| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಬೆಲೆ ನಿಯಂತ್ರಣ: ಪ್ರಧಾನಿ ಭರವಸೆ |
ಪ್ರಕಟಿಸಿದ ದಿನಾಂಕ : 2010-02-07
ಹೊಸದಿಲ್ಲಿ, ಫೆ.೬: ಬೆಲೆಯೇರಿಕೆಯ ವಿರುದ್ಧ ತನ್ನ ಸರಕಾರದ ಸಮರ ‘ಅಲ್ಪ ಯಶಸ್ಸನ್ನಷ್ಟೇ ಸಾಧಿಸಿದೆ’ ಎಂದು ಪ್ರಧಾನಿ ಮನಮೋಹನ ಸಿಂಗ್ ಇಂದು ಹೇಳಿದ್ದು, ಆದರೆ ಶೇ.೧೭ಕ್ಕೂ ಹೆಚ್ಚಾಗಿದ್ದ ವಾರ್ಷಿಕ ಆಹಾರದುಬ್ಬರವನ್ನು ಹತ್ತಿಕ್ಕುವ ವಿಚಾರದಲ್ಲಿ ಅತಿ ಕೆಟ್ಟ ಕಾಲವು ತೀರಿತೆಂದು ಆಶ್ವಾಸನೆ ನೀಡಿದ್ದಾರೆ.
“ಅದಾಯವನ್ನು ರಕ್ಷಿಸುವಲ್ಲಿ ನಾವು ಉತ್ತಮ ಸಾಧನೆ ತೋರಿದ್ದರೂ ಆಹಾರ ಬೆಲೆ ನಿಯಂತ್ರಣದಲ್ಲಿ ಅಲ್ಪ ಯಶಸ್ಸನ್ನಷ್ಟೇ ಸಾಧಿಸಿದ್ದೇವೆ” ಎಂದವರು ಅಗತ್ಯ ವಸ್ತುಗಳ ಬೆಲೆಯೇರಿಕೆ ತಡೆಯುವ ವಿಚಾರ ಚರ್ಚಿಸಲು ಇಂದು ಕರೆದಿದ್ದ ಮುಖ್ಯಮಂತ್ರಿಗಳ ಸಭೆಯೊಂದರಲ್ಲಿ ಹೇಳಿದರು.
ಆಹಾರದುಬ್ಬರದ ವಿಚಾರದಲ್ಲಿ ಕೆಟ್ಟ ಕಾಲ ಅಂತ್ಯವಾಯಿತೆಂದು ತಾನು ನಂಬಿರುವೆನೆಂದು ಹೇಳಬಲ್ಲೆ ಎಂದು ಪ್ರಧಾನಿ ನುಡಿದರು. ತನ್ನ ಸರಕಾರವು ಬೆಲೆಯೇರಿಕೆ ತಡೆಗೆ ಕೈಗೊಂಡಿರುವ ಪಡಿತರ ವಿತರಣೆಗಾಗಿ ಹೆಚ್ಚುವರಿ ಧಾನ್ಯ ಬಿಡುಗಡೆಯಂತಹ ಕ್ರಮಗಳ ಬಗ್ಗೆ ಅವರು ಸಭೆಗೆ ಮನವರಿಕೆ ಮಾಡಿದರು.
ಇತ್ತೀಚಿನ ವಾರಗಳಲ್ಲಿ ಆಹಾರ ಧಾನ್ಯಗಳ ಬೆಲೆ ಇಳಿದಿದ್ದು, ಅದು ಮುಂದುವರಿಯಲಿದೆಯೆಂಬ ಆಶಾಭಾವವನ್ನು ಪ್ರಧಾನಿ ವ್ಯಕ್ತಪಡಿಸಿದರು.
ದೀರ್ಘಾವಧಿಯಲ್ಲಿ ಕಡಿಮೆ ಉತ್ಪಾದನೆಗೆ ಕಾರಣವಾದ ಅಂಶಗಳ ಕುರಿತು ಹೆಚ್ಚಿನ ನಿಗಾ ವಹಿಸಬೇಕೆಂದು ಒತ್ತಿ ಹೇಳಿದ ಪ್ರಧನಿ ಅಭಾವವಿರುವ ಬೆಳೆಕಾಳು ಸಹಿತ ಅನೇಕ ಬೆಳೆಗಳಲ್ಲಿ ತಲಾ ಹೆಕ್ಟೇರ್‌ಗೆ ಉತ್ಪಾದನೆ ಹೆಚ್ಚಿಸಲು ಸಾಧ್ಯವೆಂದು ಅಭಿಪ್ರಾಯಿಸಿದರು.
ಇದೇ ವೇಳೆ, ಕಳ್ಳ ದಾಸ್ತಾನು ತಡೆಯಲು ಅಗತ್ಯ ವಸ್ತು ಕಾಯ್ದೆ ಜಾರಿಗೊಳಿಸುವಂತೆ ರಾಜ್ಯಗಳಿಗೆ ಸಲಹೆ ನೀಡಿದ ಅವರು, ಕೃತಕ ಅಭಾವ ಸೃಷ್ಟಿಸುವ ಹಾಗೂ ಹಣದುಬ್ಬರ ಊಹೆಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಉತ್ತರ ಪ್ರದೇಶದಂತಹ ಕೆಲವು ರಾಜ್ಯಗಳು ಕಚ್ಚಾ ಸಕ್ಕರೆಯ ಪ್ರವೇಶಕ್ಕೆ ನಿಷೇಧ ಹೇರಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಅಮದಿತ ಕಚ್ಚಾ ಸಕ್ಕರೆ ಸಂಸ್ಕರಣೆಗಿರುವ ನಿಷೇಧವನ್ನು ತೆಗೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಅತಿ ತುರ್ತಾಗಿ ಸಾರ್ವಜನಿಕ ವಿತರಣ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
“ನಮ್ಮ ಸಾರ್ವಜನಿಕ ವ್ಯವಸ್ಥೆಯು ನಿರಾಶಾದಾಯಕವೆನಿಸುಷ್ಟು ಕೆಟ್ಟಿದ್ದು ಅದನ್ನು ಸಂಪೂರ್ಣ ಸುಧಾರಿಸಬೇಕೆಂಬುದು ನನ್ನ ಅಭಿಪ್ರಾಯವಾಗಿದೆಎ ಎಂದ ಪ್ರಧಾನಿ, ರಾಜ್ಯ ಸರಕಾರಗಳು ಸಾರ್ವಜನಿಕ ವಿತರಣ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡುವ ಮಾರುಕಟ್ಟೆ ಮಧ್ಯಪ್ರವೇಶ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವತ್ತ ಲಕ್ಷವಹಿಸಬೇಕೆಂದು ಸಲಹೆ ನೀಡಿದರು.
ನಿನ್ನೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಅಗತ್ಯ ವಸ್ತುಗಳ ಬೆಲೆಯೇರಿಕೆಯ ಕುರಿತು ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿ ಕೃಷಿ ಸಚಿವ ಶರದ್ ಪವಾರ್‌ರನ್ನು ಅದಕ್ಕೆ ಹೊನೆ ಮಾಡಿ ಟೀಕಿಸಿದ ಹಿನ್ನೆಲೆಯಲ್ಲಿ ಇಂದು ದಿನದುದ್ದದ ಮುಖ್ಯಮಂತ್ರಿಗಳ ಸಭೆಯೊಂದನ್ನು ಪ್ರಧಾನಿ ಹಮ್ಮಿಕೊಂಡಿದ್ದರು.
ಕಾಂಗ್ರೇಸೇತರ ರಾಜ್ಯ ಸರಕಾರಗಳ ಮುಖ್ಯಮಂತ್ರಿಗಳು ಬೆಲೆಯೇರಿಕೆಯ ವಿಚಾರದಲ್ಲಿ ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಸರಕಾರದ ನಿಷ್ಕ್ರೀಯತೆಗಾಗಿ ರಾಜ್ಯ ಸರಕಾರಗಳ ಮೇಲೆ ಗೂಬೆ ಕೂರಿಸುತ್ತಿರುವ ಪ್ರವೃತ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರವಾಗಿ ಖಂಡಿಸಿದರು.
ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಕೇರಳದ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್, ಅಗತ್ಯ ವಸ್ತುಗಳ ಹೇರಳ ಪೂರೈಕೆಯಲ್ಲಿ ಕೇಂದ್ರ ಸರಕಾರ ವಿಫಲವಾಗಿರುವುದೇ ಬೆಲಯೇರಿಕೆಗೆ ಕಾರಣವೆಂದು ದೂರಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-07 00:00:00
|
|
|
|
|