ಮಂಗಳೂರು: ಫೆ.೧೨, ೧೩, ೧೪, ನವೋದಯ ಸ್ವಸಹಾಯ ಸಂಘಗಳ ದಶಮಾನೋತ್ಸವ ಸಮಾರಂಭ- ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಂ.ಎನ್.ರಾಜೇಂದ್ರ ಕುಮಾರ್. |
ಪ್ರಕಟಿಸಿದ ದಿನಾಂಕ : 2010-02-09
(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)
ಮಂಗಳೂರು,ಫೆ.09: ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್, ಇದರ ಸಹಯೋಗದಲ್ಲಿ ಫೆಬ್ರವರಿ 12, 13 ಮತ್ತು 14ರಂದು ಕಾರ್ಕಳದ ಪಡುತಿರುಪತಿ ಮೈದಾನದಲ್ಲಿ ದಶಮಾನೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ (ರಿ) ಮಂಗಳೂರು ಇದರ ಅಧ್ಯಕ್ಷರಾದ ಎಂ.ಎನ್.ರಾಜೇಂದ್ರ ಕುಮಾರ್ ಅವರು ನಗರದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಗ್ರಾಮೀಣ ಭಾಗದ ತೀರಾ ಕೆಳಸ್ತರದಲ್ಲಿ ಗುರುತಿಸಿಕೊಂಡಿರುವ ಬಡವರ್ಗದ ಜನರಲ್ಲಿ ಅದರಲ್ಲಿಯೂ ವಿಶೇಷವಾಗಿ ಮಹಿಳೆಯರಲ್ಲಿ ಜಾಗ್ರತಿಯನ್ನು ಮೂಡಿಸಿ ಅವರ ಬದುಕಿನಲ್ಲಿ ಆತ್ಮ ವಿಶ್ವಾಸವನ್ನು ವ್ರದ್ಧಿಸುವ ಮೂಲಕ ಸ್ವಾವಲಂಬನೆ ಜೀವನಕ್ಕೆ ಅವಕಾಶ ಮಾಡುವಲ್ಲಿ ಮಹತ್ತರ ಪಾತ್ರವಹಿಸಿರುವ ನವೋದಯ ಸ್ವಸಹಾಯ ಸಂಘಗಳು ಈಗ ದಶಮಾನೋತ್ಸವದ ಸಂಭ್ರಮದಲ್ಲಿದೆ.ಇಂತಹ ಸ್ಮರಣೀಯ ಸಂದರ್ಭವನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಈ ದಶಮಾನೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಪ್ರಯುಕ್ತ ಫೆ.೧೨ ರಂದು ಪೂರ್ವಾಹ್ನ ೯ ಗಂಟೆಗೆ ಸಾಮೂಹಿಕ ಮಹಾಲಕ್ಷ್ಮಿ ಪೋಜೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅಲಂಗಾರು ಇದರ ಧರ್ಮದರ್ಶಿಗಳಾದ ಶ್ರಿ ವೇದಮೂರ್ತಿ ಈಶ್ವರ ಭಟ್ ಇವರ ನೇತ್ರತ್ವದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮಗಳ ವಿವರ:
ದಶಮಾನೋತ್ಸವ ಸಮಾರಂಭದ ಸಭಾಕಾರ್ಯಕ್ರಮವನ್ನು ದಿನಾಂಕ ೧೨-೦೨-೨೦೧೦ ರಂದು ೧೧ ಗಂಟೆಗೆ ಭಾರತ ಸರಕಾರದ ಕಾರ್ಮಿಕ ಸಚಿವರಾದ ಮಲ್ಲಿಕಾರ್ಜುನ ಖರ್ಗೆಯವರು ಉದ್ಘಾಟಿಸಲಿರುವರು. ಕರ್ನಾಟಕ ರಾಜ್ಯ ಸರಕಾರದ ಸಹಕಾರ ಸಚಿವರಾದ ಲಕ್ಷ್ಮಣ ಸವದಿಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು.
