ಅಗಲಿದ ಸ್ವರ ಸಾಮ್ರಾಟನಿಗೆ ನಮನ: ನೆನಪಿನ೦ಗಳದಲ್ಲಿ ಸಿ.ಅಶ್ವಥ್ |
ಪ್ರಕಟಿಸಿದ ದಿನಾಂಕ : 2009-12-31
(ಚಿತ್ರ ವರದಿ-ಕಮಲಾಕ್ಷ ಅಮೀನ್)
`ದೀಪವು ನಿನ್ನದೇ ಗಾಳಿಯು ನಿನ್ನದೆ ಆರದಿರಲಿ ಬೆಳಕೂ ಕಡಲೂ ನಿನ್ನದೆ ಹಡಗೂ ನಿನ್ನದೆ ಮುಳುಗದಿರಲಿ ಬದುಕು' ಎಷ್ಟೊ೦ದು ಅರ್ಥಗರ್ಬಿತವಾದ ಹಾಡಿನ ಸಾಲುಗಳು. ಕೊನೆಗೂ ಕಾಲನ ಕರೆಗೆ ಓಗೊಟ್ಟು ಆ ಬೆಳಕು ಆರಿದೆ, ಬದುಕೆ೦ಬ ಹಡಗು ಮುಳುಗಿದೆ.
ಹೌದು ಓದುಗರೇ ಸುಗಮ ಸ೦ಗೀತ ಕ್ಷೇತ್ರದ ಅನಭಿಷಕ್ತ ದೊರೆ, ಸ್ವರ ಸಾಮ್ರಾಟ ಸಿ.ಅಶ್ವಥ್ ಅಸ್ತ೦ಗತರಾಗಿದ್ದಾರೆ. ನಾನು ಲೇಖನ ಪ್ರಾರ೦ಭಿಸಿದಾಗ ಬರೆದ ಹಾಡಿನ ಸಾಲುಗಳು ಸಿ. ಅಶ್ವಥ್‌ರವರು ರಾಗ ಸ೦ಯೋಜಿಸಿರುವ ಅವರ ಅತ್ಯ೦ತ ಪ್ರಿಯವಾದ ಹಾಡು. ಅವರ ಸ೦ಗೀತ ಕಾರ್ಯಕ್ರಮಗಳಲ್ಲಿ ಈ ಹಾಡನ್ನು ಕಾರ್ಯಕ್ರಮದ ಕೊನೆಯ ಹಾಡಾಗಿ ತಮ್ಮ ಸಹ ಗಾಯಕಿಯ ರಿ೦ದ ಅವರು ಹಾಡಿಸುತ್ತಿದ್ದರು. ಅವರ ಸ೦ಗೀತ ಕಾರ್ಯಕ್ರಮಗಳಲ್ಲಿ ಅವರೊ೦ದಿಗೆ ಸಹಗಾಯ ಕಿಯರಾಗಿ ಪಾಲ್ಗೊಳ್ಳುತಿದ್ದ ಸುಪ್ರಿಯಾ ಆಚಾರ್, ಸುನಿತಾ ಇವರೆಲ್ಲ ಈ ಹಾಡನ್ನು ಹಾಡುತ್ತಿದ್ದರೆ ಸಿ. ಅಶ್ವಥ್‌ರವರ ಕಣ್ಣಿನಿ೦ದ ನೀರು ಬರುತ್ತಿತ್ತು.
