ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಉದಯಕುಮಾರ್ ಶೆಟ್ಟಿ ಪದಗ್ರಹಣ; ಮುಂದಿನ ಬಾರಿ 150 ಶಾಸಕರ ಸರಕಾರ: ಈಶ್ವರಪ್ಪ |
ಪ್ರಕಟಿಸಿದ ದಿನಾಂಕ : 2010-02-09
ಉಡುಪಿ:ಫೆ,8. ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ನೂತನ ಅಧ್ಯಕ್ಷ ಕಿದಿಯೂರು ಉದಯಕುಮಾರ್ ಶೆಟ್ಟಿ ಪದಗ್ರಹಣ ಸೋಮವಾರ ನಡೆಯಿತು.
ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ಕೆ. ಎಸ್. ಈಶ್ವರಪ್ಪ ಸಮಕ್ಷಮದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ ಪಕ್ಷದ ಧ್ವಜವನ್ನು ಉದಯಕುಮಾರ್ರ್ಗೆ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಪಕ್ಷದ ನೂತನ ರಾಜ್ಯಾಧ್ಯಕ್ಷನಾದ ಬಳಿಕ ಉಡುಪಿಯಿಂದ ರಾಜ್ಯವ್ಯಾಪಿ ಪ್ರವಾಸ ಹಮ್ಮಿ ಕೊಳ್ಳುತ್ತಿರುವುದಾಗಿ ತಿಳಿಸಿದ ಅವರು, ಕನಕನಿಗೊಲಿದ ಕೃಷ್ಣನ ನಾಡಾದ ಉಡುಪಿ ಸಾಮಾಜಿಕ ನ್ಯಾಯಕ್ಕೆ ಹೆಸರಾದುದು. ಸಮಾಜಾಭಿವೃದ್ಧಿಯಲ್ಲಿ ಹಿಂದುಳಿದವರು ಮತ್ತು ಮುಂದುವರಿದವರು ಈರ್ವರನ್ನೂ ಜೊತೆಯಾಗಿ ಕೊಂಡೊಯ್ದಾಗ ಸಾಮಾಜಿಕ ನ್ಯಾಯ ಒದಗಿಸುವುದು ಸಾಧ್ಯ.

ಈ ಹಿಂದೆ ಅಧ್ಯಕ್ಷರಾಗಿದ್ದ ಡಿ. ವಿ. ಸದಾನಂದ ಗೌಡ ಪಕ್ಷ ಸಂಘಟಿಸಿದ್ದುದನ್ನು ಮುಂದುವರಿಸಿ, ಅದರ ಸೋಪಾನದಡಿ ಪಕ್ಷವನ್ನು ಮುಂದುವರಿಸುವುದಾಗಿ ತಿಳಿಸಿದ ಈಶ್ವರಪ್ಪ, ಸಾಕಷ್ಟು ಅಭಿವೃದ್ಧಿ ಕಾರ್‍ಯ ಮಾಡಿರುವ ಬಿಜೆಪಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ದೇವೇಗೌಡ, ಕುಮಾರಸ್ವಾಮಿ, ಸಿದ್ಧರಾಮಯ್ಯ ಪ್ರಯತ್ನಪಟ್ಟರೂ ಅದು ಸಾಧ್ಯವಾಗಿಲ್ಲ. ಕಾರಣ, ಪಕ್ಷದ ಕಾರ್ಯಕರ್ತರ ಒಮ್ಮನದ ಯಶಸ್ಸಿನ ಫಲವಾಗಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಅದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿಯ ಪ್ರಗತಿ ಕಾರ್ಯ ಹಾಗೂ ಪಕ್ಷದ ಏಳಿಗೆಯನ್ನು ಕಂಡು ಕಂಗಾಲಾಗಿರುವ ವಿರೋಧ ಪಕ್ಷಗಳು ಭ್ರಮನಿರಸನಗೊಂಡಿವೆ ಎಂದರು. ಇನ್ನುಳಿದ ತಿಂಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಅಭಿವೃದ್ಧಿ ಸಾಧಿಸಿ ದೇಶದಲ್ಲೇ ನಂ.1ಸ್ಥಾನಕ್ಕೆ ಕರ್ನಾಟಕವನ್ನು ಕೊಂಡೊಯ್ಯುವುದರಲ್ಲಿ ಎರಡು ಮಾತಿಲ್ಲ ಎಂದರು.

