ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಮಲೆನಾಡಗಿತ್ತಿಗೆ ದೀಪದೋಕುಳಿ

ಮಲೆಮಕ್ಕಳ ಪಾಲಿಗೆ ದೀಪಾವಳಿ ಎಂದರೆ ಸಭ್ಯತೆಯ ಸೋಗಿನಲ್ಲಿ ಅದುಮಿಟ್ಟ ಭಾವನೆಗಳಿಗೆ ಅಭಿವ್ಯಕ್ತಿ ನೀಡುವ ಸಂಭ್ರಮಾಚರಣೆ ಎನ್ನುತ್ತಾರೆ ಕೆ.ಆರ್. ಅರುಣ್ ಕುಮಾರ್

ಭೂಮಿ ಹುಣ್ಣಿಮೆಯೊಂದಿಗೆ ಮಲೆನಾಡಿಗೆ ಅಡಿ ಇಡುವ (ಅಂದರೆ ಹದಿನೈದು ದಿನಗಳ ಮೊದಲೇ) ದೀಪಗಳ ಹಬ್ಬ ಜಾತಿ-ವರ್ಗಗಳ ಹಂಗಿಲ್ಲದೇ ಮಣ್ಣಿನ ಮಕ್ಕಳ ಬದುಕಿಗೆ ಬೆಳಕು ತುಂಬುತ್ತದೆ. ಮನುಷ್ಯ ಬದುಕಿನ ತಾಮಸ ಗುಣ ನಿವಾರಿಸಿ ಬೆಳಕು ಚಿಮ್ಮಿಸುವ ಮಹೋನ್ನತ ಆಶಯವುಳ್ಳ ಈ ಹಬ್ಬ ರೈತರ ಹಾಗೂ ಭೂತಾಯಿಯ ನಡುವಿನ ಕರುಳುಬಳ್ಳಿಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಹಳ್ಳಿಗರಿಗಂತೂ ಈ ಹಬ್ಬ ನೀಡುವ ಜೀವನೋತ್ಸಾಹ ಎಣೆ ಇಲ್ಲದ್ದು.

ಕತ್ತಲೆ ಗಿಡಪಾಲು ಸುತ್ತು ಮಾವಿನ ಸಾಲು

ಎತ್ತೆತ್ತಲೂ ಬೆಳಕು ದವುಡಿಟ್ಟು

ಎತ್ತೆತ್ತಲೂ ಬೆಳಕು ದವುಡಿಟ್ಟು ಹಬ್ಯಾವು

ದೀಪದ ದಾರಿ ನೇರಾಗಿ...

ದೀಪದ ಹಬ್ಬಕ್ಕೆ ಮಾವಿನ ಸಾಲು, ಹೂವಿನ ಪರಿಮಳ ಸ್ವಾಗತ ನೀಡುತ್ತಿದ್ದರೆ ಎತ್ತೆತ್ತಲೂ ಬೆಳಕು ದಾಂಗುಡಿ ಇಡುತ್ತದೆ... ಅದ್ಭುತ ಜಾನಪದೀಯ ಕಲ್ಪನೆಯಲ್ಲಿ ಎಂತಹ ಸೊಗಸಿದೆ ನೋಡಿ.

ಕತ್ತಲೆ ಗಿಡಪಾಲು ಸುತ್ತು ಮಾವಿನ ಸಾಲು

ಎತ್ತೆತ್ತಲು ಹೂವ ಪರಿಮಳ

ಎತ್ತೆತ್ತಲು ಹೂವ ಪರಿಮಳ ಸೂಸ್ಯಾವು

ದೀಪದ ದಾರಿ ನೇರಾಗಿ....

ಹೀಗೆ ಮಣ್ಣಿನ ಮಗ ಭೂತಾಯಿಗೆ ಕುಡಿದೀಪಗಳ ಮೂಲಕ ಕೃತಜ್ಞತೆ ಸಲ್ಲಿಸುತ್ತಾನೆ. ಭೂಮಿಯನ್ನು ಹೆಣ್ಣೆಂದು ಪರಿಭಾವಿಸುವ, ಆ ಮೂಲಕ ಪ್ರಕೃತಿ-ಮನುಷ್ಯರ ಸಂಬಂಧಕ್ಕೆ ಮಾನವೀಯ ಆಯಾಮ ನೀಡುವ ನಮ್ಮ ಉದಾತ್ತ ನಂಬಿಕೆಗೆ ಆಚರಣೆಯ ಪೋಷಾಕು ತೊಡಿಸುವ 'ಭೂಮಿಹುಣ್ಣಿಮೆ' ಒಂದು ರೀತಿಯಲ್ಲಿ ಭೂತಾಯಿಯ ಸೀಮಂತ. ಭೂತಾಯಿ ಫಲವತಿಯಾದ ಕಾರ್ತಿಕ ಮಾಸದ ಈ ಸಂದರ್ಭದಲ್ಲಿ ಹೊಲ-ಗದ್ದೆಗಳೆಲ್ಲಾ ತೆನೆ ಹೊತ್ತು, ಹಸಿರಿನಿಂದ ನಳನಳಿಸುತ್ತಿರುತ್ತವೆ. ರೈತರ ವರ್ಷಪೂರ್ತಿಯ ಶ್ರಮದ ಪ್ರತಿಫಲ ಮೂರ್ತರೂಪ ಧರಿಸಿ ಕಣ್ಸೆಳೆಯುತ್ತಿರುತ್ತದೆ. ಹೀಗಾಗಿ 'ಭೂಮಿಹುಣ್ಣಿಮೆ' ಹಬ್ಬ, ಭೂತಾಯಿ ಮಡಿಲು ತುಂಬಿದ ಕ್ಷಣ. ಬಸಿರು ಧರಿಸಿದ ಭೂತಾಯಿಯ ಬಯಕೆ ತೀರಿಸುವ ಸದವಕಾಶ ಅವಳ ಮಕ್ಕಳಿಗೆ. ಮುಂಜಾನೆ ಕೋಳಿ ಕೂಗುವ ಮೊದಲೇ ಗದ್ದೆ, ತೋಟಗಳಿಗೆ ದಾಂಗುಡಿ ಇಡುವ ಹಳ್ಳಿ ಜನತೆ ಎಲ್ಲಾ ಬಗೆಯ ಸೊಪ್ಪು, ತರಕಾರಿ, ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿದ 'ಚರಗ'ವನ್ನು ಗದ್ದೆ, ತೋಟದ ತುಂಬೆಲ್ಲಾ ಚೆಲ್ಲುವ ಮೂಲಕ 'ಭೂಮಿಹುಣ್ಣಿಮೆ' ಹಬ್ಬ ಪ್ರಾರಂಭವಾಗುತ್ತದೆ.

ಆನಿ ಅಂಬ್ಲಿ ಅಕ್ಕಿ ಅಂಬ್ಲಿ

ಬೇಲಿ ಮೇಲಿರೋ ದಾರೆ ಹೀರೆಕಾಯಿ

ಗುಡ್ಡದ ಮೇಲಿರೊ ನೂರೊಂದು ಬುಕ್ಕಿ ಕುಡಿ

ಭೂಮಿತಾಯಿಗೆ ಬಯಕೆಯೋ ಬಯಕೆ...

