ಕೋಲ್ಕತಾ, ಫೆ.೮: ಆಂಧ್ರಪ್ರದೇಶ ಹೈಕೋರ್ಟ್ ಮುಸ್ಲಿಮರಿಗೆ ಉದ್ಯೋಗ ಮೀಸಲಾತಿಯನ್ನು ರದ್ದುಪಡಿಸಿದ ದಿನವೇ ಪಶ್ಚಿಮ ಬಂಗಾಳ ಸರಕಾರವು ಮುಸ್ಲಿಮರಿಗೆ ಒಬಿಸಿ ವರ್ಗದಡಿ ಶೇ.೧೦ ಉದ್ಯೋಗ ಮೀಸಲಾತಿಯನ್ನು ಸೋಮವಾರ ಘೋಷಿಸಿದೆ.
ತಾವು ರಂಗನಾಥ ಮಿಶ್ರಾ ಆಯೋಗದ ಶಿಫಾರಸು ಅಂಗೀಕರಿಸಲು ನಿರ್ಧರಿಸಿದ್ದೇವೆ ಹಾಗೂ ಅದರ ಜಾರಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಪತ್ರಕರ್ತರಿಗೆ ತಿಳಿಸಿದರು.
ಇತರ ರಾಜ್ಯಗಳಂತೆಯೇ ಪಶ್ಚಿಮ ಬಂಗಾಳದಲ್ಲೂ ಎಸ್ಸಿ, ಎಸ್ಟಿ ಹಾಗೂ ಒಬಿಸಿಗಳಿಗೆ ಮೀಸಲಾತಿಯಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಮರನ್ನು ಗುರುತಿಸುವ ಕೆಲಸವನ್ನು ಸರಕಾರ ಆರಂಭಿಸಿದೆ. ರಾಜ್ಯದಲ್ಲಿ ಒಬಿಸಿಗಳಿಗೆ ಶೇ.೭ ಮೀಸಲಾತಿಯಿದೆ ಎಂದವರು ಹೇಳಿದರು.
ಗುರುತಿಸುವಿಕೆಯ ಬಳಿಕ ಅವರಿಗೆ ಒಬಿಸಿ ವರ್ಗದಡಿ ಮೀಸಲಾತಿ ಕಲ್ಪಿಸುವುದಾಗಿ ಭಟ್ಟಾಚಾರ್ಯ ತಿಳಿಸಿದರು.
ಇಂದು ಮುಂಜಾನೆ, ಆಂಧ್ರಪ್ರದೇಶದ ಹೈಕೋರ್ಟ್ ಮುಸ್ಲಿಂ ಸಮುದಾಯದ ೧೫ ಗುಂಪುಗಳಿಗೆ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯೋಗದಲ್ಲಿ ಶೇ. ೪ ಮೀಸಲಾತಿ ಒದಗಿಸುವ ರಾಜ್ಯದ ಕಾಯ್ದೆಯನ್ನು ರದ್ದುಪಡಿಸಿತ್ತು.
ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವಂತೆ ಮುಖ್ಯಮಂತ್ರಿ ಕೆ. ರೋಸಯ್ಯ ಅಡ್ವೊಕೇಟ್ ಜನರಲ್‌ಗೆ ಆದೇಶ ನೀಡಿದ್ದಾರೆ.