ಬಿ. ಅಹಮದ್ ಹಾಜಿಯವರ ಸಾಮಾಜಿಕ ಕಾಳಜಿಗೆ ಡಾ. ಡಿ.ವೀರೇಂದ್ರ ಹೆಗ್ಗಡೆ ಶ್ಲಾಘನೆ |
ಪ್ರಕಟಿಸಿದ ದಿನಾಂಕ : 2008-12-05
ಮಂಗಳೂರು: ತುಂಬೆಯಂತಹ ಗ್ರಾಮೀಣ ಪರಿಸರದಲ್ಲಿ ಸುಸಜ್ಜಿತ ಅಸ್ಪತ್ರೆಯೊಂದನ್ನು ಅರಂಭಸಿರುವ ಬಿ. ಅಹಮ್ಮದ್ ಹಾಜಿಯವರು ಗ್ರಾಮೀನ ಸಮುದಾಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅಹಮ್ಮದ್ ಹಾಜಿಯವರು ಗ್ರಾಮೀಣ ಜನರ ಸೇವೆಯ ಮೂಲಕ ಸಾಮಾಜಿಕ ಕಾಳಜಿಯನ್ನು ಪ್ರದರ್ಶಿಸಿದ್ದಾರೆ ಎಂದು ಸಮಾರಂಭದ ಗೌರವ ಅತಿಥಿಯಾಗಿ ಭಾಗವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಶ್ಲಾಘಿಸಿದರು.

ತುಂಬೆಯಲ್ಲಿ ಗ್ರಾಮೀಣ ಜನರಿಗೆ ಅರೋಗ್ಯ ಸೇವೆ ನೀಡಲಿರುವ ಬಿ.ಎ. ಅಸ್ಪತ್ರೆ ಮತ್ತು ತರಬೇತಿ ಕೇಂದ್ರ ಒಂದು ಮಾದರಿ ಮತ್ತು ಮಹತ್ವದ ಸುಂದರ ಯೋಜನೆಯಾಗಿದೆ ಎಂದು ಅಜ್ಮಾನ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಡಾ. ಶೇಖ್ ಮಜೀದ್ ಬಿನ್ ಸಯೀದ್ ಅಲ್ ನುಐಮಿ ಶುಭ ಹಾರೈಸಿದರು.

ಕೇಂದ್ರವನ್ನು ಡ. ಶೇಖ್ ಮಜೀದ್ ಬಿನ್ ಸಯೀದ್ ಅಲ್ ನುಐಮಿ ಉದ್ಘಾಟಿಸಿದರು.
ಎಂ. ವೀರಪ್ಪ ಮೊಯಲಿ, ಜನಾರ್ದನ ಪೂಜಾರಿ ಶಾಸಕ ಯು.ಟಿ. ಖಾದರ್ ಬಿ. ರಮಾನಾಥ ರೈ ಶುಭ ಹಾರೈಸಿದರು.
ಡಾ. ಸಿ. ಅರ್. ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ತುಂಬೆ: ಬಿ.ಎ. ಆಸ್ಪತ್ರೆ, ತರಬೇತಿ ಕೇಂದ್ರ ಆರಂಭ.
(ವರದಿ ವಿವರ)
ಮಂಗಳೂರು, ಡಿ. ೪: ತುಂಬೆಯಂತಹ ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತವಾದ ಬಿ.ಎ. ಆಸ್ಪತ್ರೆ ಆರಂಭಗೊಂಡಿರುವುದು ಸಮುದಾಯ ಸೇವೆಯಲ್ಲಿ ಮಹತ್ತರ ಕೊಡುಗೆಯಾಗಿದೆ ಎಂದು ಅರಬ್ ಸಂಯುಕ್ತ ಸಂಸ್ಥಾನದ ವರಿಷ್ಠ ಮಂಡಳಿ ಸದಸ್ಯ ಹಾಗೂ ಅಜ್ಮಾನ್ ಪ್ರಾಂತ್ಯದ ದೊರೆ ಡಾ| ಶೇಖ್ ಮಜೀದ್ ಬಿನ್ ಸಯೀದ್ ಅಲ್ ನೂಯಾಮಿ ಅವರು ಹೇಳಿದರು.
