ಹೈದರಾಬಾದ್, ಫೆ.೭: ಭಾರತದ ಅತ್ಯಂತ ದೀರ್ಘ ವ್ಯಾಪ್ತಿಯ ಪರಮಾಣು ಸಮರ್ಥ ಅಗ್ನಿ-||| ಕ್ಷಿಪಣಿಯ ಪರೀಕ್ಷಾ ಹಾರಾಟವು ಒರಿಸ್ಸಾ ಸಾಗರಾಂತರದ ಲರ್ ದ್ವೀಪದಲ್ಲಿ ರವಿವಾರ ಯಶಸ್ವಿಯಾಗಿ ನಡೆಯಿತು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ) ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯು ಅಯುಧ ವ್ಯವಸ್ಥೆಯಲ್ಲೇ ಅತ್ಯಂತ ಮಾರಕವೆನ್ನಲಾಗಿದ್ದು, ೩,೫೦೦ ಕಿ.ಮೀ.ಗೂ ಹೆಚ್ಚಿನ ವ್ಯಾಪ್ತಿ ಹೊಂದಿದೆ. ಅದನ್ನು ಇಂದು ಮುಂಜಾನೆ ೧೦:೫೦ರ ವೇಳೆ ಹಾರಿ ಬಿಡಲಾಗಿದ್ದು, ಪೂರ್ವ ನಿಗದಿತ ಗುರಿಯನ್ನು ನೂರು ಪ್ರತಿಶತ ನಿಖರವಾಗಿ ತಲುಪಿತೆಂದು ಹಿರಿಯಧಿಕಾರಿಗಳು ತಿಳಿಸಿದ್ದಾರೆ.
ಈ ಘನ ಇಂಧನ ಚಾಲಿತ ಎರಡು ಹಂತಗಳ ಕ್ಷಿಪಣಿಯು ೧.೫ ಟನ್ ವರೆಗಿನ ಪರಮಾಣು ಸಿಡಿತಲೆ ಒಯ್ಯುವ ಸಾಮರ್ಥ್ಯ ಹೊಂದಿದ್ದು, ೧೭ ಮೀ. ಉದ್ದ, ಎರಡು ಮೀ. ವ್ಯಾಪ ಹಾಗೂ ೫೦ ಟನ್ ಭಾರ ಹೊಂದಿದೆ.
ಇದೊಂದು ಅದ್ಭುತ ಹಾರಾಟವಾಗಿತ್ತು. ಮೂರು ಯಶಸ್ವಿ ಹಾರಾಟಗಳೊಂದಿಗೆ ಅಗ್ನಿ-||| ‘ಹ್ಯಾಟ್ರಿಕ್’ ಸಾಧಿಸಿದೆ. ಕೊನೆಯ ಕ್ಷಣದವರೆಗೆ ಕ್ಷಿಪಣಿಯು ಯೋಜನೆಯಂತೆ ಕರಾರುವಾಕ್ಕಾಗಿ ಮಾರ್ಗಕ್ರಮಣ ಮಾಡಿತೆಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಹಾಗೂ ಡಿಆರ್‌ಡಿಒದ ಮಹಾನಿರ್ದೇಶಕ ಎ.ಕೆ. ಸಾರಸ್ವತ್ ತಿಳಿಸಿದ್ದಾರೆ.
ಕ್ಷಿಪಣಿಗೆ ಸಜೀವ ಪರಮಾಣು ಸಿಡಿತಲೆ ಅಳವಡಿಸಲಾಗಿರಲಿಲ್ಲ. ಬದಲಾಗಿ ರಾಸಾಯನಿಕ ಸ್ಫೋಟಕಗಳನ್ನು ಅಳವಡಿಸಲಾಗಿತ್ತು. ಆದಾಗ್ಯೂ, ಅದರ ಪರಮಾಣು ಚಿಮ್ಮುವಿಕೆ ವ್ಯವಸ್ಥೆಯು ಉತ್ತಮವಾಗಿ ಕೆಲಸ ಮಾಡಿತೆಂದು ಅವರು ಹೇಳಿದ್ದಾರೆ.
ಇತರ ಅನೇಕ ವಿಜ್ಞಾನಿಗಳೂ ಇದೊಂದು ಅದ್ಭುತ ಸಾಧನೆ ಹಾಗೂ ಭಾರತದ ರಕ್ಷಣಾ ವ್ಯವಸ್ಥೆಯ ಯಶಸ್ವಿ ಮೈಲುಗಲ್ಲೆಂದು ವರ್ಣಿಸಿದ್ದಾರೆ.