ಸಾಹಸಸಿಂಹ, ನಟ ಭಾರ್ಗವ ಡಾ. ವಿಷ್ಣುವರ್ಧನ್ ಪಂಚಭೂತಗಳಲ್ಲಿ ಲೀನ... |
ಪ್ರಕಟಿಸಿದ ದಿನಾಂಕ : 2009-12-31
ನಟ ಡಾ. ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ಸಂಜೆ ನೆರವೇರಿತು.
ಬೆಂಗಳೂರು (ಐಎಎನ್ಎಸ್): ಹೃದಯಾಘಾತದಿಂದ ನಿಧನರಾದ ನಟ ಡಾ. ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆಇಲ್ಲಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ನೆರವೇರಿತು.
ಮೈಸೂರಿನಲ್ಲಿ ನಿಧನರಾದ ವಿಷ್ಣು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲಿನ ಅವರ ನಿವಾಸಕ್ಕೆ ಬುಧವಾರ ಬೆಳಿಗ್ಗೆಯೆ ತರಲಾಯಿತು. ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸುಮಾರು 60 ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.
ನಂತರ ನ್ಯಾಷನಲ್ ಕಾಲೇಜು ಮೈದಾನದಿಂದ ಹೊರಟ ಅವರ ಅಂತಿಮಯಾತ್ರೆ ಹನುಮಂತನಗರ, ಬನಶಂಕರಿ, ಪದ್ಮನಾಭನಗರ, ಚನ್ನಸಂದ್ರದ ಮೂಲಕ ಉತ್ತರಹಳ್ಳಿಯಲ್ಲಿನ ಅಭಿಮಾನ್ ಸ್ಟುಡಿಯೋಕ್ಕೆ ತರಲಾಯಿತು. ಅಲ್ಲಿಯೇ ಅವರ ಚಿತೆಗೆ ಹಿರಿಯ ಸಹೋದರ ರವಿ ಅಗ್ನಿಸ್ಪರ್ಶ ಮಾಡಿದರು. ಬೆಂಗಳೂರಿನಲ್ಲಿ ಕಲ್ಲುತೂರಾಟ, ನಾಲ್ವರಿಗೆ ಗಾಯ ಡಾ. ವಿಷ್ಣುವರ್ಧನ್ ಅವರು ವಿಧಿವಶರಾದ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನ ಕೆಲವೆಡೆ ಹಿಂಸಾಚಾರ ನಡೆದಿದ್ದು, ಪೊಲೀಸರು ಲಾಠಿಪ್ರಹಾರ ಹಾಗೂ ಅಶ್ರುವಾಯು ಸಿಡಿಸಿದ್ದಾರೆ.
ಬೆಂಗಳೂರು (ಪಿಟಿಐ, ಐಎಎನ್ಎಸ್): ಡಾ. ವಿಷ್ಣುವರ್ಧನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಹರಡುತ್ತಿದ್ದಂತೆ ಬೆಂಗಳೂರು ನಗರದಲ್ಲಿ ನೀರವ ಮೌನ ನೆಲೆಸಿತು. ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಆದಾಗ್ಯೂ ನಗರದ ಕೆಲವೆಡೆ ಉದ್ರಿಕ್ತ ಗುಂಪುಗಳು ಕಲ್ಲುತೂರಾಟ ನಡೆಸಿವೆ.
ಪಾರ್ಥಿವ ಶರೀರವನ್ನಿರಿಸಿದ್ದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದ ಹೊರಗೆ ಜನಜಂಗುಳಿ ವಿಪರೀತವಾಗಿ ಗುಂಪನ್ನು ಚದುರಿಸಲು ಪೊಲೀಸರು ರಬ್ಬರ್ ಬುಲೆಟ್ ಗಳನ್ನು ಸಿಡಿಸಿದರು. ಇದರಿಂದ ನಾಲ್ವರು ಗಾಯಗೊಂಡಿದ್ದಾರೆ.
ಜಯನಗರ, ಬಸವನಗುಡಿ, ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆಗಳಲ್ಲಿ ಉದ್ರಿಕ್ತ ಅಭಿಮಾನಿಗಳು ಕಲ್ಲುತೂರಾಟ ನಡೆಸಿದ ಪರಿಣಾಮ ಹಲವು ವಾಹನಗಳಿಗೆ ಹಾನಿಯಾಗಿದೆ.