ಅದ್ಯಾಕೋ `ದೀಪವು ನಿನ್ನದೆ ಹಾಡು ಅವರಿಗೆ ಅಷ್ಟೊ೦ದು ಅಪ್ಯಾಯಮಾನವಾಗಿತ್ತು. ತಮ್ಮದೇ ಸ್ವರ ಸ೦ಯೋಜನೆಯ ಹಾಡನ್ನು ಇಷ್ಟೊ೦ದು ಸುಮಧುರವಾಗಿ ಹಾಡುವುದನ್ನು ಕೇಳಿ ಅವರು ಬಹಳ ಖುಷಿಪಡುತ್ತಿದ್ದರು. ತಾವು ಒ೦ದು ದಿನ ಆ ಹಾಡನ್ನು ಹಾಡಬೇಕೆ೦ದು ತಮ್ಮ ಇಚ್ಚೆಯನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಆ ಆಸೆ ಆಸೆಯಾಗಿಯೇ ಉಳಿದಿದೆ. ಆ ಹಾಡನ್ನು ಅವರು ತಮ್ಮ ಸಾವಿರಾರು ಸ೦ಗೀತ ಕಾರ್ಯಕ್ರಮಗಳಲ್ಲಿ ಹಾಡಿಸಿದ್ದರೂ, ಬಲವಾಗಿ ಬೀಸಿದ ಕಾಲನ ಆ ಗಾಳಿ ಯು ಸ೦ಗೀತ ಕ್ಷೇತ್ರದಲ್ಲಿ ಪ್ರಖರವಾಗಿ ಬೆಳಗುತ್ತಿದ್ದ ಸಿ.ಅಶ್ವಥ್ ಎ೦ಬ ದೀಪವನ್ನು ಶಾಶ್ವತವಾಗಿ ಆರಿಸಿದೆ.

ಸಿ.ಅಶ್ವಥ್‌ರವರ ಬಗ್ಗೆ ಬರೆಯುವಾಗ ನನ್ನ ನೆನಪುಗಳು ಮೂರು ವರುಷಗಳಷ್ಟು ಹಿ೦ದಕ್ಕೆ ಓಡು ತ್ತದೆ. ನಮ್ಮ ಆತ್ಮೀಯ ಮಿತ್ರರೂ, ಕಲಾಪೋಷಕರೂ ಆಗಿರುವ ಶ್ರೀ ಜಿನ್‌ರಾಜ್ ಶೆಟ್ಟಿಯವರ ನೇತ್ರತ್ವದಲ್ಲಿ ನಾನು ಹಾಗೂ ನನ್ನ ಮಿತ್ರರಾದ ಶ೦ಕರ್ ಜತ್ತನ್, ಭರತ್ ಶೆಟ್ಟಿ, ಅರುಣ್ ಕುಮಾರ್ ಐರೋಡಿಯವರು 2006ರ ಜೂನ್ ತಿ೦ಗಳಲ್ಲಿ ಸ್ಥಳೀಯ ಪ್ಯಾಲೇಸ್ ಹೊಟೇಲಿನಲ್ಲಿ `ಭಾವ ಸ೦ಗಮ' ಎ೦ಬ ಸಿ. ಅಶ್ವಥ್‌ರವರ ಸ೦ಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದೆವು.
ಸಿ.ಅಶ್ವಥ್‌ರವರು ಗಾಯಕಿ ಸುಪ್ರಿಯಾ ಆಚಾರ್ ಹಾಗೂ ವಾದ್ಯ ವ್ರ೦ದದೊ೦ದಿಗೆ ಈ ಕಾರ್ಯ ಕ್ರಮದಲ್ಲಿ ಪಾಲ್ಗೊ೦ಡು ಕಾರ್ಯಕ್ರಮ ನೀಡುವುದಾಗಿ ನಾವೆಲ್ಲ ನಿರ್ಧರಿಸಿದ್ದೆವು. ಸಿ.ಅಶ್ವತ್‌ರವರು ಬರುವುದು ಎ೦ದಾಗ ನಮಗೆಲ್ಲರಿಗೂ ಏನೋ ಒ೦ದು ರೀತಿಯ ಸ೦ತೋಷದ ಜೊತೆಗೆ ಭಯ, ತಳಮಳ. ಅವರ ಬಗ್ಗೆ ನಮಗೆಲ್ಲರಿಗೂ ಯಾರೋ ಒ೦ದು ಸುದ್ದಿ ಮುಟ್ಟಿಸಿದ್ದರು. ಸಿ.ಅಶ್ವಥ್‌ರವರು ಬಹಳ ಮು೦ಗೋಪಿ, ಅವರಿಗೆ ಸಣ್ಣ ಸಣ್ಣ ವಿಷಯಗಳಲ್ಲಿ ಸಿಟ್ಟು ಬರುತ್ತದೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹಾಗೆ ಹೀಗೆ ಎ೦ಬುದಾಗಿ. ಕೊನೆಗೂ ಅವರು ತಮ್ಮ ತ೦ಡದೊ೦ದಿಗೆ ಬಹರೈನ್ ದ್ವೀಪಕ್ಕೆ ಬ೦ದಿಳಿದರು.

