ರಾಜ್‌ಠಾಕ್ರೆಗೆ ನ.4ರ ತನಕ ನ್ಯಾಯಾಂಗ ಬಂಧನ: ಮು೦ಬೈಯಲ್ಲಿ ಹಿ೦ಸಾಚಾರ |
ಪ್ರಕಟಿಸಿದ ದಿನಾಂಕ : 2008-10-21
( ಚಿತ್ರ: ರೋನ್ಸ್ ಬಂಟ್ವಾಳ್, ಮುಂಬೈ)
ಮು೦ಬೈ :ಅ,21.ಮಂಗಳವಾರ ಮುಂಜಾನೆ ಬಂಧನಕ್ಕೀಡಾಗಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮುಖ್ಯಸ್ಥ ರಾಜ್ ಠಾಕ್ರೆ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿರುವ ಮುಂಬೈಯ ವಿಚಾರಣಾ ನ್ಯಾಯಾಲಯವು ಅವರಿಗೆ ನವೆಂಬರ್ ನಾಲ್ಕರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.
ರೈಲ್ವೆ ನೇಮಕಾತಿ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿದ್ದ ಉತ್ತರ ಭಾರತೀಯ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಪಾಲ್ಗೊಳ್ಳುವಿಕೆಯ ಆಪಾದನೆಯಡಿಯಲ್ಲಿ ರಾಜ್ ಠಾಕ್ರೆ ಬಂಧನಕ್ಕೀಡಾಗಿದ್ದಾರೆ. ಅವರನ್ನು ಬಾಂದ್ರಾ ಕೋರ್ಟಿನಲ್ಲಿ ಮಧ್ಯಾಹ್ನದ ಬಳಿಕ ಹಾಜರು ಪಡಿಸಲಾಯಿತು.
ರತ್ನಗಿರಿಯಲ್ಲಿ ಠಾಕ್ರೆ ಬಂಧನಕ್ಕೀಡಾಗಿದ್ದು, ಮುಂಬೈಯಲ್ಲಿ ಯಾವುದೇ ಅನಾಹುತಕಾರಿ ಘಟನೆಗಳು ನಡೆಯದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಲುಂದ್, ಥಾಣೆ, ನವಿಮುಂಬೈ, ಬೊರಿವಿಲಿ, ಪರೇಲ್ ಮತ್ತು ಟಾರ್ಡಿಯೋ ಪ್ರದೇಶಗಳಲ್ಲಿ ಕಲ್ಲುತೂರಾಟ ಘಟನೆಗಳು ಸಂಭವಿಸಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಸುಮಾರು 20 ಸಾವಿರ ರಾಜ್ಯ ಮೀಸಲು ಪಡೆ ಹಾಗೂ ಸಿಆರ್‌ಪಿಎಫ್ ಜವಾನರನ್ನು ನೇಮಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ ಠಾಕ್ರೆಯವರನ್ನು ಹಾಜರು ಪಡಿಸಿರುವ ಬಾಂದ್ರಾ ನ್ಯಾಯಾಲಯದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಎಂಎನ್ಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಛಾರ್ಜ್ ನಡೆಸಿದ್ದಾರೆ. ಸುಮಾರು 150 ಪ್ರತಿಭಟನಾಕಾರರನ್ನು ಬಂಧಿಸಿ ನ್ಯಾಯಾಲಯದ ಆವರಣದಿಂದ ಕರೆದೊಯ್ಯಲಾಗಿದೆ.
ಮಾಧ್ಯಮ ವರದಿಗಾರರು ಹಾಗೂ ಎಂಎನ್ಎಸ್ ಕಾರ್ಯಕರ್ತರು ನ್ಯಾಯಾಲಯದ ಆವರಣಕ್ಕೆ ತೆರಳದಂತೆ ನಿಷೇಧಿಸಿದ್ದು, ಈ ಪ್ರಕ್ರಿಯೆ ವೇಳೆಗೆ ಕೆಲವು ಹಿರಿಯ ಪತ್ರಕರ್ತರೊಡನೆಯೂ ಪೊಲೀಸರು ಒರಟಾಗಿ ವರ್ತಿಸಿದ್ದಾರೆ ಎಂದು ವರದಿ ತಿಳಿಸಿದೆ.