ತುಂಬಲಾಗದ ಶೂನ್ಯ: ಚಿತ್ರರಂಗದ ಕಂಬನಿ ನಾಯಕ ನಟ ವಿಷ್ಣುವರ್ಧನ್ ನಿಧನದ ಆಘಾತದಿಂದ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ತತ್ತರಿಸಿದೆ. ಅವರ ನಿಧನದಿಂದ ಉಂಟಾಗಿರುವ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ ಎಂದು ಚಿತ್ರರಂಗದ ಗಣ್ಯರು ಹೇಳಿದ್ದಾರೆ.
ಬೆಂಗಳೂರು: ನಾಯಕ ನಟ ವಿಷ್ಣುವರ್ಧನ್ ನಿಧನದ ಆಘಾತದಿಂದ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ತತ್ತರಿಸಿದೆ. ಅವರ ನಿಧನದಿಂದ ಉಂಟಾಗಿರುವ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ ಎಂದು ಚಿತ್ರರಂಗದ ಗಣ್ಯರು ಹೇಳಿದ್ದಾರೆ. ಕೆಲವು ಪ್ರಮುಖರ ಪ್ರತಿಕ್ರಿಯೆಗಳು:
ನಿರ್ದೇಶಕ ಗಿರೀಶ್ ಕಾರ್ನಾಡ್: 'ಸ್ನೇಹ ಸ್ವಭಾವ ಮತ್ತು ಸಹ ನಟ ನಟಿಯರ ಜೊತೆಗೆ ಸ್ನೇಹಪೂರ್ಣ ಮಧುರ ಬಾಂಧವ್ಯ ಇಟ್ಟುಕೊಂಡಿದ್ದ ಕರ್ನಾಟಕ ಚಲನಚಿತ್ರೋದ್ಯಮ ಮಂಡಳಿ ಅಧ್ಯಕ್ಷೆ ಜಯಮಾಲಾ: 'ನನಗೆ ಈಗಲೂ ನಂಬಲಾಗುತ್ತಿಲ್ಲ. ಅವರು ಆರೋಗ್ಯವಂತರಾಗಿದ್ದರು. ನಾನು ಇದನ್ನು ನಿರೀಕ್ಷಿಸಿರಲೇ ಇಲ್ಲ. ಗಾಯಕ ಅಶ್ವತ್ಥ್ ನಿಧನ ಬಳಿಕ ಇದು ಎರಡನೇ ಆಘಾತ.
ನಿರ್ದೇಶಕ ಗಿರೀಶ್ ಕಾಸರವಳ್ಳಿ: ಕನ್ನಡ ಚಿತ್ರೋದ್ಯಮಕ್ಕೆ ಅವರು ನೀಡಿದ ಕಾಣಿಕ ಸ್ಮರಣೀಯ. ಅವರೊಬ್ಬ ಮಹಾನ್ ನಟ ಮತ್ತು ಸಾತ್ವಕ ವ್ಯಕ್ತಿಯಾಗಿದ್ದರು. ಅವರ ಹಠಾತ್ ನಿಧನದ ಆಘಾತದಿಂದ ನನಗೆ ಹೊರಬರಲು ಆಗುತ್ತಿಲ್ಲ. ಚಿತ್ರನಟಿ ಉಮಾಶ್ರೀ: 'ರಾಜಕುಮಾರ್ ಅವರ ಬಳಿಕ ಚಿತ್ರೋದ್ಯಮದ ಜನರಿಗೆ ಮಾದರಿಯಾಗಿದ್ದ ಅದ್ಭುತ ಕಲಾವಿದ ಮಾತ್ರವಲ್ಲ, ಮಹಾನ್ ವ್ಯಕ್ತಿಯನ್ನು ಸೆಳೆದುಕೊಳ್ಳುವ ಮೂಲಕ ಭಗವಂತ ಅನ್ಯಾಯ ಮಾಡಿದ್ದಾನೆ.ಖ್ಯಾತ ಹಿರಿಯರಾಗಿದ್ದ ರಾಜಕುಮಾರ್, ಈಗ ವಿಷ್ಣು ವರ್ಧನ್ ಅವರನ್ನು ಕಳೆದುಕೊಳ್ಳುವ ಮೂಲಕ ಕನ್ನಡ ಚಿತ್ರರಂಗ ಊನಗೊಂಡಿದೆ'.
ಹಿರಿಯ ಚಿತ್ರ ನಟ ಕೆ.ಎಸ್. ಅಶ್ವಥ್: 'ನಾನು ನನ್ನ ರಾಮಾಚಾರಿಯನ್ನು (ನಾಗರ ಹಾವು ಚಿತ್ರದಲ್ಲಿ ವಿಷ್ಣು ವರ್ಧನ್ ಪಾತ್ರ) ಕಳೆದುಕೊಂಡಿದ್ದೇನೆ.