ಆಧುನಿಕ ಕ್ರಷಿ ಯಂತ್ರೋಪಕರಣಗಳ ಪ್ರದರ್ಶನ ಮಳಿಗೆಯನ್ನು ಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಇವರು ಉದ್ಘಾಟಿಸಲಿದ್ದಾರೆ. ನಬಾರ್ಡ್ ನ ಛೆರ್ ಮೆನ್ ಉಮೇಶ್ ಚಂದ್ರ ಸಾರಂಗಿ ಇವರು ನವೋದಯ ಸ್ವಸಹಾಯ ಸಂಘಗಳನ್ನು ಸನ್ಮಾನಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರದ ಮಾಜಿ ಸಚಿವರಾದ ಗುರುಪಾದಪ್ಪ ನಾಗಮಾರಪಲ್ಲಿ, ರಾಜ್ಯ ಸಹಕಾರ ಸಂಘಗಳ ನಿಬಂಧಕರಾದ ಡಾ| ಎಚ್.ವಿ.ಪಾರ್ಶ್ವನಾಥ್ ಮತ್ತು ನಬಾರ್ಡ್ ನ ಮುಖ್ಯ ಮಹಾಪ್ರಬಂಧಕರಾದ ಡಾ| ವೆಂಕಟೇಶ್ ಬಿ.ತಗತ್ ಇವರು ಭಾಗವಹಿಸಲಿರುವರು.
ಸಂಜೆ ೫.೩೦ ಗಂಟೆಗೆ ನವೋದಯ ಸ್ವಸಹಾಯ ಸಂಘಗಳಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದ್ದು ಈ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಕೋಶ ಇದರ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ನೆರೆವೇರಿಸಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಕಳ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಗೋಪಾಲ ಭಂಡಾರಿಯವರು ವಹಿಸಲಿರುವರು. ಕಾರ್ಕಳದ ಮಾಜಿ ಶಾಸಕರಾದ ಸುನೀಲ್ ಕುಮಾರ್ ಇವರು ವಿದ್ಯಾರ್ಥಿವೇತನವನ್ನು ವಿತರಿಸಲಿರುವರು.
ಉಡುಪಿ ಜಿಲ್ಲಾ ಪಂಚಾಯತ್ ನ ಉಪಾಧ್ಯಕ್ಷರಾದ ಡಾ| ಸಂತೋಷ್ ಕುಮಾರ್ ಶೆಟ್ಟಿ, ಕಾರ್ಕಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಉದಯ.ಎಸ್.ಕೋಟ್ಯಾನ್, ಕಾರ್ಕಳ ಪುರಸಭೆಯ ಅಧ್ಯಕ್ಷರಾದ ಸುಬೀತ್.ಎನ್.ಆರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ನವೋದಯ ಸ್ವಸಹಾಯ ಸಂಘಗಳ ಬ್ರಹತ್ ಮೆರವಣಿಗೆಯು ಅದೇ ದಿನ ಅಪರಾಹ್ನ ೩.೩೦ ಗಂಟೆಗೆ ನಡೆಯಲಿದ್ದು, ಈ ಮೆರವಣಿಗೆ ಉದ್ಘಾಟನೆಯನ್ನು ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಗೋಪಾಲ. ಬಿ.ಹೊಸುರು ಇವರು ಉದ್ಘಾಟಿಸಲಿರುವರು.
ಫೆಬ್ರವರಿ 13 - ದಶಮಾನೋತ್ಸವ ಉದ್ಘಾಟನಾ ಸಮಾರಂಭ:
ಫೆ.೧೩ರಂದು ಬೆಳಿಗ್ಗೆ ೧೦ಗಂಟೆ ನವೋದಯ ಸ್ವಸಹಾಯ ಸಂಘಗಳ ದಶಮಾನೋತ್ಸವ ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯುಡಿಯೂರಪ್ಪ ರವರು ಉದ್ಘಾಟಿಸಲಿರುವರು. ಕರ್ನಾಟಕ ಸರಕಾರದ ಗ್ರಹ, ಧಾರ್ಮಿಕ ಮತ್ತು ಮುಜರಾಯಿ ಸಚಿವರಾದ ಡಾ| ವಿ,ಎಸ್.ಆಚಾರ್ಯ ಇವರು " ಶುಭೋದಯ" ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿರುವರು.
