ದಿಲ್ಲಿಯಲ್ಲಿ ಯಕ್ಷಲೋಕ ಸೃಷ್ಟಿಸಿದ ಕಾಸರಗೋಡಿನ ಬೊಂಬೆಗಳು |
ಪ್ರಕಟಿಸಿದ ದಿನಾಂಕ : 2008-10-26
ಕಾಸರಗೋಡು, ಅ.25: ಹೊಸದಿಲ್ಲಿ ಯಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ನಡೆದ ಬೊಂಬೆಯಾಟವು ರಾಜಧಾನಿಯಲ್ಲಿ ಯಕ್ಷಗಂಧರ್ವ ಲೋಕ ಸೃಷ್ಟಿಸಿತು. ಜನಸಾಗರವನ್ನು ಮಂತ್ರಮುಗ್ಧಗೊಳಿಸಿದ ಈ ಪ್ರದರ್ಶನವನ್ನು ನೀಡಿದವರು ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ.
ದಿಲ್ಲಿಯ ಮೇಘದೂತ ಸಭಾಂಗಣ ದಲ್ಲಿ ಟ್ರೆಡಿಷನಲ್ ಇಂಡಿಯನ್ ಪಪ್ಪೆಟ್ರಿ ಮಹೋತ್ಸವದಲ್ಲಿ ಪ್ರಸ್ತುತಪಡಿಸಿದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಕಥಾಭಾಗವು ವಿವಿಧೆಡೆಗಳಿಂದ ಬಂದ ಕಲಾವಿದರ ಮತ್ತು ಕಲಾತಂಡಗಳ ಗಮನ ಸೆಳೆಯಿತು. ತಂಡದ ನೇತೃತ್ವವನ್ನು ನಿರ್ದೇಶಕ ಕೆ.ವಿ.ರಮೇಶ್ ವಹಿಸಿದ್ದರು. ಸೂತ್ರಧಾರನಾಗಿ ಎ.ಶ್ರೀನಾಥ್, ಓಂ ಪ್ರಕಾಶ್ ಕೆ.ವಿ., ಚಂದ್ರಶೇಖರ್ ವಿ., ಸುದರ್ಶನ ಕೆ.ವಿ., ಕುಮಾರ ಸ್ವಾಮಿ ಭಾಗವಹಿಸಿದ್ದರು.
ಇದೀಗ ಎರಡನೇ ಬಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ಇಂತಹ ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸಿ ಜನಮನ್ನಣೆ ಪಡೆದಿದೆ. ಐದು ವರ್ಷಗಳ ಹಿಂದೆ ಕೇರಳ ಸಂಗೀತ ನಾಟಕ ಅಕಾಡೆಮಿಯ ಆಶ್ರಯದಲ್ಲಿ ನಡೆದ ಪುತುಲ್ ಯಾತ್ರಾದಲ್ಲೂ ಭಾಗವಹಿಸಿ ಭರವಸೆ ಮೂಡಿಸಿತ್ತು. ಲಾಹೋರ್‌ನಲ್ಲಿ ಜರಗಿದ ನಾಲ್ಕನೇ ಅಂತಾರಾಷ್ಟ್ರೀಯ ಬೊಂಬೆ ಯಾಟ ಉತ್ಸವ, ಪ್ಯಾರಿಸ್‌ನಲ್ಲಿ ನಡೆದ ಪೋಯಿರಿ ಬಿ ಪ್ಯಾರಿಸ್ ಉತ್ಸವದಲ್ಲೂ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿತ್ತು.
ಅ.15ರಂದು ಬೆಳಗ್ಗೆ ಕಾಸರ ಗೋಡಿನಿಂದ ದಿಲ್ಲಿಗೆ ಹೊರಟ ಕೆ.ವಿ.ರಮೇಶ್ ನೇತೃತ್ವದ ತಂಡ 18 ರಂದು ಈ ಯಶಸ್ವಿ ಪ್ರದರ್ಶನವನ್ನು ನೀಡಿ ವಾಪಸಾದ ತಂಡ ದಿಲ್ಲಿಯ ಅನುಭವಗಳನ್ನು ಉದಯವಾಣಿ ಯೊಂದಿಗೆ ಹಂಚಿಕೊಂಡಿತು.
ಬೊಂಬೆಯಾಟ ಅತೀ ಪ್ರಾಚೀನವಾದ ಕಲೆ. ಜನಪದ ರಂಗಭೂಮಿ ಪ್ರಕಾರಗಳಲ್ಲಿ ಪ್ರದರ್ಶನಾತ್ಮಕ ರಂಗಕಲೆ. ಇದನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ.

