| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಸುಳ್ಯ: ಕಾಗೇರಿ ಮೇಸ್ಟ್ರ ನಲಿಕಲಿ ಪಾಠ..!: ಶಾಲಾ ಸ್ವರ್ಣ ಮಹೋತ್ಸವಕ್ಕೆ ಆಗಮಿಸಿದ ಶಿಕ್ಷಣ ಸಚಿವರಿಂದ ‘ಪ್ರಗತಿ ಪರಿಶೀಲನೆ’ |
ಪ್ರಕಟಿಸಿದ ದಿನಾಂಕ : 2010-02-07
ಸುಳ್ಯ, ಫೆ.೬: ಎಷ್ಟರವರೆಗೆ ಮಗ್ಗಿ ಬರುತ್ತೆ? ನಮ್ಮ ನಾಡಗೀತೆ ಯಾವುದು ? ಈ ಚಿತ್ರ ಯಾರದ್ದು ?... ಹೀಗೆ ಪುಟಾಣಿ ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಶಿಕ್ಷಣದ ಪ್ರಗತಿ ಪರಿಶೀಲಿಸಿದ್ದು, ಯಾವುದೇ ಶಾಲೆಯ ಶಿಕ್ಷಕರಲ್ಲ. ಬದಲಾಗಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ.
ಸುಳ್ಯ ತಾಲೂಕಿನ ತೀರಾ ಹಳ್ಳಿಗಾಡು ಪ್ರದೇಶವಾದ ಹಾಸನಡ್ಕ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭ.
ತಾಲೂಕು, ಜಿಲ್ಲಾ ಮಟ್ಟದಲ್ಲಿ ಉತ್ತಮ ಶಾಲೆಯೆಂದು ಪ್ರಶಸ್ತಿ ಗಳಿಸಿದ್ದ ಈ ಸಂಸ್ಥೆಯ ಚಿನ್ನದ ಹಬ್ಬಕ್ಕೆ ಶಿಕ್ಷಣ ಸಚಿವರ ಉಪಸ್ಥಿತಿ ಚಿನ್ನದ ಮೆರುಗು ತಂದಿತ್ತು. ಈ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಕೇವಲ ೨೮. ಅಷ್ಟು ವಿದ್ಯಾರ್ಥಿಗಳು ಬಹುಮಾನ ಪಡೆಯಲೆಂದು ವೇದಿಕೆ ಏರಿದಾಗ ಸಚಿವ ಕಾಗೇರಿಯವರು ‘ಮಾಸ್ತರಿಕೆ’ ಆರಂಭಿಸಿದರು. ನಲಿಕಲಿಯ ಹಾಡು ಪ್ರಸ್ತುತ ಪಡಿಸಲು ಹೇಳಿದಾಗ ವಿದ್ಯಾರ್ಥಿಗಳು ಭಯ, ಸಂತೋಷದಿಂದ ಅನುಸರಿಸಿದರು. ಹಲವು ಪ್ರಶ್ನೆ ಕೇಳಿದಾಗ ವಿದ್ಯಾರ್ಥಿಗಳು ತಡವರಿಸಿದರು. ಕೆಲವರ ಕಿವಿಗಳನ್ನು ಶಿಕ್ಷಣ ಸಚಿವರು ಪ್ರೀತಿಯಿಂದ ಹಿಂಡಿದ್ದೂ ಆಯಿತು. ಸಚಿವರ ಪಾಠ: ಸಚಿವರ ಪಾಠ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿರಲಿಲ್ಲ. ಶಿಕ್ಷಕರು ಮತ್ತು ಪೋಷಕರಿಗೂ ಸಖತ್ತಾಗಿಯೇ ‘ಪಾಠ’ ಮಾಡಿದರು. ಶಿಕ್ಷಕರು ಶಾಲೆಗಳಲ್ಲಿ ಮೊಬೈಲ್ ಬಳಸಲೇ ಬಾರದು. ಒಮ್ಮೆ ಮೊಬೈಲ್‌ನಲ್ಲಿ ಮಾತನಾಡಿದರೆ ನೀವು ....೭ಗಂಟೆ ಪಾಠ ಮಾಡೋದೇ ಇಲ್ಲ. ಅಂಥ ಅನುಭವದಲ್ಲಿರ‍್ತೀರಿ ಎಂದು ಶಿಕ್ಷಕರನ್ನುದ್ದೇಶಿಸಿ ಹೇಳಿದ ಸಚಿವರು, ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಿಮಗೆಷ್ಟು ಗೊತ್ತು ? ನಿಮ್ಗೆಲ್ಲಿ ಅದಕ್ಕೆಲ್ಲಾ ಪುರುಸೊತ್ತು ? ಟಿ.ವಿ. ನೋಡೋದ್ರಲ್ಲೇ ಆಯ್ತು ಎಂದು ಚಾಟಿ ಬೀಸಿದರು.
