ಮನಾಮಾ: ಮುತ್ತುಗಳ ದ್ವೀಪದಲ್ಲಿ ಕರುನಾಡ ವೈಭವ : ಸಂಧ್ಯಾ ಪೈ ಆಗಮನ ನಿರೀಕ್ಷೆ |
ಪ್ರಕಟಿಸಿದ ದಿನಾಂಕ : 2008-10-24
ಕನ್ನಡ ವೈಭವದಲ್ಲಿ ಪಾಲ್ಗೊಳ್ಳಲು -ತರಂಗ- ಸಂಪಾದಕಿ ಸಂಧ್ಯಾ ಪೈ,
ಸತೀಶ್ ಪೈ, ರವಿಶಂಕರ್, ವಿದೂಶಿ ಸಹನಾಭಟ್ ಬಹರೇನಿಗೆ
ಮನಾಮಾ: ಅಕ್ಟೋಬರ್ 24: ಇದೇ ಬರುವ ನವೆಂಬರ್ 14 ರಂದು ಬಹರೇನ್ ದ್ವೀಪರಾಷ್ಟ್ರದಲ್ಲಿ ಕನ್ನಡ ಸಂಘ ಆಯೋಜಿಸುತ್ತಿರುವ ಕನ್ನಡ ಸಂಸ್ಕೃತಿ, ಕಲೆ ಭಾಷೆಗಳ ಹಿರಿಮೆ ಗರಿಮೆಯನ್ನು ಸಾರುವ ಬೃಹತ್ -ಕನ್ನಡ ವೈಭವ-ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಸಂಸ್ಥೆಯ ಜನಪ್ರಿಯ ವಾರಪತ್ರಿಕೆಯಾದ -ತರಂಗ-ದ ವ್ಯವಸ್ಥಾಪಕ ಸಂಪಾದಕಿ ಶ್ರೀಮತಿ ಸಂಧ್ಯಾ ಪೈ ಹಾಗೂ ರಾಷ್ಟ್ರಿಯ ದಿನಪತ್ರಿಕೆಯಾದ -ಉದಯವಾಣಿ- ಯ ವ್ಯವಸ್ಥಾಪಕ ಸಂಪಾದಕರಾದ ಹಾಗೂ ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಆಡಳಿತ ನಿರ್ದೇಶಕರಾದ ಶ್ರೀ ಸತೀಶ್ ಪೈಯವರು ವಿಶೇಷ ಅತಿಥಿಗಳಾಗಿ ಆಹ್ವಾನಿತರಾಗಿದ್ದಾರೆ.
ಶ್ರೀಮತಿ ಸಂಧ್ಯಾ ಪೈಯವರು ಮಾಧ್ಯಮರಂಗದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಜನಪ್ರಿಯರಾಗಿದ್ದು ಪತ್ರಿಕೋದ್ಯಮದಲ್ಲಿ ಅವರು ಸಾಧಿಸಿರುವ ಸಾಧನೆಗಳಿಗಾಗಿ ಪ್ರತಿಷ್ಟಿತ -ಅತ್ತಿಮಬ್ಬೆ ಪ್ರಶಸ್ತಿ- ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. -ಅತ್ತಿಮಬ್ಬೆ- ಪ್ರಶಸ್ತಿಯು ಓರ್ವ ಮಹಿಳೆಗೆ ಸಂದ ಪ್ರಥಮ ಗೌರವವಾಗಿದ್ದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಅವರು ತಮ್ಮ ಕನಸಿನ ಕೂಸಾದ ಮಣಿಪಾಲ ಎಂಟರ್ ಟೈನ್ಮೆಂಟ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಮೂಲಕ ಕಿರುತೆರೆಯ ಪ್ರೇಕ್ಷಕರಿಗೆ -ಗುಪ್ತಗಾಮಿನಿ-, -ಯಾವ ಜನ್ಮದ ಮೈತ್ರಿ- ಮೊದಲಾದ ಜನಪ್ರಿಯ ಧಾರಾವಹಿಗಳನ್ನು ನೀಡಿ -ಆರ್ಯಭಟ- ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ಮಣಿಪಾಲ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಭಾರತದಲ್ಲಿಯೇ ಮುದ್ರಣರಂಗದಲ್ಲಿ ಉತ್ತುಂಗದಲ್ಲಿರುವ ಹೆಸರುಗಳಲ್ಲೊಂದು. ಇದರ ಆಡಳಿತ ನಿರ್ದೇಶಕರಾಗಿರುವ ಶ್ರೀ ಸತೀಶ್ ಪೈಯವರು ಪತ್ರಿಕೆಯ ಮುದ್ರಣ ಹಾಗೂ ವಿನ್ಯಾಸದಲ್ಲಿನ ಶ್ರೇಷ್ಠತೆಗೆ ಅನೇಕ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದಾರೆ.
