ಮನಾಮಾ : ನಗರದಲ್ಲಿ ಖ್ಯಾತ ಕ್ರಿಕೆಟ್ ಆಟಗಾರ ರೋಜರ್ ಬಿನ್ನಿ |
ಪ್ರಕಟಿಸಿದ ದಿನಾಂಕ : 2008-10-22
ತರಬೇತಿ ಶಿಬಿರಲ್ಲಿ ಭಾಗವಹಿಸುತ್ತಿರುವ ಖ್ಯಾತ ಬೌಲರ್
ಮನಾಮಾ, ಅಕ್ಟೋಬರ್ 22: "ನಾನು ಕ್ರಿಕೆಟ್ಟನ್ನು ಬಹಳ ಪ್ರಿತಿಸುತ್ತೇನೆ, ಬಹಳ ವರ್ಷಗಳ ಕಾಲ ಕ್ರಿಕೆಟ್ ಆಡಿ ಸಂತೋಷ ಅನುಭವಿಸಿದ್ದೇನೆ, ಈಗ ಕ್ರಿಕೆಟ್ ತರಬೇತುದಾರನಾಗಿ ಕ್ರಿಕೆಟ್ಟಿನಲ್ಲಿ ಮುಂದುವರೆಯುವುದು ನನಗೆ ಇನ್ನೂ ಹೆಚ್ಚಿನ ಆನಂದ ನೀಡಿದೆ. ಯುವ ಕ್ರಿಕೆಟ್ ಆಟಗಾರರನ್ನು ತರಬೇತುಗೊಳಿಸುವ ಕೆಲಸ ನನಗೆ ವೈಯಕ್ತಿಕವಾಗಿ ಅತ್ಯಂತ ಹೆಚ್ಚಿನ ಸಂತೃಪ್ತಿ ನೀಡಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಡೆವೆಲಪ್ ಮೆಂಟ್ ಆಫೀಸರ್, 1983 ರ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಆಟಗಾರರಲ್ಲೊಬ್ಬರಾದ ಏಷ್ಯಾದ ಅತ್ಯಂತ ಗೌರವಾನ್ವಿತ ಕ್ರಿಕೆಟ್ ತರಬೇತುದಾರ ಶ್ರೀ ರೋಜರ್ ಮೈಕಲ್ ಹಂಫ್ರಿ ಬಿನ್ನಿಯವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹಾಗೂ ಬಹರೇನ್ ಕ್ರಿಕೆಟ್ ಅಸೋಸಿಯೇಶನ್ನಿನ ಸಹಯೋಗದೊಂದಿಗೆ ನಡೆಸುತ್ತಿರುವ ತರಬೇತಿ ಶಿಬಿರದಲ್ಲಿ ತರಬೇತುದಾರರಾಗಿ ಪಾಲ್ಗೊಂಡ ಸಂದರ್ಭದಲ್ಲಿ ನುಡಿದರು.
ಭಾರತೀಯ ಕ್ರಿಕೆಟ್ ರಂಗದ ಮಾಜಿ ಸವ್ಯಸಾಚಿ, ತಮ್ಮ ಮಧ್ಯಮ ವೇಗದ ಎಸೆತಗಾರಿಕೆಯಿಂದ ಜನಪ್ರಿಯರಾಗಿದ್ದ ರೋಜರ್ ಬಿನ್ನಿಯವರು 1983 ರಲ್ಲಿ ಭಾರತ ವಿಜೇತಗೊಂಡ ವಿಶ್ವಕಪ್ ಪಂದ್ಯಾವಳಿಯಲ್ಲಿ ಗರಿಷ್ಟ 18 ವಿಕೆಟ್ಟುಗಳನ್ನು ಕಬಳಿಸಿ ಪ್ರಮುಖ ಪಾತ್ರವಹಿಸಿದ್ದರು. ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಬಹರೇನ್ ಕ್ರಿಕೆಟ್ ಅಸೋಸಿಯೇಶನ್ ಸಹಯೋಗದೊಂದಿಗೆ ಕ್ರಿಕೆಟ್ ತರಬೇತುದಾರರಾಗಿ ಹೆಚ್ಚಿನ ತರಬೇತಿ ನೀಡಲು ಏರ್ಪಡಿಸಿರುವ ಈ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ಬಿನ್ನಿಯವ ರೊಂದಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಇಕ್ಬಾಲ್ ಸಿಕಂದರ್, ಖ್ಯಾತ ಭಾರತೀಯ ಟೆನ್ನಿಸ್ ತಾರೆ ಲಿಯಾಂಡರ್ ಪೇಸ್ ಅವರ ತಂದೆ ಡಾಕ್ಟರ್ ಪೇಸ್ ಸಹಾ ಪಾಲ್ಗೊಂಡಿದ್ದಾರೆ.
ಐದು ದಿನಗಳ ಈ ತರಬೇತಿ ಶಿಬಿರದಲ್ಲಿ ಅತ್ಯಂತ ಮಹತ್ವದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳ ತುಣುಕುಗಳ ಪ್ರಸಾರ, ದೈಹಿಕ ಹಾಗೂ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವ ಬಗ್ಗೆ ಶಿಕ್ಷಣ, ಕ್ಷೇತ್ರರಕ್ಷಣೆ, ಎಸೆತಗಾರಿಕೆ, ಬೌಲಿಂಗ್ ಹಾಗೂ ವಿಕೆಟ್ ಕೀಪಿಂಗ್ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಧೃಢಕಾಯದ ರೋಜರ್ ಬಿನ್ನಿಯವರು ತಮ್ಮ ಐವತ್ತಮೂರರ ಹರೆಯದಲ್ಲಿಯೂ ಪಾದರಸದಂತೆ ಚುರುಕಾಗಿ ಕ್ರೀಡಾಂಗಣದಲ್ಲಿ ಓಡಾಡುತ್ತಾ ತರಬೇತಿ ನೀಡುತ್ತಿರುವ ರೀತಿ ಎಲ್ಲರನ್ನೂ ಚಕಿತಗೊಳಿಸಿತ್ತು. ಅತಿಥೇಯ ಬಹರೇನ್ ಸೇರಿದಂತೆ ಥೈಲೆಂಡ್, ಮಲೇಶಿಯಾ, ಸಿಂಗಾಪುರ, ಬ್ರುನೈ, ಮಾಯನ್ಮಾರ್, ಯು.ಎ.ಇ., ಓಮಾನ್, ಕತರ್, ಸೌದಿ ಅರೇಬಿಯಾ, ಪಾಕಿಸ್ತಾನ ಮೊದಲಾದ ರಾಷ್ಟ್ರಗಳ ತಲಾ ಎರೆಡು ಕ್ರಿಕೆಟ್ ತರಬೇತುದಾರರು ಈ ವಿಶೇಷ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್, ಬಹರೇನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-22
|
|
|