ಅವರನ್ನು ನಾವು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಅವರು ತ೦ಗಲಿದ್ದ ಹೊಟೇಲ್ ಕೊಠಡಿಗೆ ಕರೆದುಕೊ೦ಡು ಬ೦ದೆವು. ನಮ್ಮ ಸ೦ಘಟಕರಲ್ಲೊಬ್ಬರಾದ ಶ೦ಕರ್ ಜತ್ತನ್‌ರದ್ದು ಒ೦ದು ತರಹ ದ ನೇರ ಸ್ವಭಾವ. ಅವರಿಗೆ ಯಾವುದ್ದನ್ನೂ ಮನಸ್ಸಿನಲ್ಲಿಯೇ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅವರು ನೇರವಾಗಿ ಸಿ.ಅಶ್ವಥ್‌ರವರಲ್ಲಿ ಈ ಪ್ರಶ್ನೆಯನ್ನು ಕೇಳಿಯೇ ಬಿಟ್ಟರು. `ಸ್ವಾಮಿ ನಾವು ನಿಮ್ಮ ಬಗ್ಗೆ ಬಹಳ ಕೇಳಿದ್ದೇವೆ, ನಿಮಗೆ ಸಿಟ್ಟು ಜಾಸ್ತಿಯ೦ತೆ, ನೀವು ಬೇಡಿಇಕೆಗಳನ್ನು ಇಡ್ತೀರಿ ಅ೦ತೆ ಹಾಗ೦ ತೆ ಹೀಗ೦ತೆ. ನಮಗೆಲ್ಲಾ ಭಯ ಸಿ.ಅಶ್ವಥ್‌ರವರು ಏನು ಉತ್ತರ ನೀಡುತ್ತಾರೋ ಎ೦ದು. ಆದಕ್ಕೆ ಅವರು ಮಗುವಿನ೦ತೆ ನಕ್ಕು ಇದೆಲ್ಲ ಜನರು ಹುಟ್ಟು ಹಾಕುವ ಕಟ್ತು ಕಥೆಗಳು ಎ೦ದರು. ಆ ನಿಷ್ಕಲ್ಮಷ ನಗುವಿನಲ್ಲೇ ನಮ್ಮನ್ನು ಅಷ್ಟು ದಿನಗಳು ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಭಯ ವ೦ತೂ ಅವರು ನಕ್ಕಾಗಲೇ ದೂರವಾಗಿತ್ತು.
ನ೦ತರ ನಾವು ಆವ್ರೊ೦ದಿಗೆ ಕಳೆದ 2-3 ದಿನಗಳು ಸ್ಮರಣೀಯವಾಗಿತ್ತು. ಅವರು ನೀಡಿದ ಕಾರ್ಯಕ್ರಮವ೦ತೂ ಅದ್ಬುತವಾಗಿತ್ತು. ವೇದಿಕೆಯ ಮೇಲೆ ಕೂತು ಹಾಡಲು ಪ್ರಾರ೦ಭಿಸಿದರೆ ಬೇರೊ೦ದು ಲೋಕದಲ್ಲಿ ಮೈಮರೆಯುತ್ತಿದ್ದರು. ಅವರಲ್ಲಿ ಅದ್ಯಾವುದೋ ಶಕ್ತಿ ಸ೦ಚಾರವಾದ೦ತೆ ನಿರಾಯಾಸವಾಗಿ ಆ ವಯಸ್ಸಿನಲ್ಲಿಯೂ 2-3 ಗ೦ಟೆಗಳ ಕಾಲ ಹಾಡುವ ಪರಿ ಅಚ್ಚರಿ ಮೂಡಿಸು ತ್ತಿತ್ತು. ಅವರ ಕ೦ಠದಲ್ಲಿ ಅದೇನೋ ಎಲ್ಲರನ್ನೂ ಸೆಳೆಯುವ೦ತಹ ಮಾ೦ತ್ರಿಕತೆಯಿತ್ತು. ಅವರೊ ೦ದಿಗೆ ಕಳೆದ ಆದಿನಗಳು ಯಾವುತ್ತೂ ಮರೆಯುವ೦ತಿಲ್ಲ.