ಎಂದು ರಾಗಬದ್ಧವಾಗಿ ಕೂಗುತ್ತಾ ಸೂರ್ಯ ಮೂಡಣದಲ್ಲಿ ಆಕಳಿಸುವ ಮುನ್ನವೇ ಚರಗವನ್ನು ಭೂತಾಯಿಗೆ ಉಣಿಸಿ ಮನೆಗೆ ಹಿಂದಿರುಗುವ ಹಳ್ಳಿಯ ಯುವಕರು, ತುಂಬಾ ತಡವಾಗಿ, ಅಂದರೆ, ಮುಂಜಾನೆ ಮುಸುಕು ಹರಿದ ಮೇಲೆ ಚರಗ ಚೆಲ್ಲುವ ತಮ್ಮ ಗೆಳೆಯರನ್ನು, ಅಕ್ಕ-ಪಕ್ಕದ ಮನೆಯವರನ್ನು ನಾನಾ ಬಗೆಯಲ್ಲಿ ಛೇಡಿಸುತ್ತಾ ಹಬ್ಬಕ್ಕೆ ಕಳೆಕಟ್ಟುತ್ತಾರೆ. ನಂತರದ ಕಾರ್ಯಕ್ಕೆ ಮನೆಯ ಹೆಣ್ಣುಮಕ್ಕಳದೇ ನೇತೃತ್ವ. ಗಂಡಸರದ್ದೇನಿದ್ದರೂ ಅವರ ಆಜ್ಞೆಯನ್ನು ಪಾಲಿಸುವ ಕಾರ್ಯವಷ್ಟೇ. ದೇವರ ಕೋಣೆಯಲ್ಲಿದ್ದ ಎಲ್ಲಾ ಪೂಜಾ ಸಾಮಗ್ರಿಗಳೂ ತೋಟಕ್ಕೆ, ಗದ್ದೆಗೆ ರವಾನೆಯಾಗುತ್ತವೆ. ಗದ್ದೆಯ ತಮ್ಮ ಬೆಳೆಯನ್ನು ಮೂರು ಕುಡಿಗಳಾಗಿ ಕಟ್ಟಿ ಮನೆಯ ಮುತ್ತೈದೆಯರೇ ತಮ್ಮ ಕೊರಳಿನ ಮಾಂಗಲ್ಯವನ್ನು ಅದಕ್ಕೆ ತೊಡಿಸಿ, ಭೂತಾಯಿ ಧರಿಸಿದ ಮೊದಲ ಫಸಲಿಗೆ ಪೂಜೆ ಸಲ್ಲಿಸುತ್ತಾ ರೈತರು ತಮ್ಮನ್ನು ಅನವರತ ಪಾಲಿಸುವಂತೆ ಭೂತಾಯಿಯನ್ನು ಬೇಡಿಕೊಳ್ಳುತ್ತಾರೆ. ಭೂಮಿ ಪೂಜೆ ಮುಗಿಸಿ ಬರುವಾಗ ಹಬ್ಬದ ವಿಶೇಷ ಖಾದ್ಯ 'ಕೊಟ್ಟೆ ಕಡುಬ'ನ್ನು (ಬಾಳೆಎಲೆಯಲ್ಲಿ ಸುತ್ತಲಾದ ಅಕ್ಕಿಹಿಟ್ಟಿನ ಕಡುಬು) ತಮ್ಮ ತೋಟ ಅಥವಾ ಹೊಲಗಳಲ್ಲಿ ಹೂಳಿ ಬರುತ್ತಾರೆ. ಮುಂದೆ, ಫಸಲನ್ನು ಕೊಯ್ಲು ಮಾಡುವಾಗ, ಹಬ್ಬದಲ್ಲಿ ಹೂಳಿಟ್ಟ ಕೊಟ್ಟೆಕಡುಬನ್ನು ಹೊರತೆಗೆದು, ಅದರಿಂದ ಪಾಯಸ ಮಾಡಿ ಉಣ್ಣುತ್ತಾರೆ.

ಭೂಮಿಹುಣ್ಣಿಮೆ ಹಬ್ಬದ ಸಂಜೆ ಗದ್ದೆ ಹಾಗೂ ತೋಟಗಳಲ್ಲಿ ದೀಪ ಉರಿಸಲಾಗುತ್ತದೆ. ಇದು ಭೂತಾಯಿಯ ಹಲವು ಬಯಕೆಗಳಲ್ಲಿ ಒಂದು ಎಂಬ ಜನಪದ ನಂಬಿಕೆಯ ಜೊತೆಗೆ, ತೋಟದಲ್ಲಿರುವ ಹುಳಗಳು ದೀಪದ ಬೆಳಕಿನ ಆಕರ್ಷಣೆಗೆ ತುತ್ತಾಗಿ ದೀಪದ ಜ್ವಾಲೆಗೆ ಸಿಲುಕಿ ಆಹುತಿಯಾಗುತ್ತವೆ ಎಂಬ ವೈಜ್ಞಾನಿಕ ಕಾರಣವೂ ಈ ಆಚರಣೆಯ ಹಿಂದಿದೆ.

 ಸಭ್ಯಸ್ಥಿಕೆಯ ಸೋಗಿನಡಿ ಒತ್ತಾಯಪೂರ್ವಕವಾಗಿ ಅದುಮಿಟ್ಟ ಭಾವನೆ ಹೊರಹೊಮ್ಮಲು ಈ ಹಬ್ಬ ಒಂದು ರಹದಾರಿ. ಹಬ್ಬದ ಅಂಥದೊಂದು ಮನರಂಜನೀಯ, ವಿಲಕ್ಷಣ ಆಚರಣೆಯೆಂದರೆ 'ಬೂರೆಹಬ್ಬ'. ಇದು ಕಳ್ಳತನವನ್ನು (ಬೂರೆಗಳವು) ಮಾನ್ಯ ಮಾಡುವ, ಸಭ್ಯಸ್ಥರೂ ಕಳ್ಳತನದ 'ಥ್ರಿಲ್' ಅನುಭವಿಸುವಂತೆ ಮಾಡುವ ವಿಶಿಷ್ಟ ಹಬ್ಬ. ಹಳ್ಳಿಯ ಪಡ್ಡೆ ಹುಡುಗರಿಗೆ ಈ ಹಬ್ಬದಲ್ಲಿ ಪರರಿಗೆ ಸೇರಿದ ವಸ್ತುಗಳನ್ನೂ ರಾಜಾರೋಷವಾಗಿ ಕದಿಯುವ ಸುವರ್ಣಾವಕಾಶ. ಗದ್ದೆಯ ಬದುವಿನ ಮೇಲೆ ನಳನಳಿಸುವ ಸೌತೆಕಾಯಿ, ಹಸಿಮೆಣಸು, ಎಳನೀರು, ಅಡಿಕೆ ಗೊನೆ ಎಲ್ಲವೂ ಅಂದು 'ಕಳ್ಳರ ಸ್ವತ್ತು'.

ಕದಿಯುವಾಗ ಸಿಕ್ಕಿಬಿದ್ದ 'ಅರೆಕಾಲಿಕ ಕಳ್ಳ' ಮುಂದಿನ ಹಬ್ಬದಲ್ಲಿ ಜೀವಂತ ಇರುವುದಿಲ್ಲ ಎಂಬ ನಂಬಿಕೆ ಹಳ್ಳಿಗಳಲ್ಲಿ ಇದೆ. ಇದು ಕಳ್ಳತನಕ್ಕೆ ಮಾತ್ರ ಸೀಮಿತವಲ್ಲ. ಹತ್ತು ಹಲವು ಚೇಷ್ಟೆಗಳಿಗೆ -ಹಳ್ಳಿಗರ ಮಾತಿನಲ್ಲಿಯೇ ಹೇಳಬೇಕೆಂದರೆ- 'ಮಂಗ್ಯಾಟ'ಗಳಿಗೆ, ಹೇಳಿ ಮಾಡಿಸಿದ ಹಬ್ಬ. ಅರೆಯುವ ಕಲ್ಲನ್ನು ಕದ್ದು, ಆ ಮನೆಯವರು ಹಬ್ಬದ ಅಡಿಗೆ ಮಾಡಲು ಬೇರೆ ಮನೆಯವರ ಅರೆಯುವ ಕಲ್ಲನ್ನು ಬೇಡಿ ತರುವಂತೆ ಮಾಡುವುದು; ಯಾರದೋ ಮನೆಯ ಆಕಳು ಕರುವನ್ನು ರಾತ್ರೋರಾತ್ರಿ ಹಗ್ಗ ಕಳಚಿ ಆಕಳ ಮೊಲೆ ಕುಡಿಸಿ ಬೆಳಗ್ಗೆ ಆ ಮನೆಯವರಿಗೆ ಒಂದು ತೊಟ್ಟು ಹಾಲೂ ಸಿಗದಂತೆ ಮಾಡಿ ಅವರನ್ನು ಕಂಗಾಲು ಮಾಡುವುದು. ಹೀಗೆ, ಅಷ್ಟೇನೂ ಅಪಾಯಕಾರಿಯಲ್ಲದ, ಚೇಷ್ಟೆಗಳಿಗೆ ಈ ಹಬ್ಬ ಉತ್ತಮ ವೇದಿಕೆ. ಬಯಲು ಸೀಮೆಯಲ್ಲಿ ಹೋಳಿ ಹಬ್ಬದ ಸಂದರ್ಭ ಇಂತಹ 'ಅರೆಕಾಲಿಕ ಕಳವು' (ಅದೂ ವಿಶೇಷವಾಗಿ ಸೌದೆಗಳನ್ನು) ಮಾಡುವ ಪರಿಪಾಠ ಇದ್ದರೆ, ಮಲೆನಾಡಿನಲ್ಲಿ ದೀಪಾವಳಿ ಕಳವಿಗೆ ವೇದಿಕೆ ಒದಗಿಸುವುದು ವಿಶೇಷ. ಸಾಮಾನ್ಯವಾಗಿ, ಹಬ್ಬದ ಸಂದರ್ಭದ ಈ ಕಳ್ಳರಿಗೆ ಶಿಕ್ಷೆ ಕೊಡುವ ಗೋಜಿಗೆ ಯಾರೂ ಹೋಗುವುದಿಲ್ಲ. ಆದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೆಲವೊಮ್ಮೆ ಗಲಭೆಗಳು ನಡೆದ ಉದಾಹರಣೆಗಳೂ ಇವೆ.

