ಮಾಲೆಗಾಂವ್ ಸ್ಫೋಟ: ಇಬ್ಬರು ಮಾಜಿ ಸೇನಾಧಿಕಾರಿಗಳ ವಶ |
ಪ್ರಕಟಿಸಿದ ದಿನಾಂಕ : 2008-10-26
ಭೋಪಾಲ್, ಶನಿವಾರ, 25 ಅಕ್ಟೋಬರ್ 2008 ಕಳೆದ ತಿಂಗಳ ಮಾಲೆಗಾಂವ್ ಸ್ಫೋಟದ ಮೂವರು ಶಂಕಿತ ಆರೋಪಿಗಳಾದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಶಾಮ್ಲಾಲ್ ಸಾಹು ಮತ್ತು ಶಿವಚರಣ್ ಸಿಂಗ್ ಬಂಧನದ ಬೆನ್ನಲ್ಲೇ ಮುಂಬಯಿ ಪೊಲೀಸರ ಉಗ್ರವಾದಿ ವಿರೋಧಿ ದಳ(ಎಟಿಎಸ್) ಶನಿವಾರ ಇಬ್ಬರು ಮಾಜಿ ಸೇನಾಧಿಕಾರಿಗಳನ್ನು ವಶಕ್ಕೆ ಪಡೆದಿದೆ.
ಈ ಮಾಜಿ ಸೇನಾಧಿಕಾರಿಗಳು ಮಾಲೆಗಾಂವ್ ಸ್ಫೋಟ ಆರೋಪಿಗಳಿಗೆ ತರಬೇತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಮತ್ತಷ್ಟು ಮಾಹಿತಿ ಕಲೆ ಹಾಕಲು ಎಟಿಎಸ್ ಅಧಿಕಾರಿಗಳು ಭೋಪಾಲ್‌ಗೆ ತೆರಳಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಬಂಧನದ ಸಾಧ್ಯತೆಯಿದೆ. ಅಧಿಕಾರಿಗಳು ಈ ಸಂದರ್ಭ ಗ್ವಾಲಿಯರ್‌ಗೂ ಭೇಟಿ ನೀಡಲಿದ್ದಾರೆ.
ಹಿಂದೂ ಬಲಪಂಥೀಯ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದರೆನ್ನಲಾದ ಹಿಂದೂ ಯುವ ಸಾಧ್ವಿಯ ಸಹಿತ ಇತರ ಇಬ್ಬರನ್ನು ಬಾಂಬ್ ಸ್ಫೋಟ ಆರೋಪದಲ್ಲಿ ಶುಕ್ರವಾರ ಬಂಧಿಸಿ, ನವೆಂಬರ್ 3ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಬಂಧಿತರ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಸ್ಫೋಟಕ್ಕೆ ಆರ್‌ಡಿಎಕ್ಸ್ ಬಳಸಲಾಗಿರುವ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಸಾಧ್ವಿಯ ಸಹಾಯಕ್ಕೆ ಬಿಜೆಪಿಯ ಮಾಜಿ ನಾಯಕಿ ಉಮಾಭಾರತಿ ನಿಂತಿದ್ದು, ಸ್ಫೋಟ ಪ್ರಕರಣದಲ್ಲಿ ಸಾಧ್ವಿಯನ್ನು ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಎಬಿವಿಪಿ ಕಚೇರಿಗೆ ದಾಳಿ: ಮಾಲೆಗಾಂವ್ ಮತ್ತು ಮೊದಾಸ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿಯ ಹೆಸರು ಕೇಳಿ ಬಂದಿರುವ ಹಿನ್ನಲೆಯಲ್ಲಿ ಎನ್‌ಸಿಪಿಯ ವಿದ್ಯಾರ್ಥಿ ಘಟಕ ಶನಿವಾರ ನಾಸಿಕ್‌ನ ಎಬಿವಿಪಿ ಕಚೇರಿಗೆ ದಾಳಿ ಮಾಡಿದೆ.
ದಾಳಿಕೋರರು ಎಬಿವಿಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸ್ಥಳೀಯ ಅಶೋಕ ಸ್ಥಂಬ ಕಚೇರಿ ಪ್ರವೇಶಿಸಿ ಪೀಠೋಪಕರಣ ಹಾಗೂ ವಿಶ್ವ ಹಿಂದೂ ಪರಿಷತ್ ಬೋರ್ಡ್‌ಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ಎಬಿವಿಪಿ ಸದಸ್ಯರ ಮುಖಕ್ಕೆ ಎನ್‌ಸಿಪಿ ಕಾರ್ಯಕರ್ತರು ಮಸಿ ಬಳಿದರು ಎಂದೂ ಪೊಲೀಸರು ತಿಳಿಸಿದ್ದಾರೆ
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-26
|
|
|