ಮಂಗಳೂರು: ಪ್ರತಿಷ್ಠಿತ ಸಂದೇಶ ಪ್ರಶಸ್ತಿ ಪ್ರದಾನ ಸಮಾರಂಭ : ಅತಿಥಿ ಗಣ್ಯರಿಂದ ಪ್ರಶಸ್ಥಿ ಸ್ವೀಕರಿಸಿದ ಸಾಧಕರು. |
ಪ್ರಕಟಿಸಿದ ದಿನಾಂಕ : 2010-02-07
(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)
ಮಂಗಳೂರು,ಫೆ.07 : ಸಂದೇಶ ಪ್ರತಿಷ್ಠಾನ ವತಿಯಿಂದ ಸಾಧಕರಿಗೆ ಕೊಡಲ್ಪಡುವ ಪ್ರತಿಷ್ಠಿತ ಸಂದೇಶ ಪ್ರಶಸ್ತಿ ಪ್ರದಾನ ಸಮಾರಂಭವು ನಗರದಲ್ಲಿ ಇಂದು ನಡೆಯಿತು.

ನಂತೂರು ಬಳಿಯ ಬಜ್ಜೊಡಿಯಲ್ಲಿರುವ ಸಂದೇಶ ಪ್ರತಿಷ್ಠಾನದಲ್ಲಿ ನಡೆದ ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 8 ಮಂದಿಗೆ ಸಂದೇಶ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.

ಮಂಗಳೂರಿನ ಬಿಷಪ್ ವ| ಅಲೋಶಿಯಸ್ ಪೌಲ್ ಡಿ’ಸೋಜಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಂದೇಶ ಪ್ರತಿಷ್ಠಾನದ ನಿರ್ದೇಶಕ ವ| ಫಾ| ವೆಲೆರಿಯನ್ ಮೆಂಡೋನ್ಸ, ಬಳ್ಳಾರಿಯ ಬಿಷಪ್ ಹಾಗೂ ಸಂದೇಶ ಪ್ರತಿಷ್ಠಾನದ ಚೆಯರ್ ಮೆನ್ ಅತೀ ವಂದನೀಯ ಹೆನ್ರಿ ಡಿ’ಸೋಜಾ, ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ್ ಭಟ್ ಮುಖ್ಯ ಅತಿಥಿಗಳಗಿದ್ದರು.
ಪ್ರಶಸ್ತಿ ಪಡೆದವರ ವಿವರ:
೧.ಡಾ| ಚಂದ್ರಶೇಖರ.ಬಿ.ಕಂಬಾರ - (ಕನ್ನಡ ಸಾಹಿತ್ಯ) ಬೆಂಗಳೂರು, ೨. ಡಾ| ಎಡ್ವರ್ಡ್ ನಝರತ್ - (ಕೊಂಕಣಿ ಸಾಹಿತ್ಯ) ಮಂಗಳೂರು, ೩. ಶ್ರೀಮತಿ ಜಾನಾಕಿ ಬ್ರಹ್ಮಾವರ - (ತುಳು ಸಾಹಿತ್ಯ) ಉಡುಪಿ, ೪. ಶ್ರೀಮತಿ ಉಷಾ ದತ್ತರ್ - (ಕಲಾ ಪ್ರಶಸ್ತಿ) ಬೆಂಗಳೂರು, ೫. ಎಸ್.ಎನ್ ಸೀತಾರಾಮ್ - (ಸಿನಿಮಾ ಹಾಗೂ ಕಿರುತೆರೆ) ಬೆಂಗಳೂರು, ೬. ವಾಲ್ಟರ್ ನಂದಳಿಕೆ ಮಂಗಳೂರು - (ಮಾಧ್ಯಮ) ಮಂಗಳೂರು, ೭. ಲೂಯಿಸ್ ಮೆಂಡೋನ್ಸಾ - (ಶಿಕ್ಷಣ) ಶಿರ್ವ ಉಡುಪಿ, ೮. ಗುರುರಾಜ್ ಹೆಬ್ಬಾರ್ - ಅಧ್ಯಕ್ಷರು (ಚೈತನ್ಯ ಮಂದಿರ ಹಾಸನ) - ವಿಶೇಷ ಪ್ರಶಸ್ತಿ
ನಿಸ್ವಾರ್ಥ ಸಾಧಕರಿಗೆ ಪ್ರೋತ್ಸಾಹ ಅಗತ್ಯ : ಬಿಷಪ್

ಮಂಗಳೂರು, ಫೆ. ೭: ನಿಸ್ವಾರ್ಥ ದುಡಿಮೆ ಮಾಡಿದವರನ್ನು ಬೆನ್ನು ತಟ್ಟುವ ಕಾರ್‍ಯ ಮಾಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ವಂ| ಎಲೋಶಿಯಸ್ ಪಾವ್ಲ್ ಡಿ’ಸೋಜಾ ರವಿವಾರ ಹೇಳಿದರು.
ಸಂದೇಶ ಪ್ರತಿಷ್ಠಾನ ನಗರದಲ್ಲಿ ಏರ್ಪಡಿಸಿದ್ದ ೨೦೧೦ರ ಸಂದೇಶ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಇಂದು ಸಮಾಜದಲ್ಲಿ ಟೀಕೆಗೆ ಕೊರತೆ ಇಲ್ಲ. ಟೀಕೆಗಳಿಂದ ಸಮಸ್ಯೆಗಳ ನಿವಾರಣೆ ಸಾಧ್ಯವಿಲ್ಲ. ನಿಸ್ವಾರ್ಥ ಸಮಾಜ ಸೇವೆ ಮಾಡುವ ಜನರ ಬೆನ್ನು ತಟ್ಟುವವರು ಇಂದು ನಮಗೆ ಬೇಕಾಗಿದ್ದಾರೆ. ಆ ಕಾರ್ಯ ನಡೆದರೆ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ಅವರು ನುಡಿದರು.


