ಶಾರ್ಜಾ: ಸಂಭ್ರಮದ ಈದ್ ಮಿಲನ್ ಆಚರಿಸಿದ ಶಾರ್ಜಾ ಆಮ್ಟೆಕ್ ಸಂಸ್ಥೆ : ನವಾಯತಿ ಕವಿಯ ಪರಿಚಯ |
ಪ್ರಕಟಿಸಿದ ದಿನಾಂಕ : 2008-10-14
ಹಿಂದಿನ ವರ್ಷದ ಅಗ್ನಿದುರಂತದಿಂದ ಮೇಲೆದ್ದು ಬರಲು ತನ್ನ ಉದ್ಯೋಗಿಗಳ ಪ್ರಾರ್ಥನೆಯೇ ಕಾರಣ : ಮಾಲಿಕವೃಂದ
ಶಾರ್ಜಾ, ಅಕ್ಟೋಬರ್ 14: ಶಾರ್ಜಾದ ಕೈಗಾರಿಕಾ ವಲಯದಲ್ಲಿರುವ ಆಮ್ಟೆಕ್ ಸಂಸ್ಥೆ ತನ್ನ ಉದ್ಯೋಗಿಗಳಿಗಾಗಿ ಈದ್ ಮಿಲನ್ ಉತ್ಸವನ್ನು ಅಕ್ಟೋಬರ್ 12 ರ ಸಂಜೆ ಶಾರ್ಜಾದ ಅಲ್ ವಹ್ದಾ ರಸ್ತೆಯ ಗ್ರಾಂಡ್ ಬಫೆ ಹೋಟೆಲಿನಲ್ಲಿ ಏರ್ಪಡಿಸಿತ್ತು.
ಸಂಜೆ ಎಂಟು ಘಂಟೆಯ ಭೋಜನದ ಬಳಿಕ ಪ್ರಾರಂಭವಾದ ಕಾರ್ಯ ಕ್ರಮಕ್ಕೆ ಜನಾಬ್ ರುಕ್ನುದ್ದೀನ್ ಬಾಷಾರವರು ಸಭಿಕರನ್ನು ಸಭೆಗೆ ಆಹ್ವಾನಿಸಿದರು. ತಮ್ಮ ಸ್ವಾಗತ ಭಾಷಣದಲ್ಲಿ ಅವರು ಕಳೆದ ವರ್ಷ ಆಂಟೆಕ್ ಸಂಸ್ಥೆಯ ಎಂಬ್ರಾಯಿಡರಿ ಕಾರ್ಖಾನೆ ಅಗ್ನಿಗಾಹುತಿ ಯಾಗಿದ್ದುದನ್ನು ಸ್ಮರಿಸಿಕೊಂಡರು. ಆ ದಿನಗಳಲ್ಲಿ ಸಂಸ್ಥೆಯ ಮಾಲಿಕರಾದ ಅಬ್ದುಲ್ ಕರೀಮ್ ಇಕ್ಕೇರಿ ಹಾಗೂ ಮೊಹಮ್ಮದ್ ಮುಶ್ತಾಕ್ ಅವರು ಧೃತಿಗೆಡದೇ ಕಾರ್ಖಾನೆಯನ್ನು ಮತ್ತೆ ಚೇತರಿಸಿ ಕೊಳ್ಳುವಂತೆ ಮಾಡಿ ಇಂದು ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸು ತ್ತಿದೆ. ಇದಕ್ಕೆ ಸಂಸ್ಥೆಯ ಎಲ್ಲ ಉದ್ಯೋಗಿಗಳ ಸ್ವಾರ್ಥರಹಿತ ಸೇವೆ ಹಾಗೂ ಅವರ ಮತ್ತು ಅವರ ಮನೆಯವರ ಪ್ರಾರ್ಥನೆ ಮುಖ್ಯವಾಗಿ ಕಾರಣವಾಗಿದೆ ಎಂದು ಅವರು ತಿಳಿಸಿದರು. ಸಂಸ್ಥೆ ಇಂದು ಉತ್ತಮ ಪ್ರಗತಿ ಸಾಧಿಸಿದ್ದು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲೂ ಒಂದು ಶಾಖೆಯನ್ನು ತೆರೆಯಲು ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಟ್ಕಳದ ರಾಬಿತಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೈಯದ್ ಹಾಶಿಮ್, ಅಂಜುಮಾನ್ ಸಂಸ್ಥೆಯ ಅಬ್ದುಲ್ ರಹಮಾನ್ ಜುಕ್ಕಾ, ಸೌದಿ ಅರೇಬಿಯಾದ ದಮ್ಮಾಂ ನಗರದಿಂದ ಆಗಮಿಸಿದ್ದ ಯೂನುಸ್ ಕಾಜಿಯಾ, ಜಾಮಿಯಾ ಇಸ್ಲಾಮಿಯಾ ಸಂಸ್ಥೆಯ ಉಪಪ್ರಾಂಶುಪಾಲರಾದ ಮೌಲಾನಾ ಮಕ್ಬೂಲ್ ಕೋಬಟ್ಟೆ, ದುಬೈ ನಗರದ ಖ್ಯಾತ ವೈದ್ಯರಾದ ಜನಾಬ್ ಡಾ. ಇಸ್ಮಾಯಿಲ್, ಖ್ಯಾತ ಉದ್ಯಮಿ ಜನಾಬ್ ಇಬ್ರಾಹಿಂ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಆ ಬಳಿಕ ಈದ್ ಮಿಲನ್ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತ ನಾಡುತ್ತಾ ಮೌಲಾನಾ ಮಕ್ಬೂಲ್ ಕೋಬಟ್ಟೆಯವರು ಈದ್ ಉಲ್ ಫಿತರ್ ಬಗ್ಗೆ ಹಲವು ವಿವರಗಳನ್ನು ನೀಡಿದರು. ರಮಧಾನ್ ತಿಂಗಳಲ್ಲಿ ಪ್ರಾರ್ಥನೆಗಳನ್ನು ನಿರ್ವಹಿಸಲು ತೋರುವ ಉತ್ಸಾಹವನ್ನು ಇನ್ನುಳಿದ ದಿನಗಳಲ್ಲೂ ಮುಂದುವರಿಸಿಕೊಂಡು ಹೋಗಲು ಅವರು ಕರೆಯಿತ್ತರು. ನಮಗೆ ಯಾರಿಂದ ಹಾಗೂ ಎಲ್ಲಿಂದ ಉದ್ಯೋಗ ದೊರಕಿದೆಯೋ ಅವರಿಗಾಗಿ ಪ್ರಾರ್ಥಿಸುವುದು ನಮ್ಮ ಕರ್ತವ್ಯವಾಗಿದೆ, ಈ ಪ್ರಾರ್ಥನೆಯೇ ಸಂಸ್ಥೆಯನ್ನು ಕಾಪಾಡುತ್ತದೆ. ಇಂದು ಆಂಟೆಕ್ ಸಂಸ್ಥೆ ಆ ಅಗ್ನಿದುರಂತದಿಂದ ಮರುಜನ್ಮ ಎತ್ತಿ ನಿಂತಿದೆಯಾದರೆ ಅದಕ್ಕೆ ಉದ್ಯೋಗಿಗಳ ಪ್ರಾರ್ಥನೆ ಪ್ರಮುಖ ಕಾರಣವಾಗಿವೆ. ಸಮಯ ಅಭಾವವಿರುವ ಇಂದಿನ ದಿನಗಳಲ್ಲಿ ದಿನದ ಕೆಲವು ನಿಮಿಷಗಳನ್ನಾದರೂ ಇಸ್ಲಾಂ ಗ್ರಂಥಗಳನ್ನು ಓದಲು ಹಾಗೂ ಚಿಕ್ಕಪುಟ್ಟ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಲು ವಿನಿಯೋಗಿಸಿಕೊಂಡರೆ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದಾಗಿದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅದರಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಅತಿಮುಖ್ಯವಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ಆಗ್ರಹಿಸಿದರು.
ಆ ಬಳಿಕ ಈ ಕಾರ್ಯಕ್ರಮಕ್ಕೆಂದೇ ವಿಷೇಷವಾಗಿ ಸೌದಿ ಅರೇಬಿಯಾದ ದಮ್ಮಾಂ ನಗರದಿಂದ ಆಗಮಿಸಿದ್ದ ನವಾಯಿತಿ ಕವಿ ಸಮೀವುಲ್ಲಾ ಬ್ರಹ್ಮಾವರ್ ಅವರು ತಮ್ಮ ಸ್ವರಚಿತ ಹಲವು ನವಾಯತಿ ಕವನಗಳನ್ನು ವಾಚಿಸಿ ನೆರೆದವರ ಪ್ರಶಂಸೆಗೆ ಪಾತ್ರರಾದರು. ಖ್ಯಾತ ನವಾಯಿತಿ ಹಾಡುಗಳಾದ ಬಲ್ಜಿಬಿ ಅಲ್ಲಾಹು ಅಕ್ಬರ್, ಜವಾನೀ ಖೇಲ್ ವಲ್ಖೂನ್ ತೂಂ ಮೊದಲಾದವು ಜನರನ್ನು ಚಪಾಳೆಗಳ ತಾಳ ಹಾಕಲು ಪ್ರಚೋದಿಸಿದವು. ಅವರ ಇನ್ನೊಂದು ಕವನ ತಮ್ಮ ಕುಟುಂಬವನ್ನು ಬಿಟ್ಟು ವಿದೇಶಕ್ಕೆ ಬಂದವರ ಪತ್ನಿಯ ಬೇಗುದಿಯನ್ನು ನಿವೇದಿಸಿದ್ದು ಎಲ್ಲರ ಕಣ್ಣಲ್ಲಿ ನೀರು ಬರಿಸಿತು. ಆ ಕವನದ ಪ್ರಥಮ ಸಾಲುಗಳು ಹೀಗಿವೆ:
ದುಬೈ ಮಸ್ಕತ್ ಅನೀ ಸೌದಿ
ಕಮೌ ಖಾತಿರ್ ತುಮೆ ಗೆಲ್ಲೆ
ತಲಾಶೆ ರಿಜ್ಕ್ ಚೇ ಖಾತಿರ್
ಕುರ್ಬಾನೀ ತುಮೀ ದೆಲ್ಲೆ
(ದುಬೈ, ಮಸ್ಕತ್ ಮತ್ತು ಸೌದಿ ದೇಶಗಳೀಗೆ
ನೀವು ತೆರಳಿದ್ದೀರಿ ಉದ್ಯೋಗಕ್ಕಾಗಿ.