ಕಾಸರಗೋಡಿನಲ್ಲಿ ಈ ಕಲಾಪ್ರಕಾರಗಳ ಬಗ್ಗೆ ಶಿಬಿರಗಳನ್ನು ನಡೆಸುವುದಿದ್ದರೆ ಪೂರ್ಣ ಆರ್ಥಿಕ ಸಹಕಾರ ನೀಡುವುದಾಗಿ ಬೊಂಬೆಯಾಟದ ಸಂಯೋಜಕಿ ಶುಭಾ ಸಕ್ಸೇನಾ ಹೇಳಿದ್ದಾರೆ.
ಬೊಂಬೆಯಾಟದ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ನಡೆಸುವವರಿಗೆ ಸಹಾಯಧನ ನೀಡಲಾಗುವುದಲ್ಲದೆ ಸಂಪನ್ಮೂಲ ವ್ಯಕ್ತಿಗಳ ಖರ್ಚು ವೆಚ್ಚಗಳನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಭರಿಸುವುದಾಗಿ ಕಾರ್ಯದರ್ಶಿ ಜಯಂತ್ ಕೌಸ್ತರ್ ಭರವಸೆ ನೀಡಿರುವುದಾಗಿ ನಿರ್ದೇಶಕ ಕೆ.ವಿ.ರಮೇಶ್ ಉದಯವಾಣಿಗೆ ತಿಳಿಸಿದರು.
ಶ್ರೀಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘಕ್ಕೀಗ 27ರ ಹರೆಯ. ದೇಶ-ವಿದೇಶಗಳಲ್ಲಿ ಕಲಾಪ್ರತಿಭೆ ಯನ್ನು ಮಿಂಚಿ ಗಡಿನಾಡು ಕಾಸರಗೋಡಿಗೆ ಕೀರ್ತಿ ತಂದಿರುವ ಈ ಬೊಂಬೆಯಾಟ ಸಂಘವು ಪೌರಾಣಿಕ ಕಥಾನಕಗಳ ಮೊಲಕ ನೈತಿಕ ಧರ್ಮ ಜಾಗೃತಿ ಮೂಡಿಸುವ ಸದುದ್ದೇಶವನ್ನಿರಿಸಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬೆಳೆದು ಬಂದಿದೆ.
ಪಿಲಿಕುಂಜೆಯಲ್ಲಿರುವ ಶ್ರೀ ಗೋಪಾಲ ಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಬಗ್ಗೆ ಮಾಹಿತಿ ಪಡೆಯಲು, ಬೊಂಬೆ ತಯಾರಿ ಮತ್ತು ಅವುಗಳನ್ನು ಕುಣಿಸುವ ಬಗ್ಗೆ ಅಧ್ಯಯನ ನಡೆಸಲು ದೇಶ ವಿದೇಶಗಳಿಂದ ಸಂಶೋಧಕರು ಆಗಮಿಸುತ್ತಿದ್ದಾರೆ.
ಕಾರ್ಯಕ್ರಮಗಳಲ್ಲಿ ಸ್ಮರಣಿಕೆ ಅಥವಾ ಉಡುಗೋರೆಯಾಗಿ ನೀಡಲು ವಿವಿಧೆಡೆಗಳಿಂದ ಬೊಂಬೆಗಳಿಗೆ ಭಾರೀ ಬೇಡಿಕೆಯಿದೆ.
ನಿರಂತರವಾಗಿ ರಮೇಶ್ ಅವರ ಕೈಕೆಳಗೆ ಹಲವರು ಇದರ ನಿರ್ಮಾಣ ಕಾರ್ಯದಲ್ಲಿ ದುಡಿಯುತ್ತಿದ್ದಾರೆ. ಪಿಲಿಕುಂಜೆ ಸ್ವಗೃಹವನ್ನು ಬೊಂಬೆ ಯಾಟದ ಮ್ಯೂಸಿಯಂನ್ನಾಗಿಸುವ ಸಂಕಲ್ಪ ರಮೇಶ್‌ರಿಗಿದೆ.
ಸರಕಾರ, ಅಕಾಡೆಮಿಗಳು ಈ ಸದುದ್ದೇಶಕ್ಕೆ ಸಹಜವಾಗಿಯೇ ಸ್ಪಂದಿಸ ಬೇಕಾಗಿದೆ ಎಂಬ ಅಭಿಪ್ರಾಯವನ್ನು ಅವರು ಮುಂದಿಡುತ್ತಾರೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-26
|
|
|