8000 ಗಡಿಗಿಂತ ಕೆಳಮಟ್ಟಕ್ಕಳಿದ ಸೂಚ್ಯಂಕ |
ಪ್ರಕಟಿಸಿದ ದಿನಾಂಕ : 2008-10-27
ಶೇರುಗಳ ಭಾರೀ ಮಾರಾಟ ಭರಾಟೆಯಿಂದಾಗಿ ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ಸೋಮವಾರ ಮಧ್ಯಾಹ್ನದ ವಹಿವಾಟಿನಲ್ಲಿ 8000 ಗಡಿಗಿಂತ ಕೆಳಮಟ್ಟಕ್ಕೆ ಕುಸಿತಗೊಂಡಿದೆ.
ಹೆಚ್ಚುಕಮ್ಮಿ ಎಲ್ಲಾ ಕ್ಷೇತ್ರದ ಶೇರುಗಳು ಋಣಾತ್ಮಕ ವಲಯದತ್ತ ಸಾಗುತ್ತಿದ್ದು, ಪ್ರಾರಂಭದಲ್ಲೂ ಕುಸಿತಕಂಡಿದ್ದ ಶೇರುಪೇಟೆಯು ತನ್ನ ಇಳಿಮುಖ ಹಾದಿಯನ್ನು ಮುಂದುವರಿಸಿ, ಮಧ್ಯಾಹ್ನದ ಹೊತ್ತಿಗೆ ಮತ್ತೆ 723 ಅಂಕಗಳಷ್ಟು ಇಳಿಕೆಗೊಂಡು 7,985.43 ಅಂಕಗಳಿಗೆ ತಲುಪಿದೆ.
ಅಂತೆಯೇ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು 243.75 ಅಂಕಗಳಷ್ಟು ಕುಸಿತಗೊಂಡು 2340 ಅಂಕಗಳಿಗೆ ತಲುಪಿದೆ.
ಹಣದುಬ್ಬರದಲ್ಲಿನ ಮಂದತೆ, ಕಚ್ಚಾತೈಲ ಬೆಲೆಯಲ್ಲಿನ ಗಣನೀಯ ಇಳಿಕೆ, ಭಾರತೀಯ ರಿಸರ್ವ್ ಬ್ಯಾಂಕ್ ರೇಪೋ ದರ 100 ಅಂಶಗಳಷ್ಟು ಇಳಿಸಿರುವುದರ ಮುಂದಾಗಿಯೂ, ಶೇರುಪೇಟೆಯಲ್ಲಿ ಕರಡಿ ನರ್ತನ ಇನ್ನೂ ಮುಂದುವರಿದೇ ಇದೆ.
ಆರ್ಥಿಕ ಕುಸಿತದ ಭೀತಿಯು ಎಲ್ಲೆಂದರಲ್ಲಿ ವ್ಯಕ್ತವಾಗಿದ್ದು, ಇದು ವಿಶ್ವದಲ್ಲಿನ ಎಲ್ಲಾ ಶೇರುಪೇಟೆ ಕುಸಿತಕ್ಕೆ ಹಾದಿ ಮಾಡಿಕೊಡುತ್ತಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಇಂದಿನ ವಹಿವಾಟಿನಲ್ಲಿ ಎಸಿಸಿ, ಬಿಎಚ್ಇಎಲ್, ಗ್ರಾಸಿಂ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಲಾರ್ಸನ್ ಆಂಡ್ ಟರ್ಬೋ, ಮಾರುತಿ, ಒಎನ್‌ಜಿಸಿ, ರಿಲಯನ್ಸ್ ಕಮ್ಯುನಿಕೇಶನ್ಸ್, ರಿಲಯನ್ಸ್ ಇನ್ಫ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಸತ್ಯಂ, ಟಿಸಿಎಸ್, ವಿಪ್ರೋ ಮುಂತಾದ ಶೇರುಗಳ ಮೌಲ್ಯವು ಕುಸಿದಿದೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-27
|
|
|