ತುಂಬೆಯಲ್ಲಿ ಮೊಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಆಶ್ರಯದಲ್ಲಿ ಸ್ಥಾಪಿಸಲಾಗಿರುವ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯಗಳಿಂದೊಡ ಗೂಡಿದ ಬಿ.ಎ. ಆಸ್ಪತ್ರೆ ಹಾಗೂ ತರಬೇತಿ ಕೇಂದ್ರವನ್ನು ಅವರಿಂದು ಉದ್ಘಾಟಿಸಿದರು.

ಬಿ.ಎ. ಅಹಮ್ಮದ್ ಹಾಜಿ ಮೊಹಿಯುದ್ದೀನ್ ಅವರು ಗ್ರಾಮ ಪ್ರದೇಶದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸುವ ಮೂಲಕ ಉದಾತ್ತವಾದ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿ ಅವರನ್ನು ಅಭಿನಂದಿಸಿದರು.
ಸಾಮಾಜಿಕ ನೆಮ್ಮದಿಯಿಂದ ಶಾಂತಿ: ವೀರಪ್ಪ ಮೊಯಿಲಿ ಸಾಮಾಜಿಕ ನೆಮ್ಮದಿ ಇದ್ದಾಗ ಶಾಂತಿ ನೆಲೆಸುತ್ತದೆ. ಆರೋಗ್ಯ ಸೇವೆ, ಶಿಕ್ಷಣ ಸಂಸ್ಥೆ ಮುಂತಾದುವುಗಳು ಇವುಗಳಿಗೆ ಪೂರಕವಾಗಿರುತ್ತವೆ ಎಂದು ಮುಖ್ಯ ಅತಿಥಿಯಾಗಿದ್ದ ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಲಿ ಅವರು ಹೇಳಿದರು. ಇದೊಂದು ವಿಶೇಷ, ಅಮೃತಗಳಿಗೆ. ಬಿ. ಅಹಮ್ಮದ್ ಹಾಜಿ ಮೊಹಿಯುದ್ದೀನ್ ಅವರು ಪೇಟೆ, ಪಟ್ಟಣವನ್ನು ಆಯ್ಕೆ ಮಾಡದೆ ಹಳ್ಳಿ ಪ್ರದೇಶವನ್ನು ಆಯ್ಕೆ ಮಾಡಿ ಸಕಲ ಸವಲತ್ತುಗಳುಳ್ಳ ಆಸ್ಪತ್ರೆಯನ್ನು ನಿರ್ಮಾಣ ಮಾಡಿರುವುದು ಅವರ ಸಾಮಾಜಿಕ ಕಳಕಳಿಗೆ ಒಂದು ನಿದರ್ಶನವಾಗಿದೆ ಎಂದು ಹೇಳಿದರು.
ಡಾ| ಹೆಗ್ಗಡೆಯವರಿಗೆ ಭಾರತ ರತ್ನ: ಪೂಜಾರಿ ಆಶಯ ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಬಿ. ಜನಾರ್ದನ ಪೂಜಾರಿ ಅವರು ಮಣಿಪಾಲದಂತಹ ಗ್ರಾಮೀಣ ಪ್ರದೇಶವನ್ನು ಕೇಂದ್ರವಾಗಿಟ್ಟುಕೊಂಡು ಡಾ| ಟಿ.ಎಂ.ಎ. ಪೈ ಅವರು ಮಾಡಿದ ಕ್ರಾಂತಿ, ಸುಳ್ಯದಲ್ಲಿ ಕುರುಂಜಿ ವೆಂಕಟ್ರಮಣ ಗೌಡರು ಮಾಡುತ್ತಿರುವ ಸಾಧನೆಯ ಹಾದಿಯಲ್ಲಿ ಬಿ. ಅಹಮ್ಮದ್ ಹಾಜಿ ಮೊಹಿಯುದ್ದೀನ್ ಸಾಗುತ್ತಿದ್ದಾರೆ ಎಂದು ಹೇಳಿದರು.