ಸಂಸ್ಕಾರದ ಭಾಗ: ಹಳ್ಳಿಯ ಸರಕಾರಿ ಶಾಲೆಗಳು ನಮ್ಮ ಸಂಸ್ಕಾರದ ಭಾಗ. ಖಾಸಗಿ ಶಾಲೆಗಳ ಭ್ರಮೆಯಿಂದ ಇಂದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗ್ತಾ ಇದೆ. ಮಕ್ಕಳು ಕಡಿಮೆ ಆದ್ರೆ ಅಲ್ಲಿ ಶೈಕ್ಷಣಿಕ ವಾತಾವರಣ ಇರೋದಿಲ್ಲ. ಹೀಗಾದರೆ ಶಾಲೆಗಳನ್ನೇ ಮುಚ್ಚಬೇಕಷ್ಟೇ ಹಾಗಾಗಿ ಪೋಷಕರು ಜಾಗೃತರಾಗಬೇಕು ಎಂದು ಕಾಗೇರಿ ಹೇಳಿದರು.
ನಗರ ವಲಸೆ ತಪ್ಪಿಸಲು ಶಾಲೆಗಳೂ ಕಾರಣವಾಗಿರಬೇಕು. ಶಿಕ್ಷಕರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಪೂರ್ಣವಾಗಿ ಕಲಿಕಾ ಪ್ರಕ್ರಿಯೆಗೆ ಮಾತ್ರ ತೊಡಗಿಸಿಕೊಳ್ಳಲು ಸರಕಾರ ಬಯಸಿದೆ ಎಂದು ಕಾಗೇರಿ ತಿಳಿಸಿದರು.
ಚಿನ್ನದ ಚಿಗುರು: ಸಮಾರಂಭದ ಸವಿನೆನಪಿಗಾಗಿ ಹೊರತರಲಾದ ಸ್ಮರಣ ಸಂಚಿಕೆ ‘ಚಿನ್ನದ ಚಿಗುರು’ನ್ನು ಸಂಸದ ನಳಿನ್‌ಕುಮಾರ್ ಕಟೀಲು ಬಿಡುಗಡೆಗೊಳಿಸಿದರು. ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್.ಮನ್ಮಥ, ತಾ.ಪಂ.ಅಧ್ಯಕ್ಷೆ ಪುಷ್ಪಾವತಿ ಬಾಳಿಲ, ಸದಸ್ಯೆ ಣಾ ಮೋಂಟಡ್ಕ, ಜಿ.ಪಂ.ಸದಸ್ಯೆ ಭಾUರಥಿ ಮುರುಳ್ಯ ಮುಖ್ಯ ಅತಿಥಿಯಾಗಿದ್ದರು. ಕುವೆಂಪು ವಿವಿಯ ವಿಶ್ರಾಂತ ಉಪಕುಲಪತಿ ಡಾ.ಚಿದಾನಂದ ಕೊಳಂಬೆ ಪ್ರಧಾನ ಭಾಷಣ ಮಾಡಿದರು.
ಜಿ.ಪಂ. ಸದಸ್ಯ ವೆಂಕಟ್ ದಂಬೆಕೋಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಚಂದ್ರಶೇಖರ ಪೇರಾಲು, ಗ್ರಾ.ಪಂ.ಅಧ್ಯಕ್ಷೆ ದೇವಕಿ, ಸದಸ್ಯರಾದ ಹರಿಶ್ಚಂದ್ರ ಹಾಸನಡ್ಕ, ನಾರಾಯಣ ಭಂಡಾರಿ, ಸದಾಶಿವ ಮೂಕಮಲೆ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ತಿರುಮಲೇಶ್ವರ ಕುಡುಂಬಿಲ, ಕಾರ್ಯಾಧ್ಯಕ್ಷ ತಿಮ್ಮಪ ಗೌಡ ಕೊಂಡೆಬಾ ವೇದಿಕೆಯಲ್ಲಿದ್ದರು.
ಸಮಿತಿಯ ಗೌರವಾಧ್ಯಕ್ಷ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಮುಖ್ಯೋಪಾಧ್ಯಾಯ ಗಣಪತಿ ಭಟ್ ವರದಿ ವಾಚಿಸಿದರು. ಚಂದ್ರಶೇಖರ ಹಾಸನಡ್ಕ ಕಾರ್ಯಕ್ರಮ ನಿರೂಪಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-07 00:00:00
|
|
|
|
|