ಮಹಿಳಾ ವಿಚಾರ ಸಂಕೀರಣ: ೧೩ ರಂದು ಅಪರಾಹ್ನ ೩ ಗಂಟೆಗೆ ಮಹಿಳಾ ಸಂಕೀರಣ ನಡೆಯಲಿದೆ. ಇದರ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ ಯವರು ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಪುತ್ತೂರು ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ಇವರು ವಹಿಸಲಿರುವರು.
14 ರಂದು ನವೋದಯ ಸಾಧನಾ ಸಮಾವೇಶ:
ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವು ಫೆಬ್ರವರಿ ೧೪ರಂದು ನಡೆಯಲಿದ್ದು, ಈ ಸಮಾರಂಭದ ಅಧ್ಯಕ್ಷೆತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆ ಯವರು ವಹಿಸಲಿರುವರು.
ಸಮಾರಂಭದ ಉದ್ಘಾಟನೆಯನ್ನು ಭಾರತ ಸರಕಾರದ ಮಾನ್ಯ ಕಾನೂನು ಮತ್ತು ನ್ಯಾಯ ಸಚಿವರಾದ ಎಂ.ವೀರಪ್ಪಮೊಯಿಲಿಯವರು ನೆರವೇರಿಸಲಿರುವರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಎಚ್.ಡಿ.ರೇವಣ್ಣ, ಡಿ.ಕೆ ಶಿವಕುಮಾರ್, ಸಂದೇಶ್ ನಾಗರಾಜ್, ಶಿವಾನಂದ ಎಸ್.ಪಾಟೀಲ್, ನಾರಾಯಣ ಗೌಡ ಮೊದಲಾದವರು ಭಾಗವಹಿಸಲಿರುವರು.
ಮೂರು ದಿನಗಳ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿತುವ ೫೦೦ ನವೋದಯ ಸ್ವಸಹಾಯ ಗುಂಪುಗಳನ್ನು ಗುರುತಿಸಿ ಸನ್ಮಾನಿಸಲಾಗುವುದು.
ಸಮಾರೋಪ ಸಮಾರಂಭ:
ನವೋದಯ ಸ್ವಸಹಾಯ ಸಂಘಗಳ ದಶಮಾನೋತ್ಸವ ಸಮಾರೋಪ ಸಮಾರಂಭವು ಫೆ.14ರಂದು ಅಪರಾಹ್ನ ೩ಗಂಟೆಗೆ ನಡೆಯಲಿದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕ್ರಷ್ಣ ಪಾಲೆಮಾರ್ ಇವರು ಸಮಾರೋಪ ಭಾಷಣ ಮಾಡಲಿರುವರು.
ಮೂರು ದಿನಗಳ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ರಾಜ್ಯದ ಹೆಸರಾಂತ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ದಿನಂಪ್ರತಿ ನಡೆಯಲಿದೆ ಎಂದು ವಿಸ್ತಾರವಾದ ವಿವರವನ್ನು ಅಧ್ಯಕ್ಷರು ನೀಡಿದರು.
ಸಂಘದ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ, ಡಿಸಿಸಿ ಬ್ಯಾಂಕ್ ನ ಅಡಳಿತ ನಿರ್ದೇಶೆಕ ಪಿ.ನಾರಯಣ ಕಾಮತ್, ನಿರ್ದೇಶಕರುಗಳಾದ ಬಿ.ನಿರಂಜನ್, ರಾಜರಾಮ್ ಭಟ್, ವಾದಿರಾಜ ಶೆಟ್ಟಿ, ಜೀವನ್ ಭಂಡಾರಿ, ರಾಘವ ಶೆಟ್ಟಿ, ನವೋದಯ ವಿಕಾಸ ಚಾರಿಟೆಬಲ್ ಟ್ರಸ್ಟ್ ನ ಟ್ರಸ್ಟಿ ಮೋನಪ್ಪ ಶೆಟ್ಟಿ, ಬಿ.ಎಸ್.ಹರೀಶ್ ಜೆ.ಅರ್.ಸಿ.ಎಸ್.ಮೈಸೂರು, ಪಿ.ಅರ್.ಪಳಂಗಪ್ಪ ಡಿ.ಅರ್.ಸಿ.ಎಸ್.ಮಂಗಳೂರು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಕರೀಶ್ಮ ಶೆಟ್ಟಿ ಎಸ್ ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-02-09 00:00:00
|
|
|