ಬೂರೆ ಹಬ್ಬದ ವೈಶಿಷ್ಟ್ಯ ಕೇವಲ ಕಳ್ಳತನಕ್ಕೇ ಸೀಮಿತವಾಗಿಲ್ಲ. ಇದು ಮನೆಯ ಕರುಳುಬಳ್ಳಿಗಳನ್ನು ಒಂದು ಮಾಡುವ ವಿಶಿಷ್ಟ ಹಬ್ಬವೂ ಹೌದು. ಆ ಹಬ್ಬದ ಮುಂಜಾನೆ, ಮನೆಯ ಹೆಣ್ಣುಮಕ್ಕಳು ಬಚ್ಚಲಿನ ಹಂಡೆಗೆ ಬೂರೆ ನೀರು ತುಂಬುವ ಶಾಸ್ತ್ರ ಮಾಡುತ್ತಾರೆ. ಈ ಕುರಿತ ಒಂದು ಸುಂದರ ಜಾನಪದ ಗೀತೆಯಲ್ಲಿ ಅಣ್ಣ ಬೂರೆ ನೀರು ತುಂಬುವ ತನ್ನ ತಂಗಿಯ ಕುರಿತು ಹೀಗೆ ಹೇಳುತ್ತಾನೆ:

ಸುತ್ತಿದ ಸೆರಗು ಮ್ಯಾಲೆತ್ತಿದ ಕೈಗಳು

ಕುತ್ತಿಗೆ ಸರವೇ ಜೋಲಾಡಿ

ಕುತ್ತಿಗೆ ಸರವೇ ಜೋಲಾಡಿ ಗಂಗೆಯ

ನೆತ್ತೆತ್ತಿ ತಂಗಿ ದಣಿದಳು

ನಂತರ ಮನೆಯವರೆಲ್ಲಾ ಎಣ್ಣೆ ಹಚ್ಚಿಕೊಂಡು ಅಭ್ಯಂಜನಕ್ಕೆ ತಯಾರಾಗುತ್ತಾರೆ. ಈ ಹಬ್ಬದ ಆಚರಣೆಗಳಲ್ಲಿ 'ಅಭ್ಯಂಜನ'ಕ್ಕೇ ವಿಶೇಷ ಸ್ಥಾನವಿದೆ. ದಿನದ ಮೊದಲ ಅಭ್ಯಂಜನದ ಯೋಗ ಮನೆಯ ಹೊಸ ಅಳಿಯನಿಗೆ.

ಕಂಚಿನ ಬಟ್ಟಲ ಮಿಂಚಿನೆಣ್ಣೆಯ ಕೊಂಡು

ಕಂಚೇರೈವರು ತಳಿವರು

ಕಂಚೇರೈವರು ತಳಿವರಳಿಯನ ಮನೆಗೆ

ಸಂಚಿಸಿರಿ ತಾಯಿ ಬರಲೆಂದು

ಅಭ್ಯಂಜನವೆಂದರೆ ಕೇವಲ ಎಣ್ಣೆ ಹಚ್ಚಿಕೊಂಡು ಮೀಯುವುದಲ್ಲ. ನಿಜಕ್ಕೂ ಅದು ಮಲೆನಾಡಿನ ಸಮೃದ್ಧ 'ಅಭ್ಯಂಜನ'.

ಏಳು ಹಂಡೆ ನೀರು ಯಾಲಕ್ಕಿ ಪರಿಮಳ

ಎದ್ದೆದ್ದು ಮರಳಿ ಉಕ್ಯಾವು

ಎದ್ದೆದ್ದು ಮರಳಿ ಉಕ್ಯಾವಭ್ಯಂಗಕೆ

ಮುದ್ದಿನಳಿಯನ ಕರೆತನ್ನಿ

ಈ ಶಾಸ್ತ್ರ ಮಾಡುವಾಗ ನೀರಿನ ಹರಿವೆಗೆ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮಹಲಿಂಗನ ಬಳ್ಳಿ, ಕಹಿಹಿಂಡಲೆ ಕಾಯಿ ಬಳ್ಳಿಗಳನ್ನು ಸುತ್ತುತ್ತಾರೆ. ಬೂರೆ ಅಮಾವಾಸ್ಯೆಯಂದು ಕಿತ್ತು ತರುವ ಈ ಗಿಡಮೂಲಿಕೆಗಳಿಗೆ ಅಪರೂಪದ ಔಷಧೀಯ ಗುಣಗಳು ಪ್ರಾಪ್ತವಾಗಿರುತ್ತವೆ ಎಂಬುದು ಹಳ್ಳಿಗರ ನಂಬಿಕೆ.

ಕೇವಲ ಕುಟುಂಬದ ಸದಸ್ಯರಿಗೆ ಮಾತ್ರವಲ್ಲ ವರ್ಷಪೂರ್ತಿ ಗದ್ದೆಯಲ್ಲಿ ಸೇವೆ ಸಲ್ಲಿಸಿ ಮನೆಯ ಮೂಲೆ ಮೂಲೆಗಳಲ್ಲಿ ಸುಸ್ತಾಗಿ ಬಿದ್ದಿರುವ ಕೃಷಿ ಸಲಕರಣೆಗಳಿಗೂ ಅಂದು ಅಭ್ಯಂಜನ. ಕೃಷಿಕರು ತಮ್ಮ ಕೃಷಿ ಸಲಕರಣೆಗಳೆಲ್ಲವನ್ನೂ ಶುಚಿಗೊಳಿಸಿ, ಅಲಂಕಾರಿಕವಾಗಿ ಜೋಡಿಸಿಟ್ಟು ಪೂಜೆ ಸಲ್ಲಿಸುತ್ತಾರೆ. ಆ ಮೂಲಕ ತಮ್ಮನ್ನು ಪೊರೆಯುವ ಕೃಷಿ ಸಾಧನಗಳಿಗೆ ಕೃಷಿಕರು ತಮ್ಮ ಗೌರವ ಹಾಗೂ ಭಕ್ತಿಯನ್ನು ತೋರಿಸುತ್ತಾರೆ. ಜೊತೆಗೆ ಇದು ಮುಂಬರುವ ಕೃಷಿ ಕೆಲಸಗಳಿಗೆ ಪೂರ್ವ ತಯಾರಿ.