ಬಹರೇನ್ ಕನ್ನಡ ಸಂಘ ಕಳೆದ ಮೂವತ್ತೆರೆಡು ವರ್ಷಗಳಿಂದ ಕೊಲ್ಲಿಯ ಮಣ್ಣಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಾ ಬಂದಿದೆ. ತನ್ನ ಮಣ್ಣಿನ ಈ ಸೇವೆಗಾಗಿ ಸಂಘದ ಬೆಳ್ಳಿಹಬ್ಬದ ಶುಭ ಅವಸರದಲ್ಲಿ ಪ್ರತಿಷ್ಠಿತ ರಾಜ್ಯಪ್ರಶಸ್ತಿಯನ್ನೂ ಪಡೆದಿದೆ. ಸಂಘದ ೩೨ ವರ್ಷಗಳ ಶ್ರೀಮಂತ ಇತಿಹಾಸದಲ್ಲಿ ನಾಡಿನ ಹಲವಾರು ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು, ಚಲನಚಿತ್ರ ನಟನಟಿಯರು, ನೃತ್ಯಕಲಾವಿದರು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇವರಲ್ಲಿ ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆ, ವರನಟ ಡಾ. ರಾಜಕುಮಾರ್, ಉಪೇಂದ್ರ, ಮಾಸ್ಟರ್ ಹಿರಣ್ಣಯ್ಯ, ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಗುರುಕಿರಣ್, ನಟ ನಿರ್ದೇಶಕ ಅರವಿಂದ್, ಮಂಜುಳಾ ಗುರುರಾಜ್, ಗಾಯಕ ಎಲ್. ಎನ್. ಶಾಸ್ತ್ರೀ ಮೊದಲಾದವರು ಒಳಗೊಂಡಿದ್ದಾರೆ.
ಕಿರುತೆರೆಯಲ್ಲಿ ಜನಪ್ರಿಯವಾಗಿದ್ದ -ಸಿಲ್ಲಿ ಲಲ್ಲಿ- ಹಾಸ್ಯ ಧಾರಾವಾಹಿಯ ಡಾ. ವಿಠ್ಠಲ್ ರಾವ್ -ವೇರಿ ಫೇಮಸ್ ಇನ್ ಸರ್ಜರಿ ಅಂಡ್ ಭರ್ಜರಿ ಎಂಬ ವಾಕ್ಯದ ಮೂಲಕ ಕರ್ನಾಟಕದ ಮನೆಮನೆಯ ಮಾತಾಗಿರುವ ನಟ ರವಿಶಂಕರ್ ಇದೇಗ ಬೆಳ್ಳಿತೆರೆಗೆ ತಮ್ಮ ಪ್ರಥಮ ಚಿತ್ರ -ಪಯಣ- ದಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಪಾದಾರ್ಪಣೆಯಿಡುತ್ತಿದ್ದಾರೆ. ಕನ್ನಡ ವೈಭವದ ಸಂಭ್ರಮದಲ್ಲಿ ರವಿಶಂಕರ್ ಅವರು ತಮ್ಮ ಮಧುರ ಕಂಠದಿಂದ ಕಾರ್ಯಕ್ರಮಕ್ಕೆ ಕಳೆನೀಡಲಿದ್ದು ಹಲವು ಕನ್ನಡ ಹಾಡುಗಳನ್ನೂ ಹಾಡಲಿದ್ದಾರೆ.