ಕಠಿಣ ಶಿಕ್ಷೆಗೆ ಒತ್ತಾಯ ರಾಜ್ ಠಾಕ್ರೆ ಅವರನ್ನು ಬಂಧಿಸಿದರೆ ಮಾತ್ರ ಸಾಲದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವು ಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ.
ಠಾಕ್ರೆ ವಿರುದ್ಧ ಭಾರತೀಯ ದಂಡ ಸಂಹಿತೆ 153, 353, 336, 425 ಮತ್ತು 427ರ ಸೆಕ್ಷನ್‌ಗಳ ಪ್ರಕಾರ ಆರೋಪಗಳನ್ನು ಹೊರಿಸಲಾಗಿದೆ.
ತಾಕತ್ತಿದ್ದರೆ ಬಂಧಿಸಿ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಉತ್ತರ ಭಾರತೀಯ ಅಭ್ಯರ್ಥಿಗಳ ಮೇಲೆ ನಡೆಸಿರುವ ಹಲ್ಲೆ ಪ್ರಕರಣದ ಹಿನ್ನಲೆಯಲ್ಲಿ, 'ತಾಕತ್ತಿದ್ದರೆ ನನ್ನನ್ನು ಬಂಧಿಸಿ' ಎಂದು ಮಹಾರಾಷ್ಟ್ರ ಸರಕಾರಕ್ಕೆ ಸವಾಲು ಹಾಕಿದ್ದರು. ತನ್ನನ್ನು ಬಂಧಿಸಿದರೆ ಇಡಿಯ ಮಹಾರಾಷ್ಟ್ರ ಹೊತ್ತಿ ಉರಿಯಲಿದೆ ಎಂಬ ಬೆದರಿಕೆಯನ್ನೂ ಹಾಕಿದ್ದರು. ಇದಲ್ಲದೆ ಪೊಲೀಸರು ಮತ್ತು ಕಾಂಗ್ರೆಸ್ ಬೆನ್ನುಹುರಿ ಇಲ್ಲದವರು ಎಂದೂ ಠಾಕ್ರೆ ಸೋಮವಾರ ಟೀಕಿಸಿದ್ದರು.
ಮುಂಬೈಯಲ್ಲಿ ಭಾರೀ ಹಿಂಸಾಚಾರ
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ಠಾಕ್ರೆಯ ಬಂಧನದ ಬಳಿಕ ಮುಂಬೈಯ ವಿವಿಧೆಡೆ ಹಿಂಸಾಚಾರ ಭುಗಿಲೆದ್ದಿದೆ. ಥಾಣೆಯಂತಹ ಸ್ಥಳಗಳಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ.
ದಕ್ಷಿಣ ಮುಂಬೈಯ ಟಾರ್ಡಿಯೋದಲ್ಲಿ ನಿಲ್ಲಿಸಲಾಗಿದ್ದ ಟಾಕ್ಸಿಗಳನ್ನು ದುಷ್ಕರ್ಮಿಗಳು ಹಾನಿಗೀಡುಮಾಡಿದ್ದು ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬೊರಿವಿಲಿಯಲ್ಲಿ ಟ್ರಕ್‌ಗಳಿಗೆ ಬೆಂಕಿಇಕ್ಕಲು ಪ್ರಯತ್ನಿಸಲಾಗಿದೆ ಎಂದು ಅವರು ತಿಳಿಸಿದರು. ವಿಲೆಪಾರ್ಲೆ ಮತ್ತು ಜೋಗೇಶ್ವರಿ ಪ್ರದೇಶಗಳಲ್ಲೂ ಹಿಂಸಾಚಾರ ವರದಿಯಾಗಿದೆ.