ಗೃಹ ಸಚಿವ ಡಾ. ವಿ. ಎಸ್. ಆಚಾರ್ಯ, ಸಂಸದ ಡಿ. ವಿ. ಸದಾನಂದ ಗೌಡ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಕಾರ್ಕಳ ಮಾಜಿ ಶಾಸಕ ಸುನಿಲ್‌ಕುಮಾರ್ ಅಭಿನಂದನ ಭಾಷಣ ಮಾಡಿದರು.
ನೂತನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸುವುದಾಗಿ ತಿಳಿಸಿ, ಸರ್ವರ ಸಹಕಾರ ಬಯಸಿದರು. ಶಾಸಕ ರಘುಪತಿ ಭಟ್ ಸ್ವಾಗತಿಸಿದರು.
ಸಂಘಟನೆಗೆ ಒತ್ತು: ಉದಯ ಶೆಟ್ಟಿ


ನೂತನ ಜಿಲ್ಲಾಧ್ಯಕ್ಷ ಕೆ. ಉದಯಕುಮಾರ ಶೆಟ್ಟಿಯವರು ಮಾತನಾಡಿ ಎಲ್ಲ ಹಿರಿಯ-ಕಿರಿಯರ ಸಹಕಾರದಿಂದ ಚುನಾವಣೆಗಳನ್ನು ಇದಿರುಸುತ್ತೇನೆ. ವಾರಕ್ಕೆ ಐದು ಸ್ಥಾನೀಯ ಸಮಿತಿಗಳಿಗೆ ಭೇಟಿ ನಿಡುತ್ತೇನೆ. ೧೫-೨೦ ದಿನಗಳಲ್ಲಿ ಜಿಲ್ಲಾ ಸಮಿತಿಗಳನ್ನು ಪ್ರಕಟಿಸುತ್ತೇನೆ. ದಿನಕ್ಕೆರಡು ಗಂಟೆ ಪಕ್ಷದ ಕಚೇರಿಯಲ್ಲಿ ಸಿಗುತ್ತೇನೆ ಎಂದರು.
ಗೃಹ ಸಚಿವ ಡಾ| ವಿ.ಎಸ್.ಆಚಾರ್ಯ, ನಿಕಟಪೂರ್ವ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಸುನೀಲ್‌ಕುಮಾರ್ ಶುಭ ಕೋರಿದರು.

ಸರಕಾರದ ವಿವಿಧ ಯೋಜನೆಗಳ ಮಾಹಿತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ಮೂರನೆಯ ಹಣಕಾಸು ಆಯೋಗದ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಜಿ. ಕೊಡ್ಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಶಾಸಕರಾದ ಲಾಲಾಜಿ ಮೆಂಡನ್, ಲಕ್ಷ್ಮೀನಾರಾಯಣ್, ಕ್ಯಾ| ಗಣೇಶ ಕಾರ್ಣಿಕ್, ದ.ಕ., ಉಡುಪಿ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಜಿ.ಪಂ. ವಿಪಕ್ಷ ನಾಯಕ ಜೆರಾಲ್ಡ್ ಫೆರ್ನಾಂಡಿಸ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಧಾಕರ ಶೆಟ್ಟಿ, ಕ್ಷೇತ್ರಾಧ್ಯಕ್ಷರಾದ ಉಡುಪಿ ಗ್ರಾಮಾಂತರದ ಹರಿಮಕ್ಕಿ ರತ್ನಾಕರ ಶೆಟ್ಟಿ, ಕುಂದಾಪುರದ ಕಿಶೋರ್‌ಕುಮಾರ್, ಕಾರ್ಕಳದ ಮಣಿರಾಜ ಶೆಟ್ಟಿ, ಕಾಪುವಿನ ಕುತ್ಯಾರು ನವೀನ್ ಶೆಟ್ಟಿ, ನಗರಸಭಾಧ್ಯಕ್ಷ ದಿನಕರ ಶೆಟ್ಟಿ, ಮಹಿಳಾ ಮೋರ್ಚಾದ ಶೀಲಾ ಕೆ. ಶೆಟ್ಟಿ ಉಪಸ್ಥಿತರಿದ್ದರು. ಶಾಸಕ ಕೆ.ರಘುಪತಿ ಭಟ್ ಸ್ವಾಗತಿಸಿ, ನಗರಾಧ್ಯಕ್ಷ ಮನೋಹರ ಕಲ್ಮಾಡಿ ವಂದಿಸಿದರು.

ನಗರದ ಮಾಜಿ ಅಧ್ಯಕ್ಷ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.
ಪಕ್ಷಕ್ಕೆ ಸೇರ್ಪಡೆ
ಜಮೀರ್, ಅಜರುದ್ದೀನ್, ರಹಮತ್, ಮನ್ಸೂರ್, ಸೈಜಾನ್, ಕಲೀಲ್, ಮೈಯ್ಯದ್ದಿ, ಇಮ್ರಾನ್, ಮೂಸ, ಅಬುಬಕ್ಕರ್, ಪ್ರದೀಪ್, ಸುರೇಂದ್ರ, ಗಣೇಶ, ಸಿಮಾಸ್, ರಾಜೇಶ, ಆಸಿಫ್, ಆದಂ, ಇಬ್ರಾಹಿಂ, ಶಬ್ಬೀರ್, ನಜೀರ್, ಬೆಂಡಿಕ್ ಫಯಾಜ್, ಗಣೇಶ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾಗಿ ಪ್ರಕಟಿಸಲಾಯಿತು.
ವರದಿಯ ವಿವರಗಳು |
 |
ಕೃಪೆ : ಹೆಚ್ಚುವರಿ ಚಿತ್ರಗಳು: ದುರ್ಗಪ್ರಸಾದ್ ಕಡಿಯಾಳಿ ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2010-02-09 00:00:00
|
|
|