ಚಿತ್ರನಟ ಶ್ರೀನಾಥ್ ಮತ್ತು ಅಂಬರೀಷ್: 'ನಾವು ನಮ್ಮ ಸಹೋದರನನ್ನು ಕುಟುಂಬ ಸದಸ್ಯನನ್ನು ಕಳೆದುಕೊಂಡಿದ್ದೇವೆ. ಅವರ ಆಪ್ತ ಗೆಳೆಯ, ಮಾರ್ಗದರ್ಶಕರಾಗಿದ್ದರು. ಅವರು ಚೆಲ್ಲಿದ ಬೆಳಕು ಉದ್ಯಮದಲ್ಲಿ ನಮಗೆ ಸದಾ ಮಾರ್ಗದರ್ಶಕ'.
ಸಾಕ್ಷ್ಯ ಚಿತ್ರ ನಿರ್ಮಾಪಕ ಬಿ.ಎಸ್. ಮನೋಹರ್: 'ಗೋಕಾಕ್ ಚಳವಳಿಯ ಸಾಕ್ಷ್ಯ ಚಿತ್ರ ನಿರ್ಮಾಣದಲ್ಲಿ ವಿಷ್ಣು ವರ್ಧನ್ ಮತ್ತು ರಾಜಕುಮಾರ್ ಅವರು ನೀಡಿದ್ದ ಬೆಂಬಲ ಮರೆಯಲಾಗದ್ದು.' ನಗರದ ಹಲವು ರಸ್ತೆಗಳಲ್ಲಿ ಟೈರ್ ಗಳನ್ನು ಹೊತ್ತಿಸಿ ಆಕ್ರೋಶ ಉದ್ರಿಕ್ತರು ವ್ಯಕ್ತಪಡಿಸಿದ್ದಾರೆ.
ಇದರಿಂದ ಅಂಗಡಿಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು, ಸಿನಿಮಾಮಂದಿರಗಳು ಮುಚ್ಚಿದ್ದು, ಬುಧವಾರ ಬಂದ್ ನಂತಹ ವಾತಾವರಣ ನೆಲೆಸಿತ್ತು.
ಬಾಳ `ಬಂಧನ' ಕಳಚಿಕೊಂಡ `ರಾಮಾಚಾರಿ' ಮೌನವಾಯಿತು `ಸಿಂಹ ಘರ್ಜನೆ'
ಬೆಂಗಳೂರು : ಕನ್ನಡ ಚಿತ್ರರಂಗದ ವಿಭಿನ್ನ ನಟ, ಅಭಿಮಾನಿಗಳ ಪಾಲಿನ ಸಾಹಸಸಿಂಹ, ನಟ ಭಾರ್ಗವ ಡಾ. ವಿಷ್ಣುವರ್ಧನ್ ಇಂದು ನಸುಕಿನ ಜಾವ ಇಹಲೋಕದ ಯಾತ್ರೆ ಮುಗಿಸಿದರು. ಅವರಿಗೆ ೫೯ ವರ್ಷ ವಯಸ್ಸಾಗಿತ್ತು. ಡಾ. ರಾಜ್ ನಂತರ ಕನ್ನಡ ಚಿತ್ರರಂಗದಲ್ಲಿ ಅಪೂರ್ವ ಅಭಿಮಾನಿ ಸಮೂಹವನ್ನು ಹೊಂದಿದ್ದ ಈ ಹಿರಿಯ ನಟನ ನಿಧನದಿಂದ ಕನ್ನಡ ಚಿತ್ರರಂಗದ `ಮುತ್ತಿನ ಹಾರ'ದಿಂದ ಅಮೂಲ್ಯ ಮುತ್ತೊಂದು ಕಳಚಿ ಬಿದ್ದಂತಾಗಿದೆ. `ವಂಶ ವೃಕ್ಷ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರೂ, ಪುಟ್ಟಣ್ಣ ಕಣಗಾಲ್ ಅವರ `ನಾಗರ ಹಾವು' ಚಿತ್ರದ ರಾಮಾಚಾರಿ ಪಾತ್ರ ವಿಷ್ಣು ಅವರಿಗೆ ಹೊಸ ಇಮೇಜ್ ಮತ್ತು ಅಸಂಖ್ಯ ಅಭಿಮಾನಿ ಬಳಗವನ್ನು ಸೃಷ್ಟಿಸಿತು. ಈ ಸಂದರ್ಭದಲ್ಲಿಯೇ ಪುಟ್ಟಣ್ಣ ಅವರು ಸಂಪತ್ ಕುಮಾರ್ ಎಂದಿದ್ದ ಅವರ ಮೂಲ ಹೆಸರನ್ನು ವಿಷ್ಣುವರ್ಧನ್ ಎಂದು ಬದಲಾಯಿಸಿದರು. ಪ್ರಖ್ಯಾತ ಹೊಯ್ಸಳ ದೊರೆ ವಿಷ್ಣುವರ್ಧನನಂತೆ ತನ್ನ ಪ್ರೀತಿಯ ಶಿಷ್ಯ ಖ್ಯಾತಿ ಹೊಂದಲಿ ಎಂಬುದು ಪುಟ್ಟಣ್ಣ ಅವರ ಬಯಕೆಯಾಗಿತ್ತು. ಗುರುವಿನ ಈ ಆಸೆಯನ್ನು ವಿಷ್ಣು ಹುಸಿಯಾಗಿಸಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ಅಭಿನಯಿಸಿ ಬಹುಭಾಷಾ ತಾರೆಯಾಗಿ ಕಂಗೊಳಿಸಿ `ಅಭಿನವ ಭಾರ್ಗವ' ಎಂದೆಣಿಸಿಕೊಂಡರು.
