರಿಗೆ ಕೂಡ ನಮ್ಮ ಕಚೇರಿಯಿಂದ ಸಹಾಯ ಮಾಡಲಾಗುತ್ತದೆ. ಅಣ್ವಸ್ತ್ರ ಒಪ್ಪಂದಕ್ಕೆ ಸೆನೆಟರ್‌ಗಳನ್ನು ಮತ್ತು ಕಾಂಗ್ರೆಸ್ ಅನ್ನು ಒಪ್ಪಿಸಲು ನಮ್ಮ ರಾಯಭಾರ ಕಚೇರಿ ಕಡೆಯಿಂದ ಸಾಕಷ್ಟು ಲಾಬಿ ಮಾಡ ಬೇಕಾಯಿತು.
* ಭಾರತೀಯರ ಸಂಘಟನೆಗಳು ಅಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಿವೆ?
ಕರ್ನಾಟಕ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳ ಸಂಘಗಳೂ ಇವೆ. ಸ್ವಾತಂತ್ರ್ಯ ದಿನಾ ಚರಣೆ, ಗಣರಾಜ್ಯದಿನ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ನಮ್ಮನ್ನೂ ಆಹ್ವಾನಿಸುತ್ತಾರೆ. ಸಮಸ್ಯೆಗಳಿದ್ದರೆ ನೆರವಿಗೆ ಮನವಿ ಮಾಡು ತ್ತಾರೆ. ಒಟ್ಟಾರೆ ಸೌಹಾರ್ದಯುತವಾಗಿ ಕೆಲಸ ಮಾಡ್ತಾರೆ. ಕನ್ನಡ ಸಂಘಟನೆಗಳಿಗಿಂತ ಗುಜ ರಾತಿ ಮತ್ತು ಮಲಯಾಳಂ ಸಂಘಗಳು ಹೆಚ್ಚು ಕ್ರಿಯಾಶೀಲವಾಗಿವೆ.
ವರದಿಯ ವಿವರಗಳು |
 |
ಕೃಪೆ : ಸಂದರ್ಶನ: ಇ.ವಿ.ಸತ್ಯನಾರಾಯಣ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-13
|
|
|