ಅಜ್ಮಾನ್: ಗಲ್ಫ್ ಮೆಡಿಕಲ್ ಕಾಲೇಜು ಪ್ರಾರಂಭಿಸಿದ ಹೊಸ ಕೋರ್ಸುಗಳು : ಡಾಕ್ಟರ್ ಆಫ್ ಫಾರ್ಮಸಿ ಹಾಗೂ ಡಿ.ಎಮ್.ಡಿ |
ಪ್ರಕಟಿಸಿದ ದಿನಾಂಕ : 2008-10-17
ಅಕ್ಟೋಬರ್ 25 ರಂದು ವೈಟ್ ಕಾಲರ್ ಸೆರಮನಿ : ಭಾರತೀಯ ದೂತಾಧಿಕಾರಿ ಹಾಗೂ ಯು.ಎಇ. ಆರೋಗ್ಯ ಸಚಿವರ ಆಗಮನ
ಅಜ್ಮಾನ್ ಅಕ್ಟೋಬರ್ 17: ಕಳೆದ ಅಕ್ಟೋಬರ್ 15 ರಂದು ಅಜ್ಮಾನಿನ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯ ಹೊಸ ಕೋರ್ಸುಗಳನ್ನು ಪ್ರಾರಂಭಿಸಿದೆ. ಡಾಕ್ಟರ್ ಆಫ್ ಫಾರ್ಮಸಿ (PharmD) ಹಾಗೂ ಡಾಕ್ಟರ್ ಆಫ್ ಡೆಂಟಲ್ ಮೆಡಿಸಿನ್ (DMD) ಎನ್ನುವ ಎರೆಡು ಸ್ನಾತಕೋತ್ತರ ಪದವಿಗಳು 2008-09 ರ ಅವಧಿಯಲ್ಲಿ ಪ್ರಾರಂಭವಾಗಿವೆ. ಈ ಪದವಿಗಳಿಗೆ ನಿಗದಿತ ಸ್ಥಳಾವಕಾಶವಿದ್ದು ಮೊದಲ ಪದವಿಗೆ ನಲವತ್ತು ವಿದ್ಯಾರ್ಥಿಗಳಿಗೆ (ನಾಲ್ಕುವರೆ ವರ್ಷ + ಒಂದು ವರ್ಷ ಇಂಟರ್ನ್ ಶಿಪ್) ಹಾಗೂ ಡಿ.ಎಮ್.ಡಿ ಪದವಿಗೆ ಮೂವತ್ತೈದು ವಿದ್ಯಾರ್ಥಿಗಳಿಗೆ (ಐದು ವರ್ಷ + ಒಂದು ವರ್ಷ ಇಂಟರ್ನ್ ಶಿಪ್) ಶಿಕ್ಷಣಾವಕಾಶ ನೀಡಲಾಗಿದೆ. ವಿಶ್ವದಾದ್ಯಂತ ಈ ಪದವಿಗಳಿಗೆ ಅತೀವ ಬೇಡಿಕೆಯಿದ್ದು ಹಲವು ವಿದ್ಯಾಕಾಂಕ್ಷಿಗಳಿಗೆ ವರದಾನವಾಗಲಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿಯೇ ಇದು ಪ್ರಥಮವಾಗಿ ಬಿಡುಗಡೆಯಾಗುತ್ತಿದ್ದು ಅತ್ಯುತ್ತಮ ಸೌಲಭ್ಯ, ಕ್ಲಿನಿಕಲ್ ಸಿಮುಲೇಶನ್ ಹಾಗೂ ಆಧುನಿಕ ಉಪಕರಣಗಳೊಂದಿಗೆ ಹೊಸ ಶಿಕ್ಷಣ ಒದಗಿಸುವಲ್ಲಿ ವಿಶ್ವವಿದ್ಯಾಲಯ ಸಜ್ಜಾಗಿದೆ. ಫಾರ್ಮಸಿ ವಿಭಾಗದಲ್ಲಿ ಹೆಚ್ಚಿನ ಸಂಶೋಧನೆಗೆ ಅವಕಾಶವಿದ್ದು ಸಂಸ್ಥಾನದ ಇತರ ಆರೋಗ್ಯಕೇಂದ್ರಳಲ್ಲಿ ವಿಪುಲವಾದ ಉದ್ಯೋಗಾವಕಾಶವನ್ನು ಪಡೆಯಬಹುದಾಗಿದೆ.
ದಂತವೈದ್ಯ ಕ್ಷೇತ್ರದಲ್ಲಿ ಅತ್ಯುತ್ತಮ ವಿದ್ಯೆಯನ್ನು ನೀಡುವ ನಿಟ್ಟಿನಲ್ಲಿ ಪ್ರಾರಂಭಿಸಲಾಗಿರುವ ಡಿ.ಎಮ್.ಡಿ. ಪದವಿ ಬಯೋಮೆಡಿಕಲ್ ಹಾಗೂ ನಡವಳಿಕಾಶಾಸ್ತ್ರವನ್ನು ಅಭ್ಯಸಿಸುವುದರಿಂದ ಹೆಚ್ಚಿನ ಕಾರ್ಯಕ್ಷಮತೆ ಗಳಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ಅಕ್ಟೋಬರ್ 25 ರಂದು ವೈಟ್ ಕೋಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ಯು.ಎಇ. ಆರೋಗ್ಯ ಸಚಿವ ಹಾಗೂ ಯು.ಎ.ಇ. ಆರೋಗ್ಯ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಅಲಿ ಬಿನ್ ಶಾಕೆರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಭಾರತೀಯ ದೂತಾಧಿಕಾರಿ ಶ್ರೀ ವೇಣು ರಾಜಮಣಿಯವರೂ ಆಗಮಿಸಲಿದ್ದಾರೆ.
