ರಿಯಾದ್: 2 ತಿಂಗಳಿನಿಂದ ಶವಾಗಾರದಲ್ಲಿರುವ ಭಾರತೀಯನ ದೇಹ : ಯಾವುದೇ ಪತ್ರಕ್ಕೆ ಸಹಿ ಹಾಕಲು ಪತ್ನಿ ನಕಾರ |
ಪ್ರಕಟಿಸಿದ ದಿನಾಂಕ : 2008-10-25
ಹದಿನೈದು ವರ್ಷಗಳಿಂದ ಮನೆಗೇ ಹೋಗದಿದ್ದ ಅನಿವಾಸಿ : ಒಲವು ತೋರದ ಮಕ್ಕಳು
ರಿಯಾದ್, ಅಕ್ಟೋಬರ್ 25: 1994 ರಲ್ಲಿ ಭಾರತದ ಬಿಹಾರ್ ರಾಜ್ಯದಿಂದ ಉದ್ಯೋಗನಿಮಿತ್ತ ರಿಯಾದ್ ನಗರಕ್ಕೆ ಆಗಮಿಸಿದ್ದ ಮಝ್ಹಾರುದ್ದೀನ್ ಎಂಬ 58 ವರ್ಷ ವಯಸ್ಸಿನ ಭಾರತೀಯರು ಆಗಸ್ಟ್ 27 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅಂದಿನಿಂದ ಅವರ ಪಾರ್ಥವ ಶರೀರ ನಗರದ ಅಲ್ ಮೌವಸಾತ್ ಆಸ್ಪತ್ರೆಯ ಶವಾಗಾರದಲ್ಲಿ ವಾರಸುದಾರರಿಲ್ಲದೇ ಬಿದ್ದಿದೆ. ಅವರ ಪತ್ನಿ ಅಸ್ಮಾ ಖಾತೂನ್ ಅವರಾಗಲೀ ಅಥವಾ ಮಕ್ಕಳಾಗಲೀ ಪಾರ್ಥವ ಶರೀರವನ್ನು ಕೊಂಡೊಯ್ಯಲು ಯಾವುದೇ ಪತ್ರಕ್ಕೆ ಸಹಿ ಹಾಕಲು ಒಪ್ಪದಿರುವುದೇ ಪ್ರಮುಖ ತೊಡಕಾಗಿದೆ. 1994ರಿಂದ ಒಮ್ಮೆಯೂ ಮನೆಯ ಕಡೆ ಯೋಚನೆ ಮಾಡದಿದ್ದ ಅವರ ಬಗ್ಗೆ ಮನೆಯವರಲ್ಲಿ ತಿರಸ್ಕಾರ ಮನೆಮಾಡಿದ್ದು ಅವರು ಸಾವಿನಲ್ಲೂ ಹತ್ತಿರಮಾಡಿಕೊಳ್ಳದಿರುವುದು ಕಾರಣವಾಗಿದೆ.
ಆದರೆ ಪಾರ್ಥವ ಶರೀರದ ಅಂತ್ಯಕ್ರಿಯೆ ನಡೆಸಲಾಗಲೀ ಸ್ವದೇಶಕ್ಕೆ ಕಳುಹಿಸಿಕೊಡುವುದಾಗಲೀ ಯಾವುದಕ್ಕೂ ಅವರ ಮನೆಯವರ ಒಪ್ಪಿಗೆಪತ್ರ ಅಗತ್ಯವಾಗಿದ್ದು ಇದರ ಹೊರತಾಗಿ ಕಳೇಬರದ ಅಂತ್ಯಕ್ರಿಯೆ ಕಾನೂನುಪ್ರಕಾರ ನಿಷಿದ್ಧವಾಗಿದೆ.
ಹದಿನೈದು ವರ್ಷಗಳಿಂದ ತಮ್ಮ ಕುಟುಂಬ ಕಷ್ಟಕರ ಪರಿಸ್ಥಿತಿಯಲ್ಲಿದ್ದಾಗಲೂ ಒಮ್ಮೆಯೂ ಮುಖ ತೋರಿಸಿದಿದ್ದ ಮಝ್ಹಾರುದ್ದೀನ್ ಅವರ ಕಳೇಬರವನ್ನು ಕೊಂಡೊಯ್ಯಲು ಇದುವರೆಗೂ ಯಾರೂ ಬರದೇ ಇರುವುದು ಆಸ್ಪತ್ರೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಮಝ್ಹಾರುದ್ದೀನ್ ಅವರ ಮಾಲಿಕ ಅವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆಯೊಂದನ್ನು ಹೂಡಿದ್ದುದು ಅವರು ಮನೆಗೆ ಹೋಗದಿರಲು ಪ್ರಮುಖ ಕಾರಣವಾಗಿದೆ. ಆದರೆ ಭಾರತೀಯ ದೂತಾವಾಸದ ಸಹಯೋಗದೊಂದಿಗೆ 2002ರಲ್ಲಿ ಹೊಸ ಪಾಸ್ ಪೋರ್ಟ್ ನೀಡಿ ಭಾರತಕ್ಕೆ ಮರಳಲು ಅನುವು ಮಾಡಿಕೊಟ್ಟಿದ್ದರೂ ಅವರು ಸೌದಿ ಅರೇಬಿಯಾದಲ್ಲೇ ಉಳಿಯಲು ಬಯಸಿದ್ದರು. ಈ ತೀರ್ಮಾನವೇ ಅವರ ಮನೆಯವರನ್ನು ವಿಮುಖರನ್ನಾಗಿಸಲು ಕಾರಣವಾಗಿದೆ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.
ಈ ಪರಿಸ್ಥಿತಿಯಲ್ಲಿ ಆಸ್ಪತ್ರೆಯ ಅಧಿಕಾರಿಗಳು ಭಾರತೀಯ ದೂತಾವಾಸದಿಂದ ಹೆಚ್ಚಿನ ಸಹಕಾರವನ್ನು ಅಪೇಕ್ಷಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಅರಬ್ ನ್ಯೂಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-25
|
|
|