ಅಬುಧಾಬಿ: ಅಬುಭಾಬಿ ಕನ್ನಡ ಫೆಲೋಶಿಪ್ ಆಚರಿಸಿದ ಸುಗ್ಗಿ ಉತ್ಸವ |
ಪ್ರಕಟಿಸಿದ ದಿನಾಂಕ : 2008-10-15
ನಾಡಿನ ಬೇಳೆ ಕಣಿಗೆ ಹಬ್ಬ ಅಬುಧಾಬಿಯಲ್ಲಿ ಆಚರಣೆ : ಉತ್ಸಾಹದಿಂದ ಭಾಗವಹಿಸಿದ ಸದಸ್ಯರು
ಅಬುಧಾಬಿ, ಅಕ್ಟೋಬರ್ 15: ಬಿತ್ತಿದ ಬೆಳೆ ಕೊಯ್ಲಿಗೆ ಸಿದ್ಧವಾಗುತ್ತಿದ್ದಂತೆಯೇ ಸುಗ್ಗಿ ಉತ್ಸವ ಸುದ್ದಿಯಾಗುತ್ತದೆ. ಕೇರಳದವರು ಓಣಂ ಎಂದೂ, ತಮಿಳುನಾಡಿನವರು ಪೊಂಗಲ್ ಎಂದೂ ಉತ್ತರ ಭಾರತದವರು ಬೈಸಾಖಿ ಎಂದೂ ಕರ್ನಾಟಕ, ಮಹಾರಾಷ್ಟ್ರದವರು ಸಂಕ್ರಾಂತಿ ಎಂದೂ ಕರೆಯುತ್ತಾರೆ.
ಆದರೆ ಮಂಗಳೂರು ಸುತ್ತಮುತ್ತಲ ಪ್ರೊಟೆಸ್ಟೆಂಟ್ ಕ್ರೈಸ್ತರು ಇದನ್ನು -ಬೇಳೆ ಕಣಿಗೆ ಹಬ್ಬ- ಎಂಬ ಹೆಸರಿನಿಂದ ಕರೆಯುತ್ತಾರೆ. ಇದು ನಮಗೆ ಆಹಾರವನ್ನು ಧಾನ್ಯರೂಪದಲ್ಲಿ ನೀಡಿದ ಭಗವಂತನಿಗೆ ಧನ್ಯವಾದ ಅರ್ಪಿಸುವ ಹಬ್ಬವಾಗಿದೆ. ಇದನ್ನು ಪವಿತ್ರ ಗ್ರಂಥದ ಎಕ್ಸೋಡಸ್ ೨೩:೧೯ ಅಧ್ಯಾಯದಲ್ಲಿ ವಿವರಿಸಲಾಗಿದೆ.
ಮಂಗಳೂರು ಆದ್ಯಂತ ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವ ಈ ಹಬ್ಬದಲ್ಲಿ ಸದಸ್ಯರು ಚರ್ಚಿಗೆ ಹೊಸ ಬೆಳೆಯ ತೆನೆಯೊಂದಿಗೆ ಆಗಮಿಸಿ ಸಂಭ್ರಮ ಪಡುತ್ತಾರೆ. ವಾದ್ಯಗೋಷ್ಠಿ ಈ ಸಂಭ್ರಮವನ್ನು ಹೆಚ್ಚಿಸಲು ನೆರವಾಗುತ್ತದೆ.
ಹೋಲಿ ಸ್ಪಿರಿಟ್ ನಿಂದ ಪ್ರೇರಿತಗೊಂಡ ಅಬುಧಾಬಿ ಕನ್ನಡ ಫೆಲೋಶಿಪ್ 2000 ಇಸ್ವಿ ಜನವರಿ 1 ರಂದು ಮೂವರು ಸದಸ್ಯರಿಂದ ಪ್ರಾರಂಭವಾಗಿ ಇಂದು ಎಂಟು ವರ್ಷಗಳನ್ನು ಪೂರೈಸುತ್ತಿದೆ. ಅಂದಿನಿಂದ ಸತತವಾಗಿ ಆಚರಿಸುತ್ತಾ ಬಂದಿರುವ ಸುಗ್ಗಿ ಉತ್ಸವ ಈ ವರ್ಷ ಒಂಭತ್ತನೆಯದ್ದಾಗಿದೆ. ನಗರದ ಫುಡ್ ಲ್ಯಾಂಡ್ ಬಾಂಕ್ವೆಟ್ ಹಾಲ್ ಸಭಾಂಗಣದಲ್ಲಿ ಆಚರಿಸಲಾದ ಈ ಉತ್ಸವ 10ನೇ ಅಕ್ಟೋಬರ್ ನಂದು ಜರುಗಿತು. ಆಗಸ್ಟಿನ್ ಅಮನ್ನಾ ಹಾಗೂ ಸಂಗಡಿಗರು ವೇದಿಕೆಯನ್ನು ಸುಂದರವಾಗಿ ಸಜ್ಜುಗೊಳಿಸಿದ್ದರು.
