ಕುವೈಟಿನಲ್ಲಿ ಮಿಂಚಿದ ಲಕುಮಿ ತಂಡ |
ಪ್ರಕಟಿಸಿದ ದಿನಾಂಕ : 2008-10-15
(ವರದಿ: ತಾರೇಂದ್ರ ಪಿ. ಶೆಟ್ಟಿಗಾರ್)
ತುಳು ಕಲಾಪ್ರೇಮಿಗಳ ನರನಾಡಿಗಳಲ್ಲಿ ತುಳು ನಾಟಕದ ಚಾಪೊನ್ನೊತ್ತಿ ದ ‘ಲಕುಮಿ’ ನಾಟಕ ತಂಡದ ಕುಸಾಲ್ದ ಕಲಾವಿದರು ಇದೇ ಕಳೆದ ಗುರುವಾರ ಅಕ್ಟೋಬರ್ 9 2008 ಮತ್ತು ಶುಕ್ರವಾರ ಅಕ್ಟೋಬರ್ 10 2008 ರಂದು ಕುವೈಟಿನ ಕಲಾಭಿಮಾನಿಗಳ ಮನಸೂರೆಗೈದರು.
ತುಳುಕೂಟ ಕುವೈಟ್ ಇದರ ವಾರ್ಷಿಕೋತ್ಸವ ‘ತುಳುಪರ್ಬ’ದಲ್ಲಿ ಎರಡು ಭರ್ಜರಿ ಹಾಸ್ಯ ನಾಟಕಗಳನ್ನು ಪ್ರದರ್ಶಿಸಿ ತುಳು ಶ್ರೋತೃಗಳ ನಾಟಕದ ದಾಹವನ್ನು ನೀಗಿಸಿದರು.
ತುಳುಭಾಷೆಯ ಸಮೃದ್ದಿಯನ್ನು, ತುಳು ಸಾಹಿತ್ಯ-ಸಂಸ್ಕೃತಿಯ ತಿರುಳನ್ನು, ತುಳುಮಣ್ಣ ಸುವಾಸನೆಯನ್ನು ಅಷ್ಟದಿಕ್ಕುಗಳಲ್ಲಿ ಪಸರಿಸುವಂತೆ ಶ್ರಮಿಸಿದ ಪ್ರಭುದ್ದ ನಾಟಕ ತಂಡ ದ್ವಿತೀಯ ಬಾರಿ ತುಳುಕೂಟ ಕುವೈಟ್ ಇದರ ರಂಗ ವೇದಿಕೆಯಲ್ಲಿ ತಮ್ಮ ಕಲಾಪ್ರದರ್ಶನವನ್ನು ಪ್ರದರ್ಶಿಸಿರುವುದು ಇಲ್ಲಿ ಉಲ್ಲೇಖನೀಯ.
ವ್ಯವಸ್ಥಾಪಕ ಲಯನ್ ಕಿಶೋರ್ ಡಿ. ಶೆಟ್ಟಿ ಇವರ ನೇತೃತ್ವದಲ್ಲಿ, ಕುಸಾಲ್ದರಸೆ, ಕುಸಾಲ್ದ ಎಸಲ್ ಬಿರುದಾಂಕಿತ ಸಿನೇಮಾ ನಟ ಶ್ರೀ ನವೀನ್ ಡಿ. ಪಡೀಲ್ ಇವರ ನಿರ್ದೇಶನದಲ್ಲಿ, ಶ್ರೀ ನವೀನ್ ಶೆಟ್ಟಿ ಅಳಕೆ ಇವರ ಲೇಖನಿಯಲ್ಲಿ ಮೂಡಿ ಬಂದ ‘ನಂಬುನನೆ ನಂಬೊಡು’ ಮತ್ತು ‘ಬೆನ್ಪಿನೊರಿ ತಿನ್ಪಿನೊರಿ’ ನಾಟಕ ಕಿಕ್ಕಿರಿದ ಪ್ರೇಕ್ಷಕರಿಗೆ ಭರ್ಜರಿ ರಸದೌತಣ ನೀಡಿತು.
ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿದು, ಸಮಾಜಕ್ಕೆ ಉತ್ತಮ ಸಂದೇಶವನ್ನಿತ್ತ ಎರಡು ನಾಟಕಗಳು ನೆರೆದ ತುಳುಕಲಾಭಿಮಾನಿಗಳ ಮೆಚ್ಚುಗೆಯನ್ನು ಪಡೆಯಿತು. ಪ್ರೀತಿ, ವಿಶ್ವಾಸ, ನಂಬಿಕೆ, ರಕ್ತ ಸಂಬಂಧ, ರ್‍ಯಾಬೀಸ್ ರೋಗದ ಸುತ್ತ ಹೆಣೆದ ‘ನಂಬುನನೆ ನಂಬೊಡು’ ನಾಟಕದಲ್ಲಿ ಶ್ರೀ ನವೀನ್ ಡಿ. ಪಡೀಲ್ ಮತ್ತು ಕುಮಾರಿ ಶೋಭಾ ಶೆಟ್ಟಿ ಮನೋಜ್ಞ ಅಭಿನಯ, ತುಳುನಾಡ ರತ್ನ ದಿನೇಶ್ ಅತ್ತಾವರ್, ಶ್ರೀ ಸುಂದರ್ ರೈ ಮಂದಾರ, ಶ್ರೀ ಸುರೇಶ್ ಮಂಜೇಶ್ವರ, ಆಶಾ ಮರ್ನಾಡ್, ಧರ್ಮೇಂದ್ರ ಅವೀನರಂತಹ ಪ್ರಭುದ್ದ ಕಲಾವಿದರ ಹಾಸ್ಯ ಅಭಿನಯ ಎಲ್ಲರ ಮೆಚ್ಚುಗೆ ಪಡೆಯಿತು.
ಸೈನಿಕನ ಜೀವನದ ಕಥೆಯನ್ನು ಬಿಂಬಿಸಿದ ನಾಟಕ ‘ಬೆನ್ಪಿನೊರಿ ತಿನ್ಪಿನೊರಿ’ ದೇಶ ಭಕ್ತಿ, ತ್ಯಾಗ, ಬಲಿದಾನ, ಪರಿಸರ ಉಳಿಸುವುದರ ಬಗ್ಗೆ ಸಂದೇಶವಿತ್ತು ಪ್ರೇಕ್ಷಕರ ಚಪ್ಪಾಳೆ, ಸೀಟಿಗಳ ಸಿಡಿಮದ್ದಿಗೆ ಪಾತ್ರ ವಾಯಿತು. ದ್ವೀತೀಯ ದಿನದಲ್ಲೂ ಶ್ರೀ ಸುಂದರ್ ರೈ ಮಂದಾರ ಮತ್ತೊಮ್ಮೆ ನೆರೆದ ಕಲಾಭಿಮಾನಿಗಳನ್ನು ತನ್ನ ವಿಭಿನ್ನ ಹಾಸ್ಯ ನಟನೆಯಿಂದ ರಂಜಿಸಿದರು.
ಸಭಾಕಾರ್ಯಕ್ರಮದಲ್ಲಿ ಲಕುಮಿ ತಂಡದ ಎಲ್ಲಾ 19 ಕಲಾವಿದರನ್ನು ಸ್ಮರಣಿಕೆಯಿತ್ತು ಸನ್ಮಾನಿಸಲಾಯಿತು.
ರಸವತ್ತಾದ ಅಮೋಘ ಹಾಸ್ಯ ನಾಟಕದ ಸವಿಯನ್ನು ಜೀರ್ಣಿಸಿದ ಪ್ರೇಕ್ಷಕರ ತೃಪ್ತಿಯ ಕಣ್ಣುಗಳು ಮತ್ತೊಮ್ಮೆ, ಮಗದೊಮ್ಮೆ ನೋಡಬೇಕೆಂಬ ಆಸೆ ವ್ಯಕ್ತಪಡಿಸಿದರೆ, ಕಲಾವಿದರು ತಮ್ಮ ಕಲಾಸೇವೆಗೆ ಪ್ರಶಂಸೆಯ ಉಡುಗೊರೆ ಪಡೆದು ಧನ್ಯರಾದರು.
ವರದಿಯ ವಿವರಗಳು |
 |
ಕೃಪೆ : ವರದಿ: ತಾರೇಂದ್ರ ಪಿ. ಶೆಟ್ಟಿಗಾರ್ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-15
|
|
|