ಕಾರ್ಯಕ್ರಮದ ಮರುದಿನ ಏರ್ಪಡಿಸಿದ್ದ ಸ೦ತೋಷಕೂಟದಲ್ಲೂ ಹಾಡಿ ನಲಿದರು. ಎಲ್ಲರೊ೦ದಿಗೆ ಮಗುವಿನ೦ತೆ ಬೆರೆತು ತಮಾಷೆಯಾಗಿ ಕಾಲ ಕಳೆದರು. ತಮ್ಮ ವಾದ್ಯ ವ್ರ೦ದದ ಸುಪ್ರಿಯಾ ಆಚಾರ್, ರಾಜೇಶ್ ಉಡುಪ, ಸುದರ್ಶನ್, ರಾಜ್‌ಗೋಪಾಲ್, ಜೇಮ್ಸ್ ಎಲ್ಲದೊ೦ದಿಗೂ ಹರಟಿ ದರು. ಯಾವತ್ತೂ ತಾನೊಬ್ಬ ಮೇರು ಕಲಾವಿದ ಎ೦ಬುದನ್ನು ಎಲ್ಲಿಯೂ ತೋರ್ಪಡಿಸಿಕೊಳ್ಳ ಲಿಲ್ಲ.
ಹೌದು ಓದುಗರೇ ಅವರೊಬ್ಬ ಮೇರು ಕಲಾವಿದ. ಒ೦ದು ಕಾಲದಲ್ಲಿ ಕನ್ನಡ ಚಲನಚಿತ್ರರ೦ಗದಲ್ಲಿ ಪರಭಾಷಾ ಸ೦ಗೀತ ನಿರ್ದೇಶಕರೇ ವಿಜ್ರ೦ಭಿಸುತ್ತಿದ್ದಾಗ, ತನ್ನ ಜಾನಪದ ಶೈಲಿಯ ಸ೦ಗೀತ ನಿರ್ದೇಶನದಿ೦ದ ಕನ್ನಡ ಚಲನಚಿತ್ರ ರಸಿಕರ ಮನಗೆದ್ದವರು ಸಿ.ಅಶ್ವಥ್. ನಾಟಕ ರ೦ಗ, ಸುಗಮ ಸ೦ಗೀತ, ಚಲನಚಿತ್ರರ೦ಗ ಈ ಮೂರು ಕಲಾ ಮಜಲುಗಳಲ್ಲಿ ತನ್ನ ವಿಶಿಷ್ಟ ಛಾಪನ್ನು ಒತ್ತಿದ ಇವರು ಸುಗಮ ಸ೦ಗೀತಕ್ಕೆ ಸ್ಟಾರ್ ವ್ಯಾಲ್ಯೂ ನೀಡಿದವರು.
ಇವರ ಜನಪ್ರೀಯತೆಗೆ ಒ೦ದು ಉತ್ತಮ ಉದಾಹರಣೆ ಇವರು ನಡೆಸಿಕೊಟ್ಟ `ಕನ್ನಡವೇ ಸತ್ಯ' ಸ೦ಗೀತ ಕಾರ್ಯಕ್ರಮ ಕನ್ನಡದ ಅಮ್ರತವಾಹಿನಿಯನ್ನು ಹ್ರದಯದಿ೦ದ ಹ್ರದಯಕ್ಕೆ ಹರಿಸಿ ಬೆ೦ಗಳೂರು ಅರಮನೆ ಮೈದಾನಕ್ಕೆ ಲಕ್ಷ ಲಕ್ಷ ಜನರನ್ನು ಸೆಳೆದದ್ದು. ಬಹುಶಃ ಇಷ್ಟೊ೦ದು ಜನ ಬಾಲಿವುಡ್‌ನ ಪ್ರಸಿದ್ದ ನಟರುಗಳು ಕಾರ್ಯಕ್ರಮ ನೀಡಿದ್ದಾಗಲೂ ನೆರೆದಿರಲಿಲ್ಲ.

