ಮ೦ಗಳೂರು: ಪದ್ಮನಾಭ ರೈ, ಜ್ಞಾನೇಶ್ವರಿ, ಕ್ಯಾಥರಿನ್‌ಗೆ ರತ್ನವರ್ಮ ಹೆಗ್ಗಡೆ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2010-02-07
ಮಂಗಳೂರು, ಫೆ. ೬: ತುಳು ನಾಟಕ ಹಸ್ತ ಪ್ರತಿಗೆ ತುಳು ಕೂಟ, ಕುಡ್ಲ ನೀಡುವ ೨೦೦೯ನೇ ಸಾಲಿನ ಧರ್ಮಸ್ಥಳ ರತ್ನ ವರ್ಮ ಹೆಗ್ಗಡೆ ಪ್ರಶಸ್ತಿ ಪ್ರಕಟವಾಗಿದ್ದು, ಉದಯವಾಣಿಯ ಉಪ ಸಂಪಾದಕ ಪುತ್ತಿಗೆ ಪದ್ಮನಾಭ ರೈ ಅವರ `ಮರ್ಲ್ ಏರೆಗ್' ಕೃತಿಗೆ ಪ್ರಥಮ ಪ್ರಶಸ್ತಿ ಬಂದಿದೆ.
ಪುತ್ತೂರಿನ ಜ್ಞಾನೇಶ್ವರಿ ಎಸ್. ಜೋಶಿ ಅವರ ಕೃತಿ `ನಂಬುಗೆಗ್ ಇಂಬು' ದ್ವಿತೀಯ ಹಾಗೂ ಕಟಪಾಡಿಯ ಕ್ಯಾಥರಿನ್ ರೊಡ್ರಿಗಸ್ ಅವರ ಕೃತಿ `ಅರಿ ತಿಂದೆ' ತೃತೀಯ ಪ್ರಶಸ್ತಿ ಪಡೆದು ಕೊಂಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಾಯೋಜಿಸಿರುವ ಈ ಪ್ರಶಸ್ತಿಯನ್ನು ೧೯೭೬ರಿಂದ ನೀಡಲಾಗುತ್ತಿದೆ.
ಪ್ರಶಸ್ತಿ ಕ್ರಮವಾಗಿ ರೂ. ೫೦೦೦ (ಪ್ರ.), ರೂ. ೩೦೦೦ (ದ್ವಿ.), ರೂ. ೨೦೦೦ (ತೃ.) ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ.
ಉದಯವಾಣಿಯ ಮಂಗಳೂರು ನ್ಯೂಸ್ ಬ್ಯೂರೋ ಚೀಫ್ ಮನೋಹರ ಪ್ರಸಾದ್, ತುಳು ಸಾಹಿತಿ ಮುಂಡಪ್ಪ ಬೋಳೂರು ಮತ್ತು ತುಳು ಕವಿ ಎ. ಶಿವಾನಂದ ಕರ್ಕೇರಾ ಅವರು ಪ್ರಶಸ್ತಿ ಆಯ್ಕೆ ಮಂಡಳಿಯ ಸದಸ್ಯರಾಗಿದ್ದರು.
ಎ. ೧೪ರ `ಬಿಸು ಪರ್ಬ'ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಉಪಾಧ್ಯಕ್ಷ ಎಂ. ರತ್ನ ಕುಮಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-07
|
|
|