ಇವರೊಂದಿಗೆ ಶಿರಸಿಯ ನಾಟ್ಯಾಂಜಲಿ ನೃತ್ಯಕಲಾಕೇಂದ್ರದ ನಿರ್ದೇಶಕಿ, ಅಂತಾರಾಷ್ಟ್ರೀಯ ಪ್ರಶಸ್ತಿವಿಜೇತ ಖ್ಯಾತಿಯ ಭರತನಾಟ್ಯ ಕಲಾವಿದೆ ವಿದುಷಿ ಶ್ರೀಮತಿ ಸಹನಾಭಟ್ ರವರೂ -ಕನ್ನಡ ವೈಭವ-ದಲ್ಲಿ ಪಾಲ್ಗೊಳ್ಳಲು ವಿಶೇಷವಾಗಿ ಬಹರೇನಿಗೆ ಆಗಮಿಸಲಿದ್ದಾರೆ. -ಮೋಹಿನಿಯಟ್ಟಂ-, -ಕೂಚಿಪುಡಿ- ಮೊದಲಾದ ವಿವಿಧ ನೃತ್ಯಪ್ರಾಕಾರಗಳಲ್ಲಿ ವಿಶೇಷ ಪರಿಣಿತಿ ಪಡೆದಿರುವ ಇವರು ಸ್ವಯಂ ಪ್ರದರ್ಶನ ನೀಡುವುದಲ್ಲದೇ ಸಂಘದ ಸುಮಾರು ಐವತ್ತಕ್ಕೂ ಹೆಚ್ಚು ಕಲಾವಿದರಿಗೆ ತರಬೇತಿ ನೀಡಿ ಅವರಿಂದ ಒಂದು ಘಂಟೆಯ -ರಾಮಾಯಣ- ನೃತ್ಯಕಲಾರೂಪಕವನ್ನು ಸಾದರಪಡಿಸಲಿದ್ದಾರೆ. -ರಾಮಾಯಣ- ನೃತ್ಯರೂಪಕವು ಅವರ್ ನಿರ್ದೇಶನ ಹಾಗೂ ಸಂಯೋಜನೆಯ ಪ್ರಸಿದ್ಧ ನೃತ್ಯರೂಪಕಗಳಲ್ಲೊಂದಾಗಿದೆ. ಕರ್ನಾಟಕದ ಘನ ಸರ್ಕಾರದ ಪಂಚಾಯತ್ ರಾಜ್ಯ ಹಾಗೂ ಗ್ರಾಮೀಣ ಸಚಿವೆ ಶೋಭಾ ಕರಂದ್ಲಾಜೆ, ಕಾರ್ಕಳದ ಜನಪ್ರಿಯ ಶಾಸಕ ಗೋಪಾಲ ಭಂಡಾರಿಯವರು ಈ ಸಂಭಾವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಇಲ್ಲಿನ ಭಾರತೀಯ ರಾಯಭಾರಿಯಾಗಿರುವ ಕನ್ನಡಿಗರಾದ ಶ್ರೀಯುತ ಬಾಲಕೃಷ್ಣ ಶೆಟ್ಟಿಯವರೂ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಸಂಭಾವ್ಯ ಕಾರ್ಯಕ್ರಮಕ್ಕೆ ನಾಡಿನಿಂದ ಅಗಮಿಸಲಿರುವ ಗಣ್ಯರು, ಕಲಾವಿದರು, ರಾಜಕೀಯ ಮುತ್ಸದ್ದಿಗಳ ಪಟ್ಟಿಯು ಅಂತಿಮ ಹಂತದಲ್ಲಿದ್ದು ನಾಡಿನ ಇನ್ನಷ್ಟು ಸಾಂಸ್ಕೃತಿಕ ತಂಡಗಳು, ಸಿನೇಮಾ ತಾರೆಯರು -ಕನ್ನಡ ವೈಭವ-ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಕನ್ನಡ ಸಂಘದ ಅಧ್ಯಕ್ಷರಾದ ಶ್ರೀಯುತ ಆಸ್ಟಿನ್ ಸಂತೋಷ್ ರವರು ಈ ಸಂದರ್ಭದಲ್ಲಿ -ಉದಯವಾಣಿ-ಗೆ ತಿಳಿಸಿದ್ದಾರೆ.