ಹಬ್ಬದ ಮತ್ತೊಂದು ಕಾರ್ಯಕ್ರಮ ಬಲಿ ಪೂಜೆ. ಹಿಂದಿನಿಂದ ಆಚರಿಸಿಕೊಂಡು ಬಂದ ನಿರ್ದಿಷ್ಟ ಮನೆತನದವರು ಮಾತ್ರ ಬಲಿ ಚಕ್ರವರ್ತಿಗೆ ಪೂಜೆ ಸಲ್ಲಿಸುತ್ತಾರೆ. ಬಲಿಪಾಡ್ಯಮಿಯಂದು ನಡೆಯುವ ಗೋಪೂಜೆ ಭಾರತೀಯ ಸಂಸ್ಕೃತಿಯಲ್ಲಿ, ಜನಮಾನಸದಲ್ಲಿ ಗೋವು ಹೊಂದಿರುವ ಆದರಣೀಯ ಸ್ಥಾನಕ್ಕೆ ಕನ್ನಡಿ ಹಿಡಿಯುತ್ತದೆ. ಗೋವನ್ನು ಪೂಜಿಸಿ, ಮಲೆನಾಡಿನ ಮನೆಗಳಲ್ಲಿ ಈ ಹಬ್ಬಕ್ಕೆಂದೇ ಮಾಡುವ ಚಪ್ಪೆರೊಟ್ಟಿಗಳನ್ನು ಅದರ ಕುತ್ತಿಗೆಗೆ ಕಟ್ಟುತ್ತಾರೆ. ಗೋವಿನ ಜೊತೆ ಉಳಿದೆಲ್ಲಾ ಜಾನುವಾರುಗಳು ಚಪ್ಪೆ ರೊಟ್ಟಿಗಳನ್ನು ತಮ್ಮ ಕುತ್ತಿಗೆಗೆ ಕಟ್ಟಿಸಿಕೊಂಡು ಸರ್ವಾಲಂಕಾರಭೂಷಿತರಾಗಿ ಬೀದಿಯ ತುಂಬಾ ವೈಯ್ಯಾರದಿಂದ ನಡೆಯುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಈ ಸಂದರ್ಭದಲ್ಲಿಯೇ ಜರುಗುವ ಬಲಿಪಾಡ್ಯಮಿ ಪೂಜೆ, ಈ ದೀಪಾವಳಿ ಹಬ್ಬದ ಮಹತ್ವದ ಆಚರಣೆಗಳಲ್ಲಿ ಒಂದು. ಬಲಿಪಾಡ್ಯಮಿಯ ರಾತ್ರಿ ಮಕ್ಕಳು, ಯುವಕರು, ವೃದ್ಧರಾದಿಯಾಗಿ ದೀಪದ ಕೋಲುಗಳನ್ನು ಮಾಡುತ್ತಾರೆ. ದೀಪದ ಕೋಲುಗಳೆಂದರೆ, ಕೋಲುಗಳಿಗೆ ಹತ್ತಿಯ ಬಟ್ಟೆಯನ್ನು ಕಟ್ಟಿ ಅದಕ್ಕೆ ಬೆಂಕಿ ಹಚ್ಚಲಾಗುತ್ತದೆ. ಅವುಗಳನ್ನು ಮನೆ ಹಿತ್ತಲು, ಗೊಬ್ಬರದ ಗುಂಡಿ, ಕೊಟ್ಟಿಗೆ ಮನೆ, ತೆಂಗಿನ ಮರಗಳ ಕೆಳಭಾಗಗಳಲ್ಲಿ ಹಚ್ಚಿಡಲಾಗುತ್ತದೆ.

ಬಲಿ ಪಾಡ್ಯಮಿಯ ರಾತ್ರಿ ಮಲೆನಾಡಿಗೇ ವಿಶೇಷವಾದ 'ಅಂಟಿಗೆ-ಪಂಟಿಗೆ' ಅರ್ಥಾತ್ 'ದೀಪ ನೀಡುವ' ಅಥವಾ 'ಹಬ್ಬ ಹಾಡುವ' ಆಚರಣೆಗೆ ವೇದಿಕೆ ಸಿದ್ಧವಾಗುತ್ತದೆ. ಊರಿನ ಯುವಕರೆಲ್ಲಾ ಗ್ರಾಮ ದೇವತೆಗೆ ಪೂಜೆ ಮಾಡಿ ದೇವರ ನಂದಾದೀಪದ ಕುಡಿಯಿಂದ ತಮ್ಮ ದೀಪಗಳನ್ನು ಹತ್ತಿಸಿಕೊಂಡು ಗುಂಪುಗಳಲ್ಲಿ ಮನೆ ಮನೆಗೆ ಭೇಟಿ ನೀಡುತ್ತಾ 'ತಾಮಸಹರಣ' ಜ್ಯೋತಿಯನ್ನು ಮನೆಮನೆಗೂ ಹಂಚುತ್ತಾರೆ. ದೀಪ ಹಿಡಿದ ಯಜಮಾನನ ಸಾರಥ್ಯದಲ್ಲಿ ಮುಂದುವರಿಯುವ ಈ ಗುಂಪು ನಿಧಾನವಾಗಿ ಹಬ್ಬದ ರಾತ್ರಿಗೆ ಧ್ವನಿ ನೀಡುತ್ತದೆ.

ಕಲ್ಲುಮುಳ್ಳಿದ್ದರೆ ಹುಲ್ಲಂತ ತಿಳಿದೇವು

ಸೊಲ್ಲೇರಿಸಿ ಹಾಡಿ ನಡೆದೇವು

ಸೊಲ್ಲೇರಿಸಿ ಹಾಡಿ ನಡೆದೇವು ಭಗವಂತ

ಸುಳ್ಳಾಡೆವು ದಾರಿ ಬಿರುಸಂತ...

ನಡು ರಾತ್ರಿಯಲ್ಲಿ ಮನೆಬಾಗಿಲಿಗೆ ಬಂದಾಗ ಬಾಗಿಲು ತೆರೆಯದಿದ್ದರೆ ತಮ್ಮ ಶ್ರಮವನ್ನು ಸೂಚಿಸಲು ಅವರು ಇದೇ ಜಾನಪದ ಹಾಡಿಗೆ ಮೊರೆ ಹೋಗುತ್ತಾರೆ.

ಮುಳ್ಳಾಗೆ ಕಲ್ಲಾಗೆ ಬಂದೇವಯ್ಯಾ

ತಂದೇವೀ ದೀಪಾನ ಕೊಳ್ಳೀರಯ್ಯ

ಕತ್ತಲು ಹಾದ್ಯಾಗ ಬಂದೇವಯ್ಯಾ

ತಂದೇವೀ ದೀಪಾನ ಕೊಳ್ಳೀರಯ್ಯ

ಗುಡ್ಡ ಬೆಟ್ಟ ಹತ್ತಿ ಬಂದೇವಯ್ಯ

ತಂದೇವೀ ದೀಪಾನ ಕೊಳ್ಳೀರಯ್ಯ...

ಹಬ್ಬದ ಕೊನೆಯ ದಿವಸ ಅಂದರೆ ಮೂರನೆಯ ದಿನವನ್ನು 'ವಸ್ತೊಡಿಕೆ' (ವರ್ಷದ ತೊಡಗು) ಎಂದು ಕರೆಯುತ್ತಾರೆ. ಆ ದಿನ ಮುಂದಿನ ಕೃಷಿ ಚಟುವಟಿಕೆಗಳಿಗೆ ತಯಾರಿ ನಡೆಯುತ್ತದೆ. ಕಣವನ್ನು ಸಗಣಿಯಿಂದ ಸಾರಿಸುವುದು, ಕೃಷಿ ಪರಿಕರಗಳನ್ನು ಸುಸ್ಥಿತಿಯಲ್ಲಿಡುವುದು ಮುಂತಾದ ಕಾರ್ಯಗಳು ಈ ವಸ್ತೊಡಿಕೆಯಂದು ನಡೆಯುತ್ತವೆ.