೧೯೫೦ರಲ್ಲಿ ಮೈಸೂರಿನ ಚಾಮುಂಡಿಪುರದಲ್ಲಿ ಜನಿಸಿದ ವಿಷ್ಣುವರ್ಧನ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ವ್ಯಾಸಾಂಗವನ್ನು ಮುಗಿಸಿದರು. ಆ ಸಂದರ್ಭದಲ್ಲಿಯೇ ಕಲೆಯ ನಂಟು ಅಂಟಿಕೊಂಡಿತು. ೧೯೭೨ರಲ್ಲಿ ತೆರೆಕಂಡ ನಾಗರಹಾವು ಚಿತ್ರದಲ್ಲಿನ ಅಭಿನಯಕ್ಕೆ ಉತ್ತಮ ನಟ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ವಿಷ್ಣು ಕನ್ನಡ ಚಿತ್ರರಂಗದಲ್ಲಿ ಬಲವಾಗಿ ಬೇರೂರುವ ಸೂಚನೆಯನ್ನು ನೀಡಿದರು. `ನನ್ನ ಹಾಡು ನನ್ನದು... ನನ್ನ ರಾಗ ನನ್ನದು... ' ಎಂಬ ರೀತಿಯಲ್ಲಿಯೇ ವಿಭಿನ್ನ ಅಭಿನಯ ಶೈಲಿ ಮತ್ತು ಹಾವಭಾವಗಳಿಂದ ಎಲ್ಲಾ ವರ್ಗದ ಪ್ರೇಕ್ಷರಿಗೂ ವಿಷ್ಣು ಆಪ್ತವಾಗುತ್ತಾ ಹೋದರು. ನಂತರದಲ್ಲಿ ಇವರ ಸಾಲು ಸಾಲು ಸಾಹಸ ಪ್ರಧಾನ ಚಿತ್ರಗಳೇ ತೆರೆಕಂಡು ಅಭಿಮಾನಿಗಳ ಪಾಲಿಗೆ ವಿಷ್ಣು `ಸಾಹಸ ಸಿಂಹ'ನಾದರು. ಆದರೆ ೧೯೮೪ರಲ್ಲಿ ತೆರೆಕಂಡ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ `ಬಂಧನ' ಚಿತ್ರ ವಿಷ್ಣುವರ್ಧನ್ ಅವರ ವೃತ್ತಿ ಜೀವನದಲ್ಲಿಯೇ ಒಂದು ಮೈಲುಗಲ್ಲೆಂದು ಪರಿಗಣಿತವಾಗಿದೆ. ಇದುವರೆಗೆ ಸಾಹಸ ಸಿಂಹನಾಗಿದ್ದ ಈ ನಟ `ಬಂಧನ'ದ ಬಳಿಕ ಹೆಂಗಳೆಯರ ಪಾಲಿನ ನೆಚ್ಚಿನ ನಟನಾದರು. ವಿಷ್ಣುವರ್ಧನ್ ಅವರ ಅಭಿನಯ ಚತುರತೆಗೆ ಕನ್ನಡಿ ಹಿಡಿದ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗಿ ಈ ನಟನ ಜನಪ್ರಿಯತೆಯನ್ನು ಹೆಚ್ಚಿಸಿತು. ಇದರಲ್ಲಿ ಮುಖ್ಯವಾದುವೆಂದರೆ, `ಹೊಂಬಿಸಿಲು', `ಬಂಧನ', `ಸುಪ್ರಭಾತ', `ಲಾಲಿ', `ಲಾಲಿ', `ಮುತ್ತಿನ ಹಾರ', `ಲಯನ್ ಜಗಪತಿ ರಾವ್', `ವೀರಪ್ಪ ನಾಯ್ಕ', `ಮಾತಾಡ್ ಮಾತಾಡ್ ಮಲ್ಲಿಗೆ', `ಆಪ್ತ ಮಿತ್ರ', `ಕರ್ಣ'.. ಹೀಗೆ ಈ ಪಟ್ಟಿ ಬೆಳೆಯತ್ತಾ ಹೋಗುತ್ತದೆ. ವಿಷ್ಣುವರ್ಧನ್ - ಸುಹಾಸಿನಿ ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಯಾಗಿ ಹೆಸರಾಗಿದೆ. ಹಾಗೆಯೇ ವಿಷ್ಣು ಅವರ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ಆರತಿಗೆ ಸಲ್ಲುತ್ತದೆ. ಕನ್ನಡದ ಕಲಾರತ್ನ ಡಾ. ರಾಜ್ ಅವರೊಂದಿಗೆ `ಗಂಧದ ಗುಡಿ' ಚಿತ್ರದಲ್ಲಿ ಅಭಿನಯಿಸಿದ ಕೀರ್ತಿಯೂ ವಿಷ್ಣು ಅವರದ್ದು. ೧೯೭೫ರಲ್ಲಿ ನಟಿ ಭಾರತಿಯವರನ್ನು ಇವರು ವಿವಾಹದರು, ಈ ಜೋಡಿ ಚಿತ್ರ ರಂಗದ ಅದರ್ಶ ದಂಪತಿಗಳಾಗಿ ಹೆಸರುವಾಸಿಯಾಗಿದ್ದಾರೆ.
ಈ ಮೇರು ನಟ ಅನೇಕ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ. ೭ಬಾರಿ ದಕ್ಷಿಣ ಭಾರತದ ಪಿಲಂ ಫೇರ್ ಪ್ರಶಸ್ತಿ ಪಡೆದ ಹೆಗ್ಗಳಿಗೆ ಈ ನಟನದು. ಅಂತೆಯೇ ೭ ರಾಜ್ಯ ಪ್ರಶಸ್ತಿಗಳೂ ಇವರಿಗೆ ಸಂದಿವೆ. ೨೦೦೪ರಲ್ಲಿ ಫಿಲಂ ಫೇರ್ ಜೀವಮಾನದ ಪ್ರಶಸ್ತಿ ಲಭಿಸಿದೆ. ೨೦೦೯ ಡಾ. ರಾಜ್‌ಕುಮಾರ್ ಪ್ರಶಸ್ತಿ ಇವರಿಗೆ ಪ್ರಾಪ್ತವಾಗಿದೆ. ಇವರ ಅಭಿನಯದ `ಸುಪ್ರಭಾತ' ಚಿತ್ರವು ೮ ವಿವಿಧ ಪ್ರಶಸ್ತಿಗಳನ್ನು ಬಾಚಿಕೊಂಡಿರುವುದು ಕನ್ನಡ ಚಿತ್ರರಂಗದ ದಾಖಲೆಯಾಗಿಯೇ ಉಳಿದಿದೆ.
ಮೂರೂವರೆ ದಶಕಗಳ ಸಾರ್ಥಕ ವೃತ್ತಿಜೀವನ ನಡೆಸಿದ ಈ ಮೇರು ನಟನ ಅಗಲುವಿಕೆಯಿಂದ ಕನ್ನಡ ಚಿತ್ರರಂಗದ ಆಧಾರವೊಂದು ಕುಸಿದಂತಾಗಿದೆ ಎಂದರೆ ಖಂಡಿತವಾಗಿಯೂ ಅತಿಶಯೋಕ್ತಿಯಾಗಲರಾದು. ಹಲವಾರು ಯುವ ನಟರಿಗೆ ಮಾದರಿಯಾಗಿ, ಚಿತ್ರೋದ್ಯಮದ ಹಿರಿಯಣ್ಣನಂತಿದ್ದ ವಿಷ್ಣುವರ್ಧನ್ ಅಗಲುವಿಕೆ ಅವರ ಅಭಿಮಾನಿ ಬಳಗವನ್ನು ದು:ಖದ ಮಡುವಿನಲ್ಲಿ ಮುಳುಗುವಂತೆ ಮಾಡಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-12-31 00:00:00
|
|
| santosh, dubai | 2009-12-31 | | A another sad day in indian fim industry, a legnedary actor and a great human being passed away.. i will miss him..and all kannadigas too |
|