ಹುಟ್ಟು ಅನಿವಾರ್ಯ ಆದರೆ ಸಾವು ನಿಶ್ಚಿತವ೦ತೆ. ಆದರೆ ಹುಟ್ಟಿನ೦ದೇ ಸಾಯುವುದು ಬಹುಶಃ ದೈವೇಚ್ಚೆಯಾಗಿರಬೇಕು. ಹುಟ್ಟಿದ್ದು ಡಿಸೆ೦ಬರ್ 29, ಚಿರನಿದ್ರೆಗೆ ಜಾರಿದ್ದು ಡಿಸೆ೦ಬರ್ 29. ಈ ಹುಟ್ಟು ಸಾವುಗಳ ಮಧ್ಯೆ 70 ಸ೦ವತ್ಸರಗಳ ಸಾರ್ಥಕ ಜೀವನ. ಇವರ ಹುಟ್ಟು ಹಬ್ಬವನ್ನು ರವೀ೦ದ್ರ ಕಲಾ ಕ್ಷೇತ್ರದಲ್ಲಿ ಅರ್ತಪೂರ್ಣವಾಗಿ ಆಚರಿಸಬೇಕೆ೦ಬ ಇವರ ಹಿತೈಷಿಗಳ, ಅಭಿಮಾನಿ ಗಳ, ಮಿತ್ರರ ಕನಸು ಕನಸಾಗಿಯೇ ಉಳಿಯಿತು.
ಇವರ ಸ೦ಗೀತ ಕಾರ್ಯಕ್ರಮದೊ೦ದಿಗೆ ಇವರನ್ನು ರಾಜರ್ಷಿ ಡಾ| ವಿರೇ೦ದ್ರ ಹೆಗ್ಡೆ, ಸುತ್ತೂರು ಸ್ವಾಮಿಗಳಿ೦ದ ಸನ್ಮಾನಿಸಬೇಕೆ೦ಬ ಎಲ್ಲರ ಆಸೆ ಆಸೆಯಾಗಿಯೇ ಉಳಿಯಿತು. ಬಹುಶಃ ಮೇಲೆ ಈ ಮಹಾನ್ ಸಾಧಕನಿಗೆ ಎಲ್ಲ ಸನ್ಮಾನ, ಗೌರವಗಳಿಗಿ೦ತ ಶ್ರೇಷ್ಠವಾದ ಗೌರವೊ೦ದು ಕಾಯು ತ್ತಿದೆಯೋ ಏನೋ?
ಏನೇ ಹೇಳಿ ಅಶ್ವಥ್‌ರವರಿಗೆ ಅಶ್ವಥ್‌ರವರೇ ಸಾಟಿ. ಕನ್ನಡ ನಾಡು, ನುಡಿ, ಭಾಷೆಗಳನ್ನು ತನ್ನ ಸ೦ಗೀತದಿ೦ದ, ಕ೦ಠಧಾರೆಯಿ೦ದ ಶ್ರೀಮ೦ತಗೊಳಿಸಿದ ಈ ಗಾರುಡಿ ಕನ್ನಡದ ಕುಡಿಯಾಗಿ ಗ೦ಧದ ಗುಡಿಯ ಮಣ್ಣಿನಲ್ಲಿ ಮತ್ತೇ ಹುಟ್ಟಿ ಬರಲಿ ಎ೦ದು ಹಾರೈಸುತ್ತಾ, ಭಾವ ಸ೦ಗಮ ಕಾರ್ಯಕ್ರಮದ ಸ೦ಘಟಕರು ಹಾಗೂ ಬಹರೈನಿನ ಸಮಸ್ತ ಕನ್ನಡಿಗರ ಪರವಾಗಿ ಆ ಸ್ವರ ಸಾಮ್ರಾಟನಿಗೆ ನನ್ನ ನಮನ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-12-31 00:00:00
|
|
|