ದುಷ್ಕರ್ಮಿಗಳು ಮುಲುಂದ್ ವಾಯುವ್ಯ ಪ್ರದೇಶದಲ್ಲಿನ ಟೋಲ್ ಬೂತ್ ಒಂದರ ಮೇಲೆ ದಾಳಿ ನಡೆಸಿದ್ದು, ಬೆಂಕಿ ಇಕ್ಕಿದ್ದಾರೆ. ಇದಲ್ಲದೆ, ಕಾಂಗ್ರೆಸ್ ವಕ್ತಾರ ಸಂಜಯ್ ನಿರುಪಮ್ ಅವರ ನಿವಾಸದ ಮೇಲೂ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಏತನ್ಮಧ್ಯೆ, ಮುಂಜಾಗ್ರತಾ ಕ್ರಮವಾಗಿ ಮುಂಬೈ ಹೊರವಲಯದ ಶಾಲೆಗಳಿಗೆ ರಜೆ ಸಾರಲಾಗಿದೆ. ಯುವುದೇ ಅನಾಹುತಕಾರಿ ಕ್ರಮಗಳನ್ನು ಹತ್ತಿಕ್ಕಲು ಮುಂಬೈ ನಗರದಲ್ಲಿ ಭದ್ರತಾ ಕ್ರಮಗಳನ್ನು ಮೇಲ್ಮಟ್ಟಕ್ಕೇರಿಸಲಾಗಿದೆ.
"ರಾಜ್ ಠಾಕ್ರೆ ಬಂಧನಕ್ಕೆ ಯಾವುದೇ ಗಟ್ಟಿಯಾದ ಪುರಾವೆ ಇಲ್ಲ. ರಾಜ್ಯ ಸರಕಾರವು ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ" ಎಂದು ಎಂಎನ್ಎಸ್ ವಕ್ತಾರ ಶಿರಿಶ್ ಪಾರ್ಕರ್ ಅವರು ರಾಜ್ ಬಂಧನಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇದು ಮಹಾರಾಷ್ಟ್ರ ಸರಕಾರದ ಸೇಡಿನ ಕ್ರಮ ಮತ್ತು ರಾಜಕೀಯ ಫಿತೂರಿ ಎಂದು ಪಾರ್ಕರ್ ಬಣ್ಣಿಸಿದ್ದಾರೆ.
ಬಂಧನದ ಬಳಿಕದ ಗಲಭೆಯು ಸಾರ್ವಜನಿಕ ಕೋಪಾವೇಶ ಮತ್ತು ಬಂಧನದ ವಿಚಾರವನ್ನು ಎಂಎನ್ಎಸ್ ಮಹಾರಾಷ್ಟ್ರದ ಜನತೆಯ ಬಳಿಗೆ ಕೊಂಡೊಯ್ಯಲಿದೆ ಎಂದು ಪಾರ್ಕರ್ ಹೇಳಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯಾ | ( ಚಿತ್ರ: ರೋನ್ಸ್ ಬಂಟ್ವಾಳ್, ಮುಂಬೈ) ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2008-10-21
|
|
| mana iliyas udupi, Bahrain | 2008-10-23 | | he is not a god person. but he is mental because of he dont no he is indian he is thinkng mumbai is his property. |
| dimello pinto, Nagur | 2008-10-22 | | ಇಂತಹ ಕೋಮುವಾದಿ ಹಾಗು ಭಯೋತ್ಪಾದಕ ನಾಯಕ ಹಾಗು ಅವನ ಹಿಂಬಾಲಕರಿಂದ ದೇಶ ನಾಶವಾಗುತ್ತಿದೆ. ಇಂತಹ ದೇಶದ್ರೋಹಿ ನಾಯಕರನ್ನು ಗಲ್ಲಿಗೇರಿಸಿ. |
| Rao, Mumbai | 2008-10-22 | | Why so much drama is happening. Why the people are very concerned about his arrest. Has he done anything good to the people or the nation. Please wake up citizens. He deserved it and there are so many others who falls under the same category, but because of the descrimination act by the govt and politicians its not happening as such. |
|