ಇತ್ತೀಚೆಗೆ ಉದ್ಘಾಟನೆಯಾದ ಅತ್ಯಾಧುನಿಕ, ಸುಸಜ್ಜಿತ ಹಾಗೂ ಎಲ್ಲಾ ರೀತಿಯ ಆಧುನಿಕ ತಂತ್ರಜ್ಞಾನವನ್ನೊಳಗೊಂಡ -ಕೇರಳ ಸಮಾಜ-ದ ಡೈಮಂಡ್ ಜುಬಿಲಿ ಹಾಲ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಲಿದ್ದು ಈ ನೂತನ ಭವ್ಯ ಸಭಾಂಗಣದಲ್ಲಿ ಜರುಗಲಿರುವ ಪ್ರಥಮ ಕನ್ನಡ ಕಾರ್ಯಕ್ರಮವಾಗಲಿದೆ.
ಈ ಕಾರ್ಯಕ್ರಮದ ಬಗ್ಗೆ ಕನ್ನಡಿಗರು ಅತೀವ ಕುತೂಹಲ ತಳೆದಿದ್ದು ಉತ್ಸುಕತೆಯಿಂದ ಎದುರುನೋಡುತ್ತಿದ್ದಾರೆ. ಕೊಲ್ಲಿಯ ನೆಲದಲ್ಲಿ ಕನ್ನಡದ ಚಿಲುಮೆಯನ್ನು ಚಿಮ್ಮುತ್ತಿರುವ ರಾಜ್ಯಪ್ರಶಸ್ತಿ ವಿಜೇತ ಕನ್ನಡ ಸಂಘ ಮತ್ತೊಮ್ಮೆ ಕನ್ನಡ ಡಿಂಡಿಮ ಬಾರಿಸಲು ಸನ್ನದ್ಧವಾಗಿದೆ. ಬಹರೇನ್ ಕನ್ನಡಿಗರ ಪಾಲಿಗೆ ಬರಲಿರುವ -ಕನ್ನಡ ವೈಭವ- ಕಾರ್ಯಕ್ರಮ ಮತ್ತೊಂದು ಸ್ಮರಣೀಯ ಕಾರ್ಯಕ್ರಮವಾಗಿ ಮುತ್ತುಗಳ ದ್ವೀಪದ ಕನ್ನಡಿಗರ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲಿ ಬರೆದಿಡಬಹುದಾದಂತಹ ಮತ್ತೊಂದು ಕಾರ್ಯಕ್ರಮವಾಗುವುದರಲ್ಲಿ ಸಂಶಯವಿಲ್ಲ
ಚಿತ್ರ, ಬರಹ: ಕಮಲಾಕ್ಷ ಅಮೀನ್, ಬಹರೇನ್
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್, ಬಹರೇನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-24
|
|
| sahana bhat, sirsi | 2008-11-04 | | very good writings and good article .doing good job |
| abc, xyz | 2008-10-24 | | Excellent we appreciate.
Publish news like this instead of some communal related news which hurts one community |
|