ಮ೦ಗಳೂರು: ಸರೋಶ್ ಇನ್‌ಸ್ಟಿಟ್ಯೂಟ್‌ನ ನೂತನ ಕ್ಯಾಂಪಸ್ ಉದ್ಘಾಟನೆ : ದೇಶದಲ್ಲಿ 50,000 ವೃತ್ತಿಪರ ತರಬೇತಿ ಕೇಂದ್ರ : ಆಸ್ಕರ್ ಫೆರ್ನಾ೦ಡಿಸ್ |
ಪ್ರಕಟಿಸಿದ ದಿನಾಂಕ : 2010-02-09
ಮಂಗಳೂರು, ಫೆ. ೮: ದೇಶದಲ್ಲಿ ೫೦ ಸಾವಿರ ವೃತ್ತಿಪರ ತರಬೇತಿ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್‌ಫೆರ್ನಾಂಡಿಸ್ ಸೋಮ ವಾರ ಹೇಳಿದರು.
ಇಲ್ಲಿಗೆ ಸಮೀಪದ ಕೊಡಕಲ್‌ನಲ್ಲಿ ನಿಟ್ಟೆ ಎಜ್ಯುಕೇಶನ್ ಟ್ರಸ್ಟ್‌ನ ಸರೋಶ್ ಇನ್‌ಸ್ಟಿಟ್ಯೂಟ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಷನ್‌ನ ನೂತನ ಕ್ಯಾಂಪಸ್ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಹಳ್ಳಿಗಳಲ್ಲಿರುವ ಶಾಲೆಗಳನ್ನು ಬಳಸಿಕೊಂಡು ಈ ವೃತ್ತಿಪರ ಶಿಕ್ಷಣ ಕೇಂದ್ರಗಳನ್ನು ಆರಂಭಿಸಬೇಕೆಂದು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಹಾಗಾಗಿ ಮುಂದೆ ೫೦ ಸಾವಿರ ಇಂತಹ ಕೇಂದ್ರಗಳನ್ನು ಆರಂಭಿಸಲಾಗುವುದು. ಎಂಜಿನಿಯರ್ ಕಾಲೇಜುಗಳ ಸವಲತ್ತು ಬಳಸಿ, ಪಾಲಿಟೆಕ್ನಿಕ್, ಐಟಿಐ ಕೋರ್ಸ್ ಆರಂಭಿಸಬೇಕೆಂಬುದು ಸರಕಾರದ ಉದ್ದೇಶವಾಗಿದೆ. ದೇಶದಲ್ಲಿ ಈಗ ಭಾರೀ ಪ್ರಮಾಣದಲ್ಲಿ ತಾಂತ್ರಿಕ ಶಿಕ್ಷಣ ಪಡೆದವರ ಕೊರತೆ ಇದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಲೋಕಾಯುಕ್ತ ನ್ಯಾ| ಎನ್. ಸಂತೋಷ್ ಹೆಗ್ಡೆ ಅವರು ಮಾತ ನಾಡಿ, ವಿದ್ಯಾರ್ಥಿಗಳಿಗೆ ಮೌಲ್ಯ ಹಾಗೂ ಏಕತೆಯನ್ನು ತಿಳಿಸಿಕೊಡುವುದು ಇಂದಿನ ಜರೂರಿಯಾ ಗಿದೆ ಎಂದರು.

ಏಕತೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಗತ್ಯವಾಗಿದೆ. ನಮ್ಮ ದೇಶದಲ್ಲಿ ಇದರ ಕೊರತೆಯನ್ನು ನಾವು ಕಾಣುತ್ತಿದ್ದೇವೆ. ಏಕತೆ ಇರುತ್ತಿದ್ದಲ್ಲಿ ಭಾರತ ದೇಶ ಈ ಹೊತ್ತಿಗೆ ಅತ್ಯಂತ ಪ್ರಭಾವಶಾಲಿ ಹಾಗೂ ಅತ್ಯಂತ ಅಭಿವೃದ್ಧಿ ರಾಷ್ಟ್ರವಾಗಿರುತ್ತಿತ್ತು.ಮೌಲ್ಯಾಧಾರಿತ ಸಮಾಜ ನಿರ್ಮಾಣ ಇಂದಿನ ತುರ್ತು ಕಾರ್ಯ. ಭಾರತ ಭ್ರಷ್ಟಾಚಾರದಲ್ಲಿ ವಿಶ್ವದ ೧೬೦ ರಾಷ್ಟ್ರಗಳಲ್ಲಿ ೭೮ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರ ಇದೇ ರೀತಿಯಲ್ಲಿ ಮುಂದುವರಿದರೆ, ನಮ್ಮ ಮಕ್ಕಳ ಪರಿಸ್ಥಿತಿ ಏನಾದೀತು ? ಎಂದು ಅವರು ಪ್ರಶ್ನಿಸಿದರು.

ನಿಟ್ಟೆ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎನ್. ವಿನಯ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿದ್ದರು. ಹೊಟೇಲ್ ಉದ್ಯಮದಲ್ಲಿ ವಿಪುಲವಾದ ಅವಕಾಶಗಳಿವೆ. ಅದನ್ನು ಬಳಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳದ್ದು. ಜೀವನದಲ್ಲಿ ಯಶಸ್ಸಿಗೆ ನಿರಂತರ ಜ್ಞಾನದ ಅಗತ್ಯವಿದೆ ಎಂದು ಹೇಳಿದರು.

ನಿಟ್ಟೆ ವಿ.ವಿ. ಉಪಕುಲಪತಿ ಡಾ| ಎಂ. ಶಾಂತಾರಾಮ್ ಶೆಟ್ಟಿ, ನಿಟ್ಟೆ ಎಜ್ಯುಕೇಶನ್ ಟ್ರಸ್ಟ್‌ನ ಟ್ರಿಸ್ಟಿ ಬಿ. ಆರ್. ಹೆಗ್ಡೆ, ಬ್ಲೋಸಂ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಮಾತಾ ರಾಣಿ ಮಥಾಯಸ್ ಸ್ವಾಗತಿಸಿದರು.

೫ ಎಕರೆ ಜಮೀನಿನಲ್ಲಿ ೫ ಕೋ. ರೂ. ವೆಚ್ಚದಲ್ಲಿ ಸುಂದರವಾಗಿ ರೂಪುಗೊಂಡಿರುವ ಈ ಕಾಲೇ ಜು ಅತ್ಯಾಧುನಿಕ ಶೈಕ್ಷಣಿಕ ಸವಲತ್ತುಗಳನ್ನು ಹೊಂದಿದೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-09
|
|
|