ದಿಲ್ಲಿ ಏರ್ಪೋರ್ಟ್ ಲ್ಲಿ ನಡುರಾತ್ರಿ ಶೂಟೌಟ್: ಇಡೀ ವಿಮಾನ ನಿಲ್ದಾಣ ಎನ್‌ಎಸ್‌ಜಿ ವಶಕ್ಕೆ |
ಪ್ರಕಟಿಸಿದ ದಿನಾಂಕ : 2008-12-05
ನವದೆಹಲಿ, ಡಿ.೫.ವಿಮಾನ ನಿಲ್ದಾಣಗಳನ್ನು ಉಗ್ರರು ಗುರಿಯಾಗಿಸಿ ಕೊಳ್ಳುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಬೆನ್ನಲ್ಲೇ ಗುರುವಾರ ತಡರಾತ್ರಿ ೧.೩೦ರ ಸುಮಾರಿಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಂಡಿನ ಸದ್ದು ಮೊಳಗಿದೆ.
ಕ್ವಾಲಿಸ್ ಕಾರಿನಲ್ಲಿ ಬಂದ ಬಂದೂಕುಧಾರಿಗಳು ಗೇಟ್ ನಂಬರ್ ನಾಲ್ಕರಲ್ಲಿ ಗುಂಡಿನ ದಾಳಿ ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಆ ಕಾರಿನಲ್ಲಿದ್ದ ೬ ಬಂದೂಕುಧಾರಿಗಳ ಮೇಲೆ ಭಾರತೀಯ ಭದ್ರತಾ ಪಡೆಗಳು ೩ ಸುತ್ತು ಗುಂಡಿನ ದಾಳಿ ನಡೆಸಿವೆ. ಆಗ ಕಾರಿನಲ್ಲಿದ್ದ ಕೆಲ ದುಷ್ಕರ್‍ಮಿಗಳು ಮೃತರಾದರು ಹಾಗೂ ಕೆಲವರು ಗಾಯಗೊಂಡರು ಎಂದು ವರದಿಯಾಗಿವೆ.
ಪೊಲೀಸರ ಸ್ಪಷ್ಟನೆ: ಏರ್‌ಪೋರ್‍ಟ್‌ನಲ್ಲಿ ಶೂಟೌಟ್ ಘಟನೆ ನಡೆದಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಆದರೆ, ಸಿಐಎಸ್‌ಎಫ್‌ನ ಡಿಐಜಿ ಉದಯನ್ ಬ್ಯಾನರ್‍ಜಿ ಅವರು ಏರ್‌ಪೋರ್‍ಟ್‌ನಲ್ಲಿ ಎರಡು ಗುಂಡಿನ ಶಬ್ದ ಕೇಳಿದ್ದು ನಿಜ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಘಟನೆಯಲ್ಲಿ, ಯಾವುದೇ ಸಾವು ನೋವು ಸಂಭವಿಸಿಲ್ಲವಾದರೂ ವಿಮಾನ ನಿಲ್ದಾಣದ ಒಳಗೆ ಬರುವ ಮತ್ತು ಹೊರಗೆ ಹೋಗುವ ವಾಹನಗಳನ್ನು ತಪಾಸಣೆ ಗೊಳಪಡಿಸಿದ್ದರಿಂದ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಯಿತು ಎಂದವರು ಹೇಳಿದ್ದಾರೆ.
ಇಡೀ ವಿಮಾನ ನಿಲ್ದಾಣವನ್ನು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಮತ್ತು ಸಿಐಎಸ್‌ಎಫ್ ಪಡೆಗಳು ವಶಕ್ಕೆ ತೆಗೆದುಕೊಂಡಿವೆ. ಏರ್‌ಪೋರ್‍ಟ್‌ಗೆ ನಾಕಾಬಂಧಿ ಹಾಕಲಾಗಿದೆ.
ಇದೇ ವೇಳೆ, ಶೂಟೌಟ್ ನಡೆದೇ ಇಲ್ಲ ಎಂದು ಸ್ಪಷ್ಟಪಡಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ, ವಿಮಾನಯಾನದಲ್ಲೂ ಯಾವುದೇ ವ್ಯತ್ಯಯವಾಗಿಲ್ಲ ಎಂದು ತಿಳಿಸಿದೆ.
ಹರಿಯಾಣದ ಕಾರು?: ಬಂದೂಕುಧಾರಿಗಳಿದ್ದರೆನ್ನಲಾದ ಕ್ವಾಲಿಸ್ ಕಾರು ಹರಿಯಾಣ ರಾಜ್ಯದ ನಂಬರ್ ಪ್ಲೇಟ್ ಹೊಂದಿತ್ತೆನ್ನಲಾಗಿದೆ. ಪೊಲೀಸರು ಆ ಕ್ವಾಲಿಸ್ ಕಾರನ್ನು ಬೆಂಬತ್ತಿದ್ದಾರೆ. ಆದರೆ, ಬಂದೂಕುಧಾರಿಗಳು ಭಯೋತ್ಪಾದಕರೆ? ಈ ಶೂಟೌಟ್ ಏಕೆ ನಡೆಯಿತು? ಎಂಬುದು ಗೊತ್ತಾಗಿಲ್ಲ. ಒಂದು ವೇಳೆ, ಶೂಟೌಟ್ ನಡೆದಿದ್ದು ನಿಜವೇ ಆಗಿದ್ದಲ್ಲಿ ನಮ್ಮ ಭದ್ರತಾ ವ್ಯವಸ್ಥೆ ಲೋಪ ಎದ್ದುಕಂಡಂತಾಗುತ್ತದೆ.
ಡಿಸೆಂಬರ್ ೬ರಂದು ಬಾಬ್ರಿ ಮಸೀದಿ ಧ್ವಂಸದ ವರ್‍ಷಾಚರಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅಷ್ಟರೊಳಗೇ ಉಗ್ರರು ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾದಂಥ ಪ್ರಮುಖ ಏರ್‌ಪೋರ್‍ಟ್‌ಗಳ ಮೇಲೆ ದಾಳಿ ನಡೆಸಬಹುದೆಂದು ಒಂದು ದಿನದ ಹಿಂದಷ್ಟೇ ಮುನ್ಸೂಚನೆ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಈ ವಿಮಾನ ನಿಲ್ದಾಣಗಳಲ್ಲಿ ಭಾರೀ ಭದ್ರತೆಯನ್ನೂ ಏರ್‍ಪಡಿಸಲಾಗಿದೆ. ಆದರೂ ದೆಹಲಿ ಶೂಟೌಟ್ ನಡೆದಿದ್ದು ಭೀತಿ ಸೃಷ್ಟಿಸಿದೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-12-05
|
|
|