ಹಬ್ಬದ ವೇಳೆಗಳಲ್ಲಿ ಪೂಜೆ ಪುನಸ್ಕಾರದ ಏಕತಾನತೆಯನ್ನು ಮುರಿಯಲು ಮಲೆನಾಡಿನ ಹಲವೆಡೆ ಹಲವು ರೀತಿಯ ಆಟಗಳನ್ನಾಡುತ್ತಾರೆ. ಅಂತಹ ಆಟಗಳಲ್ಲಿ ತೀರ್ಥಹಳ್ಳಿಯ ಕಡೆ ಆಡುವ 'ಕೆರಕಲಾಟ' ಒಂದು ವಿಶೇಷ. ಹಬ್ಬದ ಪ್ರಾರಂಭದಲ್ಲಿಯೇ ಆಕಳ ಸಗಣಿಯ 7 ಕಟ್ಟೆಗಳನ್ನು ಕಟ್ಟಲಾಗುತ್ತದೆ. ಅವುಗಳನ್ನು 'ಕೆರಕಲು' ಎಂದು ಕರೆಯಲಾಗುತ್ತದೆ. ಆ 'ಕೆರಕಲ'ನ್ನು ನೆಲ್ಲಿ, ನಿಂಬೆ, ತುಳಸಿ, ಅಡಿಕೆ, ಪಚ್ಚೆ ತೆನೆ ಮುಂತಾದ ಕಾಯಿ, ಸೊಪ್ಪುಗಳಿಂದ ಸಿಂಗರಿಸುತ್ತಾರೆ. ಮಲೆನಾಡಿನ ಕೆಲವೆಡೆ, ತೀರ್ಥಹಳ್ಳಿ ಭಾಗದಲ್ಲಿ, ಈ ಪದ್ಧತಿ ಹೊಸಬಗೆಯ ಆಟಕ್ಕೆ ನಾಂದಿ ಹಾಡಿದೆ. "ಈ ಕೆರಕಲಾಟ ಮಲೆನಾಡಿನ ಅದರಲ್ಲೂ ವಿಶೇಷವಾಗಿ ತೀರ್ಥಹಳ್ಳಿಯ ಬಹಳಷ್ಟು ಕಡೆ ಚಾಲ್ತಿಯಲ್ಲಿದೆ. ಹೆಚ್ಚು ಒಡನಾಟವಿಲ್ಲದ ಒಂದೇ ಕುಟುಂಬದ ಸದಸ್ಯರು, ಹೆಚ್ಚಾಗಿ ಅತ್ತಿಗೆ-ಮೈದುನರ ನಡುವೆ ಈ ಚೇಷ್ಟೆಯ ಆಟ ನಡೆಯುತ್ತದೆ. ಮಾತುಗಳ ನಡುವೆ ಈ ಹಬ್ಬದ ಐದು ದಿನಗಳಲ್ಲಿ 'ಹ್ಞಾ,' 'ಹ್ಞು' ಎಂಬ ಸಂಜ್ಞೆಗಳನ್ನು ಬಳಸಿದ್ದೇ ಆದರೆ ಹಬ್ಬ ಮುಗಿಯುವ ತನಕ ಐದು ದಿನಗಳೂ ಆ ವ್ಯಕ್ತಿ ಮನೆಯ ಇನ್ನಿತರ ಸದಸ್ಯರ ಕಡೆಯಿಂದ 'ಕೆರಕ, ಕೆರಕ' ಎಂದು ಕರೆಯಿಸಿಕೊಳ್ಳುವುದು ತಪ್ಪಿದ್ದಲ್ಲ. ಹಾಗೆ, ಒಬ್ಬ ವ್ಯಕ್ತಿ ಇನ್ನೊಬ್ಬರನ್ನು 'ಹ್ಞಾ'ಗುಟ್ಟಿಸಲು ಪ್ರಯತ್ನಿಸುವುದು, ಆ ಉದ್ಗಾರ ತಮ್ಮ ಬಾಯಿಂದ ಹೊರಬಾರದಂತೆ ಪ್ರಜ್ಞಾಪೂರ್ವಕವಾಗಿ ಮಾತನಾಡುವುದು... ಹೀಗೆ ಈ ಆಟ ಮನೆಯ ಒಲೆಗಳ ಮೇಲೆ ತಯಾರಾಗುವ ಬಿಸಿ ಬಿಸಿ ಹೋಳಿಗೆಗಳ ಜೊತೆ ಮನೆಯ ವಾತಾವರಣವನ್ನು, ಮೈಮನಸ್ಸನ್ನು ಹದವಾಗಿಟ್ಟಿರುತ್ತದೆ" ಎನ್ನುತ್ತಾರೆ ತೀರ್ಥಹಳ್ಳಿಯ ತುಂಗಾ ಕಾಲೇಜಿನ ಪ್ರಾಧ್ಯಾಪಕ ಗಣಪತಿ.

ಹೀಗೆ ಬೆಳಕಿನ ಈ ಹಬ್ಬ ಬರೀ ಆಚರಣೆ ಅಷ್ಟೇ ಅಲ್ಲದೆ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಹೇಳಲು ಐದು ದಿನಗಳ ಹಬ್ಬವಾದರೂ, ದೀಪಾವಳಿಯ ಘಮ ವಾರಗಟ್ಟಲೇ ಊರಿನ ಬೀದಿಗಳಲ್ಲಿ ಪಸರಿಸುತ್ತಿರುತ್ತದೆ. ಹಬ್ಬದ ನಂತರದ ದಿನಗಳು 'ಇಲಾಡಿ' ಅಂದರೆ, ಆ ದಿನ ಊರಿನ ಎಲ್ಲಾ ಕೃಷಿ ಕಾರ್ಯಗಳಿಗೂ ಸಾಮೂಹಿಕ ರಜೆ. ಅಂದು ಯಾರೂ ಗದ್ದೆ, ತೋಟಗಳತ್ತ ಕಾಲು ಹಾಕುವುದಿಲ್ಲ. ಬದಲಿಗೆ, ಯುವಕರು, ವೃದ್ಧರೆನ್ನದೇ ಊರಿಗೆ ಊರೇ ಹಲವು ಗ್ರಾಮೀಣ ಆಟಗಳಲ್ಲಿ ಪಾಲ್ಗೊಳ್ಳುತ್ತದೆ. ಗುರಿಕಾಯಿ ಆಟ, ಲಗೋರಿ, ಚಿನ್ನಿ-ದಾಂಡು, ವಾಲಿಬಾಲ್ ಹೀಗೆ ಹಗಲೆಲ್ಲಾ ಚಿಕ್ಕ ಮಕ್ಕಳಂತೆ ಆಡಿ ನಲಿಯುವ ಜನ ರಾತ್ರಿಯಾದಂತೆ ಕೋಲಾಟ, ಡೊಳ್ಳು ಮುಂತಾದ ದೇಸೀ ಕಲಾಪ್ರಕಾರಗಳಲ್ಲಿ ಮೈ ಮರೆಯುತ್ತದೆ.

"ಇದು ನೆಲದ ಬದುಕಿಗೆ ಹತ್ತಿರವಾದ, ಹಳ್ಳಿಗರ ಪಾಲಿಗೆ ಕೃಷಿ ಚಟುವಟಿಕೆಗಳ ಕುರಿತ ಏಕತಾನತೆಯಿಂದ ಸಿಕ್ಕ ಬಿಡುವು. ಬೇರೆಲ್ಲಾ ಹಬ್ಬಗಳಿಗೆ ಹೋಲಿಸಿದರೆ ಅಪ್ಪಟ ಗ್ರಾಮ್ಯ ಸಂಭ್ರಮದ ದೀಪಾವಳಿಗೆ ಜಾತಿ-ಮತಗಳ ಹಂಗಿಲ್ಲ. ಆದ್ದರಿಂದಲೇ ಅದು ಸಮುದಾಯದ ಪ್ರಜ್ಞೆಯಲ್ಲಿ ಆಳವಾಗಿ ಬೇರೂರಿದೆ" ಎಂದು ಸಂಶೋಧನಾ ವಿದ್ಯಾರ್ಥಿನಿ ರಾಜೇಶ್ವರಿ ಹೂಕೊಪ್ಲು ಅಭಿಪ್ರಾಯಪಡುತ್ತಾರೆ.