ಲಕ್ಷಾಂತರ ಮಂದಿಗೆ ಆರೋಗ್ಯ ಸೇವೆಯು ಸೇರಿದಂತೆ ಸರ್ವ ಜನರ ಹಿತವನ್ನು ಗುರಿಯಾಗಿಟ್ಟುಕೊಂಡು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಅಪೂರ್ವ ಸಾಧನೆಗಳನ್ನು ಮಾಡುತ್ತಿದ್ದಾರೆ ಎಂದು ಬಣ್ಣಿಸಿದ ಪೂಜಾರಿ ಅವರು ಡಾ| ಹೆಗ್ಗಡೆ ಅವರಿಗೆ ಭಾರತ ರತ್ನ ಪುರಸ್ಕಾರ ಲಭಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಭಯೋತ್ಪಾದನೆ ಮನುಷ್ಯ ಕುಲಕ್ಕೆ ಮಾರಕ. ಇವರು ಮನುಷ್ಯರನ್ನು ಮಾತ್ರವಲ್ಲ ಮಾನವೀಯತೆಯನ್ನೇ ನಾಶ ಮಾಡುತ್ತಿದ್ದಾರೆ. ಇದರ ವಿರುದ್ಧ ಇಡೀ ವಿಶ್ವವೇ ಒಂದಾಗಿ ನಿಂತು ಹೋರಾಡಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಶಾಸಕ, ಮಾಜಿ ಸಚಿವ ಬಿ. ರಮಾನಾಥ ರೈ, ಶಾಸಕ ಯು. ಟಿ. ಖಾದರ್, ಅಜ್ಮಾನ್ ಪ್ರಾಂತ್ಯದ ಅಬ್ದುಲ್ ಅಜೀಜ್ ಅವರು ಬಿ. ಅಹಮ್ಮದ್ ಹಾಜಿ ಅವರನ್ನು ಅಭಿನಂದಿಸಿ, ಶುಭ ಹಾರೈಸಿದರು.
ಸಂತಸದ ದಿನ : ಅಹಮ್ಮದ್ ಹಾಜಿ ಮೊಹಿಯುದ್ದೀನ್
ಇದೊಂದು ನನ್ನ ಪಾಲಿಗೆ ಅತ್ಯಂತ ಸಂತಸದ ದಿನ ಎಂದು ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ರೂವಾರಿ, ತುಂಬೆ ಎಜುಕೇಶನಲ್ ಟ್ರಸ್ಟಿನ ಅಧ್ಯಕ್ಷ ಬಿ. ಅಹಮ್ಮದ್ ಹಾಜಿ ಮೊಹಿಯುದ್ದೀನ್ ಬಣ್ಣಿಸಿದರು. ತುಂಬೆ ಮಾತ್ರವಲ್ಲ ಇಡೀ ಬಂಟ್ವಾಳ ತಾಲೂಕಿನ ಜನತೆಗೆ ಈ ಆಸ್ಪತ್ರೆಯ ಸೇವೆ ಲಭ್ಯವಾಗಬೇಕು ಎಂಬುದು ನನ್ನ ಆಶಯವಾಗಿದೆ. ಆಸ್ಪತ್ರೆಯನ್ನು ಪ್ರಾರಂಭಿಸಿದ್ದೇನೆ. ಇದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕಾರ್‍ಯ ಟ್ರಸ್ಟಿಗಳದ್ದಾಗಿದೆ ಎಂದು ಹೇಳಿದರು.
ಬಿ. ಅಹಮ್ಮದ್ ಹಾಜಿ ಮೊಹಿಯುದ್ದೀನ್ ಅವರನ್ನು ಅವರ ಕುಟುಂಬದ ಸದಸ್ಯರೆಲ್ಲರೂ ಒಟ್ಟು ಸೇರಿ ಅಭಿನಂದಿಸಿ, ಗೌರವ ಅರ್ಪಿಸಿದರು. ತುಂಬೆ ಶಿಕ್ಷಣ ಸಂಸ್ಥೆಯ ರಕ್ಷಕ - ಶಿಕ್ಷಕ ಸಂಘದ ಪರವಾಗಿಯೂ ಅಹಮ್ಮದ್ ಹಾಜಿ ಅವರನ್ನು ಅಭಿನಂದಿಸಲಾಯಿತು.
ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷ ವೈ. ಮಹಮ್ಮದ್ ಕುಂಞಿ, ಯೆನಪೋಯ ವಿಶ್ವವಿದ್ಯಾನಿಲಯದ ಕುಲಪತಿ ವೈ. ಅಬ್ದುಲ್ ಕುಂಞಿ, ಮೊಹಿಯುದ್ದೀನ್ ಎಜುಕೇಶನಲ್ ಟ್ರಸ್ಟಿನ ಟ್ರಸ್ಟಿಗಳಾದ ಶ್ರೀಮತಿ ಬೀಫಾತಿಮ ಅಹಮ್ಮದ್ ಹಾಜಿ, ಕೆ. ಇ. ಫೈಜಲ್, ತುಂಬೆ ಮೊದೀನ್, ಬಿ. ಅಬ್ದುಲ್ ಸಲಾಂ, ಬಿ. ಮೊಹಮ್ಮದ್ ಅಶ್ರಫ್, ಶ್ರೀಮತಿ ಮರಿಯಮ್ಮ ಶಬನಾ ಫೈಜಲ್, ಅಕ್ಬರ್ ಮೊಹಿಯುದ್ದೀನ್, ಅಕ್ರಂ ಮೊಹಿಯುದ್ದೀನ್, ಶ್ರೀಮತಿ ನಾಜಿಯಾ ಫಾತಿಮಾ ಸಲಾಂ, ಜೋಹೆಬ್ ಸಲಾಂ ಅವರು ಉಪಸ್ಥಿತರಿದ್ದರು.
ಡಾ| ಸಿ.ಆರ್. ಕಾಮತ್ ಪ್ರಸ್ತಾವನೆಗೈದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಎಸ್. ಆರ್. ಶೆಟ್ಟಿ ವಂದಿಸಿದರು. ಮೆಲಿಟಾ ಕಾರ್ಯಕ್ರಮ ನಿರ್ವಹಿಸಿದರು.
ಆರೋಗ್ಯ ಸೇವೆ: ಡಾ| ಹೆಗ್ಗಡೆ
ಗೌರವ ಅತಿಥಿಯಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ಜನರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕಾಗಿರುವುದು ಅತ್ಯವಶ್ಯ. ತುಂಬೆಯಂತಹ ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತವಾದ ಬಿ.ಎ. ಆಸ್ಪತ್ರೆ ಆರಂಭಗೊಂಡಿರುವುದು ಈ ನಿಟ್ಟಿನಲ್ಲಿ ಮಹತ್ತರ ಕೊಡುಗೆ ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜಾರಿಯಲ್ಲಿರುವ ಸಂಪೂರ್ಣ ಸುರಕ್ಷಾ ವಿಮೆಯಡಿಯಲ್ಲಿ ೯.೩೨ ಲಕ್ಷ ಮಂದಿಯನ್ನು ಆರೋಗ್ಯ ವಿಮೆಗೆ ಒಳಪಡಿಸಲಾಗಿದ್ದು, ೯.೬೫ ಕೋ.ರೂ. ವಿತರಿಸಲಾಗಿದೆ. ೫ ಜಿಲ್ಲೆಗಳ ೨೩೦ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಯೋಜನೆಗೆ ಈ ವರ್ಷ ಅಂತಾರಾಷ್ಟ್ರೀಯ ಪುರಸ್ಕಾರ ಲಭಿಸಿದೆ ಎಂದು ವಿವರಿಸಿದ ಅವರು ಸಾಮಾನ್ಯ ಜನರ ಆರೋಗ್ಯ ಸಂರಕ್ಷಣೆಗೆ ಇಂತಹ ಆರೋಗ್ಯ ವಿಮೆಗಳು ಅತ್ಯಗತ್ಯವಾಗಿವೆ. ಎಲ್ಲರನ್ನೂ ಆರೋಗ್ಯ ವಿಮೆಯಲ್ಲಿ ತರುವ ಕಾರ್ಯದ ಬಗ್ಗೆ ಸರಕಾರ ಚಿಂತಿಸಬೇಕು ಎಂದು ಹೇಳಿದರು.
ಬಿ. ಅಹಮ್ಮದ್ ಹಾಜಿ ಮೊಹಿಯುದ್ದೀನ್ ಅವರು ಓರ್ವ ಭಿನ್ನ ವ್ಯಕ್ತಿತ್ವದ ಮಹನೀಯರು. ಸಮಾಜಮುಖಿ ಚಿಂತನೆ, ಬಡವರ ಬಗ್ಗೆ ಕಾಳಜಿ ಅವರಲ್ಲಿದೆ ಎಂದು ಡಾ| ಹೆಗ್ಗಡೆ ಅವರು ಬಣ್ಣಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಗ.ಕ.ಕರಾವಳಿ ವರದಿಗಾರರು
ಪ್ರಕಟಿಸಿದ ದಿನಾಂಕ : 2008-12-05
|
|
|