ಸಾಹಿತಿ ಆನಂದಿ ಸದಾಶಿವ ರಾವ್ ಇನ್ನಿಲ್ಲ |
ಪ್ರಕಟಿಸಿದ ದಿನಾಂಕ : 2008-10-15
ಮಂಗಳೂರು: ಕರ್ನಾಟಕದ ಪ್ರಸಿದ್ಧ ಮಹಿಳಾ ಸಾಹಿತಿ ಆನಂದಿ ಸದಾಶಿವ ರಾವ್(ದಿ.ಅಡ್ವೊಕೇಟ್ ಸದಾಶಿವ ರಾವ್‌ರ ಧರ್ಮಪತ್ನಿ) ಸೋಮವಾರ ಮುಂಜಾನೆ ಮಂಗಳೂರಿನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಅಗ್ರ ಪಂಕ್ತಿಯ ಮಹಿಳಾ ಸಾಹಿತಿಯಾಗಿ, ಸಾಮಾಜಿಕ ಧುರೀಣೆ, ಸಂಘಟಕಿಯಾಗಿ ಖ್ಯಾತರಾಗಿದ್ದರು. ಐವತ್ತರ ದಶಕದಲ್ಲಿ ಸಾಹಿತ್ಯ ರಚನೆಗೆ ತೊಡಗಿದ ಅವರ ಲೇಖನ ಕರ್ನಾಟಕದ ಪ್ರಸಿದ್ಧ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.
ಅವರ ಪ್ರಥಮ ಕಥೆ ‘ಗೆದ್ದವರು ಯಾರು?’. ‘ಸ್ನೆಹ ಸುಧೆ’ ಕಾದಂಬರಿ, ‘ಅಪರ್ಣಾ’ ಮತ್ತು ‘ಕಲಾವಿದೆ’ ಇವರ ಕಥಾ ಸಂಕಲನ.
ಹಲವು ಕೃತಿಗಳನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದು, ಅವುಗಳಲ್ಲಿ ‘ನಿರ್ಲಿಪ್ತವಾಣಿ’ ಮತ್ತು ‘ಭಾರತದ ಐಕ್ಯತೆ’ ಪ್ರಸಿದ್ಧವಾಗಿದೆ.
ಇವರು ಹಲವಾರು ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಸಾಹಿತ್ಯದ ಬಗ್ಗೆ ಪ್ರಬಂಧ ಮಂಡಿಸಿದ್ದರು. ಹಲವು ವಿಚಾರಪ್ರದ ಲೇಖನ, ನೂರಾರು ಇಂಗ್ಲೀಷ್ ಕವಿತೆಗಳನ್ನು ರಚಿಸಿದ್ದರು.
ಕನ್ನಡ ಸಂಘದ ಸದಸ್ಯೆಯಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ, ಕರಾವಳಿ ಲೇಖಕಿ-ವಾಚಕಿಯರ ಸಂಘದ ಅಧ್ಯಕ್ಷೆಯಾಗಿ ಸಾಹಿತ್ಯ ಕಾರ್ಯಕ್ರಮ, ಕಮ್ಮಟಗಳನ್ನು ಸಂಘಟಿಸಿದ್ದರು.ನಿರಾಡಂಬರ ವ್ಯಕ್ತಿತ್ವದ ಸಮಾಜ ಸೇವಕಿ ಆನಂದಿ ಸದಾಶಿವ ರಾವ್, ನಾಲ್ಕು ದಶಕಗಳ ಕಾಲ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.
ಭಗಿನಿ ಸಮಾಜ, ಮಹಿಳಾ ಸಭಾ, ಅನಾಥ ಮಕ್ಕಳ ಶಿಶು ನಿಲಯಗಳಲ್ಲಿ ದುಡಿದ ಇವರು, ಮಂಗಳೂರು ಮಹಿಳಾ ಗುಡಿಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿದ್ದರು. ಜನತಾ ಬಜಾರ್ ಆಡಳಿತ ಮಂಡಳಿಯ ಉಪಾಧ್ಯಕ್ಷೆಯಾಗಿದ್ದರು.
೧೯೭೫ರಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ಸೇವೆಗಾಗಿ ಜಿಲ್ಲಾ ಮಹಿಳಾ ಸಾಮಾಜಿಕ ಸಂಸ್ಥೆ ಮತ್ತು ಗೈಡ್ಸ್ ಸಂಸ್ಥೆಗಳಿಂದ ಸನ್ಮಾನಿತರು.
ಕುಂದಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಮ್ಮೇಳನದಲ್ಲಿ ಸನ್ಮಾನಗೊಂಡಿದ್ದಾರೆ. ಅವರ ಆಂಗ್ಲ ಕವನ ಸಂಕಲನ ‘ವಾಯಿಸ್ ಆಫ್ ಸೈಲೆನ್ಸ್’ಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿತ್ತು.
ಮಂಗಳೂರಿನ ಮಿಜಾರಿನಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮೃತ ಆನಂದಿ ಸದಾಶಿವ ರಾವ್‌ಗೆ 80 ವರ್ಷ ವಯಸ್ಸಾಗಿತ್ತು.
ಖ್ಯಾತ ಗಾಯಕಿ ರಂಜನಿ ಸುರೇಶ್ ಸಹಿತ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಸುಧಾಕರ ರಾವ್ ಪೇಜಾವರ ಸಂತಾಪ ವ್ಯಕ್ತಪಡಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-15
|
|
|