ಬೆಳಿಗ್ಗೆ ಉಪಾಹಾರದ ಬಳಿಕ ಕಾರ್ಯಕ್ರಮ ಬೇಬಿ ರೆನಿಟಾ ಮಾಬೆನ್ ಅವರ ಸ್ವಾಗತಗೀತೆಯೊಂದಿಗೆ ಪ್ರಾರಂಭ ಕಂಡಿತು. ಸಪ್ನಾ ಮಾಬೆನ್ ಅವರ ಆರ್ಗನ್, ಅಲನ್ ಜೇಮ್ಸ್ ಅವರ ಸಾಕ್ಸಾಫೋನ್, ಅಲೆನ್ ರಾಬರ್ಟ್ ಅವರ ವಾಯ್ಲಿನ್ ಜೊತೆಗೆ ಪಲ್ಲವಿಗಳನ್ನು ರೇಮಂಡ್ ಸೋಅನ್ಸ್, ಜೋಹಾನಾ ಮತ್ತು ಜೋಸ್ಲಿನ್ ಜತ್ತನ್ನ ಹಾಗೂ ಯೂನಿಟಿ ಕನ್ನಡ ಚರ್ಚ್ ಸದಸ್ಯರು ಧ್ವನಿ ನೀಡಿದರು. ಬ್ರ. ಸುಶೀಲ್ ಅಮಾನ್ನ ರವರು ಚರ್ಚ್ ಸೇವೆ ಸಲ್ಲಿಸಿದರು. ಶಂಕರಪುರ ಉಡುಪಿಯ ದಿವೈನ್ ಜೆನರೇಶನ್ ಮಿನಿಸ್ಟ್ರಿಯ ಪಾಸ್ಟರ್ ಆಗಿರುವ ಸುನಿಲ್ ಡಿ’ಸೋಜಾರವರು ಅನಾಯಿಂಟೆಡ್ ಸರ್ಮನ್ ನೀಡಿದರು. ಯೂನಿಟಿ ಕನ್ನಡ ಚರ್ಚ್ ಸದಸ್ಯರು ಕನ್ನಡ ಸುಗ್ಗಿ ಹಾಡನ್ನು ಹಾಡಿದರು.
ಚಿಕ್ಕಮಕ್ಕಳು ಸೇರಿದಂತೆ ನೆರೆದವರು ಕನ್ನಡ, ತುಳು ಹಾಗೂ ಇಂಗ್ಲಿಷ್ ಗೀತೆಗಳಿಂದ ದೇವರನ್ನು ಸ್ತುತಿಸಿದರು.
ಪ್ರಧಾನ ಕಾರ್ಯದರ್ಶಿ ಸ್ಟೀವನ್ ಸಾಲಿನ್ಸ್ ಅವರು ಕಾರ್ಯಕ್ರಮದ ನಿರೂಪಣೆ ನೀಡಿದರು. ಬ್ರ. ಅಶೋಕ್ ರಾಜ್ ಹಾಗೂ ವಸಂತ್ ಹುಗ್ಗಿ (ಉಪಕಾರ್ಯದರ್ಶಿ) ಪವಿತ್ರಗ್ರಂಥದ ಉಕ್ತಿಗಳನ್ನು ಅರುಹಿದರು. ಕಾರ್ಯಕ್ರಮದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಹಲವು ಹಣ್ಣು, ತರಕಾರಿ ಮತ್ತು ಉಡುಗೊರೆಗಳನ್ನು ಹರಾಜು ಹಾಕಲಾಯಿತು. ಹಲವು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ನೆರೆದವರಲ್ಲಿ ಹುಮ್ಮಸ್ಸು ತುಂಬಲಾಯಿತು. ಮಧ್ಯಾಹ್ನ ಸ್ವಾದಿಷ್ಟ ಸಸ್ಯಾಹಾರಿ ಭೋಜನವನ್ನು ಬಾಳೆ ಎಲೆಯ ಮೇಲೆ ಬಡಿಸಿ ಪರಂಪರೆಗೆ ಮೆರುಗು ನೀಡಲಾಯಿತು. ವಿಜೇತರಿಗೆ ಬಹುಮಾನಗಳಿಂದ ಪುರಸ್ಕರಿಸಲಾಯಿತು. ಎ.ಎಫ್.ಕೆ. ಅಧ್ಯಕ್ಷ ರೆಜಿನಾಲ್ಡ್ ಮಾಬೆನ್ ಅವರನ್ನು ಉಡುಗೊರೆಯೊಂದಿಗೆ ಸತ್ಕರಿಸಲಾಯಿತು. ಯು.ಎ.ಇ. ಯಿಂದ ಸ್ವದೇಶಕ್ಕೆ ಶಾಶ್ವತವಾಗಿ ಮರಳಿ ಹೋಗುತ್ತಿರುವ ರೋನಾಲ್ಡ್ ಎಸ್. ಡೇವಿಡ್ (ರೋನಿ) ಯವರಿಗೆ ಖಜಾಂಜಿ ಆಗಸ್ಟಿನ್ ರವರು ಸ್ಮರಣಿಕೆ ನೀಡಿ ಬೀಳ್ಕೊಟ್ಟರು. ಅಧ್ಯಕ್ಷ ರೆಜಿನಾಲ್ಡ್ ಮಾಬೆನ್ ಅವರು ವಂದನಾರ್ಪಣೆ ಸಲ್ಲಿಸಿದರು. ಅಂತಿಮ ಪ್ರಾರ್ಥನೆಯನ್ನು ಜೊಸೆಲಿನ್ ಜತ್ತನ್ನ ನಿರ್ವಹಿಸಿದರು.
ಚಿತ್ರ, ವರದಿ: ಶೋಧನ್ ಪ್ರಸಾದ್.
ವರದಿಯ ವಿವರಗಳು |
 |
ಕೃಪೆ : ಶೋಧನ್ ಪ್ರಸಾದ್. ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-15
|
|
|