 


ಮುಖ್ಯ ಅತಿಥಿಗಳಾಗಿದ್ದ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ್ ಭಟ್ ಮಾತನಾಡಿ, ಸಾಧನೆ ಎಂದೂ ಆಕಸ್ಮಿಕವಲ್ಲ, ಅದು ನಿರಂತರ ಶ್ರಮದ ಫಲ. ಈ ಸಾಧನೆ ಮಾಡಿದವರನ್ನು ಗುರುತಿಸುವುದು , ಅವರ ಜ್ಞಾನವನ್ನು ಇತರರು ಪಡೆದುಕೊಳ್ಳುವುದು ಕೂಡಾ ಅತಿ ಮುಖ್ಯವಾದುದು ಎಂದು ಹೇಳಿದರು.
ಸಂದೇಶ ಪ್ರಶಸ್ತಿ ಪಡೆದವರು ಪ್ರತಿಯೊಂದು ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಯನ್ನು ಮಾಡಿದ ಸಾಧಕರು. ಅವರನ್ನು ಗೌರವಿಸುತ್ತಿರುವುದು ಉತ್ತಮ ಕಾರ್‍ಯ. ಕರ್ಣಾಟಕ ಬ್ಯಾಂಕ್ ಕೂಡಾ ಕಲೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.






ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ ಪಡೆದ ಡಾ| ಚಂದ್ರಶೇಖರ ಕಂಬಾರ ಮಾತನಾಡಿ, ೧೦ ಸಾವಿರ ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಮೌಲ್ಯಗಳ ಬಗ್ಗೆಯೇ ಇಂದು ನಮಗೆ ಅನುಮಾನಗಳು ಹುಟ್ಟಿಕೊಳ್ಳಲಾರಂಭಿಸಿವೆ. ಸಮಾಜದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸಾಮರಸ್ಯ ಇತ್ತೇ ಎಂದು ಪ್ರಶ್ನಿಸುವ ಪರಿಸ್ಥಿತಿ ನಮ್ಮದಾಗಿದೆ. ಸಂದೇಶ ಪ್ರತಿಷ್ಠಾನ ತಮ್ಮ ಪ್ರಶಸ್ತಿಗಳ ಮೂಲಕ ಸಮಾಜದಲ್ಲಿ ಸಾಮರಸ್ಯವನ್ನು ಪುನರ್‌ರೂಪಿಸಲು ಪ್ರಯತ್ನಿಸುತ್ತಿರುವುದು ಒಳ್ಳೆಯ ಕೆಲಸ ಎಂದು ಅವರು ನುಡಿದರು.

ಸಂದೇಶ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ನಟ ಸೇತುರಾಮ್ ಮಾತನಾಡಿ, ಪ್ರಶಸ್ತಿಗೆ ತನ್ನನ್ನು ಆಯ್ಕೆ ಮಾಡಿರುವುದಕ್ಕೆ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.
ಪ್ರಶಸ್ತಿ ವಿಜೇತರಾದ ಡಾ| ಎಡ್ವರ್ಡ್ ನಜರತ್, ಜಾನಕಿ ಬ್ರಹ್ಮಾವರ, ಉಷಾ ದಾತರ್, ಡಾಯ್ಜಿ ವರ್ಲ್ಡ್‌ನ ವಾಲ್ಟರ್ ನಂದಳಿಕೆ, ಲುವಿಸ್ ಮೆಂಡೋನ್ಸ, ಹಾಸನದ ಚೈತನ್ಯ ಮಂದಿರದ ಡಾ| ಗುರುರಾಜ ಹೆಬ್ಬಾರ್ ಮಾತನಾಡಿದರು.



ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ| ವಲೇರಿಯನ್ ಮೆಂಡೋನ್ಸ ಸ್ವಾಗತಿಸಿದರು. ಟ್ರಿಸ್ಟಿಗಳಾದ ಗಾಲ್ಡಿನ್ ಡಿ’ಸೋಜಾ, ರೊಯ್ ಕಾಸ್ತಾಲಿನೋ, ಪಿ.ಎಂ. ಕಾಸ್ತಲಿನೋ, ಮೆನೇಜರ್ ಲಿಯೋ ಡಿ’ಸೋಜಾ, ಸಾಹಿತಿ ನಾ ಡಿ’ಸೋಜ ಹಾಜರಿದ್ದರು.

ವರದಿಯ ವಿವರಗಳು |
 |
ಕೃಪೆ : ಕರೀಶ್ಮ ಶೆಟ್ಟಿ.ಎಸ್.ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-02-07 00:00:00
|
|
|