ಎರೆಡು ಹೊತ್ತಿನ ತುತ್ತಿಗಾಗಿ,
ಇದೊಂದು ದೊಡ್ಡ ತ್ಯಾಗ.)
ಆ ಬಳಿಕ ಸಂಸ್ಥೆಯ ಉದ್ಯೋಗಿಗಳಲ್ಲೊಬ್ಬರಾದ ಅಜಾಹಿಬ್ ಶಬ್ಬೀರ್ ಅವರು ಕೆಲವು ನಗೆಚಟಾಕುಗಳಿಂದ ಸಭಿಕರಲ್ಲಿ ನಗೆಯುಕ್ಕಿಸಿದರು.
ನಂತರ ಆಗಮಿಸಿದ ಮಿಮಿಕ್ರಿ ಪಟು ಮೊಹಮ್ಮದ್ ರಫಿ ಹಲವು ಬಗೆಯ ಧ್ವನಿಗಳನ್ನು ಅನುಸರಿಸಿ ತಮ್ಮ ಪ್ರತಿಭೆ ಮೆರೆದರು. ಮೂಲತಃ ಮಲಯಾಳಿಯಾಗಿರುವ ಮೊಹಮ್ಮದ್ ರಫೀಕ್ ಅವರು ತಮ್ಮ ಮಲಯಾಳಭರಿತ ಹಿಂದಿ ಉಪಯೋಗಿಸಿ ಉತ್ತಮ ಪ್ರದರ್ಶನ ನೀಡಿ ಬಾಂಧವ್ಯಕ್ಕೆ ಭಾಷೆ ಎಂದೂ ಅಡ್ಡಿಯಾಗದು ಎಂಬು ನಿರೂಪಿಸಿದರು.
ಅಂತಿಮವಾಗಿ ಅವರು ಹಾಡಿದ ಮಲಯಾಳಂ ಹಾಡು ಯಾರೊಬ್ಬರಿಗೂ ಅರ್ಥವಾಗದಿದ್ದರೂ ಆ ಮೋಡಿ ಮತ್ತೊಮ್ಮೆ ಹಾಡುವಂತೆ ಪ್ರೇರೇಪಿಸಿತು. ಅವರ ಕೋರಿಕೆಯನ್ನು ಮನ್ನಿಸಿ ಮೊಹಮ್ಮದ್ ರಫೀಕ್ ಅವರು ಮತ್ತೊಮ್ಮೆ ಅದೇ ಹಾಡನ್ನು ಹಾಡಿ ಎಲ್ಲರ ಮನಗೆದ್ದರು.
ಇನ್ನೋರ್ವ ಉದ್ಯೋಗಿ ಕಾಶಿಫ್ ಕೋಲಾ ರವರೂ ಹಲವು ಹಾಸ್ಯಚಟಾಕಿ ಗಳನ್ನು ಉದುರಿಸಿದರು. ಕಾರ್ಯಕ್ರಮವನ್ನು ರಹ್ಮತುಲ್ಲಾ ರಾಹಿಯವರು ನಿರೂಪಿಸಿದರು.
ಚಿತ್ರ, ವರದಿ: ಅರ್ಶದ್ ಹುಸೇನ್ ಎಂ.ಹೆಚ್.
ವರದಿಯ ವಿವರಗಳು |
 |
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-14
|
|
| Waseem Ruknuddin, Bhatkal | 2008-10-14 | | The report is excellent, Samiullah Barmawar is always perfoming well in every programme. The photos are also very good. Keep it up. |
|