ನೆಲದ ವಾಸನೆಯ ಈ ಪಾರಂಪರಿಕ ದೀಪಾವಳಿ ಕೂಡಾ ಕಾಲಧರ್ಮದಂತೆ ಬದಲಾವಣೆಗೆ ಒಳಗಾಗಿದೆ. ಕೃಷಿಯ ಅಂಗವೈಕಲ್ಯ ಜನತೆಯನ್ನು ನಗರಗಳೆಡೆಗೆ ಮುಖ ಮಾಡುವಂತೆ ಮಾಡಿದೆ. ಕೊಟ್ಟಿಗೆಯಲ್ಲಿ ಎತ್ತುಗಳನ್ನು ಕಟ್ಟುತ್ತಿದ್ದ ಜಾಗದಲ್ಲಿ ಈಗ ಕಂತಿನ ಮೇಲೆ ತಂದ ಟಿಲ್ಲರ್‌ಗಳು, ಕೃಷಿ ಯಂತ್ರಗಳು ಬಂದು ನಿಂತಿವೆ. ಕೃಷಿ ಆಧುನಿಕವಾಗುತ್ತಿದ್ದಂತೆಯೇ ಜಾನುವಾರುಗಳೊಂದಿಗಿದ್ದ ಬಾಂಧವ್ಯ ನಿಧಾನವಾಗಿ ದೂರವಾಗುತ್ತಿದೆ. ಈ ಎಲ್ಲದರಿಂದ ದೀಪಾವಳಿ ಕೂಡಾ ಹೊರತಾಗಿಲ್ಲ. ಹಳ್ಳಿಗಳಲ್ಲಿ ದೀಪಗಳ ಪ್ರಖರತೆ ಮಂಕು ಮಾಡುವ ಪಟಾಕಿಗಳು ಗ್ರಾಮೀಣ ರಾತ್ರಿಗಳಿಗೆ ಹೊಗೆಯ ಹೊದಿಕೆ ಹೊದಿಸುತ್ತಿವೆ. ಅಂಟಿಗೆ-ಪಂಟಿಗೆ ಸಂಪ್ರದಾಯವನ್ನು ಶ್ರೀಮಂತಗೊಳಿಸಬೇಕಾದ ಯುವ ಧ್ವನಿಗಳಿಗೀಗ ವಿಸ್ಮೃತಿಯ ಕಾಲ. ಹಬ್ಬದ ರಾತ್ರಿಗಳಲ್ಲಿ ಕೋಲಾಟ-ಡೊಳ್ಳುಗಳಿಗೆ ಉಸಿರು ತುಂಬಬೇಕಿದ್ದ ಆ ಯುವ ಶರೀರಗಳಿಗೆ ಬೆಂಗಳೂರಿನ ಕಾರ್ಖಾನೆ, ಗಾರ್ಮೆಂಟ್ ಜೀತ. ಅಂತೂ ದೀಪದ ಹಬ್ಬವೀಗ ಸಂಕ್ರಮಣದ ಕಾಲಘಟ್ಟದಲ್ಲಿ...

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ದ ಸಂಡೇ ಇಂಡಿಯನ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-22