ವೈದ್ಯಕೀಯ ಜಗತ್ತಿಗೆ ಕಾಲಿಡುತ್ತಿರುವ ಹೊಸ ವಿದ್ಯಾರ್ಥಿಗೆ ವೈದ್ಯಜಗತ್ತಿಗೆ ಸ್ವಾಗತ ಬಯಸುವ ಹಾಗೂ ರೋಗಿಗಳ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಡುವ ಪ್ರತಿಜ್ಞೆ ಕೈಗೊಳ್ಳುವ ವಿಧಿಯೇ -ವೈಟ್ ಕಾಲರ್ ಸೆರಮನಿ-ಯಾಗಿದೆ.
ಕಳೆದ ಅಕ್ಟೋಬರ್ ೧೫ ರಂದು ಆಸ್ಪತ್ರೆಯ ದಂತವೈದ್ಯ ವಿಭಾಗವನ್ನು ಅಜ್ಮಾನ್ ರೂಲರ್ಸ್ ಕೋರ್ಟ್ ಅಧ್ಯಕ್ಷರಾದ ಶೇಖ್ ಡಾ. ಮಾಜಿದ್ ಬಿನ್ ಸಯೀದ್ ಅಲ್ ನುಐಮಿಯವರು ಉದ್ಘಾಟಿಸಿದರು.
ಆ ಬಳಿಕ ಅನುಕರಣಾ (ಸಿಮುಲೇಶನ್) ವಿಭಾಗವನ್ನು ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಣಿ ಪ್ರೊ. ಗೀತಾ ಅಶೋಕ್ ರಾಜ್ ಅವರು ಉದ್ಘಾಟಿಸಿದರು. ಈ ವಿಭಾಗದಲ್ಲಿ ರೋಗಿಗೆ ಚಿಕಿತ್ಸೆ ನೀಡುವ ಬಗ್ಗೆ ಅಭ್ಯಾಸ ನಡೆಸುವ ಮುನ್ನ ಪೂರ್ವಾಭಾವಿಯಾಗಿ ನಕಲಿ ಪ್ರತಿಕೃತಿಗೆ ಚಿಕಿತ್ಸೆ ನೀಡುವ ವಿಧಾನದ ಮೂಲಕ ಉತ್ತಮ ಹಾಗೂ ಸುರಕ್ಷಿತ ತರಬೇತಿ ನೀಡಲಾಗುತ್ತದೆ.
ಈ ವಿಭಾಗದಲ್ಲಿ ಹಲವು ನಿಜರೂಪ ಹಾಗೂ ಆಕಾರ ಮತ್ತು ಗಾತ್ರದ ನಕಲಿ ಭಾಗಗಳನ್ನು, ಗರ್ಭಿಣಿ ಸ್ರೀ ಹಾಗೂ ನವಜಾತ ಶಿಶುವಿನ ಸಂಪೂರ್ಣ ಪ್ರತಿಕೃತಿಯನ್ನು, ಐ.ಸಿ.ಯು. ಸಿಮುಲೇಶನ್ ಕೋಣೆ, ಕಮ್ಯೂನಿಟಿ ಸಿಮ್ಯುಲೇಶನ್ ಕೋಣೆ, ಹಾಗೂ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹೊಂದಿದೆ. ಎಲ್ಲಾ ತರಗತಿಗಳು ಆಡಿಯೋ ವಿಡಿಯೋ ಉಪಕರಣಗಳಿಂದ ಸುಸಜ್ಜಿತವಾಗಿದ್ದು ಮಾಹಿತಿ ರವಾನೆಗೆ ಉತ್ತಮ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ Resusci Anne & Baby, Airway Management Trainer, LP Simulator ಮೊದಲಾದ ಉಪಕರಣಗಳು ವೈದ್ಯಕೀಯ ವಿದ್ಯಾರ್ಥಿಗಳು, ತರಬೇತುದಾರರು, ಪದವೀಧರರು, ಫಿಸಿಶಿಯನ್ (ತರಬೇತುದಾರರ ತರಬೇತುದಾರರು), ದಾದಿಯರಿಗೆ ನೀಡುವ ತರಬೇತುದಾರರು ಹಾಗೂ ಇನ್ನಿತರ ವೈದ್ಯಕೀಯ ವೃತ್ತಿನಿರತರಿಗೆ ಉಪಯೋಗಕಾರಿಯಾಗಿದೆ.
ಗಲ್ಫ್ ಮೆಡಿಕಲ್ ಕಾಲೇಜು, ಅಜ್ಮಾನ್ ಪ್ರಕಟಣೆ
ವರದಿಯ ವಿವರಗಳು |
 |
ಕೃಪೆ : ಗಲ್ಫ್ ಮೆಡಿಕಲ್ ಕಾಲೇಜು, ಅಜ್ಮಾನ್ ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-17
|
|
|