ಸಾಮೂಹಿಕ ಆಚರಣೆಯಿಂದ ಧರ್ಮಜಾಗೃತಿ : ರಾಘವೇಶ್ವರ ಶ್ರೀಗಳು |
ಪ್ರಕಟಿಸಿದ ದಿನಾಂಕ : 2008-10-15
ಸುಳ್ಯ, ಅ. 14: ವಿದ್ಯೆ ಇಲ್ಲದ ಬದುಕು ಕತ್ತಲೆ. ಇಡೀ ಜಗತ್ತಿಗೆ ಪಾಠ ಹೇಳಿದ ನಮ್ಮ ದೇಶ. ಇಂದು ವಿದೇಶಿಯರಿಂದ ನಾವು ಕಲಿಯಬೇಕಾದ್ದು ಏನೂ ಇಲ್ಲ. ಅವರ ಆಚಾರ ವಿಚಾರಗಳಿಗೆ ಮಾರು ಹೋಗುತ್ತಿರುವ ನಮ್ಮ ಯುವ ಪೀಳಿಗೆ, ನಮ್ಮ ಸಂಸ್ಕೃತಿ, ಆಚಾರ ವಿಚಾರ, ಆಹಾರ ಪದ್ಧತಿಗಳತ್ತ ಒಲವು ತೋರಬೇಕು. ನಮ್ಮ ಸನಾತನ ಧರ್ಮದ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿಯಲು ಇಂತಹ ಸಾಮೂಹಿಕ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆದು ಧರ್ಮಜಾಗೃತಿಯಾಗಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಯವರು ತಿಳಿಸಿದರು.
ಅವರು ಅ. 13ರಂದು ಸುಳ್ಯದಲ್ಲಿ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತು ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ವತಿಯಿಂದ ನಡೆದ ಸುಳ್ಯ ದಸರಾ ಉತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಸುಳ್ಯ ದಸರಾ ಉತ್ಸವ ಸಮಿತಿಯ ಗೌರವಾಧ್ಯಕ್ಷ, ಸಂಸದ ಸದಾನಂದ ಗೌಡರು ಮಾತನಾಡಿ ಎಲ್ಲಾ ಧರ್ಮವನ್ನು ಸಮಾನವಾಗಿ ಗೌರವಿಸುವ ಹಿಂದೂ ಧರ್ಮ, ನಿರಂತರ ಪ್ರಹಾರದ ನಡುವೆಯೂ ಎದೆಗುಂದದೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ನವರಾತ್ರಿ ಸಂದರ್ಭದಲ್ಲಿ ಆಚರಿಸುವ ಶಕ್ತಿಯ ಆರಾಧನೆ ಹಿಂದೂ ಧರ್ಮದ ಸಂಘಟಿತ ಶಕ್ತಿಯಾಗಿ ಹೊರ ಹೊಮ್ಮಬೇಕು ಎಂದು ತಿಳಿಸಿ, ರಾಜ್ಯದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಗುರು ಪೀಠಗಳು ಮುಂದಾಗಬೇಕೆಂದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಎಸ್.ಅಂಗಾರ ಮತ್ತು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸ್ಥಾಪಕಾಧ್ಯಕ್ಷ ಡಾ| ಕುರುಂಜಿ ವೆಂಕಟ್ರಮಣ ಗೌಡರು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್ ತುದಿಯಡ್ಕ ಉಪಸ್ಥಿತರಿದ್ದರು.
ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ, ಸೇವಾ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಕೆ.ಎಸ್. ವೇದಿಕೆಯಲ್ಲಿದ್ದರು.
ದಸರಾ ಸಮಿತಿ ಸಂಯೋಜಕ ನ.ಸೀತಾರಾಮ ಸ್ವಾಗತಿಸಿ, ಸೇವಾ ಸಮಿತಿ ಗೌರವಾಧ್ಯಕ್ಷ ಕೆ. ಗೋಕುಲ ದಾಸ್ ವಂದಿಸಿದರು. ಸೇವಾ ಸಮಿತಿ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಕೋಶಾಧ್ಯಕ್ಷ ಜಯಂತ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-15
|
|
| manjunatha, karkunje | 2008-10-15 | | ಬೆಕ್ಕು ಇಲಿಗಳನ್ನು ಒಂದೆಡೆಗಿಟ್ಟು, ಒಮ್ಮತ ಮೂಡಿಸಲು ಹೇಗೆ ಸಾಧ್ಯ? |
|