ಮಾತೃ ಪ್ರಧಾನ ಸಂಸ್ಕೃತಿ ತುಳು ಭಾಷೆ ವೈಖರಿ : ಮಹಮ್ಮದ್ ಬಡ್ಡೂರು |
ಪ್ರಕಟಿಸಿದ ದಿನಾಂಕ : 2008-10-21
ಕಲಾಜಗತ್ತು ತಂಡದ ಚಿಣ್ಣರ ಬಿಂಬ ಸಂಸ್ಥೆಯು ಮಹಾನಗರದಲ್ಲಿನ ತುಳು-ಕನ್ನಡಿಗರ ಮಕ್ಕಳಿಗಾಗಿ ರಜಾ ದಿನಗಳ ಶಿಬಿರವನ್ನು ಏರ್ಪಾಡಿಸಿತ್ತು. ಚಿಣ್ಣರ ಬಿಂಬ ವಿರಾರೋಡ್ ಶಾಖೆಯ ವತಿಯಿಂದ ವಿರಾರೋಡ್ ಪೂರ್ವದ ಸುರಭಿ ಹೊಟೇಲ್ ಸಭಾಗೃಹದಲ್ಲಿ ಕಳೆದ ಭಾನುವಾರ ಸಂಜೆ ಆಯೋಜಿಸಲಾಗಿದ್ದ ಶಿಬಿರಕ್ಕೆ ಹಿರಿಯ ಪತ್ರಕರ್ತ, ಸಾಹಿತಿ, ಕವಿ ಮಹಮ್ಮದ್ ಬಡ್ಡೂರು ಇವರು ಚಾಲನೆಯನ್ನೀಡಿದರು.
ಮಹಮ್ಮದ್ ಬಡ್ಡೂರು ಮಾತನಾಡಿ ಮಾತೃ ಪ್ರಧಾನ ಸಂಸ್ಕೃತಿ ತುಳು ಭಾಷೆ ವೈಖರಿ ಆಗಿದ್ದು, ತುಳುನಾಡಿನವರು ಶ್ರೇಷ್ಟ ಸಂಸ್ಕೃತಿಯನ್ನು ಮೈಗೂಡಿಸಿದವರಾಗಿದ್ದಾರೆ. ಪರಸ್ಪರ ಅನ್ಯೋನ್ಯತೆಯ ಬದುಕು ರೂಪಿಸಿಕೊಂಡವರಲ್ಲಿ ತುಳುವರು ಅಗ್ರಗಣ್ಯರಾಗಿದ್ದಾರೆ. ಪ್ರಾಕೃತಿಕ ಕೊಡುಗೆಯ ಮೃದುಹೃದಯದಿಂದ ಕೂಡಿದ ತುಳುವರು ಸದಾ ಮಾನವೀಯತೆಯನ್ನು ಹುಟ್ಟುಗುಣವಾಗಿರಿಸಿ ಬಾಳುವ ಸಂಸ್ಕೃತಿಯುಳ್ಳವರಾಗಿದ್ದಾರೆ.
ನೈಸರ್ಗಿಕ ಸೌದರ್ಯಕ್ಕೆ ಸದಾ ಋಣಿಯಾಗಿ ಬಾಳುವ ತುಳುವರು ಸಮೃದ್ಧಿಯುತ ಬದುಕನ್ನು ರೂಪಿಸಿದ್ದು, ತುಳುವರಿಗೆ ತುಳುಭಾಷೆ ಎನ್ನುವುದು ವರವೇ ಸರಿ. ಸ್ವಂತದ ಲಿಪಿ, ಸಂವಿಧಾನದಲ್ಲಿ ಸ್ಥಾನಮಾನ ಪಡೆಯಲು ತುಳು ಭಾಷೆ ಸಾಮರ್ಥ್ಯವುಳ್ಳದ್ದಾಗಿದೆ ಆದರೂ ಆ ನಿಟ್ಟಿನ ಪ್ರಯತ್ನ, ಸಾಧನೆಯಿಂದ ಮಾತ್ರ ಇದು ಆಸಾಧ್ಯವಾಗಿರ ಬಹುದು.
ಜಾತಿ-ವರ್ಣ-ಧರ್ಮದ ಅಂತರವಿಲ್ಲದ ಸರ್ವೋಚ್ಚ ಭಾಷೆ ತುಳು ಆಗಿದ್ದು, ಇದು ಮಾನವೀಯತೆಯ ಬಾಷೆ ಮಾತ್ರ ಅಲ್ಲ, ದೈವಾರಾಧನೆ ಮೂಲಕ ದೈವಚಿತ್ತಕ್ಕೆ ಒಲಿಯುವ ಭಾಷೆ ಎನ್ನುವುದು ವಿಶೇಷ. ಮಾತೃಭಾಷೆ ದೇವರು ಎನ್ನುವಾಗ ಇದರ ಆರಾಧನೆ ಆಗಬೇಕು.
ತುಳುನಾಡಿನ ಸಮಗ್ರ ಜನತೆಯಲ್ಲಿ ಈ ಭಾಷೆಯು ಮನೆಭಾಷೆ, ಮಾತುಭಾಷೆ, ವ್ಯವಹಾರ ಭಾಷೆ ಆಗಿ ಬೆಳೆದ್ದಲ್ಲಿ ಮಾತ್ರ ತುಳುವರ ಸಂಸ್ಕೃತಿಯ ಉಳಿವು ಸಾಧ್ಯ. ಇದಕ್ಕೆ ಗೃಹಿಣಿಯರ ಕೊಡುಗೆ ಅಪಾರವಾಗ ಬೇಕು ಎಂದರು.
ಚಿಣ್ಣರ ಬಿಂಬ ಸಂಸ್ಥೆಯ ಸಂಸ್ಥಾಪಕ ವಿಶ್ವಸ್ಥ ಪ್ರಕಾಶ್ ಬಿ. ಭಂಡಾರಿ ಇವರು ತರಭೇತುದಾರ ಸಂಪನ್ಮೂಲ ವ್ಯಕ್ತಿಗಳಿಗೆ ಪುಷ್ಪಗೌರವ ಸಲ್ಲಿಸಿದರು. ಮಹಮ್ಮದ್ ಬಡ್ಡೂರು ಹಾಗೂ ವೈ. ಟಿ ಶೆಟ್ಟಿ ಮಕ್ಕಳಿಗೆ ತರಬೇತಿಯನ್ನಿತ್ತರು.
ನಡೆಸಲಾದ ಸರಳ ಸಮಾರಂಭದಲ್ಲಿ ಬಂಟ್ಸ್ ಫೋರಮ್ ವಿರಾರೋಡ್ ಇದರ ಅಧ್ಯಕ್ಷ ಶಿವರಾಮ ಶೆಟ್ಟಿ ಮುಖ್ಯ ಅತಿಥಿಯಾಗಿದ್ದು, ಕನ್ನಡ ಕೈರಾಳಿ ಪತ್ರಿಕೆಯ ಸಂಪಾದಕ ಅಬ್ದುಲ್ ರಹಿಮಾನ್ ಸುಬ್ಬಯ್ಯಕಟ್ಟೆ ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿದ್ದರು.
ಕರ್ನೂರು ಮೋಹನ್ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅರುಣ್ ಎಸ್. ರೈ ಧನ್ಯವಾದ ಸಮರ್ಪಿಸಿದರು.
ವರದಿಯ ವಿವರಗಳು |
 |
ಕೃಪೆ : ಚಿತ್ರ / ವರದಿ : ರೋನ್ಸ್ ಬಂಟ್ವಾಳ್ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-21
|
|
|