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಗೋಕರ್ಣದ ಅಶೋಕೆಗೆ ರಾಮಚಂದ್ರಾಪುರ ಮಠ?
»ವಿಶ್ವದ ಅತ್ಯ೦ತ ಕಿರಿಯ ನಿರ್ದೇಶಕ ಮಾಸ್ಟರ್ ಕಿಶನ್‌ಗೆ ಪ್ರಶಸ್ತಿ
»ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ
»ಎಚ್. ಶಕುಂತಳಾ ಭಟ್‌ಗೆ ಹೊರನಾಡ ರಾಜ್ಯೋತ್ಸವ ಪ್ರಶಸ್ತಿ
»ಜ್ಯೋತಿ ಕುಲಾಲ್‌ಗೆ ಪ್ರಗತಿಶೀಲ ರೈತ ಮಹಿಳೆ ಪ್ರಶಸ್ತಿ
»ರಾಜ್ಯಮಟ್ಟದ ಪ್ರತಿಭಾ ಕಾರಂಜಿ: ಪೂರ್ಣಿಮಾ ಪ್ರಥಮ ಸ್ಥಾನ
»ಕೊಡೇಕಲ್‌ನಲ್ಲಿ 401 ಜೋಡಿ sಸಾಮೊಹಿಕ ವಿವಾಹ
»ಚೆಂಬೂರು ಕರ್ನಾಟಕ ಸಂಘದಿಂದ ಸಾಹಿತ್ಯ ಸಹವಾಸ-2008 ಕಾರ್ಯಕ್ರಮ
»ತಬಲಾ ಜತೆಗೆ ಗಾಯನ ಲಿಮ್ಕಾ ದಾಖಲೆಯತ್ತ
»ಚೀನಾ ನೆಲದಲ್ಲಿ ಯಕ್ಷಗಾನ ಚೈನಾದಲ್ಲಿ ಪ್ರದರ್ಶನ ನೀಡಿದ ಮಹಿಳಾ ಯಕ್ಷಗಾನ ತಂಡ.
»ಹಿರಿಯಡಕ ಯಕ್ಷಗಾನ ಮೇಳ ಮತ್ತೆ ತಿರುಗಾಟ ಆರಂಭ
» 'ಕುರುಕ್ಷೇತ್ರಕ್ಕೊಂದು ಅಯೋಗ’ ಯಕ್ಷರಂಗ ಪ್ರಯೋಗ
»ಕೃಷ್ಣಪ್ರಸಾದ್, ಶರಾವತಿಗೆ ಕಂಬಳ ಕಲಾಪ್ರಶಸ್ತಿ
»ಕನ್ನಡದಲ್ಲಿರುವ ‘ಮಂಕುತಿಮ್ಮನ ಕಗ್ಗ' ಆಂಗ್ಲಕ್ಕೆ ಅನುವಾದದ ಕೃತಿ ಬಿಡುಗಡೆ
»ಜನಮನ ಸೂರೆಗೊಂಡ ಹಿಂದೂಸ್ಥಾನೀ ಗಾಯನ
»ಲಿಯೋ ಫೆರ್ನಾಂಡಿಸ್ ಮತ್ತು ವಿಲ್ಸನ್ ಒಲಿವೆರಾ ಪಾಲಿಗೆ ಈ ಭಾರಿಯ ದಿವೋ ಸಾಹಿತ್ಯ ಪುರಸ್ಕಾರ-2008
»ಹಿರಿಯ ಕೊಂಕಣಿ ಸಾಹಿತಿ ರವೀಂದ್ರ ಕೇಲ್ಕರ್ ರಿಗೆ ಘನತೆಯ ಜ್ನಾನಪೀಟ ಪ್ರಶಸ್ತಿ
»ಸಂಧ್ಯಾ ಪೈ ಅವರ‘ಗಮ್ಮತ್ತಿನ ಕಥೆಗಳು’,ಮು೦ತಾದ 6 ಕೃತಿ ಬಿಡುಗಡೆ
»ಜನಪದ ಸಂಸ್ಕೃತಿಯ ಬೆಸುಗೆಗೆ ಅಪೂರ್ವ, ಅಪರೂಪ ಸುಗ್ಗಿ ಬೆನ್ನಿ
»ಅರಾಟೆ ಮಂಜುನಾಥಗೆ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ
»ವೈಷ್ಣವಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ: ರಾಜ್ಯಕ್ಕೆ ಹೆಮ್ಮೆ
»‘ನಿರ್ಭಯ ಸೂರ್ಯ’ ಕವನ ಸ೦ಕಲನ ಬಿಡುಗಡೆ
»ಪ್ರಕಾಶ ಚಂದ್ರ ಶಿಶಿಲ ಅವರಿಗೆ ಡಾಕ್ಟರೇಟ್
»ಪೆರ್ಣೆ: 26 ಜೋಡಿಗಳಿಗೆ ಕಂಕಣ ಭಾಗ್ಯ
»ಮೈಸೂರು:ಬೆಟ್ಟದ ನಂದಿಗೆ ಮಹಾಭಿಷೇಕ
»ಯಲ್ಲಾಪುರ:ಮನಸೂರೆಗೊ೦ಡ ಸಂಕಲ್ಪ ಉತ್ಸವ
»ರಾಜ್ಯಮಟ್ಟದ ತುಳು ಜನಪದ ಜಾತ್ರೆ: ತುಳುವೆರೆ ಆಯನೊ-2009
»ಕೇರಳ ರಾಜ್ಯ 4 ನೇ ಕನ್ನಡ ಸಮ್ಮೇಳನಕ್ಕೆ ಸಿದ್ಧತೆ
»ಸಾಹಿತ್ಯ ಕ್ಷೇತ್ರದಲ್ಲಿ ವಿಖ್ಯಾತರಾಗಿರುವ ಲೇಖಕ ಮಾಳಗಾಂವಕರ
»ಬಹುಮುಖ ಪ್ರತಿಭೆಯ ಯಕ್ಷ ಕಲಾವಿದ ಡಿ. ಮನೋಹರ ಕುಮಾರ್
»ಕನ್ನಡ ಬಾಷೆಗೆ ಶಾಸ್ತ್ರೀಯ ಸ್ಥಾನಮಾನಗಳಿಸುವಲ್ಲಿ ಹೋರಾಟ ನಡೆಸಿದ ಗಣ್ಯರಿಗೆ ಗೌರವ
»ಕವಿಯಲ್ಲಿ ಸಮಕಾಲೀನ ಪ್ರಜ್ಞೆ ಇರಬೇಕು- ಪ್ರಾ. ಸೀತಾರಾಮ್ ಶೆಟ್ಟಿ
»ಅರ್ಧ ಶಕ್ತಿ ಪೀಠ: ನಾಸಿಕ್ ಸಪ್ತಶೃಂಗಿ ದೇವಿ
»‘ಎದೆ ತುಂಬಿ ಹಾಡುವೆನು' ಕಾರ್ಯಕರಮದಲ್ಲಿ ಮಣಿಪಾಲದ ಕೋಗಿಲೆ ಮರಿಗೆ ಪ್ರಶಸ್ತಿ
»ಯಕ್ಷಗಾನದಲ್ಲಿನ ಬದಲಾವಣೆಗೆ ಕಲಾವಿದ, ಪ್ರೇಕ್ಷಕರಿಬ್ಬರು ಕಾರಣ: ಗಣಪತಿ ಶಾಸ್ತ್ರಿ
»ಸೂರ್ಯ ಶೇರಿಗಾರ್ ನಿಟ್ಟೂರು ಉಡುಪಿ ಇವರಿಗೆ ಸನ್ಮಾನ
»ಗದುಗಿನ ‘ರತ್ನ’ ಈಗ ‘ಭಾರತ ರತ್ನ’ ;ಎಲ್ಲೆಡೆ ಸಡಗರ,ಸ೦ಭ್ರಮ, ಹರ್ಷ
»ಜ.29 ರಿಂದಚಿತ್ರದುರ್ಗದಲ್ಲಿ 75ನೇ ಸಾಹಿತ್ಯ ಸಮ್ಮೇಳನ
»ಕನ್ನಡ ಸಾಹಿತ್ಯ ಪರಿಷತ್ ನ ಉಡುಪಿ ಜಿಲ್ಲಾ ಘಟಕ ಉದ್ಘಾಟನೆ:ಪರಿಷತ್ ಕಟ್ಟಡಕ್ಕೆ ಶೀಘ್ರವೇ ಮ೦ಜೂರಾತಿ- ಡಿಸಿ
»ನುಡಿಸಿರಿ ಉದ್ಘಾಟನೆಗೆ ನಿಸಾರ್, ಅಧ್ಯಕ್ಷತೆ ಕಣವಿ
»ಕಲೆಯ ಉಳಿವಿಗೆ ಸಮಷ್ಟಿ ಯತ್ನ : ಹೇರಂಜಾಲು ಚಂದ್ರಶೇಖರ ಹೊಳ್ಳ
»ಬರವಣಿಗೆ ನನಗೆ ಸತ್ಯಾನ್ವೇಷಣೆ: ಭೈರಪ್ಪ
»ತೋನ್ಸೆ ಪಡುಮನೆ ಪಾರ೦ಪರಾಗತ ಕ೦ಬಳ
»ರಾಷ್ಟ್ರೀಯ ಭಾಷಾ ನೀತಿ ಜಾರಿಗೆ ಬರಗೂರು ಆಗ್ರಹ
»ಶಾಸ್ತ್ರೀಯ ಸ್ಥಾನ: ಪಿಐಎಲ್‌ ವಜಾಕ್ಕೆ ರಾಜ್ಯ ಆಗ್ರಹ
»ತುಳು ಭಾಷೆಗೆ ಎರಡು ಸಾವಿರ ವರ್‍ಷ ಇತಿಹಾಸ: ಪಾಲ್ತಾಡಿ ರಾಮಕೃಷ್ಣ ಆಚಾರ್
» ಈಗ ಎಲ್ಲೆಲ್ಲೂ ಹರಡುತ್ತಿದೆ ಕನನ್ನಡದ ಕಂಪು
»ಕೊಂಕಣಿ ಜನರು ಎಲ್ಲಾ ಕ್ಷೇತ್ರಗಳಲ್ಲಿ ಸೈಎನಿಸಿಕೊಳ್ಳಬೇಕು : ಖಾರ್ವಿ ಕರೆ
»ಮತಾಂತರ ಬೇಡ ದಲಿತ ಸಮುದಾಯಕ್ಕೆ ಪೇಜಾವರ ಶ್ರೀಗಳ ಕರೆ
»ಸಾಹಿತಿಗಳ ಸ್ವಸಹಾಯ ಸಂಘ ಉತ್ತಮ ಬೆಳವಣಿಗೆ: ಕಲ್ಕೂರ
»ಬ್ರಹ್ಮ ಕಲಶೋತ್ಸವ ಸಿದ್ಧತೆಯಲ್ಲಿ ಉದ್ದಂತೋಡು ತರವಾಡು
»ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ : ನಾಡೋಜನಿಗೆ ಹರ್ಷ
»ಮಾಧವ ಕುಲಕರ್ಣಿ, ಮೋಹನ ಸೋನಗೆ ಕಾಂತಾವರ ಪುರಸ್ಕಾರ ಪ್ರದಾನ
»ಶಾಸ್ತ್ರೀಯ ಭಾಷೆಗೆ ಪದ ಎರವಲು: ಕನ್ನಡ ಮನಸುಗಳ ದ್ವಂದ್ವ
»ರಾಜ್ಯೋತ್ಸವಕ್ಕೆ ಶಾಸ್ತ್ರೀಯ ಸಂಭ್ರಮ .
»ಧರ್ಮಸ್ಥಳ: ದೇವರು ಬಂದರು ಅಂಗಣದೆಡೆಗೆ...
»ಪಾಟೀಲ್ ಪುಟ್ಟಪ್ಪಗೆ ನೃಪತುಂಗ ಪ್ರಶಸ್ತಿ
»ಕನ್ನಡ ನಿಧಿ ಯೋಜನೆಗೆ 10ಕೋಟಿ ಸಂಗ್ರಹ
»ಯುಕ್ತಿ, ಶಕ್ತಿಗಳ ಹೋರಿ ಬೆದರಿಸುವ ಹಟ್ಟಿಹಬ್ಬ
»ಹಂಪಿ ಉತ್ಸವ: ಪರಂಪರೆ ನಡಿಗೆಗೆ ನಾ೦ದಿ
»ಯಕ್ಷಗಾನ ಶಿಕ್ಷಣಕ್ಕೆ ಪ್ರಮಾಣಪತ್ರದ ಮಾನ್ಯತೆ ಅಗತ್ಯ: ರಘುಪತಿ ಭಟ್
»ಜಾನಪದ ಸಾಹಿತಿ ಮುದೇನೂರು ಸಂಗಣ್ಣ ವಿಧಿವಶ
»‘ಯಕ್ಷಗಾನ ಧರ್ಮವೂ ಹೌದು’
»ಪೇಜಾವರ ಸದಾಶಿವರಾವ್ ಸ್ಮಾರಕ ಪ್ರಶಸ್ತಿಗೆ ಅರ್‍ಜಿ ಆಹ್ವಾನ
»ಬ೦ದಿದೆ ಸಡಗರದ ಹಬ್ಬ ದೀಪಾವಳಿ ,ನಿವಾರಿಸಲಿ ಮನದ ಅ೦ಧಕಾರದ ಹಾವಳಿ
»ಮರೆಯಾಗುತ್ತಿರುವ ಸಾ೦ಪ್ರದಾಯಿಕ ಗೂಡುದೀಪಗಳು
»ಗೋರುಚ ಜಾನಪದ ಅಕಾಡೆಮಿ ಅಧ್ಯಕ್ಷ
»ದಿಲ್ಲಿಯಲ್ಲಿ ಯಕ್ಷಲೋಕ ಸೃಷ್ಟಿಸಿದ ಕಾಸರಗೋಡಿನ ಬೊಂಬೆಗಳು
»ಪ್ರದೀಪ್ ಕುಮಾರ್ ಕಲ್ಕೂರರಿಗೆ ಸಾರ್ವಜನಿಕ ಅಭಿನಂದನೆ
»ಮಲೆನಾಡಗಿತ್ತಿಗೆ ದೀಪದೋಕುಳಿ
»ಮುಂಬೈ ಕನ್ನಡಿಗರ ಮನಗೆದ್ದ `ಉಷಾಹರಣ' ನಾಟಕ
»‘ವೈಟ್ ಟೈಗರ್’ ನಾಯಕ ಬೆಂಗಳೂರಿನವ
»ಬೆಳ್ಳಾರೆ: 3ನೇ ವರ್ಷದ ಶಾರದೋತ್ಸವ
»ಸಾಮೂಹಿಕ ಆಚರಣೆಯಿಂದ ಧರ್ಮಜಾಗೃತಿ : ರಾಘವೇಶ್ವರ ಶ್ರೀಗಳು
»ಮಂಗಳೂರಿನ ಅರವಿಂದ್‌‌ ಅಡಿಗರಿಗೆ 'ಬೂಕರ್' ಪ್ರಶಸ್ತಿ’
»ಸಾಹಿತಿ ಆನಂದಿ ಸದಾಶಿವ ರಾವ್ ಇನ್ನಿಲ್ಲ
»ಚಾಮುಂಡಿಬೆಟ್ಟದಲ್ಲಿ ವಿಜೃಂಭಣೆಯ ಮಹಾರಥೋತ್ಸವ
»ಸನಾತನ ಧರ್ಮ ಅತ್ಯ೦ತ ದೊಡ್ಡ ಧರ್ಮ,ಉಳಿದ ಧರ್ಮ ಹುಟ್ಟಲು ಇದು ಕಾರಣ;ಸದಾನ೦ದ ಗೌಡ
»ಕೇರಳದ ಪ್ರೀತಿಯ ಸಿಸ್ಟರ್ ಈಗ ಸಂತ ಅಲ್ಫೋನ್ಸಾ
»ತುಳು ಅಕಾಡೆಮಿ ಅಧ್ಯಕ್ಷರಾಗಿ ಸಾಹಿತಿ ಪಾಲ್ತಾಡು ರಾಮಕೃಷ್ಣ ಆಚಾರ್
»ಮುಂಬೈಯಲ್ಲಿ ಸುಬ್ರಾಯ ಭಟ್ಟರಿಗೆ ಸನ್ಮಾನ
»ಗೋಕರ್ಣ ಪುನರುತ್ಥಾನಕ್ಕೆ ನಾಂದಿ
»ಕಾರಂತರು ಒಂದು ವಿಸ್ಮಯ: ಅಂಬಾತನಯ ಮುದ್ರಾಡಿ
»ಮಿತ್ತ ಬೈಲು ಯಮುನಕ್ಕ ತುಳುನಾಡಿನ ಸಾಂಸ್ಕೃತಿಕ ಕೃತಿ: ಡಿ.ಕೆ. ಚೌಟ
»ನಾದವೈಭವಂನ ಭಜನಾ ನಾದಾಭಿಯಾನಕ್ಕೆ ಚಾಲನೆ
»ಫ್ರೆಂಚ್ ಲೇಖಕ ಲೆ ಕ್ಲೇಜಿಯೊಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ
»ಇಸ್ಲಾ೦ ಧರ್ಮದ ಐದು ಆಧಾರ ಸ್ಥ೦ಭಗಳು
»ನಾಳೆ ನಗರದಲ್ಲಿ ಕಾರಂತ ಹುಟ್ಟು ಹಬ್ಬ
»ಮೂವರು ಗಣ್ಯರಿಗೆ ರಾಜ್ಯ ಮಟ್ಟದ ಪ್ರಶಸ್ತಿ
»ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಮೊತ್ತ 1 ಲಕ್ಷರು.ಗೆ ಏರಿಕೆ
»ಭಾರತೀಯ ತತ್ತಶಾಸ್ತ್ರ ಪ್ರವೇಶ ಗ್ರಂಥ ಲೋಕಾರ್ಪಣೆ
»ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ
»ಕರ್ನಾಟಕ ಸಾಹಿತ್ಯ ಪರಿಷತ್ ಉದಯ
»ಹೂವಿನಕೋಲಿಗೆ ಮನಸೋತ ಸೋನಿಯಾ
»ರವಿ ಬೆಳಗೆರೆ ಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ
»ಮಾನವೀಯತೆಯೇ ನಿಜವಾದ ಧರ್ಮ : ಶ್ರೀ ಪೂರ್ಣಕಾಮಾನಂದಜೀ
»`ಮಕ್ಕಳ ಮೊಲಕ ಕನ್ನಡ ಕಸ್ತೂರಿಯನ್ನು ಪಸರಿಸಿ'
»ಐತಿಹಾಸಿಕ ಮೈಸೂರು ದಸರಾಕ್ಕೆ ಸಿದ್ದಗಂಗಾಶ್ರೀ ಚಾಲನೆ
»ನವಮದ ಮಹತ್ವ ಹೊತ್ತ ನವರಾತ್ರಿ
»ಈದಲ್ ಫಿತ್ರ್ `ಮಾನವ ಮೈತ್ರಿಗೆ ರಮ್ಜಾನ್ ಸಂದೇಶ'
»ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಪ್ರಕಟ
»ಕಸಾಪಗೆ ಪರ್ಯಾಯವಾಗಿ ಕರ್ನಾಟಕ ಸಾಹಿತ್ಯ ಪರಿಷತ್!
»ಜಿಲ್ಲಾ ಕಾರಾಗೃಹದಲ್ಲಿ ಬಹುಭಾಷಾ ಕವಿಗೋಷ್ಟಿ !
»ದೆಹಲಿಯಲ್ಲಿ ಮಿಂಚಿದ ‘ಮಳೆಹಕ್ಕಿ’
»ಐವರು ಗಣ್ಯರಿಗೆ ಅನುವಾದ ಅಕಾಡೆಮಿ ಗೌರವ ಪ್ರಶಸ್ತಿ
»ಚಾಂದ್ರಾಯಣ ವ್ರತ
»ಮತಾಂತರ ವಿರೋಧಿ ಕಾಯ್ದೆಗೆ ಪೇಜಾವರಶ್ರೀ ಆಗ್ರಹ
»ಶಿಶುನಾಳ ಶರೀಫರು
»ಶಿಕ್ಷಣದಲ್ಲಿ ಗಮಕ ಕಲೆ ಕಡ್ಡಾಯಕ್ಕೆ ಗೊತ್ತುವಳಿ ಮಂಡನೆ
»ವಿದೇಶದ ಕ್ರೈಸ್ತ ಶಾಲೆಗಳಲ್ಲಿ ವೇದಾಂತ ಪಾಠ!
»ಗೋಕರ್ಣ, ಮತಾಂತರ ಹಾಗೂ ನ್ಯೂ ಲೈಫ್!
»ವಸುಧೈವ ಕುಟುಂಬಕಮ್
»ವಿವೇಕಾನಂದ ಎಂಬ ವೀರ ಸನ್ಯಾಸಿ
»‘ಗೋಕರ್ಣ: ಸ್ಥಿರಾಸ್ತಿ ವರ್ಗಾವಣೆಯಾಗಿಲ್ಲ ’
» 8 ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ.ಗಮಕಿಗಳಿಗೆ ‘ಕುಮಾರವ್ಯಾಸ’ ಪ್ರಶಸ್ತಿ- ಆಚಾರ್ಯ
»ಹಿಂದೂ ಧರ್ಮ ಅಪಾರ್ಥಕ್ಕೆ ಒಳಗಾಗಿದೆಯೇ?
»`ಆದೇಶದಿಂದ ಕನ್ನಡದ ಕಳಕಳಿ ಮೊಡದು'
»ಕೋಳ್ಯೂರು ಅವರಿಗೆ ಮಂಡೆಚ್ಚ ಪ್ರಶಸ್ತಿ
»